ಬೆಂಗಳೂರು: ಕನ್ನಡ ಪ್ರಥಮ ಭಾಷೆಗೆ 125 ಅಂಕಗಳ ಬದಲು 100 ಅಂಕಗಳನ್ನು ನಿಗದಿಪಡಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಪತ್ರ ಬರೆದು ಆಗ್ರಹ ಪಡಿಸಿದ್ದಾರೆ.
ಈ ಬಗ್ಗೆ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪ್ರಥಮ ಭಾಷೆಗಳಿಗೆ ಅಂಕವನ್ನು ನೂರಕ್ಕೆ ನಿಗದಿಪಡಿಸುವ ನಿರ್ಧಾರ ಖಂಡನೀಯ. ಗೋಕಾಕ್ ಚಳವಳಿಯಂತಹ ಕನ್ನಡಪರ ಚಳವಳಿಗಳ ಫಲವಾಗಿ ಕನ್ನಡ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆಗ ಚಳವಳಿಯ ಫಲವಾಗಿ ರೂಪುಗೊಂಡ ಈ 125 ಅಂಕಗಳ ಸರ್ವಸಮ್ಮತ ನಿರ್ಧಾರವನ್ನು ಈಗ ಬದಲಾಯಿಸಿ, 100 ಅಂಕಗಳನ್ನು ನಿಗದಿ ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಸರ್ಕಾರದ ಈ ನಿರ್ಧಾರದ ಹಿಂದೆ ತರ್ಕವೂ ಇಲ್ಲ ತತ್ವವೂ ಇಲ್ಲ ಎಂದು ಹೇಳಿದ್ದಾರೆ.
ಈ ಕ್ರಮವು ಕನ್ನಡವೂ ಸೇರಿದಂತೆ ಮಾತೃಭಾಷೆಗಳ ಮಹತ್ವವನ್ನು ಕುಗ್ಗಿಸುವ ಕೆಲಸವಾಗಿದೆ. ಕನ್ನಡ ವಿರೋಧಿ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.