ಬೆಳಗಾವಿ: ಅಯೋಧ್ಯ ರಾಮಮಂದಿರ ಉದ್ಘಾಟನೆ ಮತ್ತು ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ತನ್ನ ಕ್ಷೇತ್ರದ ಜನರಿಗೆ ಉಚಿತವಾಗಿ ಶ್ರೀರಾಮ ಟ್ಯಾಟೂ ಹಾಕಿಸುತ್ತಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಜನ ನೀವು ಯಾವಾಗ “ಶ್ರೀರಾಮ’’ನ ಟ್ಯಾಟೂ ಹಾಕಿಸಿಕೊಳ್ಳುವುದು ಎಂದು ಪ್ರಶ್ನಿಸುತ್ತಿದ್ದಾರೆ.
ಮೂಲತಃ ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿರುವ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಹಿಂದೂತ್ವದ ಅಜೆಂಡಾ ಸಾಧನೆಗೆ ನಿರಂತರ ಶ್ರಮಿಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಹಿಂದೂ ಯುವಕರನ್ನು ಸಂಘಟಿಸುತ್ತಿರುತ್ತಾರೆ. ಅದೇ ರೀತಿ ಬಿಜೆಪಿಯ ಶ್ರೀರಾಮ ಮಂದಿರ ಉದ್ಘಾಟನೆ, ಶ್ರೀರಾಮ ಪ್ರಾಣಪ್ರತಿಷ್ಠಾಪನೆಯ ಈ ಸಂದರ್ಭದಲ್ಲೂ ಅತ್ಯುತ್ಸಾಹದಿಂದ ಮನೆ ಮನೆಗಳಿಗೆ ಲಡ್ಡು ಹಂಚುವುದು, ಉಚಿತವಾಗಿ ಶ್ರೀರಾಮನ ಭಾವಚಿತ್ರ ಸಹಿತ ಜಯಘೋಷಗಳ ಟ್ಯಾಟೂಗಳನ್ನು ಹಾಕಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ, ಬೆಳಗಾವಿಯ ಮಸೀದಿಯೊಂದರಲ್ಲಿ 400 ವರ್ಷದ ಹಿಂದೆ ಹನುಮ ಮಂದಿರ ಇತ್ತು ಎಂದು ಹೇಳಿ ವಿವಾದವೆಬ್ಬಿಸಿ ತಮ್ಮ ಹಿಂದೂತ್ವ ವಿಚಾರಧಾರೆಯ ಬದ್ಧತೆಯನ್ನು ತೋರಿಸಿ ನಾಯಕರನ್ನು ಸೆಳೆಯಲು ಪ್ರಯತ್ನಿಸಿದ್ದರು. ಆಗ ಕೆಲವರು, “ತಮ್ಮ ಅಕ್ರಮವಾಗಿ ಪಡೆದ ಜಮೀನಿನ ಎದುರು ಇದ್ದ, ತಾವೇ ಕೆಡವಿಸಿದ ಸಾಯಿ ಮಂದಿರವನ್ನು ಮೊದಲು ನಿರ್ಮಿಸಿ. ನಂತರ ಮಸೀದಿಯಲ್ಲಿ ಮಂದಿರ ನಿರ್ಮಾಣ ಮಾಡುವಿರಂತೆ” ಎಂದು ಅವರ ಹುಸಿ ಹಿಂದೂತ್ವವನ್ನು ಅನಾವರಣಗೊಳಿಸಿದ್ದರು. ನಂತರ ಈ ವಿಷಯದಲ್ಲಿ ಶಾಸಕರು ಮೌನವಾಗಿದ್ದರು.
ಈಗ ಮತ್ತೊಮ್ಮೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಿಂದೂತ್ವದ ರಾಜಕಾರಣ ಮಾಡಲು ಹೊರಟಿರುವ ಶಾಸಕ ಅಭಯ ಪಾಟೀಲ ಅವರನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಉಚಿತವಾಗಿ ಶ್ರೀರಾಮನ ಟ್ಯಾಟೂ ಹಾಕಿಸುತ್ತಿರುವ ನೀವು ಯಾವಾಗ ಟ್ಯಾಟೂ ಹಾಕಿಸಿಕೊಳ್ಳುವುದು? ನೀವೇ ಕೆಡವಿಸಿದ ಹಿಂದೂಗಳ ಸಾಯಿಬಾಬಾ ಮಂದಿರವನ್ನು ಯಾವಾಗ ಕಟ್ಟುವುದು ಎಂದು ಜನ ಕೇಳುತ್ತಿದ್ದಾರೆ.