ಮೈಸೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳಿಂದ ತಂತ್ರಗಾರಿಕೆಯೂ ಜೋರಾಗಿದೆ. ಆಪರೇಷನ್ ಕಮಲದ ಎದುರು ಆಪರೇಷನ್ ಹಸ್ತ ಯಶಸ್ಸಿನತ್ತ ಸಾಗುತ್ತಿದೆ. ಅದರ ಮೊದಲ ಭಾಗವಾಗಿಯೇ ಚಾಮರಾಜನಗರದಲ್ಲಿ ಬಿಜೆಪಿಗೆ ಏಟು ನೀಡಲು ಕಾಂಗ್ರೆಸ್ ಯಶಸ್ವಿಯಾಗಿದೆ.
ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ತಂಗಿಯ ಮಗ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆಯಾಗಲು ತೀರ್ಮಾನಿಸುವುದರೊಂದಿಗೆ ಬಿಜೆಪಿ ಹಿನ್ನಡೆ ಅನುಭವಿಸಿದೆ. ಧೀರಜ್ ಪ್ರಸಾದ್ ಅವರು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದರು. ಇಂದು ಅಥವಾ ನಾಳೆ ಧೀರಜ್ ಪ್ರಸಾದ್, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಮೈಸೂರು, ಚಾಮರಾಜನಗರ ಬಹಳ ಪ್ರಮುಖ ಪಾತ್ರವಹಿಸುತ್ತವೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದ್ದರೆ, ಇತ್ತ ಕಾಂಗ್ರೆಸ್ ಒಬ್ಬಂಟಿ ಹೋರಾಟ ಮಾಡುವುದರ ಜೊತೆಗೆ ಗೆಲ್ಲಲೇಬೇಕಾದ ಪ್ಲ್ಯಾನ್ ರೆಡಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ, ಬೆಂಬಲ ನೀಡುವಂತೆ ಕೋರಿದ್ದಾರೆ. ಅದರ ಜೊತೆಗೆ ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಮೋಹನ್ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಈ ಮೂಲಕ ಶ್ರೀನಿನಾಸ್ ಪ್ರಸಾದ್ ಅವರ ಕುಟುಂಬಸ್ಥರು ಕಾಂಗ್ರೆಸ್ ಸೇರುವ ಎಲ್ಲಾ ಸೂಚನೆಗಳು ಸಿಕ್ಕಿವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ಸಿಗುತ್ತಾ ಎಂಬುದನ್ನು ನೋಡಬೇಕಿದೆ.