ಕ್ರೀಡೆ ಮತ್ತು ಪಿತೂರಿ

Most read

ನಮ್ಮಂತಹ ದೇಶದಲ್ಲಿ ಕ್ರೀಡೆಗೆ ಆದ್ಯತೆ ನೀಡಿದರೆ ದಮನಿತರು, ಬಡವರಲ್ಲಿ ಉಂಟಾಗುವ ಸಾಮಾಜಿಕ ಸಂಚಲನ ಹೊಸ ತಲ್ಲಣವನ್ನು ಸೃಷ್ಟಿಸಿಬಿಡುತ್ತದೆ –ಹರೀಶ್‌ ಗಂಗಾಧರ್, ಪ್ರಾಧ್ಯಾಪಕರು.

ಈ ಮೂವರನ್ನು ಒಮ್ಮೆ ನೋಡಿಕೊಂಡು ಬಿಡಿ. ಮುಂದಿನ ಒಲಿಂಪಿಕ್ಸ್ ನಲ್ಲಿಯೂ ಇವರ ಜಾವ್‌ಲಿನ್ ಜಟಾಪಟಿ ಮುಂದುವರೆಯಲಿದೆ. ಭಾರತದ ನೀರಜ್ ಚೋಪ್ರ ಹುಟ್ಟಿದ್ದು ಡಿಸೆಂಬರ್ 1997ರಲ್ಲಿ, ಪಾಕಿಸ್ತಾನದ ಅರ್ಷದ್ ನದೀಮ್ ಜನವರಿ 1997ರಲ್ಲಿ ಮತ್ತು ಗ್ರೆನಡಾದ ಆಂಡರ್ಸನ್ ಪೀಟರ್ಸ್ ಅಕ್ಟೋಬರ್ 1997ರಲ್ಲಿ. ಮೂವರು ಕೂಡ ವಿಶ್ವ ದರ್ಜೆಯ ಶ್ರೇಷ್ಠ ಆಥ್ಲೀಟ್ಸ್ ಅನ್ನುವುದರಲ್ಲಿ ಯಾವ ಅನುಮಾನಗಳು ಉಳಿದಿಲ್ಲ. ಕ್ಯಾರೆಬೀನ್ ದ್ವೀಪಗಳ ಗ್ರೆನಡಾ ದೇಶದ ಆಂಡರ್ಸನ್ ಪೀಟರ್ಸ್ ಈ ಹಿಂದೆ 93+ ಮೀಟರ್  ದೂರ ಜಾವ್ಲಿನ್ ಎಸೆದು ತನ್ನ ಸಾಮರ್ಥ್ಯವೇನು ಎಂಬುದನ್ನ ಸಾಬೀತು ಪಡಿಸಿದ್ದಾರೆ. ಪಾಕಿಸ್ತಾನದ ನದೀಮ್ ಈ ಬಾರಿಯ ಒಲಿಂಪಿಕ್ಸ್ ಫೈನಲ್‌ನಲ್ಲಿ ಎರಡು ಬಾರಿ 90 ಮೀಟರ್ ಮೀರಿದ ಎಸೆತಗಳನ್ನು ಸಾಧಿಸಿದರು. ಅವರ 92.97 ಮೀಟರ್ ದೂರದ ಎಸೆತ ಒಲಿಂಪಿಕ್ ದಾಖಲೆಯಾಯಿತು. 

ಭಾರತದ ನೀರಜ್ ಚೋಪ್ರ ಇಲ್ಲಿಯವರೆಗೆ ೯೦ ಮೀಟರ್ ಮೀರಿದ ಎಸೆತ ಸಾಧಿಸಲಾಗಿಲ್ಲ. ಪದಕ ಗೆಲ್ಲಲು ಮೀರಿದ 90+ ಎಸೆತವೇನು ಬೇಕಾಗಿಲ್ಲವೆಂದು ಹಲವರು ವಾದಿಸುವವರಿದ್ದಾರೆ, ಟೋಕಿಯೋದಲ್ಲಿ ನೀರಜ್ ಎಸೆದ 87.58 ಮೀಟರ್ ಗೆ ಚಿನ್ನದ ಪದಕ ಸಿಕ್ಕಿತ್ತು. ಪ್ಯಾರಿಸ್ ನಲ್ಲಿ ನೀರಜ್ 89.45 ಮೀಟರ್ ಎಸೆದರೂ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಮುಂದಿನ ದಿನಗಳಲ್ಲಿ ಚೋಪ್ರ ಸತತವಾಗಿ 90+ ಎಸೆಯುವ ಲಯವನ್ನು ಕಂಡುಕೊಳ್ಳಬೇಕಿದೆ. ಅದರ ಅರಿವು ಕೂಡ ಅವರಿಗಿದೆ. ನಾಲ್ಕನೇ ಸ್ಥಾನ ಪಡೆದ ಜೆಕ್ ಗಣರಾಜ್ಯದ ಜಾಕುಬ್ ವೆಡ್ಲೆಚ್ ಕೂಡ ಈ ಮೊದಲು 90+ ಮೀಟರ್ ಮೀರಿದ ಎಸೆತ ಸಾಧಿಸಿರುವುದರಿಂದ ಸ್ಪರ್ಧೆ ಮತ್ತಷ್ಟು ತೀವ್ರಗೊಳ್ಳಲಿದೆ. 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ನೀರಸ. 225 ವಿಭಾಗಗಳಲ್ಲಿ ಸ್ಪರ್ಧೆ ನಡೆದು ಭಾರತ ಗೆದ್ದ ಒಟ್ಟು ಪದಕಗಳು ಕೇವಲ 5. ಯುದ್ಧ ಗ್ರಸ್ತ ಉಕ್ರೈನ್ ಕೂಡ ಹತ್ತು ಪದಕ ಗೆದ್ದು 15ಸ್ಥಾನದಲ್ಲಿದೆ! ಆದರೆ ಇಷ್ಟು ಜನಸಂಖ್ಯೆಯಿರುವ ಭಾರತವು 64ನೇ ಸ್ಥಾನದಲ್ಲಿದೆ.  ಒಂದು ದೇಶದಲ್ಲಿ ಕ್ರೀಡೆಗೆ ಆದ್ಯತೆ, ಪ್ರೋತ್ಸಾಹ ಮತ್ತು ಮನ್ನಣೆ ಸಿಗುತ್ತಿದೆ ಎಂದರೆ ಅಂತಹ ದೇಶ ಆರೋಗ್ಯಕರ ಸ್ಥಿತಿಯಲ್ಲಿದೆ ಅಂತಲೇ ಅರ್ಥ ಮಾಡಿಕೊಳ್ಳಬೇಕು. ಕ್ರೀಡೆಗೆ ಆದ್ಯತೆ ನೀಡುವ ಸಮಾಜ ಮೂಲಭೂತ ವ್ಯವಸ್ಥೆಗೆ, ಅತ್ಯಾಧುನಿಕ ವಿಜ್ಞಾನಕ್ಕೆ, ಕ್ರಾಂತಿಕಾರಿ ಸಂಶೋಧನೆಗೆ, ಹೊಸ ಪ್ರಯೋಗಗಳಿಗೆ, ಪ್ರತಿಭಾನ್ವೇಷಣೆಗೆ, ಪೌಷ್ಟಿಕ ಆಹಾರಕ್ಕೆ, ಪ್ರಜೆಗಳ ಮಾನಸಿಕ ಮತ್ತು ದೈಹಿಕ ಬೆಳೆವಣಿಗೆಗೆ ಆದ್ಯತೆ ನೀಡುತ್ತದೆ ಎಂದೇ ಅರ್ಥಮಾಡಿಕೊಳ್ಳಬೇಕು. ಒಲಿಂಪಿಕ್ಸ್ ಪದಕಗಳ ಟಾಪ್ ಟೆನ್ ದೇಶಗಳ ಪಟ್ಟಿಯನ್ನೇ ಒಮ್ಮೆ ಗಮನಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ.   

ನಮ್ಮ ದೇಶದಲ್ಲಿ ಕ್ರಿಕೆಟ್ ಕ್ರೀಡೆಗೆ  ಪ್ರೋತ್ಸಾಹವಿದೆಯಲ್ಲಾ ಎಂದು ನೀವು ಪ್ರಶ್ನೆ ಕೇಳಬಹುದು. ಭಾರತದಲ್ಲಿ ಕ್ರಿಕೆಟ್ ಬೆಳೆಯಲಿಕ್ಕೆ ದೇಶ  ಬ್ರಿಟಿಷರ ವಸಾಹತು ಆಗಿದ್ದೇ ಕಾರಣವೆಂಬುದು ಎಷ್ಟು ಕಾರಣವೋ,  ಕ್ರಿಕೆಟ್ ಚಿನ್ನದ ಮೊಟ್ಟೆಯಿಡುವ ಬಾತು ಕೋಳಿ ಎಂಬುದು ಕೂಡ ಅಷ್ಟೇ ಸತ್ಯ. ಭಾರತದಲ್ಲಿ ಕ್ರಿಕೆಟ್, ಕ್ರೀಡೆಗಿಂತ ಹೆಚ್ಚಾಗಿ ಉಳ್ಳವರು ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳುವ ಮತ್ತು ಬಡವರು ಜೂಜಾಡಿ ಹಣ ಕಳೆದುಕೊಳ್ಳುವ ಕ್ಷೇತ್ರ!

ಭಾರತದ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾಗಳು ಕೂಡ ಇನ್ನೊಂದು ವಾರದಲ್ಲಿ ಒಲಿಂಪಿಕ್ಸ್ ಬಗ್ಗೆ ಮರೆತು ಬಿಡುತ್ತವೆ. ಕ್ರಿಕೆಟ್ ಜ್ವರ ನಮ್ಮನ್ನು ಮತ್ತೊಮ್ಮೆ ಆವರಿಸಿಬಿಡುತ್ತದೆ.  ಪದಕ ಗೆದ್ದವರ ಆಚೆಕೆ ಅತ್ಯುತ್ತಮ ಕ್ರೀಡಾಳುಗಳಾದ ಹಿಮಾ ದಾಸ್, ದೀಪ ಕರ್ಮಕರ್ ಅವರನ್ನು ನಮ್ಮ ದೇಶ ನೆನೆಯುತ್ತದೆಯೇ? ಹಳ್ಳಿಗಳನ್ನು ಬದಿಗಿಡಿ ಬೆಂಗಳೂರಿನಂತಹ ಮಹಾನಗರದಲ್ಲಿ ಕೂಡ  ಪುಟ್ಟ ಹುಡುಗಿಯೊಬ್ಬಳು ತಾನು ನಾಡಿಯಾ ಕಮನೆಚಿ ತರಹದ ಜಿಮ್ನಾಸ್ಟ್ ಆಗುತ್ತೇನೆ, ಜೊಕೊವಿಕ್ ತರಹ ನಾನಾಗುತ್ತೇನೆ ಎಂಬ ಕನಸು ಕಂಡರೆ ಕೈಗೆಟಕುವ ವ್ಯವಸ್ಥೆ, ತರಬೇತಿ ಕೇಂದ್ರಗಳು, ತಾಂತ್ರಿಕ ನೆರವು, ಕ್ರೀಡಾ ವಿಜ್ಞಾನ, ಆಹಾರ ವಿಜ್ಞಾನದ ಸಂಶೋಧನಾ ಘಟಕಗಳು ಎಲ್ಲಿವೆ?

ನೀರಜ್ ಚೋಪ್ರ

ನನ್ನ ಶಾಲಾ ದಿನಗಳಲ್ಲಿ ವಾರಕ್ಕೆ ಮೂರ್ ನಾಲ್ಕು ದಿನ ಪೀಟಿ ಪೀರಿಯಡ್ ಅಂತ ಇರುತ್ತಿದ್ದವು. ಆ ಪೀರಿಯಡ್  ಗಳಿಗಾಗಿ ನಾವು ಸದಾ ಕಾಯುತ್ತಿದ್ದೆವು. ಆದ್ರೆ ಆ ಪೀರಿಯಡ್ ಗಾಗಿಯೇ ಗಣಿತ, ವಿಜ್ಞಾನದ ಮೇಷ್ಟ್ರುಗಳು ಹಸಿದ ತೋಳಗಳಂತೆ ಕಾಯುತ್ತಿದ್ದರು. ರಿವಿಶನ್ ಮಾಡ್ರೋ, extra ಕ್ಲಾಸ್ ಅಂತ ಬಂದು ಬಿಡೋರು. ಪೀಟಿ ಮೇಷ್ಟ್ರುಗಳು ಕೂಡ ಬರಿಯ ಪೀಪಿ ಊದುತ್ತಾ, ಡ್ರಿಲ್ ಮಾಡಿಸುತ್ತಾ, ಪ್ರಾರ್ಥನಾ ಸಭೆಗಳಲ್ಲಿ ಸರಿಯಾದ ಲೈನ್ ಮಾಡಿಸುತ್ತಾ, ಕಳಪೆ ಕ್ರೀಡಾ ಸಲಕರಣೆಗಳನ್ನ ಕೂಡಿ ಹಾಕಿಕೊಳ್ಳುತ್ತಿದ್ದರೆ ಹೊರತು ಮಕ್ಕಳ ದೈಹಿಕ ಅರೋಗ್ಯ ಮುಖ್ಯ, ಅವರು ಆಟ ಆಡುವ ಪೀಟಿ ಪಿರಿಯಡ್ ಅನ್ನು ಕಸಿದುಕೊಳ್ಳಬೇಡಿ ಎಂದು assertive ಆಗಿ ಹೇಳಿದ ಒಬ್ಬ ಪೀಟಿ ಮೇಷ್ಟ್ರನ್ನು ನಾ ಕಂಡಿಲ್ಲ. ಪೀಟಿ ಪೀರಿಯಡ್ ಇರಲಿಲ್ಲ ಇವತ್ತು ಎಂದು ಮನೇಲಿ ಹೇಳಿದಾಗ ಗಣಿತ ಮಾಡಿಸಿದ್ರ ಒಳ್ಳೆಯದಾಯ್ತು ಬಿಡು ಎನ್ನುವ ಪೋಷಕರು, ಪೀಟಿ ಪೀರಿಯಡ್ ಇರದಿಲ್ಲದಿದ್ದರು ಪರವಾಗಿಲ್ಲ ಎಂದು ಕ್ರೀಡೆಯ ಬಗ್ಗೆ ಅಸಾಧಾರಣ ಅಸಡ್ಡೆ ತೋರುವ ವಿದ್ಯಾ ಸಂಸ್ಥೆಗಳು ಇರುವವರೆಗೂ ನಾವೇನು ನಿರೀಕ್ಷಿಸಲಾಗದು. ಇನ್ನು ನ್ಯೂಟ್ರಿಷನ್ ಬಗ್ಗೆ ಮಾತನಾಡದಿರುವುದೇ ಒಳಿತು.

ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಪ್ರತಿ ಸರ್ಕಾರಿ ಶಾಲೆಯಲ್ಲೂ ಒಬ್ಬ ಉಸೈನ್ ಬೋಲ್ಟ್ ಇದ್ದಾನೆ. ಪ್ರತಿ ಹಳ್ಳಿಯಲ್ಲೂ ಮೈಕಲ್ ಫೆಲ್ಪ್ಸ್ ಇದ್ದಾನೆ. ಆದ್ರೆ ಕ್ರೀಡೆಗೆ ಪೂರಕವಾದ ಮೂಲಭೂತ ವ್ಯವಸ್ಥೆ, ತರಬೇತಿ, ಮಾರ್ಗದರ್ಶನ, ವಿಜ್ಞಾನ, ಕ್ರೀಡಾ ಪ್ರತಿಭೆಯನ್ನು ನಿರ್ಲಕ್ಷಿಸುವ ಸಮಾಜವಿದೆ. “ಮುಚ್ಕೊಂಡು ಓದು ಸಾಕು” ಎಂದು ಜರಿಯುವ ಪೋಷಕರಿದ್ದಾರೆ. ಪ್ರತಿಭೆಯಂದರೆ ಸೈನ್ ತೀಟಾ, ಕಾಸ್ ತೀಟಾ ಫಾರ್ಮುಲಾ ಬಲ್ಲವ ಎನ್ನುವ ಜನರಿದ್ದಾರೆ, ಇವೆರಡನ್ನು ಮೀರಿ ಮುಂದೆ ಬಂದರೆ ಪ್ರತಿಭೆಯನ್ನು ಕೊಲ್ಲುವ ಭ್ರಷ್ಟ ವ್ಯವಸ್ಥೆಯಿದೆ. ಬೆಂಗಳೂರಿನಲ್ಲಿ ಕಳೆದತ್ತು ವರುಷಗಳಲ್ಲಿ ಅಣಬೆಯಂತೆ ತಲೆಯೆತ್ತಿರುವ ಐಎಎಸ್ ತರಬೇತಿ ಕೇಂದ್ರಗಳ ವಿಜಯನಗರ ಸೃಷ್ಟಿಯಾಗಬಲ್ಲದಾದರೆ, ಉಚಿತ ಒಲಿಂಪಿಕ್ಸ್ ತರಬೇತಿ ಗ್ರಾಮಗಳೇಕೇ ಹುಟ್ಟಿಕೊಂಡಿಲ್ಲ?  

ಓದುವುದೊಂದೇ ಬದುಕಿನ ಮುಖ್ಯ ಧ್ಯೇಯ. ಯಾವುದಾದರೊಂದು ಕಾಂಪಿಟಿಟಿವ್ ಎಕ್ಸಾಮ್ಸ್ ಕ್ರ್ಯಾಕ್ ಮಾಡು ಎಂದು ಒತ್ತಡ ಹೇರುವ ಸಮಾಜದಲ್ಲಿ ಯಶಸ್ಸು ಸಾಮಾನ್ಯವಾಗಿ ಸೋಶಿಯಲ್ ಕ್ಯಾಪಿಟಲ್ ಇರುವ  ಪ್ರಭಾವಿಗಳದ್ದು ಮತ್ತು ಉಳ್ಳವರದ್ದು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ನಮ್ಮಂತಹ ದೇಶದಲ್ಲಿ ಕ್ರೀಡೆಗೆ ಆದ್ಯತೆ ನೀಡಿದರೆ ದಮನಿತರು, ಬಡವರಲ್ಲಿ ಉಂಟಾಗುವ ಸಾಮಾಜಿಕ ಸಂಚಲನ ಹೊಸ ತಲ್ಲಣವನ್ನು ಸೃಷ್ಟಿಸಿಬಿಡುತ್ತದೆ. ಆ  ಸಾಮಾಜಿಕ ಸಂಚಲನದಿಂದ  ಉಳ್ಳವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಭಾರತದಲ್ಲಿ ಕ್ರೀಡೆಗೆ ಮೂಲಭೂತ ಆದ್ಯತೆ ನೀಡಿ, ಎಲ್ಲಾ ಸೌಕರ್ಯವನ್ನು ನೀಡುವುದೆಂದರೆ ಶರಣರು ಪ್ರಯತ್ನಿಸಿದ ಅಂತರ್ ಜಾತಿ ವಿವಾಹದಷ್ಟೇ ಕ್ರಾಂತಿಕಾರಿಯಾದುದು. ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಷ್ಟೇ ಕ್ರೀಡೆಗೆ ಆದ್ಯತೆ ದೊರೆತರೆ ಉನ್ನತ ಸ್ಥಾನಗಳಲ್ಲಿ ಯಾರಿರುತ್ತಾರೆ ಎಂಬುದನ್ನ ಒಮ್ಮೆ ಊಹಿಸಿಕೊಳ್ಳಿ. ಕ್ರೀಡೆಯನ್ನು ಬೆಳೆಸದಿರುವುದರ ಹಿಂದೆ ಉಳ್ಳವರ ಹುನ್ನಾರವಿದೆ. ನಮ್ಮ ದೇಶದ ಅತಿ ದೊಡ್ಡ ಪಾಲಿಟಿಕ್ಸ್ ಅದು.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪೀಡ್ ಕ್ಲೈಂಬಿಂಗ್ ಎನ್ನುವ ಹೊಸದೊಂದು ಕ್ರೀಡೆ ಸೇರಿಸಲಾಯಿತು. ಸರಸರನೆ, ವೇಗವಾಗಿ ಲಂಬವಾದ ಗೋಡೆ ಹತ್ತುವ ಸ್ಪರ್ಧೆಯದು. ಮೊದಲಿನಿಂದಲೂ ಈ ಕ್ರೀಡೆಯಲ್ಲಿ ಅಮೇರಿಕ ಮತ್ತು ಪೋಲೆಂಡ್ ಪ್ರಾಬಲ್ಯವಿದೆ. ಟೋಕಿಯೋ ಮತ್ತು ಪ್ಯಾರಿಸ್  ಒಲಿಂಪಿಕ್ಸ್ ನಲ್ಲಿ ಪೋಲ್ಯಾಂಡಿನ ಅಲೆಕ್ಸಾಂಡ್ರಾ ಮಿರೊಸ್ಲಾವ್ ಚಿನ್ನದ ಪದಕ ಗೆದ್ದಳು. ಈ ಬಾರಿ ಮಿರೊಸ್ಲಾವ್ ಗೆ ತೀವ್ರ ಪೈಪೋಟಿ ನೀಡಿದ್ದು ಚೀನಾದ ದೆಂಗ್ ಲಿಯಾನ್. ಭಾರತದಂತಹ ದೇಶ ಕ್ರಿಕೆಟ್ ಮೀರಿ ನೋಡಲಾಗದಿರುವಾಗ ಚೀನಾ, ಅಮೆರಿಕಾದಂತಹ ದೇಶಗಳು ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸುತ್ತಿರುವುದಾದರೂ ಹೇಗೆ? ಕ್ರೀಡೆಯ ಬಗ್ಗೆ ಭಾರತ ತಳೆದಿರುವ ತಾತ್ಸಾರದ ನಿಲುವಿಗೂ, ವಿದ್ಯೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅದು ತೋರುವ ಅತಿಯಾದ ಒಲವಿನ ಹಿಂದೆ ಸಾಮಾಜಿಕ ಯಥಾಸ್ಥಿತಿ ಕಾಯ್ದುಕೊಳ್ಳುವ ಮಹಾ ಪಿತೂರಿಯಿದೆ ಎಂಬುದಂತು ನಿಜ. 

ಹರೀಶ್‌ ಗಂಗಾಧರ್‌

ಪ್ರಾಧ್ಯಾಪಕರು, ಲೇಖಕರು.

ಈ ಸುದ್ದಿ ಓದಿದ್ದೀರಾ?- ಚಿನ್ನ ಗೆದ್ದ ಅರ್ಷದ್ ನದೀಮ್ ಕೂಡ ನನ್ನ ಮಗನೇ: ನೀರಜ್ ಚೋಪ್ರ ತಾಯಿ

More articles

Latest article