ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೌಜನ್ಯ ಪ್ರಕರಣ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ ಎಂಬ ಯೂಟೂಬರ್ ಗೆ ಬಳ್ಳಾರಿ ಪೊಲೀಸರು ನೋಟಿಸ್ ನೀಡಿದ್ದಾರೆ. ಬಳ್ಳಾರಿಯಿಂದ ಆಗಮಿಸಿದ್ದ ಪೊಲೀಸರು ಸಮೀರ್ ಬಂಧನಕ್ಕೆ ಮುಂದಾಗಿದ್ದರು. ಆದರೆ ವಿಚಾರಣೆಗೆ ಸಹಕರಿಸುವುದಾಗಿ ಭರವಸೆ ನೀಡಿದ ನಂತರ ಕೇವಲ ನೋಟಿಸ್ ನೀಡಿ ಹಿಂತಿರುಗಿದ್ದಾರೆ ಎಂದು ಫೇಸ್‌ಬುಕ್ ಲೈವ್‌ನಲ್ಲಿ ಸಮೀರ್ ಹೇಳಿ ಕೊಂಡಿದ್ದಾರೆ. ಸೌಜನ್ಯ ಕುರಿತಾದ ವಿಡಿಯೋ ಒಂದು ಮಿಲಿಯನ್ ವ್ಯೂವ್ ಪಡೆದುಕೊಳ್ಳುತ್ತಲೇ ನನಗೆ ಆತಂಕ ಆರಂಭವಾಗಿತ್ತು. ಕೆಲವರು ನನ್ನ ವೈಯಕ್ತಿಕ ಮಾಹಿತಿ ಮತ್ತು ವಿಳಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿದರು ನಂತರ ನನಗೆ ಜೀವ ಬೆದರಿಕೆ ಕರೆಗಳು ಬರಲು ಆರಂಭಿಸಿದವು. ಪೊಲೀಸರ ಬಳಿ ಹೋದರೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯೂ ನನಗಿರಲಿಲ್ಲ. ನಂತರ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ಆಮೇಲೆ ಅವರೇ ವಕೀಲರ ಸಹಾಯವನ್ನು ನೀಡಿದ್ದಾರೆ ಎಂದು ಸಮೀರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ನನಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟಣ್ಣನವರ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡೆ. ಗಿರೀಶ್ ಮಟ್ಟನವರ್ ಮನೆಗೆ ಬಂದ ಸಂದರ್ಧದಲ್ಲಿಯೇ ಪೊಲೀಸರು ನಮ್ಮ ಮನೆಗೆ ಬಂದರು ಎಂದು ಸಮೀರ್ ಹೇಳಿದ್ದಾರೆ. ಸೌಜನ್ಯ ವಿಡಿಯೋ ಮಾಡುವ ಮುನ್ನ ಗಿರೀಶ್ ಅಥವಾ ಮಹೇಶ್ ಶೆಟ್ಟಿ ಅವರ ಪರಿಚಯ ನನಗೆ ಇರಲೇ ಇಲ್ಲ. ಇವರಾರೂ ಯಾರು ನನಗೆ ವಿಡಿಯೋ ಮಾಡುವಂತೆ ಹೇಳಿರಲಿಲ್ಲ ಎಂದು ರಂಜಾನ್ ತಿಂಗಳಿನಲ್ಲಿ ಅಲ್ಲಾಹುವಿನ ಮೇಲೆ ಆಣೆ ಮಾಡುತ್ತೇನೆ. ವಿಡಿಯೋ ಬಿಡುಗಡೆಯಾದ ನಂತರವಷ್ಟೇ ನನಗೆ ಇವರ ಪರಿಚಯವಾಗಿದೆ ಎಂದು ಸಮೀರ್ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಗಿರೀಶ್ ಅವರು, ಸಮೀರ್ ತಮ್ಮ ವಿಡಿಯೋದಲ್ಲಿ ಯಾರ ಹೆಸರನ್ನೂ ಬಳಸಿಲ್ಲ. ಇನ್ನು ದೇವಸ್ಥಾನ ಕುರಿತು ಯಾವುದೇ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿಲ್ಲ. ಸುಪ್ರೀಂಕೋರ್ಟ್‌ಗೆ ಅವರೇ ಬರೆದುಕೊಟ್ಟಂತಹ ಹೇಳಿಕೆಯನ್ನು ಸಮೀರ್ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಸೌಜನ್ಯಳನ್ನು ನಿಮ್ಮ ಮನೆ ಮಗಳು ಎಂದು ತಿಳಿದುಕೊಳ್ಳಿ ಎಂದು ಗಿರೀಶ್ ಮನವಿ ಮಾಡಿಕೊಂಡಿದ್ದಾರೆ.
ಸಮೀರ್ ಅವರನ್ನು ಬಂಧಿಸಬೇಕು ಎಂಬ ಉದ್ದೇಶದಿಂದಲೇ ಪೊಲೀಸರು ಬಳ್ಳಾರಿಯಿಂದ ಆಗಮಿಸಿದ್ದರು. ಬಳ್ಳಾರಿ ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು, ಬಳ್ಳಾರಿ ಎಸ್‌ಪಿ, ಬೆಂಗಳೂರು ಗ್ರಾಮಾಂತರ ಎಸ್‌ಪಿ ಮತ್ತು ಇಲ್ಲಿಯ ಸ್ಥಳೀಯ ಆವಲಹಳ್ಳಿಯ ಪೊಲೀಸರೊಂದಿಗೂ ನಾವು ಮಾತನಾಡಿದ್ದೇವೆ. ತನಿಖೆಗೆ ಸಹಕರಿಸುವುದಾಗಿ ಹೇಳಿದ ನಂತರ ನೋಟಿಸ್ ನೀಡಿ ಮರಳಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ತನಿಖೆಗೆ ಸಮೀರ್ ಬರುತ್ತಾನೆ ಎಂದು ಹೇಳಿದ್ದೇವೆ. ನಮ್ಮ ಮಾತನ್ನು ಒಪ್ಪಿಕೊಂಡಿರುವುದಕ್ಕೆ ಪೊಲೀಸರಿಗೆ ಧನ್ಯವಾದ ಹೇಳುತ್ತೇವೆ ಎಂದು ಗಿರೀಶ ತಿಳಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಎಲ್ಲಾ ಧರ್ಮದವರನ್ನು ಸೇರಿಸುತ್ತಿದ್ದೇವೆ. ಇಷ್ಟಕ್ಕೂ ಇಲ್ಲಿ ಧರ್ಮದ ವಿಷಯವೇ ಬರುವುದಿಲ್ಲ. ಸೌಜನ್ಯ ಅವರೇ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪರಿಚಯಿಸಿದ್ದರು. ಆಕೆಯಿಂದಲೇ ನನಗೆ ಮಹೇಶ್ ಅವರ ಪರಿಚಯವಾಗಿದೆ. ಇದೀಗ ಸಮೀರ್ ಜೊತೆಯಲ್ಲಿ ನಾವೆಲ್ಲಾ ಇದ್ದೇವೆ. ನಮ್ಮೆಲ್ಲರನ್ನು ಪರಿಚಯಿಸಿ ಒಂದೆಡೆ ಸೇರಿಸುತ್ತಿರುವುದೇ ಸೌಜನ್ಯ. ದೇವಸ್ಥಾನ ಕುರಿತು ಹೇಳಿಕೆಯು ದಾಖಲೆಯಲ್ಲಿವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಅಥವಾ ಹಿಂದೂ ದೇಗುಲಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಪ್ರಕರಣವನ್ನು ತಿರುಚಲಾಗುತ್ತಿದೆ ಎಂದು ಗಿರೀಶ್ ಬೇಸರ ಹೊರ ಹಾಕಿದ್ದಾರೆ.
ಮಂಜುನಾಥ ಸ್ವಾಮಿ ಕಣ್ಣು ಬಿಟ್ಟಿದ್ದು, ನಿಜವಾದ ಆರೋಪಿಗಳು ಯಾರು ಎಂಬ ಸತ್ಯ ಸಮಾಜದ ಮುಂದೆ ಬರಲಿದೆ. ಆ ಮಂಜುನಾಥ ಸ್ವಾಮಿ ಕೃಪೆಯಿಂದಲೇ ನಾವು ಇಲ್ಲಿ ಸೇರುವಂತಾಗಿದೆ ಎಂದು ಸಮೀರ್ ಎಂ.ಡಿ. ಅಭಿಪ್ರಾಯಪಟ್ಟಿದ್ದಾರೆ.