ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಂ ಕನ್ನಡ, ಕನ್ನಡಿಗರನ್ನು ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ದೂರು ದಾಖಲಿಸಿದೆ.
ಈ ಕಾಲೇಜಿನಲ್ಲಿ ಸೋನು ನಿಗಂ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಹಾಡನ್ನು ಹಾಡಲು ಒತ್ತಾಯಿಸಿದಾಗ ಸೋನು ನಿಗಮ್ ಇದೇ ಕಾರಣಕ್ಕೆ ಪಹಲ್ಗಾಂ ದುರಂತ ನಡೆದಿದ್ದು ಎಂದು ಪ್ರತಿಕ್ರಿಯೆ ನೀಡಿದ್ದರು. ಇವರ ಈ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಕನ್ನಡ ಚಿತ್ರರಂಗದಿಂದ ಸೋನು ನಿಗಂ ಅವರನ್ನು ನಿಷೇಧಿಸಬೇಕೆಂದು ಆಗ್ರಹಪಡಿಸಲಾಗಿದೆ.
ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸದಸ್ಯರು ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದಕತೆಗೆ ಹೋಲಿಸಿದ ಸೋನು ನಿಗಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಧರ್ಮರಾಜ್ ದೂರು ನೀಡಿದ್ದಾರೆ. ಸೋನು ನಿಗಂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಭಾವನೆಗಳನ್ನು ಕೆರಳಿಸುವಂತಿವೆ. ಅವರ ಹೇಳಿಕೆ ವಿಡಿಯೋದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಾಕ್ಷ್ಯಗಳನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸೋನು ನಿಗಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಸೋನು ನಿಗಂ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ. ಆತನನ್ನು ಕನ್ನಡದಿಂದ ಬ್ಯಾನ್ ಮಾಡಬೇಕು, ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸುವ ಈತ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದರೆ ಸೋನು ನಿಗಮ್ ಹಾಡಿರುವ ಹಾಡುಗಳನ್ನು ಪ್ರಸಾರ ಮಾಡಬಾರದು ಎಂದಿದ್ದಾರೆ. ರಾಜ್ಯದಲ್ಲಿ ಈತ ಸಂಗೀತ ಕಾರ್ಯಕ್ರಗಳನ್ನು ನಡೆಸಲು ಬಿಡುವುದಿಲ್ಲ. ಯಾರೊಬ್ಬರೂ ಸೋನು ನಿಗಂನನ್ನು ಆಹ್ವಾನಿಸಬಾರದು. ಒಂದು ವೇಳೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಆಯೋಜಕರೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಭಾಷೆಗೂ ಪಹಲ್ಗಾಮ್ ಘಟನೆಗೂ ಸಂಬಂಧ ಕಲ್ಪಿಸಿರುವ ಸೋನು ನಿಗಂ ಕ್ನನಡಿಗರ ಕ್ಷಮೆ ಕೋರಬೇಕು. ಇಲ್ಲವೇ ಕರ್ನಾಟಕಕ್ಕೆ ಕಾಲಿಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.