Thursday, December 12, 2024

ಬಿಜೆಪಿ ಮುಗಿಸಲು ಯತ್ನಾಳ್‌ ಗೆ ಸೋನಿಯಾ, ರಾಹುಲ್‌ ಸುಪಾರಿ; ರೇಣುಕಾಚಾರ್ಯ ಆರೋಪ

Most read

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯನ್ನು ಮುಗಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸುಪಾರಿ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.  ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಯತ್ನಾಳ್ ಮತ್ತು ಅವರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಗಿಸಲು  ಕಾಂಗ್ರೆಸ್ ನವರು ಸುಪಾರಿ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಯತ್ನಾಳ್ ಗೆ ಸುಪಾರಿ ಕೊಟ್ಟಿದ್ದಾರೆ ಎಂದು ಆಪಾದಿಸಿದರು.  ಸದಾನಂದಗೌಡ ಅವರು ಮಾತನಾಡಿದ್ದಕ್ಕೆ ಬಿಚ್ಚೀಡ್ತೀನಿ ಎಂದು ಯತ್ನಳ್‌ ಸವಾಲು ಹಾಕಿದ್ದಾರೆ. ಯತ್ನಾಳ್ ನೀನು ಬ್ಲ್ಯಾಕ್ ಮೇಲ್ ಮಾಸ್ಟರಾ? ಅದೇನು ಇದೆ  ಬಿಚ್ಚಿಡು ನೋಡೋಣ, ನಾವೂ ನಿನ್ನದನ್ನು ಬಿಚ್ಚಿಡ್ತೀವಿ ಎಂದು ಸವಾಲು ಹಾಕಿದರು.

ಪಕ್ಷಕ್ಕೆ ನಿನ್ನ ಕೊಡುಗೆ ಏನು? ಬೀದಿಯಲ್ಲಿ ತಮಟೆ ಹೊಡೆಯುತ್ತಾ ಹೋಗುತ್ತಿರುವುದು ನೀವು. ನೀವೇ ನಾಗರಹಾವುಗಳು ರೇಣುಕಾಚಾರ್ಯ ಹೇಳಿದರು.

ನಾವು ಯಾರೂ ಪರ್ಯಾಯ ಸಭೆಗಳನ್ನು ಮಾಡುತ್ತಿಲ್ಲ. ಪಕ್ಷದ ವೇದಿಕೆಯಲ್ಲಿ ನಾವು ಪ್ರವಾಸ ಮಾಡ್ತಿದ್ದೇವೆ. ದಾವಣಗೆರೆ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸುತ್ತೇವೆ. ವಿಜಯಪುರದ ಹಾಲಿ ಸಚಿವ ಹಾಗೂ ಪ್ರಭಾವಿ ಸಚಿವರೊಬ್ಬರ ಜೊತೆ ಹೊಂದಾಣಿಕೆ ಮಾಡಿಕೊಂಡು ನೀನು ಗೆದ್ದು ಇಡೀ ಜಿಲ್ಲೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದೀಯಾ. ಮೊನ್ನೆ ಶಿಗ್ಗಾಂವ್ ನಲ್ಲಿ ಭರತ್ ಬೊಮ್ಮಾಯಿ ಸೋಲಿಗೂ ನೀನೇ ಕಾರಣ ಎಂದು ರೇಣುಕಾಚಾರ್ಯ ಹೇಳಿದರು.

ಸಂಘಟನೆ ಸಾಮರ್ಥ್ಯ ವನ್ನು ರಾಜ್ಯದ ಅಧ್ಯಕ್ಷರು ಈಗಾಗಲೇ ತೋರಿಸಿದ್ದಾರೆ. ನಿಮ್ಮ ಹರುಕು ಬಾಯಿ, ಹೊಲಸು ಬಾಯಿಯಿಂದಲೇ ಕಳೆದ ಚುನಾವಣೆಯಲ್ಲಿ ಸೋಲಾಗಿದೆ. ಬಿಜೆಪಿಯ ಸೋಲಿಗೆ ನೀವೇ ಕಾರಣ. ನರೇಂದ್ರ ಮೋದಿಗಿಂತ ನೀನು ದೊಡ್ಡ ಮನುಷ್ಯ ಆಗಬಿಟ್ಟಿರುವ ಹಾಗಿದೆ. ವಕ್ಪ್ ಹೋರಾಟಕ್ಕೆ ಶೋಭಾ, ಪ್ರಹ್ಲಾದ್ ಜೋಷಿ ಬೆಂಬಲ ಕೊಟ್ಟಿದ್ದಾರೆ ನಿಮಗಲ್ಲ. ಪರ್ಯಾಯ ನಾಯಕತ್ವ ಸೃಷ್ಟಿಗೆ ಬೆಂಬಲ ಕೊಟ್ಟಿದ್ದಾರೆಯೇ?  ಪಕ್ಷ ಮತ್ತು ಚಿಹ್ನೆ ನಿಮಗೆ ಕೊಟ್ಟವರು ಯಾರು ಎಂದು ವಾಗ್ದಾಳಿ ನಡೆಸಿದರು.

ನಿನಗೆ ತಾಕತ್ ಇದ್ದರೆ ನಿಮಗೆ ಬೆಂಬಲ ಕೊಟ್ಟ ರಾಷ್ಟ್ರೀಯ ನಾಯಕ ರ ಹೆಸರನ್ನು ಬಹಿರಂಗಪಡಿಸು. ನಡವಳಿಕೆ ಯನ್ನು ಸರಿಪಡಿಸಿಕೊಳ್ಳದಿದ್ದರೆ ವರಿಷ್ಠರ ಭೇಟಿ ಮಾಡಿ ನಿಮ್ಮ ಉಚ್ಚಾಟನೆಗೆ ಒತ್ತಾಯ ಮಾಡಬೇಕಾಗುತ್ತದೆ ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

More articles

Latest article