ನವದೆಹಲಿ : ನವದೆಹಲಿಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ, ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ಕಾಂಗ್ರೆಸ್ ಸಂಸದರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರ ವಿರೋಧ ಪಕ್ಷದ ನಾಯಕರು ಫಲಕಗಳು ಮತ್ತು ಕಪ್ಪು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು.
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಲು ತ್ವರಿತಗತಿ ನ್ಯಾಯಾಲಯಗಳನ್ನು (fast-track courts) ಸ್ಥಾಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯು “ಅತ್ಯಲ್ಪ, ತಡವಾದ ಮತ್ತು ದಾರಿ ತಪ್ಪಿಸುವಂಥದ್ದು” ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
ಕಳೆದ 12 ವರ್ಷಗಳಲ್ಲಿ ಸರ್ಕಾರವು ಇಂತಹ ಘಟನೆಗಳನ್ನು ಮುಚ್ಚಿಹಾಕಿದೆ ಮತ್ತು ಅಂತಹ ಕೃತ್ಯಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅದು ಆರೋಪಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವಲ್ಲಿ ಮೋದಿ ಸರ್ಕಾರದ ವೈಫಲ್ಯ, ಘಟನೆಗಳು ಸಂಭವಿಸಿದಾಗ ಅವುಗಳನ್ನು ಒಪ್ಪಿಕೊಳ್ಳಲು ತೋರಿದ ಹಿಂಜರಿಕೆ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಲ್ಲಿನ ಅಸಮರ್ಥತೆಯ ಕುರಿತು ವಿದ್ಯಾರ್ಥಿಗಳು ನಿಜವಾದ ಹೊಣೆಗಾರಿಕೆಯನ್ನು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಬೇಡಿಕೆಗಳು : 1. ಸಚಿವ ಪ್ರಧಾನ್ ಅವರನ್ನು ವಜಾಗೊಳಿಸಿ. 2. ವಿದ್ಯಾರ್ಥಿಗಳ ಕ್ಷಮೆ ಕೇಳಿ. 3. ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ‘ಎಕ್ಸ್’ (X) ನಲ್ಲಿ ತಿಳಿಸಿದ್ದಾರೆ.
“ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಲು ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಧಾನ ಮಂತ್ರಿಯವರ ಘೋಷಣೆಯು ಅತ್ಯಲ್ಪ, ತಡವಾದ ಮತ್ತು ತೀರಾ ದಾರಿ ತಪ್ಪಿಸುವ ಕ್ರಮವಾಗಿದೆ ಎಂದು ಅವರು ಹೇಳಿದರು.
ಕಳೆದ 12 ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಹೇಗೆ ಮುಚ್ಚಿಹಾಕಲಾಗಿದೆ ಮತ್ತು ಅದಕ್ಕೆ ಹೇಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಸತ್ಯವನ್ನು ಪ್ರಧಾನ ಮಂತ್ರಿಯವರು ಮೊದಲು ಎದುರಿಸಬೇಕು. ತಮ್ಮ ಆಡಳಿತಾವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಂಭವಿಸಿದೆ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯವನ್ನೂ ಮೋದಿ ಸರ್ಕಾರ ಹೊಂದಿಲ್ಲ ಎಂದು ರಮೇಶ್ ಪ್ರತಿಪಾದಿಸಿದರು.
“ಶಿಕ್ಷಣದ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಗೆ ಶಿಕ್ಷಣ ಸಚಿವಾಲಯವು ಈ ಹಿಂದೆ, ಎನ್‌ಟಿಎ (NTA) ಮೂಲಕ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆ ಸಂಭವಿಸಿಲ್ಲ ಎಂದು ಹೇಳಿಕೊಂಡಿತ್ತು. ಸತ್ಯವನ್ನು ಒಪ್ಪಿಕೊಳ್ಳುವ ಬದಲು, ಪ್ರಧಾನ ಮಂತ್ರಿ ಮತ್ತು ಸಚಿವ ಪ್ರಧಾನ್ ಅವರು ಜನರಿಗೆ ಹಾಗೂ ಸಂಸತ್ತಿಗೆ ನಾಚಿಕೆಯಿಲ್ಲದೆ ಸುಳ್ಳು ಹೇಳುತ್ತಿದ್ದಾರೆ,” ಎಂದು ಅವರು ಮೋದಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತೀವ್ರವಾಗಿ ಟೀಕಿಸಿದರು.

