ಸಮಾಜವಾದ ತನ್ನ ಕೊನೆಯ ದಿನಗಳನ್ನು ಕಾಣುತ್ತಿದೆ: ಕೋಣಂದೂರು ಲಿಂಗಪ್ಪ ಬೇಸರ

Most read

ತೀರ್ಥಹಳ್ಳಿ: ಇಂದಿನ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಸಮಾಜವಾದದ ತತ್ವ ಸಿದ್ಧಾಂತಗಳ ಕುರಿತು ಜನರು ಸಿನಿಕರಾಗಿರುವುದು ಪ್ರಮುಖ‌ ಕಾರಣವಾಗಿದೆ‌ ಎಂದು ಖ್ಯಾತ ಸಮಾಜವಾದಿ ಚಿಂತಕ ಕೋಣಂದೂರು ಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ‌ ಕನ್ನಡ ಚಳವಳಿಯ ಪ್ರವರ್ತಕ ಸನ್ಮಾನವನ್ನು ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ‌ ತಮ್ಮ ಸ್ವಗೃಹದಲ್ಲಿ ಸ್ವೀಕರಿಸಿ ಮಾತನಾಡಿದ ಅವರು ಜನಪರವಾದ ಹೋರಾಟಗಳಿಲ್ಲದೆ ಇಂದು ಸಮಾಜವು ಸೊರಗುತ್ತಿದ್ದು, ಬಡವ ಬಲ್ಲಿದರ‌ ನಡುವಿನ ಕಂದಕ ಹಿರಿದಾಗುತ್ತಲೇ‌ ಇದೆ. ತಮ್ಮ ಕಾಲದ‌ ಚಳವಳಿಗಳಲ್ಲಿನ ಸಾಮಾಜಿಕ ಕಳಕಳಿ, ತತ್ವನಿಷ್ಠೆಗಳು ಇಂದು ಕಾಣುತ್ತಿಲ್ಲ, ಹೋರಾಟಗಳಿಗೆ ಪ್ರೇರಣೆಯೂ ಸಿಗುತ್ತಿಲ್ಲ. ಇದು ವಿಷಾದನೀಯವಾದ ಸಂಗತಿ ಎಂದರು.

ಸಮಾಜವಾದಿ ಆದರ್ಶ ತತ್ತ್ವಸಿದ್ಧಾಂತಗಳನ್ನು ನಂಬಿದ ಶಾಂತವೇರಿ ಗೋಪಾಲಗೌಡ ಅವರಿಂದಾಗಿ ತಮ್ಮ ಬದುಕಿಗೆ ಅರ್ಥ ದೊರಕಿದ್ದು ಅವರ ನಿರಂತರ ಮಾರ್ಗದರ್ಶನ ತಮ್ಮ ಹೋರಾಟದ ಮನಸ್ಥಿತಿಗೆ ಪ್ರೇರೇಪಣೆಯಾಯಿತು ಎಂದು ನೆನೆದ ಅವರು ಅಂದಿನ ದಿನಮಾನಕ್ಕೆ ಸತ್ವಯುತವಾದ ಹೋರಾಟ ಅವಶ್ಯಕವಿತ್ತು. ತಮ್ಮ ಜವಾಬ್ದಾರಿಯನ್ನು ತಾನು ನಿರ್ವಹಿಸಿದೆ ಎನ್ನುವ ತೃಪ್ತಿ ತನಗೆ ಇದೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಕೋಣಂದೂರು ಲಿಂಗಪ್ಪನವರನ್ನು ಸನ್ಮಾನಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.

More articles

Latest article