ಬಜೆಟ್ 2026-27– ಅಭಿಮತ
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು (Social Media) ಜನರ ಜೀವನದ ಪ್ರಮುಖ ಭಾಗವಾಗಿವೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮುಂತಾದ ವೇದಿಕೆಗಳನ್ನು ದೊಡ್ಡವರಷ್ಟೇ ಅಲ್ಲ, ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಕೂಡ ಬಳಸುತ್ತಿದ್ದಾರೆ. ಆದರೆ ಇದರ ಪರಿಣಾಮವಾಗಿ ಮಕ್ಕಳ ಆರೋಗ್ಯ, ಓದು ಮತ್ತು ಮನೋಭಾವದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 6, ಶುಕ್ರವಾರದಂದು 2026 ರ ರಾಜ್ಯ ಬಜೆಟ್ ಮಂಡಿಸಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಷೇಧಿಸುವುದಾಗಿ ಘೋಷಿಸಿದರು. “ಮಕ್ಕಳ ಮೇಲೆ ಹೆಚ್ಚುತ್ತಿರುವ ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ತಡೆಗಟ್ಟಲು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಲಾಗುವುದು” ಎಂದು ಸಿದ್ದರಾಮಯ್ಯ ಹೇಳಿದರು.
ಇದು ಹೇಳಿದಷ್ಟು ಸುಲಭವಲ್ಲ. ಈಗಾಗಲೇ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ಮೂಲ ಏನು? ಎಂಬುದು ಕೂಡ ಮುಖ್ಯ ಆಗುತ್ತದೆ.

ಸಾಮಾಜಿಕ ಮಾಧ್ಯಮಗಳ ಹೆಚ್ಚಾದ ಬಳಕೆ ಮಕ್ಕಳಲ್ಲಿ ಮೊಬೈಲ್ ವ್ಯಸನವನ್ನು ಹೆಚ್ಚಿಸುತ್ತದೆ. ಹಲವಾರು ಮಕ್ಕಳು ದಿನಕ್ಕೆ ಹಲವು ಗಂಟೆಗಳ ಕಾಲ ಫೋನ್ ಬಳಸುವುದರಿಂದ ಓದಿನ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಏಕಾಗ್ರತೆಯ ಕೊರತೆ ಕೂಡ ಹೆಚ್ಚಾಗುತ್ತಿದೆ. ಮಾತ್ರವಲ್ಲದೆ ಮಕ್ಕಳ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ದೀರ್ಘಕಾಲ ಮೊಬೈಲ್ ಪರದೆ ನೋಡುವುದರಿಂದ ಕಣ್ಣು ನೋವು, ತಲೆನೋವು, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೆಲವೊಮ್ಮೆ ಮಕ್ಕಳು ತಡರಾತ್ರಿವರೆಗೆ ಮೊಬೈಲ್ ಬಳಸುವುದರಿಂದ ಅವರ ದಿನಚರಿಯೇ ಬದಲಾಗುತ್ತಿದೆ. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.
ಸಾಮಾಜಿಕ ಜಾಲತಾಣವನ್ನು ಮಕ್ಕಳು ಯಥೇಚ್ಛವಾಗಿ ಬಳಸುವುದರಿಂದ ಮಕ್ಕಳಲ್ಲಿ ಸಂವಹನ ಕೊರತೆ ತುಂಬಾ ಹೆಚ್ಚಾಗಿದೆ. ಇದರಿಂದ ಮಕ್ಕಳಲ್ಲಿ ಖಿನ್ನತೆ ಹೆಚ್ಚುತ್ತಿದೆ. ನೆರೆಹೊರೆಯ ಮಕ್ಕಳಲ್ಲಿ ಗೆಳೆತನ ಕಡಿಮೆ ಆಗಿ ಮಕ್ಕಳು ಒಂಟಿಯಾಗಿ ಕೋಣೆ ಒಳಗೆ ಇದ್ದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದನ್ನು ಹೆಚ್ಚಿನ ಮನೆಗಳಲ್ಲಿ ಕಾಣುತ್ತಿದ್ದೇವೆ. ಮುಂಚೆ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಸಂಬಂಧಿಕರ ಮನೆಗೆ ನೆರೆಹೊರೆಯ ಮನೆಗೆ ಹೋಗುವುದೆಂದರೆ ಕುಶಿಯೋ ಕುಶಿ ಆಗುತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೊರಗೆ ಹೋಗಲು, ನೆಂಟರ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕೆಲವೊಮ್ಮೆ ಬರುವುದಿಲ್ಲ ಎಂಬ ನೇರ ಉತ್ತರ ಅವರಲ್ಲಿ ಇರುತ್ತದೆ. ಆಕಸ್ಮಾತ್ ಹೋದರೂ ಕೂಡ ಅಲ್ಲಿಯೂ ಸಹ ಅವರ ಕೈಯಲ್ಲಿ ಮೊಬೈಲ್ ಇದ್ದು ಅದರಲ್ಲಿ ಸಕ್ರಿಯವಾಗಿ ಇರುತ್ತಾರೆ.
ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಆನ್ಲೈನ್ ಅಪಾಯಗಳು. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೇಳೆ ತಪ್ಪು ಮಾಹಿತಿ, ಅಸಭ್ಯ ವಿಷಯಗಳು ಅಥವಾ ಅಪರಿಚಿತರ ಸಂಪರ್ಕಗಳು ಮಕ್ಕಳಿಗೆ ಅಪಾಯ ಉಂಟುಮಾಡಬಹುದು. ಸೈಬರ್ ಬುಲ್ಲಿಂಗ್, ಮೋಸ ಮತ್ತು ವೈಯಕ್ತಿಕ ಮಾಹಿತಿಯ ದುರುಪಯೋಗದಂತಹ ಘಟನೆಗಳೂ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಕಾರಣಗಳಿಂದ ಮಕ್ಕಳ ಸುರಕ್ಷತೆಗಾಗಿ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿರಬೇಕು. ಈ ನಿಯಮ ಜಾರಿಯಾದರೆ ಮಕ್ಕಳು ತಮ್ಮ ಸಮಯವನ್ನು ಓದು, ಕ್ರೀಡೆ, ಪುಸ್ತಕ ಓದು ಮತ್ತು ಇತರೆ ಸೃಜನಾತ್ಮಕ ಚಟುವಟಿಕೆಗಳಿಗೆ ಬಳಸಬಹುದು. ಇದರಿಂದ ಅವರ ಪ್ರತಿಭೆ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ.
ಆದರೆ ಸಾಮಾಜಿಕ ಮಾಧ್ಯಮಗಳಿಗೆ ಒಳ್ಳೆಯ ಅಂಶಗಳೂ ಇವೆ. ಸರಿಯಾದ ರೀತಿಯಲ್ಲಿ ಬಳಸಿದರೆ ಮಕ್ಕಳು ಹೊಸ ವಿಷಯಗಳನ್ನು ಕಲಿಯಬಹುದು, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು, ಬೇರೆ ಬೇರೆ ವಿಷಯಗಳ ಕಲಿಕೆಗೆ ಸಹಾಯ ಆಗಬಹುದು ಮತ್ತು ಜಗತ್ತಿನ ವಿವಿಧ ವಿಷಯಗಳ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬಹುದು. ಆದ್ದರಿಂದ ಸಂಪೂರ್ಣ ನಿಷೇಧಕ್ಕಿಂತ ಸರಿಯಾದ ನಿಯಂತ್ರಣ ಮತ್ತು ಮಾರ್ಗದರ್ಶನ ಮುಖ್ಯವಾಗಿದೆ ಎಂಬ ಅಭಿಪ್ರಾಯವೂ ಇದೆ.
ಈ ಚಟ ಎಂಬುದು ಅಷ್ಟು ಸುಲಭವಾಗಿ ಹೋಗುವಂತಹದು ಅಲ್ಲ. ಈ ಸಂದರ್ಭದಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯವಾಗಿದೆ. ಹಾಗೂ ಶಿಕ್ಷಣ ವ್ಯವಸ್ಥೆ ಇಲಾಖೆ ಶಿಕ್ಷಕರ ಜಾಣ್ಮೆ ಕೂಡ ಇಲ್ಲಿ ಕೆಲಸ ಮಾಡುತ್ತದೆ.
1) ನಿಯಂತ್ರಣಕ್ಕಿಂತ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ.
2) ಮಕ್ಕಳು ಭಯದಿಂದ ನಿಯಮ ಪಾಲಿಸಲಾರರು .
3) ಪೋಷಕರು ಮಕ್ಕಳಿಗೆ ಮೊಬೈಲ್ ಬಳಕೆಯ ಮಿತಿಯನ್ನು ತಿಳಿಸಬೇಕು. ಪೋಷಕರು ಮಕ್ಕಳಿಗೆ ಮಾದರಿ ಆಗಬೇಕೆ ವಿನಃ ಅವರೇ ದಿನವಿಡೀ ಮೊಬೈಲನ್ನು ಬಳಸಿದರೆ?? ಎಷ್ಟು ಗಂಟೆ ಬಳಸಬೇಕು ಎಂಬುದು ಪೋಷಕರಿಗೆ ಮುಖ್ಯ ತಿಳಿದಿರಬೇಕು.
4) ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು ಮತ್ತು ಅವರ ಆಸಕ್ತಿಗಳನ್ನು ಉತ್ತೇಜಿಸಬೇಕು.
5) ಶಿಕ್ಷಕರು ಕೂಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸುವ ಬಗ್ಗೆ ಜಾಗೃತಿ ಮೂಡಿಸಬೇಕು.
6) ಮನೆಯಲ್ಲಿ ಶಾಲೆಯಲ್ಲಿ ಜೀವನ ಕೌಶಲ್ಯದ ಬಗ್ಗೆ ಪಾಠದ ಜೊತೆಗೆ ಆಟ, ಪ್ರಕೃತಿಯಲ್ಲಿ ಬೆರೆಯುವಿಕೆ, ಜೀವನಕ್ಕೆ ಬೇಕಾದ ಸಣ್ಣ ಪುಟ್ಟ ವೃತ್ತಿ ಕೌಶಲ್ಯಗಳನ್ನು ಕಲಿಸುವ ವ್ಯವಸ್ಥೆ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಖಂಡಿತವಾಗಿಯೂ ಈ ವ್ಯಸನದಿಂದ ಮುಕ್ತವಾಗಲು ಸಾಧ್ಯ.
7) ಶಿಕ್ಷಣ ವ್ಯವಸ್ಥೆ ಇಲಾಖೆ ಕೂಡ ಬರೀ ಅಂಕ ಗಳಿಸುವಿಕೆಯ ಲೆಕ್ಕಾಚಾರ ಹಾಕುವ ಬದಲು ಶೈಕ್ಷಣಿಕ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಶಿಕ್ಷಕರಿಗೆ ಮಕ್ಕಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಡಲು ಮತ್ತು ಅವರ ಆರೋಗ್ಯವನ್ನು ಕಾಪಾಡಲು ಇಂತಹ ಕ್ರಮಗಳು ಸಹಾಯಕವಾಗಬಹುದು. ಸರ್ಕಾರದ ನಿಯಮಗಳ ಜೊತೆಗೆ ಪೋಷಕರು, ಶಿಕ್ಷಕರು, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜವೂ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ, ತಂತ್ರಜ್ಞಾನವನ್ನು ಉತ್ತಮವಾಗಿ ಬಳಸುವ ಹೊಸ ಪೀಳಿಗೆ ರೂಪುಗೊಳ್ಳಬಹುದು.
ವನಿತಾ ಭಂಡಾರಿ ಬಜಪೆ
ಇದನ್ನೂ ಓದಿ- ಮಕ್ಕಳಿಗೆ ಸೋಷಲ್ ಮೀಡಿಯಾ ನಿಷೇಧ- ಸಾಧುವೆ?


