ಬೆಂಗಳೂರು: ವೇಶ್ಯಾವಾಟಿಕೆಗೆ ದೂಡಲು ಬಾಲಕಿಯರನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮೇ ತಿಂಗಳಿಂದ ಇದುವರೆಗೆ 12 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ. ಈ ಬಾಲಕಿರು ತ್ರಿಪುರಾ, ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದವರಾಗಿದ್ದು, ಬಾಂಗ್ಲಾದೇಶಕ್ಕೆ ಸೇರಿದ ಮೂವರು ಬಾಲಕಿಯರೂ ಇದ್ದಾರೆ.
26 ಮಧ್ಯವರ್ತಿಗಳ ತಂಡ ಈ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದರು. ಇವರು ವಿವಿಧ ರಾಜ್ಯಗಳಿಂದ ಬಾಲಕಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕರೆದುಕೊಂಡು ಬರುತ್ತಿದ್ದರು. ನಂತರ ಬಾಲಕಿಯರನ್ನು
ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪಿಗಳು ಮತ್ತು ಐವರು ಗ್ರಾಹಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನವ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಕಳೆದ ಕೆಲವು ತಿಂಗಳಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ನೀಡಿದ ಮಾಹಿತಿಯನ್ನಾಧರಿಸಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ನೆರವಿನಿಂದ 14 ರಿಂದ 17 ವರ್ಷದೊಳಗಿನ ಬಾಲಕಿಯರನ್ನು ರಕ್ಷಿಸಲಾಗಿದೆ. ಪ್ರಕರಣದ ಸಂಬಂಧ ಬಂಧಿಸಲ್ಪಟ್ಟಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ