ಸ್ಮಾರ್ಟ್‌ಮೀಟರ್ ಟೆಂಡರ್ ಪ್ರಕ್ರಿಯೆ ಪಾರದರ್ಶಕ: ಇಂಧನ ಸಚಿವ ಕೆ.ಜೆ. ಜಾರ್ಜ್

Most read

ಬೆಂಗಳೂರು: ಸ್ಮಾರ್ಟ್‌ಮೀಟರ್ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ, ಈ ಕುರಿತ ಬಿಜೆಪಿಯ ಆರೋಪಗಳಲ್ಲಿ ಹುರುಳಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ ಸಿ) ಆದೇಶದಂತೆ ರಾಜ್ಯದಲ್ಲಿ ಹೊಸ ಮತ್ತು ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಮೀಟರ್ ಅಳವಡಿಸಲಾಗುತ್ತಿದೆ. ಅದಕ್ಕಾಗಿ ಕೆಟಿಪಿಪಿ ಕಾಯ್ದೆ ಅನುಸಾರ ಟೆಂಡರ್ ಕರೆದು ನಂತರ ಪ್ರಿಬಿಡ್ ಸಭೆಯಲ್ಲಿ ಆಸಕ್ತ ಬಿಡ್ಡುದಾರರ ಪ್ರಶ್ನೆಗಳಿಗೆ ಉತ್ತರಿಸಲಾಗಿತ್ತು. ಬಳಿಕ ಅತಿ ಕಡಿಮೆ ಬಿಡ್ ಮಾಡಿದ್ದ ರಾಜಶ್ರೀ ಎಂಟರ್ ಪ್ರೈಸಸ್‌ನವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.

ಬಿಜೆಪಿಯವರು ವಿಧಾನಸಭೆಯಲ್ಲಿ ಸ್ಮಾರ್ಟ್ ಮೀಟರ್ ಪ್ರಸ್ತಾಪಿಸಿದಾಗ ಉತ್ತರ ಕೊಡುವುದಾಗಿ ಹೇಳಿದ್ದೆ. ಅದರಂತೆ ಮಾರನೇ ದಿನ ಉತ್ತರ ಕೊಡಲು ಸಿದ್ಧವಾಗಿಯೇ ಬಂದು ಕಲಾಪ ಆರಂಭವಾಗುವಾಗ ಅವಕಾಶ ಕೇಳಿದ್ದೆ. ಆದರೆ, ಸಭಾಧ್ಯಕ್ಷರು ಬಜೆಟ್ ಕುರಿತ ಚರ್ಚೆಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಉತ್ತರಿಸಿದ ಬಳಿಕ ನನಗೆ ಉತ್ತರಿಸಲು ಅವಕಾಶ ನೀಡುವುದಾಗಿ ಹೇಳಿದರು. ಆದರೆ, ಮುಖ್ಯಮಂತ್ರಿಗಳ ಉತ್ತರದ ವೇಳೆಯೇ ಬಿಜೆಪಿಯವರು ಗದ್ದಲ ಮಾಡಿ ಕಲಾಪ ನಡೆಸಲು ಅವಕಾಶ ಕೊಡಲಿಲ್ಲ. ಗಲಾಟೆ ಮಾಡಿ ಉತ್ತರ ಕೊಡಲೂ ಅವಕಾಶ ನೀಡಲಿಲ್ಲ. ಹಾಗಾಗಿ ನನಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಇದನ್ನು ಮುಚ್ಚಿಟ್ಟು ಬಿಜೆಪಿಯವರು ನನ್ನ ಮೇಲೆ ವೃಥಾರೋಪ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ಎಸ್) ಜಾರಿಗೊಳಿಸಿದ್ದರೆ ಅಥವಾ ಕೇಂದ್ರ ಸರ್ಕಾರದ ನಿರ್ದೇಶನದಂತೆ ನಾವು ಮುಂದುವರಿದಿದ್ದರೆ ಹೊಸ ಮತ್ತು ತಾತ್ಕಾಲಿಕ ಸ್ಥಾಪನಗಳ ಜತೆಗೆ ಹಾಲಿ ಸ್ಥಾಪನಗಳಿಗೂ (2.16 ಕೋಟಿ) ಸ್ಮಾರ್ಟ್ ಮೀಟರ್ ಅಳವಡಿಸಬೇಕಿತ್ತು. ಆದರೆ, ಗ್ರಾಹಕರ ಮೇಲೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಅದನ್ನು ಜಾರಿಗೊಳಿಸಲಿಲ್ಲ. ಕೆಇಆರ್‌ಸಿ ಆದೇಶದಂತೆ ಹೊಸ ಮತ್ತು ತಾತ್ಕಾಲಿಕ ಸ್ಥಾಪನಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದೆ. ನಮಗೆ ಜನಹಿತ ಮುಖ್ಯವಾಗಿದ್ದರಿಂದ ಈ ನಿರ್ಧಾರ ಕೈಗೊಂಡೆವು ಎಂದು ಹೇಳಿದರು.

ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆಯೇ ವಿಭಿನ್ನ:

ಆರ್ ಡಿಎಸ್‌ಎಸ್ ಅನುಷ್ಠಾನಗೊಳಿಸಿರುವ ರಾಜ್ಯಗಳ ವಿದ್ಯುತ್ ಸರಬರಾಜು ಕಂಪನಿಗಳು ಎಲ್ಲಾ ಮನೆಗಳಲ್ಲಿ ಏಕ ಕಾಲದಲ್ಲಿ (Bulk replacement) ಸ್ಮಾರ್ಟ್ ಮೀಟರ್ ಅಳವಡಿಸಿ ಅದಕ್ಕೆ ಪೂರಕವಾದ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಅಂದರೆ, ಕಂತಿನಲ್ಲಿ ಸ್ಮಾರ್ಟ್‌ಮೀಟರ್ ಹಾಗೂ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ಇರುವ ನಿಯಮದ ಪ್ರಕಾರ, ವಿದ್ಯುತ್ ಮೀಟರ್‌ಗಳನ್ನು ಗ್ರಾಹಕರೇ ಭರಿಸಬೇಕು. ಆರ್‌ಡಿಎಸ್ಎಸ್ ಅನುಷ್ಠಾನಗೊಳಿಸದ ಕಾರಣ ನಮ್ಮಲ್ಲಿ ಹೊಸ ಮತ್ತು ತಾತ್ಕಲಿಕ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುತ್ತಿರುವುದರಿಂದ ಮೀಟರ್ ದರವನ್ನು (ಸಿಂಗಲ್ ಫೇಸ್ – 4,998 ರೂ.) ಆ ಗ್ರಾಹಕರೇ ಭರಿಸಬೇಕಾಗುತ್ತದೆ. ಪ್ರತಿ ತಿಂಗಳ ತಾಂತ್ರಿಕ ನಿರ್ವಹಣೆ ವೆಚ್ವವನ್ನು ಬೆಸ್ಕಾಂ ಭರಿಸಿ, ನಂತರ ದರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ತಾತ್ಕಾಲಿಕ ಸಂಪರ್ಕಕ್ಕೆ ಪ್ರಿ-ಪೇಯ್ಡ್‌ಗೆ ಮಾತ್ರ ಅವಕಾಶವಿದ್ದು, ಪೋಸ್ಟ್ ಪೇಯ್ಡ್ ಆಯ್ಕೆ ಇರುವುದಿಲ್ಲ. ಹೊಸ ಸಂಪರ್ಕಗಳಿಗೆ ಪ್ರಿ-ಪೇಯ್ಡ್ ಹಾಗೂ ಪೋಸ್ಟ್-ಪೇಯ್ಡ್ ಆಯ್ಕೆ ಲಭ್ಯವಿರುತ್ತದೆ ಎಂದು ಹೇಳಿದರು.

ಟೆಂಡರ್‌ಪಾರದರ್ಶಕವಾಗಿ ನಡೆದಿದೆ:

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2024ರ ಫೆಬ್ರವರಿ 6 ಮತ್ತು ಮಾರ್ಚ್ 6ರಂದು ಹೊರಡಿಸಿದ್ದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಎಲ್ಲ ತಾತ್ಕಾಲಿಕ ಸ್ಥಾಪನಗಳು ಹಾಗೂ ಹೊಸ ಸ್ಥಾಪನಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿತ್ತು. ಅದರಂತೆ, ಕೇಂದ್ರ ವಿದ್ಯುತ್ ಸಚಿವಾಲಯ ನಿಗದಿಪಡಿಸಿರುವ ಸಾಮಾನ್ಯ ಬಿಡ್ಡಿಂಗ್ ದಾಖಲೆ (Standard Bidding Document)ಗಳ ಪ್ರಕಾರ ಹಾಗೂ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆ. 26ರಂದು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಟೆಂಡರ್ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಈ ಟೆಂಡರ್‌ನಲ್ಲಿ ಕಡಿಮೆ ದರ ಬಿಡ್ ಮಾಡಿದ್ದ ರಾಜಶ್ರೀ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ 2024ರ ಡಿಸೆಂಬರ್ 23ರಂದು ಗುತ್ತಿಗೆ ನೀಡಲಾಯಿತು ಎಂದು ಹೇಳಿದರು.

More articles

Latest article