ನವದೆಹಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಭದ್ರತಾ ಪಡೆ ಬಿಡುಗಡೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಉದ್ಯಾನವನದಲ್ಲಿ ಪ್ರವಾಸಿಗರ ಮೇಲೆ ಮಂಗಳವಾರ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
ಈ ಕೃತ್ಯದಲ್ಲಿ ಪಾಕಿಸ್ತಾನ ಮೂಲದ ಮೂವರು ಭಯೋತ್ಪಾದಕರಾದ ಆಸೀಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಭಾಗಿಯಾಗಿದ್ದಾರೆ ಎಂದು ಗುರುತಿಸಲಾಗಿದೆ.ಈ ದುರಂತದಲ್ಲಿ ಉಳಿದವರ ನೆರವಿನಿಂದ ಉಗ್ರರ ರೇಖಾಚಿತ್ರವನ್ನು ಬಿಡಿಸಲಾಗಿದೆ.
ಪೂಂಚ್ ನಲ್ಲಿ ಭಯೋತ್ಪಾದಕ ಸಂಬಂಧ ಕೃತ್ಯಗಳಲ್ಲಿ ಈ ಮೂವರು ಉಗ್ರರು ಭಾಗಿಯಾಗಿದ್ದರು. ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್–ಎ–ತೈಬಾ ಬೆಂಬಲಿತ ಉಗ್ರ ಸಂಘಟನೆಯಾದ ರೆಸಿಸ್ಟನ್ಸ್ ಫ್ರಂಟ್ (ಟಿ ಆರ್ ಎಫ್) ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಮೂವರೂ ಉಗ್ರರು ಟಿಆರ್ ಎಫ್ ಗೆ ಸೇರಿದವರಾಗಿದ್ದಾರೆ ಎಂದು ಭದ್ರತಾ ಪಡೆಗಳು ಊಹಿಸಿವೆ.
ಜಮ್ಮು ಮತ್ತು ಕಾಶ್ಮೀರ ಬಂದ್ ಕರೆ:
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಸಮೀಪ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿದೆ. 35 ವರ್ಷಗಳ ಬಳಿಕ ನಡೆಯುತ್ತಿರುವ ಬಂದ್ ಗೆ ವಿವಿಧ ಸಂಘಗಳು ಮತ್ತು ಸಂಘಟನೆಗಳು ಬೆಂಬಲ ನೀಡಿವೆ ಎಂದು ಮೂಲಗಳು ಖಚಿತಪಡಿಸಿವೆ.
ಪಹಲ್ಗಾಮ್ ಪಟ್ಟಣ ಸಮೀಪದ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ 28 ಮಂದಿ ಪ್ರವಾಸಿಗರು ಮೃತಪಟ್ಟು, 20 ಜನರು ಗಾಯಗೊಂಡಿದ್ದಾರೆ. ಉಗ್ರರ ದಾಳಿಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಧಾರ್ಮಿಕ ಸಂಘಟನೆಗಳು, ವ್ಯಾಪಾರ ಸಂಸ್ಥೆಗಳು ಕಾಶ್ಮೀರದಾದ್ಯಂತ ಬಂದ್ ಗೆ ಕರೆ ನೀಡಿದ್ದವು.
ಆಡಳಿತ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್ ಹಾಗೂ ಅಪ್ನೀ ಪಾರ್ಟಿ ಪಕ್ಷಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಕಾಶ್ಮೀರದ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ, ವ್ಯಾಪಾರಿಗಳು ಮತ್ತು ತಯಾರಕರ ಒಕ್ಕೂಟ ಸೇರಿದಂತೆ ಕಣಿವೆಯ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಂಸ್ಥೆಗಳೂ ಬೆಂಬಲ ಪ್ರಕಟಿಸಿವೆ.
ಸಂತ್ರಸ್ತರು ಹಾಗೂ ಅವರ ಕುಟುಂಬದವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಒಗ್ಗಟ್ಟಿನ ಸಂಕೇತವಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಬುಧವಾರ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಕಾಶ್ಮೀರ ವಿಶ್ವವಿದ್ಯಾಲಯ ಮುಂದೂಡಿದೆ.
ಇಂದು ಶ್ರೀನಗರದಲ್ಲಿ ಬಹುತೇಕ ಮಳಿಗೆಗಳು, ಪೆಟ್ರೋಲ್ ಬಂಕ್ಗಳು, ವಾಣಿಜ್ಯ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ಮಾತ್ರ ತೆರೆದಿವೆ. ಖಾಸಗಿ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ಆದರೆ ಸಾರ್ವಜನಿಕ ಸಾರಿಗೆ ವಾಹನ ಸಂಚಾರ ವಿರಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.