ಬೆಂಗಳೂರು: ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಹಾಲಿ ಶಾಸಕ ಹಾಗೂ ಪೆನ್‌ಡ್ರೈವ್ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ತಂದೆ ಎಚ್.ಡಿ. ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ) ವಶಕ್ಕೆ ಪಡೆದುಕೊಂಡಿದೆ.
ಎಸ್ಐಟಿ ಎಸ್.ಪಿ ಸಿಎ ಸೈಮನ್ ನೇತೃತ್ವದ ತಂಡ ದೇವೇಗೌಡರ ಮನೆಯಲ್ಲಿದ್ದ ಎಚ್.ಡಿ. ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿದೆ. ತಮ್ಮ ಪುತ್ರ ಪ್ರಜ್ವಲ್ ರೇವಣ್ಣನ ಲೈಂಗಿಕ ಆರೋಪದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಪ್ರಮುಖ ಆರೋಪಿಯಾಗಿರುವ ರೇವಣ್ಣಾ ಅವರ ನಿರೀಕ್ಷಣಾ ಜಾಮೀನನ್ನು ಬೆಂಗಳೂರು ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಬಂಧನಕ್ಕೂ ಮೊದಲು ಅವರ ಸಹಾಯಕ ಸತೀಶ ಬಾಬಣ್ಣನನ್ನು ಬಂಧಿಸಲಾಗಿತ್ತು.
ಮಾಜಿ ಪ್ರಧಾನಿ ದೇವೇಗೌಡ ಅವರ ಮೊದಲ ಪುತ್ರ ಎಚ್.ಡಿ.ರೇವಣ್ಣ ಹೆಸರು ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣ ಪ್ರಕರಣದ ಜೊತೆಗೆ ತಳಕುಹಾಕಿಕೊಂಡಿತ್ತು. ಬಳಿಕ ಸಂತ್ರಸ್ತೆಯೊಬ್ಬರು ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಮಗೆ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ್ದರು. ಮಹಿಳೆಯ ಘನತೆಗೆ ಧಕ್ಕೆ ಪ್ರಕರಣದಲ್ಲಿ ರೇವಣ್ಣ ಮೊದಲ ಆರೋಪಿಯಾಗಿದ್ದರು.
ಆದರೆ ಮೈಸೂರು ಕೆ.ಆರ್. ನಗರದಲ್ಲಿ ದಾಖಲಾದ ಪ್ರಕರಣದಲ್ಲಿ ಪ್ರಜ್ವಲ್ ನಿಂದ ಲೈಂಗಿಕ ಕಿರುಕುಳಕ್ಕೆ ಈಡಾದ ಪ್ರಕರಣದ ಸಂತ್ರಸ್ತೆಯೊಬ್ಬರನ್ನು ರೇವಣ್ಣ ಅವರ ಅಣತಿಯ ಮೇರೆಗೆ ಅವರ ಸಹಾಯಕ ಸತೀಶ್ ಬಾಬಣ್ಣ ಅಪಹರಣ ಮಾಡಿದ ಆರೋಪವಿತ್ತು. ಸಂತ್ರಸ್ತೆಯ ಪುತ್ರ ನೀಡಿದ ದೂರಿನಲ್ಲಿ ರೇವಣ್ಣ ಮೊದಲ ಆರೋಪಿ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು.
ಶನಿವಾರ ಎಸ್ಐಟಿ ಪೊಲೀಸರು ಹುಣಸೂರು ಬಳಿಯ ತೋಟದ ಕಾಳೇನಹಳ್ಳಿ ಬಳಿ ಅಪಹರಣಕ್ಕೆ ಒಳಗಾದ ಮಹಿಳೆಯನ್ನು ರಕ್ಷಿಸಿರುವುದು ಪ್ರಕರಣಕ್ಕೆ ಇನ್ನೊಂದು ತಿರಿವು ಸಿಕ್ಕಿತು. ಆಕೆಯ ಹೇಳಿಕೆಯೂ ರೇವಣ್ಣ ಅವರಿಗೆ ಕಾನೂನು ಕಂಟಕ ತರಲಿದೆ. ವಿಶೇಷವೆಂದರೆ ಅಪಹರಣ ಮಾಡಿದ ರೇವಣ್ಣ ಸಹಾಯಕ ಸತೀಶ್ ಬಾಬು ಅವರ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕುಟುಂಬಕ್ಕೆ ಸಂಬಂಧವಿರುವ ಬಗ್ಗೆ ಮಹತ್ವದ ಸುಳಿವು ಪೊಲೀಸರಿಗೆ ದೊರಕಿದೆ.
ಇವೆಲ್ಲ ಬೆಳವಣಿಗೆಗಳ ನಡುವೆ ಜಾಮೀನು ರಹಿತ ಬಂಧನದ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡುವುದನ್ನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ತಂದೆಯವರಿದ್ದ ಮನೆಯಲ್ಲಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.