ಬೆಂಗಳೂರು: ನಟ ಡಾ.ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ( 94 ವರ್ಷ) ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ದೊಡ್ಡ ಗಾಜನೂರಿನಲ್ಲಿ ಇಂದು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ, ಗಾಜನೂರಿನಲ್ಲಿ ತೋಟದ ಮನೆಯಲ್ಲಿ ವಾಸವಾಗಿದ್ದರು. ಇವರು ಐವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಚಿತ್ರೀಕರಣಕ್ಕಾಗಿ ಗೋವಾಗೆ ತೆರಳಿದ್ದ ಶಿವರಾಜಕುಮಾರ್ ಗಾಜನೂರಿಗೆ ಆಗಮಿಸುತ್ತಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತಿತರ ಬಂಧುಗಳು ಗಾಜನೂರಿಗೆ ತೆರಳಲಿದ್ದು, ನಾಗಮ್ಮನವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ನಾಗಮ್ಮನವರ ಅಂತ್ಯಕ್ರಿಯೆ ನಾಳೆ ಗಾಜನೂರಿನಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾಗಮ್ಮತ್ತೆ ಎಂದೇ ಪ್ರಸಿದ್ಧಿ ಹೊಂದಿದ್ದ ನಾಗಮ್ಮ ಅವರಿಗೆ ನಟ ಪುನೀತ್ ರಾಜ್‌ಕುಮಾರ್ ಅವರ ಮೇಲೆ ವಿಶೇಷ ಪ್ರೀತಿ ಇತ್ತು. ಪುನೀತ್ ರಾಜ್ ಕುಮಾರ್ ನೀಧನ ಹೊಂದಿರುವ ವಿಷಯ ಕೊನೆಯವರೆಗೂ ಅವರಿಗೆ ತಿಳಿಸಿರಲಿಲ್ಲ. ಈ ಹಿಂದೆ ಪುನೀತ್ ಜನ್ಮದಿನದಂದು ಅಪ್ಪುಗೆ ಜನ್ಮ ದಿನದ ಶುಭಕೋರಿ ನಾಗಮ್ಮ ಮಾತನಾಡಿದ್ದರು. ಅವರ ಆ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.