ಸಿಂಧೂ ನದಿ ನೀರು ಕೊಡಲು ನಿರಾಕರಿಸಿದರೆ ಪಾಕ್ ಮತ್ತೆ ಯುದ್ಧ ಘೋಷಿಸಲಿದೆ: ಬಿಲಾವಲ್ ಎಚ್ಚರಿಕೆ

Most read

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ನದಿ ನೀರಿನ ಒಪ್ಪಂದದ ಪ್ರಕಾರ ಸಿಂಧೂ ನದಿ ನೀರಿನ ಪಾಲನ್ನು ಕೊಡಲು ನಿರಾಕರಿಸಿದರೆ ಭಾರತದ ವಿರುದ್ಧ ಪಾಕಿಸ್ತಾನ ಯುದ್ಧ ಸಾರುವುದು ಅನಿವಾರ್ಯವಾಗಲಿದೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಗುಡುಗಿದ್ದಾರೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥರೂ ಆಗಿರುವ ಅವರು ಸಂಸತ್ತಿನಲ್ಲಿ ಭಾಷಣ ಮಾಡುತ್ತಾ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ವಿರೋಧಿಸಿದ್ದು, ಪಾಕಿಸ್ತಾನವು ತನ್ನ ಪಾಲಿನ ನೀರನ್ನು ಪಡೆದೇ ತೀರುವುದಾಗಿ ಹೇಳಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಬಲಿಯಾಗಿದ್ದರು. ಈ ದಾಳಿ ನಂತರ ಭಾರತ ಸರ್ಕಾರವು 1960ರ ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದು ಮಾಡಿತ್ತು. ಈ ಒಪ್ಪಂದವನ್ನು ಪುನರ್‌ ಸ್ಥಾಪಿಸುವುದಿಲ್ಲ ಎಂದು ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದರು.

ಅಂತರರಾಷ್ಟ್ರೀಯ ಒಪ್ಪಂದ ಕುರಿತು ಅಮಿತ್‌ ಶಾ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಟೀಕಿಸಿದ ಎರಡು ದಿನಗಳ ನಂತರ ಬಿಲಾವಲ್ ಈ ಹೇಳಿಕೆ ನೀಡಿದ್ದಾರೆ.

ಸಿಂಧೂ ಒಪ್ಪಂದ ಕೊನೆಗೊಂಡಿದೆ ಅಥವಾ ಸ್ಥಗಿತಗೊಂಡಿದೆ ಎಂಬ ಭಾರತದ ಹೇಳಿಕೆ ಕಾನೂನುಬಾಹಿರವಾಗಿದೆ. ನಿಜವಾಗಿಯೀ ಈ ಒಪ್ಪಂದ ಸ್ಥಗಿತಗೊಂಡಿಲ್ಲ. ಇದು ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳ ಬದ್ಧತೆಯಾಗಿದೆ. ಆದರೆ, ನೀರನ್ನು ನಿಲ್ಲಿಸುವ ಬೆದರಿಕೆ ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತ ಇದೇ ರೀತಿ ಬೆದರಿಕೆ ಒಡ್ಡುವುದನ್ನು ಮುಂದುವರಿಸಿದರೆ, ನಾವು ಮತ್ತೆ ಅನಿವಾರ್ಯವಾಗಿ ಯುದ್ಧ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಭಾರತವು ಮಾತುಕತೆಯನ್ನು ನಿರಾಕರಿಸಿದರೆ ಮತ್ತು ಭಯೋತ್ಪಾದನೆಯ ಬಗ್ಗೆ ಯಾವುದೇ ಸಮನ್ವಯತೆ ಇಲ್ಲದೆ ಹೋದರೆ ಉಭಯ ದೇಶಗಳಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತದೆ ಎಂದೂ ಬಿಲಾವಲ್‌ ಹೇಳಿದ್ದಾರೆ.

More articles

Latest article