ಸಿಂಧಿ ಶಾಲೆಯಲ್ಲಿ ಕನ್ನಡ ಮಾತಾಡಿದ್ದಕ್ಕೆ ದಂಡ; ಶಾಲೆಯ ಪರವಾನಗಿ ರದ್ದುಪಡಿಸಲು ಕಅಪ್ರಾ ಅಧ್ಯಕ್ಷ  ಬಿಳಿಮಲೆ ಆಗ್ರಹ

Most read

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ, ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿರುವ ಕುಮಾರಕೃಪಾ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ದಂಡವನ್ನು ವಿಧಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿದ್ದಕ್ಕೆ ದಂಡ ವಿಧಿಸಿರುವುದಾಗಿ ಶಾಲೆಯ ಪ್ರಾಂಶುಪಾಲರೆೇ ಒಪ್ಪಿಕೊಂಡಿರುವ ಬಗ್ಗೆ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದು ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುತ್ತಿರುವುದು ಸರಿಯಲ್ಲ. ಶಾಲೆಯೊಂದು ಕನ್ನಡದ ಕುರಿತು ಲಘು ಧೋರಣೆ ತಳೆದಿರುವುದು ನಕಾರಾತ್ಮಕ ಬೆಳವಣಿಗೆಯಾಗಿದೆ. ಇಂತಹ ಶಾಲೆಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ತನ್ನದೇ ನೆಲದಲ್ಲಿ ಕನ್ನಡ ಪರಕೀಯ ಸ್ಥಾನ ಹೊಂದುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಕನ್ನಡ ಪರ ನಿಲುವು ಸಾಬೀತು ಮಾಡಲು ಶಿಕ್ಷಣ ಸಚಿವರು ಮನಸ್ಸು ಮಾಡಬೇಕಿದೆ. ಈ ನೆಲದ ಭಾಷೆ ಉಲ್ಲಂಘಿಸಿರುವ ಸಿಂಧಿ ಪ್ರೌಢಶಾಲೆಯ ಮಾನ್ಯತೆ ರದ್ದುಪಡಿಸಿ ಎನ್‌ಒಸಿ ಹಿಂಪಡೆಯಬೇಕು. ಶಿಕ್ಷಣ ಸಚಿವರ ಕ್ರಮ ಇಡೀ ರಾಜ್ಯವನ್ನು ತಲುಪಿದಲ್ಲಿ ಬೇರೆ ಶಿಕ್ಷಣ ಸಂಸ್ಥೆಗಳಿಗೂ ಪಾಠವಾಗಲಿದೆ. ಕನ್ನಡದ ಹಿತದೃಷ್ಟಿಯಿಂದ ಕಠಿಣ ಕ್ರಮ ಅನಿವಾರ್ಯ ಎಂದು ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಶಾಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಿರುವ ಇಲಾಖೆಯ ಉಪ ನಿರ್ದೇಶಕರು, ಮಕ್ಕಳು ಕನ್ನಡ ಭಾಷೆಯಲ್ಲಿ ವ್ಯವಹರಿಸಿರುವುದಕ್ಕೆ ದಂಡ ವಸೂಲಿ ಮಾಡುತ್ತಿರುವುದನ್ನು ಶಾಲೆಯ ಪ್ರಾಂಶುಪಾಲರು ಒಪ್ಪಿಕೊಂಡಿರುತ್ತಾರೆ. ಅಷ್ಟೇ ಅಲ್ಲ, ರೀತಿ ಕನ್ನಡದಲ್ಲಿ ಮಾತನಾಡಿದಾಗ ತಮ್ಮಿಂದ ದಂಡ ವಸೂಲು ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಹಲವಾರು ವಿದ್ಯಾರ್ಥಿಗಳು ಮುಚ್ಚಳಿಕೆ ಮುಖಾಂತರ ಬಹಿರಂಗ ಪಡಿಸಿದ್ದಾರೆ. ಕನ್ನಡದ ಕೇಂದ್ರ ಸ್ಥಾನವಾದ ಬೆಂಗಳೂರು ನಗರದಲ್ಲಿನ ಪ್ರತಿಷ್ಠಿತ ಶಾಲೆಯೊಂದು ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರೀತಿ ಕಸಿಯುತ್ತಿರುವುದು, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿರುವುದು ಹಾಗೂ ಕನ್ನಡದ ಕುರಿತಂತೆ ಲಘುಧೋರಣೆಯನ್ನು ತಳೆದಿರುವುದು ರಾಜಧಾನಿಯಲ್ಲಿಯೇ ಕನ್ನಡದ ಹಿತದೃಷ್ಟಿಯಿಂದ ಅತ್ಯಂತ ನಕಾರಾತ್ಮಕ ಬೆಳವಣೆಗೆಯಾಗಿರುತ್ತದೆ. ಇಂತಹ ಶಾಲೆಗಳ ವಿರುದ್ಧ ಯಾವುದೇ ಕಠಿಣ ಕ್ರಮವಾಗದೆ ಹೋದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಹೋಗುವುದಿಲ್ಲ ಹಾಗೂ ಕನ್ನಡ ತನ್ನ ನೆಲದಲ್ಲಿಯೇ ಪರಕೀಯ ಸ್ಥಾನಕ್ಕೆ ತೃಪ್ತಿಪಡಬೇಕಾದ ಅನಿವಾರ್ಯತೆಗೆ ಸಾಕ್ಷಿಯಾಗುತ್ತದೆ.

ಬಗ್ಗೆ ನಾನು ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರಿಗೆ ಪತ್ರ ಬರೆದು ಶಾಲೆಯ ಮಾನ್ಯತೆ ನವೀಕರಣವನ್ನು (ಎನ್ಒಸಿ) ರದ್ದುಪಡಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದೇನೆ. ಇಂತಹ ಕಠಿಣಕ್ರಮ ಬೇರೆ ಸಂಸ್ಥೆಗಳಿಗೂ ಪಾಠವಾಗಬಲ್ಲ ಸಾಮರ್ಥ್ಯ ಹೊಂದಿದೆ ಎನ್ನುವ ಅಂಶವನ್ನು ನಾನು ಅವರಿಗೆ ಪತ್ರ ಮುಖೇನ ಮನವರಿಕೆ ಮಾಡಿದ್ದೇನೆ. ಆದ್ದರಿಂದ ತಾವು ದಯವಿಟ್ಟು ಶಾಲೆಯ ವಿರುದ್ಧ ಕಠಿಣಕ್ರಮ ವಹಿಸಲು ಶಿಕ್ಷಣ ಇಲಾಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಬಿಳಿಮಲೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.

More articles

Latest article