ಅರಸು ನಿರ್ಗಮನದ ನಿರ್ವಾತ ತುಂಬಿದ  ಜನನಾಯಕ ಸಿದ್ದರಾಮಯ್ಯ

Most read

ಯಾರೊಬ್ಬರೂ ದೇವರಾಜ ಅರಸು ಆಗಲಾರರು, ಆದರೆ ಕರ್ನಾಟಕದಲ್ಲಿ  ಅರಸು ಹಾಕಿಕೊಟ್ಟ ಬಹುಜನ ರಾಜಕಾರಣವನ್ನು ಮುನ್ನಡೆಸುವಲ್ಲಿ ಸಿದ್ದರಾಮಯ್ಯ ಅವರು ಥೇಟ್ ಅರಸು ಅವರಂತೆ ಕಾಣುತ್ತಾರೆ.  ಹಾಗೆಂದು ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಧೋರಣೆಯನ್ನು, ತಾವು ಕೊಟ್ಟ ದುರ್ಬಲ ಜಾತಿಗಳ ಪರವಾದ ಯೋಜನೆಗಳನ್ನು ಅರಸು ಅವರ ಪ್ರಭಾವಳಿಯಿಂದ ಬಳಸಿಕೊಂಡಿದ್ದು ಎಂದು ಹೇಳಿಕೊಂಡ ಸಂದರ್ಭವಿಲ್ಲ – ಎನ್. ರವಿಕುಮಾರ್ ಟೆಲೆಕ್ಸ್, ಪತ್ರಕರ್ತರು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಆಳ್ವಿಕೆಯನ್ನು ಮುಂದುವರೆಸಿದ ಕೀರ್ತಿ ಈಗ ಸಿದ್ದರಾಮಯ್ಯ ಅವರ ಪಾಲಿಗೆ ಸಲ್ಲುತ್ತಿದೆ. ಅನೇಕ ಜನಪರ ಕೊಡುಗೆಗಳೊಂದಿಗೆ ದೇವರಾಜ ಅರಸು ಎಂಬ ಜನನಾಯಕನೊಬ್ಬ ಮುಖ್ಯಮಂತ್ರಿಯಾಗಿದ್ದ ಸುದೀರ್ಘಕಾಲ ಅಂದರೆ ಸತತವಾಗಿ 2,792 ದಿನಗಳ ಕಾಲದ  ಆಳ್ವಿಕೆಯ ದಾಖಲೆಯನ್ನು ಸಿದ್ದರಾಮಯ್ಯ ಅವರು ದಾಟಿ  ಮುನ್ನಡೆದಿದ್ದಾರೆ.

ಸಿದ್ದರಾಮಯ್ಯ ಅವರಲ್ಲಿ ಈ ನಾಡು ಮತ್ತೊಬ್ಬ ಅರಸು ಅವರನ್ನು ಕಾಣುತ್ತಿದೆ. ಹೀಗೆ ಕಾಣುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. 1972 ಮಾರ್ಚ್ 20 ರಿಂದ 1980  ಜನವರಿ 7 ವರೆಗೆ ಸತತವಾಗಿ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು  ಈ ರಾಜ್ಯದಲ್ಲಿ ಬಲಾಢ್ಯ ಜಾತಿಗಳ ಅಧಿಕಾರ ರಾಜಕಾರಣವನ್ನು ಕುಟ್ಟಿ ಕೆಡವಿ ಅಹಿಂದ ಸಮುದಾಯಗಳ ಪ್ರಾತಿನಿಧ್ಯದ ಪರ್ಯಾಯ ರಾಜಕಾರಣವನ್ನು ಕಟ್ಟಿದ  ಜನ ನಾಯಕ,

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಹಕ್ಕುಗಳನ್ನು , ನ್ಯಾಯವನ್ನು , ಸಮಾನತೆಯ ಅನುಷ್ಠಾನಕ್ಕಾಗಿ ದುಡಿದ ಅರಸು ತಬ್ಬಲಿ ಜಾತಿಗಳ ಉದ್ಧಾರಕ್ಕೆ ಅವತರಿಸಿದ ದ್ರಷ್ಟಾರ ನಂತೆ ಕಂಡಿದ್ದರು. ಜಾತಿ ವ್ಯವಸ್ಥೆಯ ಸುಳ್ಳು ಸಂಕಥನಗಳನ್ನು ಮೆಟ್ಟಿ  ಅನಾಥ ಜಾತಿಗಳಿಗೆ ರಾಜಕೀಯ ನಾಯಕತ್ವವನ್ನು ಕಟ್ಟಿಕೊಟ್ಟ ಅರಸು ಅವರು  ಜೀತ ವಿಮುಕ್ತಿ, ಮಲಹೊರುವ ಪದ್ಧತಿ ನಿಷೇಧ, ಉಳುವವನೆ ಹೊಲದೊಡೆಯ ಎಂಬ ಕಾಯ್ದೆಗಳನ್ನು ಜಾರಿಗೊಳಿಸಿದ ಪ್ರತಿಯೊಬ್ಬ ವ್ಯಕ್ತಿಯ, ಅಂಚಿನ ಜನಜಾತಿಗಳನ್ನು ಶೋಷಣೆ, ಸಂಕೋಲೆಗಳಿಂದ ಬಿಡುಗಡೆ ಗೊಳಿಸಿದರು. ಭವಿಷ್ಯದಲ್ಲಿ ಯಾವುದೇ ಒಬ್ಬ ಜನನಾಯಕ ಮುಂದುವರೆಸಬಹುದಾದ ನೈಜ ಪ್ರಜಾಪ್ರಭುತ್ವದ ವೈಭವದ ಮಾದರಿಗೆ ಬುನಾದಿ ಹಾಕಿದವರು ದೇವರಾಜ ಅರಸು ಎಂಬ ಜನಸಾಮಾನ್ಯರ ‘ಅರಸ’.

ಬಲಾಢ್ಯ ಜಾತಿಗಳ ಆಡೊಂಬಲದಂತಿದ್ದ ಕರ್ನಾಟಕದ ರಾಜಕೀಯವನ್ನು ದಲಿತ, ಹಿಂದುಳಿದ, ಅತಿಹಿಂದುಳಿದ ಜಾತಿಗಳ  ಕೈಗಿಟ್ಟು “ಬಹುಜನ ರಾಜಕಾರಣ” ವನ್ನು ಮುನ್ನಲೆಗೆ ತಂದವರು ದೇವರಾಜ ಅರಸು, ಅರಸು  ನಂತರದಲ್ಲಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಧರ್ಮಸಿಂಗ್  ಅವರುಗಳು ಬಲಾಢ್ಯ ಜಾತಿಗಳ ಜಾತಿ ರಾಜಕಾರಣದ ಮುಂದೆ ಸೋತು ಹೋಗಿದ್ದು ಇತಿಹಾಸ,  ಆದರೆ ಸಿದ್ದರಾಮಯ್ಯನವರು ಅರಸು ಕಂಡ  ಅಹಿಂದ ರಾಜಕಾರಣವನ್ನು  ಮುನ್ನಡೆಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಹಾಕುತ್ತಿದ್ದಾರೆ.

ಅರಸು ಮತ್ತು ಸಿದ್ದರಾಮಯ್ಯ ನಡುವೆ ಪರಸ್ಪರ ನೇರವಾದ ನಂಟು ಇರಲಿಲ್ಲ. ಅರಸು ಅವರ ಯುಗಾಂತ್ಯದ ಅಂಚಿನಲ್ಲಿ ಕರ್ನಾಟಕದ ರಾಜಕಾರಣವನ್ನು ಪ್ರವೇಶಿಸಿದ ಸಿದ್ದರಾಮಯ್ಯ ರಾಜ್ಯದ ಜನತೆಗೆ ಕೊಟ್ಟ ಕೊಡುಗೆಗಳು,  ದಿಟ್ಟವಾಗಿ ಪ್ರತಿಪಾದಿಸಿದ ಅಹಿಂದ ಜನಸಮುದಾಯ ಪ್ರೇಣಿತ ರಾಜಕಾರಣ ಎಲ್ಲವೂ ಅರಸು ಆಡಳಿತಕ್ಕೆ ಸಾಮ್ಯತೆಯೇ ಆಗಿದೆ.

ದೇವರಾಜ ಅರಸು ಕರ್ನಾಟಕ ರಾಜ್ಯವನ್ನು 2,792 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ್ದರು. ಅತಿ ಹಿಂದುಳಿದ ಜಾತಿಗೆ ಸೇರಿದ ಅರಸು ಅವರು, ಬಲಾಢ್ಯ ಜಾತಿಗಳ  ರಾಜಕಾರಣವನ್ನು ಹಿಮ್ಮೆಟ್ಟಿಸಿ ದೀರ್ಘಕಾಲ ರಾಜ್ಯವಾಳಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಲ್ಲಿ ಅವರು ಜನರ ಮೇಲಿಟ್ಟ ನಂಬಿಕೆ, ಅದೇ ಜನರು ಅವರ ಮೇಲಿಟ್ಟ ಭರವಸೆಯೇ ಕಾರಣ. ಇದೇ ಮಾದರಿಯಲ್ಲಿ  ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನ ನೋಡುವಂತಾಗಿದೆ.

ಸಿದ್ದರಾಮಯ್ಯ ಅವರನ್ನು ಅರಸು ಅವರಿಗೆ ಹೋಲಿಕೆ ಮಾಡುವುದಾದರೂ ಏಕೆ ಎಂದರೆ,  ಅರಸು ನಂತರದಲ್ಲಿ ಮುಖ್ಯಮಂತ್ರಿಗಳಾದ ಹಿಂದುಳಿದ ವರ್ಗಗಳ ನಾಯಕರುಗಳು ಅರಸು ಅವರಂತೆ ಜಾತಿ ರಾಜಕಾರಣವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ.  ಆದರೆ  ಮತೀಯ ರಾಜಕಾರಣ ಮತ್ತು ಜಾತಿ ರಾಜಕಾರಣದ ಮೇಲಾಟಗಳ ಈ ದಿನಗಳಲ್ಲಿ ದಲಿತ, ಹಿಂದುಳಿದ ಅತಿ ಹಿಂದುಳಿದ , ಅಲ್ಪಸಂಖ್ಯಾತ  ಜನ ಸಮುದಾಯಗಳನ್ನು ರಾಜಕೀಯ ಧ್ರುವೀಕರಣಕ್ಕೆ ಒಳಪಡಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎನ್ನಬಹುದು.

 ಈ ಏಳೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೊಟ್ಟ  ಜನಪರ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗುವಂತಹುಗಳು. ಅನ್ನಭಾಗ್ಯ, ಕ್ಷೀರ ಭಾಗ್ಯ,  ಶಾದಿಭಾಗ್ಯ, ಕೃಷಿಭಾಗ್ಯ, ಗೃಹಲಕ್ಷ್ಮಿ , ಯುವನಿಧಿ, ಶಕ್ತಿ, ದಲಿತರ ನೆರವಿಗೆ ಪಿಟಿಸಿಎಲ್ ಕಾಯ್ದೆ, ಎಸ್ಸಿಪಿ-ಟಿಎಸ್ಪಿ ಕಾಯ್ದೆ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಪರ ಯೋಜನೆಗಳು, ವಿಧವೆಯರಿಗೆ  ಮರುಮದುವೆಗೆ ಪ್ರೋತ್ಸಾಹ….ಹೀಗೆ ದೇವರಾಜ ಅರಸು ನಂತರದಲ್ಲಿ ಸಮಾಜದ ದುರ್ಬಲ ವರ್ಗಗಳ  ಕಲ್ಯಾಣಕ್ಕೆ , ಅವರಲ್ಲಿ ಸ್ವಾಭಿಮಾನಿ ಬದುಕು ಕಟ್ಟಿಕೊಡುವಲ್ಲಿ  ಇಷ್ಟೊಂದು ಫಲಪ್ರದ ಯೋಜನೆಗಳನ್ನು ಕೊಟ್ಟವರಲ್ಲಿ ಸಿದ್ದರಾಮಯ್ಯ ಮಾತ್ರವೇ ಆಗಿದ್ದಾರೆ ಎಂಬುದು ನಿಸ್ಸಂಶಯ.

ಸಿದ್ದರಾಮಯ್ಯ ಅವರನ್ನೂ ಭ್ರಷ್ಟಾಚಾರದ ಆರೋಪಗಳು ಬಿಡಲಿಲ್ಲ. ಆದರೆ ಅವು ಯಾವು ಕೂಡ ಹುರುಳಿಲ್ಲದೆ ಹೋದವು. ಅರಸು, ಬಂಗಾರಪ್ಪ, ವೀರಪ್ಪ ಮೊಯಿಲಿ, ಧರ್ಮಸಿಂಗ್ ರಂತಹ ಹಿಂದುಳಿದ ವರ್ಗಗಳ ಜನನಾಯಕರುಗಳನ್ನು ಭ್ರಷ್ಟರು, ದುಹಂಕಾರಿಗಳು, ಅಸಮರ್ಥರು ಎಂದು ಕೇಡಾಡಿದ ಶಕ್ತಿಗಳೇ ಇಂದು ಸಿದ್ದರಾಮಯ್ಯ ಅವರನ್ನೂ  ದುರಹಂಕಾರಿ ಎಂದು ಜರಿಯುತ್ತಿವೆ.    

35 ವರ್ಷಗಳ ಹಿಂದೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದ ಕಾಂಗ್ರೇಸ್ ಪಕ್ಷ ಲಿಂಗಾಯಿತ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ ಎಂದು  ತಲೆಮಾರುಗಳಿಗೂ  ದಾಟಿಸುತ್ತಲೆ ಬಂದಿರುವ ಬಲಾಢ್ಯ ಲಿಂಗಾಯಿತ ಸಮುದಾಯ ತನ್ನ ಹಿಡಿತವನ್ನು, ರಾಜಕೀಯ ಪ್ರಾತಿನಿಧ್ಯವನ್ನು  ಪಕ್ಷಾತೀತವಾಗಿ ಕಾಯ್ದುಕೊಂಡಿದೆ. ಈ ಸಮಾಜದ  ಜಾತಿವ್ಯವಸ್ಥೆ ವೀರೇಂದ್ರ ಪಾಟೀಲರಿಗಿಂತಲೂ ಸಮರ್ಥವಾಗಿ ಈ ರಾಜ್ಯದ ಬಡವರ, ದುರ್ಬಲ, ಅನಾಥ ಜನಜಾತಿಗಳ ಪರವಾಗಿ ಅಂತಃಕರಣ ಮತ್ತು ಇಚ್ಛಾಶಕ್ತಿಯಿಂದ ದುಡಿದ ದೇವರಾಜ ಅರಸು ಅವರಿಗಾದ ರಾಜಕೀಯ ಅನ್ಯಾಯವನ್ನು  ಮಾತ್ರ ಮುನ್ನಲೆಯಲ್ಲಿ ಚರ್ಚಿಸುವುದಿಲ್ಲ.

ಅದೇ ರೀತಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಪದಚ್ಯುತಿಗೊಳಿಸುವಲ್ಲಿ ಸಿದ್ದರಾಮಯ್ಯ ಅವರೇ ಆಟ ಹೂಡಿದ್ದರು ಎಂದು ದೂರುತ್ತಿರುವ ಇದೇ ಕುಮಾರಸ್ವಾಮಿ   ಅತಿ ಹಿಂದುಳಿದ ವರ್ಗದ ಧರ್ಮಸಿಂಗ್ ಅವರನ್ನು ದಿನ ಬೆಳಗಾಗುವುದರೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಮೌಲ್ಯಾಧಾರಿತ ರಾಜಕಾರಣವೇ? ಅದು ಧ್ವನಿ ಇಲ್ಲದ ಜಾತಿಯೊಂದರ ನಾಯಕತ್ವವನ್ನೆ ಕೊಂದು ಹಾಕಿದ ರಾಜಕೀಯ ಅನ್ಯಾಯ  ಎಂದು ಯಾರಾದರೂ ಪ್ರಶ್ನಿಸಿದರೆ?

ಇನ್ನೂ ಇದಕ್ಕೂ ಮೊದಲು ನಡೆದ ಎಸ್ ಬಂಗಾರಪ್ಪ, ವೀರಪ್ಪ ಮೊಯಿಲಿ ಅವರನ್ನು ರಾಜಕೀಯವಾಗಿ ತುಳಿದವರು ಯಾರು ಎಂಬುದನ್ನು  ಮಾತಿಗಾದರೂ ಚರ್ಚೆ ನಡೆಸುವುದಿಲ್ಲ.

ಈ ನೆಲೆಯಲ್ಲಿ ಕರ್ನಾಟಕದ ರಾಜಕಾರಣದ ಒಳಹೊಕ್ಕು ನೋಡುವಾಗ  ಬಲಾಢ್ಯ ಜಾತಿಗಳ ರಾಜಕಾರಣ ಎಲ್ಲಾ ಕಾಲದಲ್ಲೂ ಬಹುಜನ ರಾಜಕಾರಣವನ್ನು ಹತ್ತಿಕ್ಕುವಲ್ಲಿ  ಪ್ರಯತ್ನ ನಡೆಸುತ್ತಲೆ ಇದೆ. ಇದು ಈಗಿನ ಸಿದ್ದರಾಮಯ್ಯ ಅವರ ವಿಷಯದಲ್ಲೂ ನಡೆಯುತ್ತಿಲ್ಲ ಎನ್ನಲಾಗದು. ಈ ಎಲ್ಲದರ ನಡುವೆಯೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅರಸು ಆಳಿದ ದಿನಗಳನ್ನು ಮೀರಿ ಮುನ್ನಡೆದಿದ್ದಾರೆ. ಇಲ್ಲಿ ಅರಸು ಅವರ ಅವಧಿಯ ದಾಖಲೆಯನ್ನು ಸಿದ್ದರಾಮಯ್ಯ ಅವರು ಮುರಿದರು, ಸರಿಗಟ್ಟಿದರು ಎನ್ನುವ ಪದಬಳಕೆಗಿಂತ ಸಿದ್ದರಾಮಯ್ಯ ಅವರು ಅರಸು ಅವರ ಬಹುಜನ ರಾಜಕಾರಣದ ದಾರಿಯನ್ನು ಗಮ್ಯದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎನ್ನಬಹುದು.

ಸಿದ್ದರಾಮಯ್ಯನವರು

ದೇವರಾಜ ಅರಸು ಅವರು ಬೇವಿನ ಬೀಜ ತಿಂದು ಮಾವಿನ ಹಣ್ಣು ತಿಂದಷ್ಟೆ ಪ್ರಸನ್ನವದನರಾಗಿ ಈ ಸಮಾಜದ ಅಂಚಿನ ಜನರಿಗಾಗಿ ದುಡಿದು ದಣಿದವರು. ಅವರಿಂದ ರಾಜಕೀಯ ಅರಿವು, ಅಧಿಕಾರ ಎಲ್ಲವನ್ನು ಪಡೆದ ಅದೇ ಹಿಂದುಳಿದ, ದಲಿತ  ವರ್ಗಗಳ ನಾಯಕರುಗಳು ಅವರ ಬೆನ್ನಿಗೆ ಇರಿದು ಹೋದದ್ದು ವಿಪರ್ಯಾಸ.

ಯಾರೊಬ್ಬರೂ ದೇವರಾಜ ಅರಸು ಆಗಲಾರರು, ಆದರೆ ಕರ್ನಾಟಕದಲ್ಲಿ  ಅರಸು ಹಾಕಿಕೊಟ್ಟ ಬಹುಜನ ರಾಜಕಾರಣವನ್ನು ಮುನ್ನಡೆಸುವಲ್ಲಿ ಸಿದ್ದರಾಮಯ್ಯ ಅವರು ಥೇಟ್ ಅರಸು ಅವರಂತೆ ಕಾಣುತ್ತಾರೆ.  ಹಾಗೆಂದು ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಧೋರಣೆಯನ್ನು, ತಾವು ಕೊಟ್ಟ ದುರ್ಬಲ ಜಾತಿಗಳ ಪರವಾದ ಯೋಜನೆಗಳನ್ನು ಅರಸು ಅವರ ಪ್ರಭಾವಳಿಯಿಂದ ಬಳಸಿಕೊಂಡಿದ್ದು ಎಂದು ಹೇಳಿಕೊಂಡ ಸಂದರ್ಭವಿಲ್ಲ. ಅದೇನಿದ್ದರೂ ನನ್ನದೇ ರಾಜಕೀಯ ಸಿದ್ಧಾಂತ ಮತ್ತು ನಿಲುವು ಎಂದು ಸ್ವಯಂ ಕ್ರೆಡಿಟ್ ಪಡೆದುಕೊಳ್ಳುತ್ತಿರುವುದು ನಿಜ. ‘ನಾನು ಅರಸು ಅಲ್ಲ, ನನ್ನನ್ನು ಅರಸು ಅವರಿಗೆ  ಹೋಲಿಕೆ ಮಾಡಬೇಡಿ’ ಎಂದು ಎಷ್ಟೇ ಹೇಳಿದರೂ  ಸಿದ್ದರಾಮಯ್ಯ ಅವರು ದೇವರಾಜ ಅರಸು ಎಂಬ ಮಾನವತಾವಾದಿ ರಾಜಕಾರಣಿಯ ಪ್ರಭೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು.  ಜನರು ಮಾತ್ರ ಸಿದ್ದರಾಮಯ್ಯ ಅವರಲ್ಲಿ ಅರಸು ಅವರನ್ನು ಕಾಣುತ್ತಿದ್ದಾರೆ.

ದೇವರಾಜ ಅರಸು  ಎಂಬ ಮಾನವತಾವಾದಿ ಜನನಾಯಕನ ನಿರ್ಗಮನದ ನಿರ್ವಾತವನ್ನು ತುಂಬಲು ಕಾಲವೇ ಕಂಡುಕೊಂಡ ನಿಜನಾಯಕ ಇವತ್ತಿನ ಸಿದ್ದರಾಮಯ್ಯ. ತಬ್ಬಲಿ ಜಾತಿಗಳ ಹಸಿವು, ಅವಮಾನಗಳ ಕುಲುಮೆಯಿಂದ ಎದ್ದು ಬಂದ ಜನನಾಯಕನನ್ನು ‘ಜಾತಿಸಮಾಜ’ ಎಂದಿಗೂ ಸಹಿಸುವುದಿಲ್ಲ. ಈ  ಅಸಹನೆಗಳನ್ನು ಮೀರಿಯೇ  ಕುರಿ ಕಾಯುವ ಕುಟುಂಬದ ಮಗನೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಕಾಲದ  ಕಡೆಗೆ ಮುನ್ನಡೆಯುತ್ತಿರುವುದು ತಬ್ಬಲಿ ಜಾತಿಗಳ ಪಾಲಿಗೆ  ಪರ್ಯಾಯ ರಾಜಕಾರಣದ ಸುವರ್ಣಕಾಲವೇ ಎಂದು ಕರೆದರೂ ಅತಿಶಯೋಕ್ತಿಯೇನಲ್ಲ.

ದೇವರಾಜ ಅರಸು ಅವರ ಆಡಳಿತ ಅವಧಿಯ ದಾಖಲೆಯನ್ನು ನಾನು ಮುರಿದಿದ್ದರೂ ಮುಂದೊಂದು ದಿನ ನನ್ನ ದಾಖಲೆಯನ್ನು ಯಾರಾದರೂ ಮುರಿಯಬಹುದು ಎನ್ನುವ ಅರಿವಿನಿ ಮಾತಾಡಿರುವ ಸಿದ್ದರಾಮಯ್ಯನವರು  ಭ್ರಮಾ ರಾಜಕಾರಣದ ಆವರಣವನ್ನು ಜಿಗಿದ ಮುತ್ಸದ್ದಿಯಾಗಿ ಕಾಣುತ್ತಿದ್ದಾರೆ.                

ಎನ್. ರವಿಕುಮಾರ್ ಟೆಲೆಕ್ಸ್

ಪತ್ರಕರ್ತರು

ಇದನ್ನೂ ಓದಿ- ದೇವರಾಜ ಅರಸು ದಾಖಲೆ ಸಾರಿಗಟ್ಟಿದ ಸಿಎಂ; ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ

More articles

Latest article