Saturday, October 26, 2024

ಬೆಂಗಳೂರಿನಲ್ಲಿ ರಾಜಕಾಲುವೆ ಅತಿಕ್ರಮಣ ತೆರವುಗೊಳಿಸಲು ಸಿದ್ದರಾಮಯ್ಯ ಖಡಕ್ ಸೂಚನೆ

Most read

ಬೆಂಗಳೂರು: ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಳೆ ಅನಾಹುತ ಮತ್ತು ಪರಿಹಾರ ಕುರಿತು ಆಯೋಜಿಸಿದ್ದ ಸಭೆಯ ನಂತರ ಅವರು ಮಾತನಾಡಿದರು.

ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರಾಜಕಾಲುವೆಗಳ ಒತ್ತುವರಿ ತೆರವು, ತಡೆಗೋಡೆ ನಿರ್ಮಾಣ ಕುರಿತು ಆದೇಶ ನೀಡಿದ್ದೆ. ಆದರೆ ಈ ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ಪ್ರತಿ ವರ್ಷ ಮಳೆ ಬಂದಾಗ ಅನಾಹುತಗಳು ಸಂಭವಿಸುತ್ತಿವೆ. ಆದ್ದರಿಂದ ರಾಜಕಾಲುವೆಗಳ ಅತಿಕ್ರಮಣ ತೆರವು ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ವಿಶ್ವಬ್ಯಾಂಕ್ ಸಂಸ್ಥೆಯು ಬೆಂಗಳೂರು ನಗರದಲ್ಲಿ ಬಾಕಿ ಉಳಿದಿರುವ 173 ಕಿಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸುವ ಯೋಜನೆಗೆ ಹಾಗೂ 80 ಕಿಮೀ ಉದ್ದದ ಕಲ್ಲುಕಟ್ಟಡದ ರಾಜಕಾಲುವೆಗಳ ಸಬಲೀಕರಣ ಯೋಜನೆಗೆ ರೂ.2 ಸಾವಿರ ಕೋಟಿ ಆರ್ಥಿಕ ನೆರವು ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ. ಈ ಯೋಜನೆಯ ವಿಸ್ತೃತ ಯೋಜನಾ ವರದಿಯ ಅಂದಾಜು ಪಟ್ಟಿಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಮುಂದಿನ ವರ್ಷದ ಆರಂಭದ ಒಳಗಾಗಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಅತಿವೃಷ್ಟಿ ನಿರ್ವಹಣೆಗೆ 8ವಲಯಗಳ ನಿಯಂತ್ರಣ ಕೊಠಡಿಗಳ ಜೊತೆಗೆ 63ಉಪ ವಿಭಾಗಗಳಲ್ಲಿ ಹೆಚ್ಚುವರಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ವತಿಯಿಂದ ರಾಜಕಾಲುವೆಗಳ ಕಿರು ಸೇತುವೆಗಳ ಅಗಲೀಕರಣ ಮತ್ತು ಕೆರೆಗಳ ಅಭಿವೃದ್ಧಿಗಾಗಿ ರೂ.275ಕೋಟಿ ಕ್ರಿಯಾ ಯೋಜನೆ ಅನುಮೋದಿಸಲಾಗಿದೆ. ಕೆರೆಗಳಿಗೆ ರೂ.50 ಕೋಟಿ ವೆಚ್ಚದಲ್ಲಿ ತುರ್ತು ತೂಬುಗಾಲುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ ರೂ. 669 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಂಗಳೂರು ನಗರದಲ್ಲಿ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ 275 ಮಿಮೀ ಮಳೆಯಾಗಿದ್ದು, ಇದು 3ನೇ ಅತಿ ಹೆಚ್ಚು ಮಳೆಯಾಗಿದೆ. 2005ರಲ್ಲಿ ಈ ಅವಧಿಯಲ್ಲಿ 407 ಮೀಮೀ ಮಳೆಯಾಗಿತ್ತು ಎಂದು ಹೇಳಿದರು.
ಬೆಂಗಳೂರು ನಗರ ರಸ್ತೆ ನಿರ್ಮಾಣಕ್ಕಾಗಿ ರೂ.165 ಕೋಟಿ ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಈಗ 14 ಸಾವಿರ ಗುಂಡಿ ಮುಚ್ಚಿದ್ದೀವಿ. ಮುಚ್ಚಿದ ಬಳಿಕ ಮತ್ತಷ್ಟು ಮಳೆ ಬಂದಿದ್ದರಿಂದ ಮತ್ತೆ ಗುಂಡಿ ಬಿದ್ದಿವೆ. ಇವನ್ನೂ ಮುಚ್ಚಲು ಸೂಚನೆ ನೀಡಲಾಗಿದೆ. ಬೆಂಗಳೂರಿಗೆ ಆಗಮಿಸಿದ್ದ ವಿಶ್ವ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. 5000 ಕೋಟಿ ನೆರವು ನೀಡಲು ಒಪ್ಪಿದ್ದಾರೆ. ಇದರಲ್ಲಿ 3500 ಕೋಟಿ ಬೆಂಗಳೂರಿಗೆ ಖರ್ಚು ಮಾಡಲಾಗುವುದು ಎಂದರು.

ಬೆಂಗಳೂರಿನಲ್ಲಿ ಅಕ್ರಮ ನಿರ್ಮಾಣ ತಡೆಗಟ್ಟಲು ಹೊಸ ಕಠಿಣ ಕಾನೂನು ತಂದು BBMP, bda, bmrda ಗೆ ಹೆಚ್ಚು ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಅಕ್ರಮ ನಿರ್ಮಾಣ, ಇದರಿಂದ ಆಗುವ ಅನಾಹುತ ತಡೆಯಲು ಕಾನೂನು ಬಿಗಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದ ಮುಖ್ಯಮಂತ್ರಿಗಳು ಬಿಜೆಪಿ-ಜೆಡಿಎಸ್ ನವರು ರಾಜಕೀಯವಾಗಿ ಮಾಡುವ ಆರೋಪಗಳಿಗೆಲ್ಲಾ ಉತ್ತರ ಕೊಡಲ್ಲ. ಅವರ ಕಾಲದಲ್ಲಿ ಬೆಂಗಳೂರು ನಗರದಲ್ಲಿ ಆದ ಅನಾಹುತಗಳಿಗೆ ಸರಿಯಾಗಿ ಕ್ರಮ ತಗೊಂಡಿಲ್ಲ. ರಾಜಕಾಲುವೆ ಒತ್ತುವರಿ ತೆರವಿಗೆ ಅವರು ಏನೂ ಮಾಡಿಲ್ಲ ಎಂದು ತಿರುಗೇಟು ನೀಡಿದರು.

More articles

Latest article