ಹಾಸನ: ಸಂಸತ್ ಸದಸ್ಯ ಮತ್ತು ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ನಡೆದಿರುವ ವಿಕೃತ ಲೈಂಗಿಕ ಹಗರಣವನ್ನು ತೀವ್ರವಾಗಿ ವಿರೋಧಿಸಿ, “ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ”ದ ವತಿಯಿಂದ ಇಂದು ಬೃಹತ್ ಹೋರಾಟದ ನಂತರ ರಾಜ್ಯಸರ್ಕಾರಕ್ಕೆ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ.
‘ಹೋರಾಟದ ನಡಿಗೆ ಹಾಸನದ ಕಡೆಗೆ’ ಎಂಬ ಘೋಷಣೆಯೊಂದಿಗೆ ಇಂದು ಬೆಳಿಗ್ಗೆ ಹಾಸನದ ಮಹಾರಾಜ ಪಾರ್ಕ್ ಬಳಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದು ನಂತರ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯದ ಎಲ್ಲ ಮೂಲೆಗಳಿಂದಲೂ ಮಹಿಳಾ, ದಲಿತ, ಕಾರ್ಮಿಕ, ರೈತ, ಅಲ್ಪಸಂಖ್ಯಾತ, ಹಿಂದುಳಿದ, ಲೈಂಗಿಕ ಅಲ್ಪಸಂಖ್ಯಾತ, ಆದಿವಾಸಿ, ವಿಜ್ಞಾನ ಚಳವಳಿ, ನಿವೃತ್ತ ಸರ್ಕಾರಿ ಅಧಿಕಾರಿಗಳು/ನೌಕರರ ಸಂಘಟನೆ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು, ಸಮಾನಮನಸ್ಕರು, ಚಿಂತಕರು, ಸಾಹಿತಿಗಳು, ಕಲಾವಿದರು ಹಾಗೂ ಪ್ರಜ್ಞಾವಂತ ನಾಗರಿಕರು ಇದರಲ್ಲಿ ಸ್ವಯಂಪ್ರೇರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇದಲ್ಲದೆ ಈ ಹೋರಾಟಕ್ಕೆ ಹಾಸನ ಜಿಲ್ಲೆಯ ಎಲ್ಲಾ ಜನಪರ ಚಳವಳಿಗಳ ಕಾರ್ಯಕರ್ತರು, ಮಾನವೀಯ ನಾಗರಿಕರು ಮತ್ತು ಸಮಾನಮನಸ್ಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಬೃಹತ್ ಆಂದೋಲನ ಹಲವು ಆಗ್ರಹಗಳನ್ನು ಮಂಡಿಸಿತು.
ಸಮಾವೇಶದ ಆಗ್ರಹಗಳು ಹೀಗಿವೆ:
• ಈಗಾಗಲೇ ವಿಳಂಬವಾಗಿರುವ ವಿಕೃತ ಲೈಂಗಿಕ ಅತ್ಯಾಚಾರ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು ಮತ್ತು ಕಾನೂನಾತ್ಮಕ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಸಂಬಂಧ ರೆಡ್ ಕಾರ್ನರ್ ನೋಟೀಸು ಹೊರಡಿಸಬೇಕು. ಅವನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕೇಂದ್ರ ಸರ್ಕಾರವು ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್ಪೋರ್ಟ್ ಮತ್ತು ವೀಸಾವನ್ನು ಕೂಡಲೇ ರದ್ದುಪಡಿಸಿ, ಇಂಟರ್ಪೋಲ್ ಸಹಾಯ ಪಡೆದು ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಲ್ಲಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ಎಸ್ಐಟಿಗೆ ಅಗತ್ಯ ನೆರವು ನೀಡಬೇಕು.
• ವಿಕೃತ ಲೈಂಗಿಕ ಹಗರಣದ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಸಾರ್ವಜನಿಕವಾಗಿ ಹಂಚಲು ಸಂಚು ನಡೆಸಿದ, ವ್ಯಾಪಕವಾಗಿ ಹಂಚಿದ ಮತ್ತು ಅವನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಮಹಿಳೆಯರ ಖಾಸಗಿತನ, ಕುಟುಂಬ, ಬದುಕಿನ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬ ಅಪರಾಧಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು.
• ಈ ವಿಕೃತ ಲೈಂಗಿಕ ಹಗರಣದ ಆರೋಪಿಯಾದ ತಮ್ಮ ಮೊಮ್ಮಗ, ಪ್ರಜ್ವಲ್ ರೇವಣ್ಣನನ್ನು ಯಾವುದೇ ದೇಶದಲ್ಲಿದ್ದರೂ ಶತಾಯಗತಾಯ ಹಿಡಿದು ತರುವಂತೆ- ಮಾಜಿ ಪ್ರಧಾನಿ ದೇವೇಗೌಡರು ಈ ಕೂಡಲೇ ಪ್ರಧಾನಮಂತ್ರಿಗಳಿಗೆ ಪತ್ರವನ್ನು ಬರೆದು, ಒತ್ತಡ ಹಾಕಲು ತಾವು ಆಗ್ರಹಿಸಬೇಕು.
• ಈ ಲೈಂಗಿಕ ಹಗರಣದಲ್ಲಿ ವಿವಿಧ ಬಗೆಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವ ಹಾಗೂ ಪ್ರಕರಣ ದಾಖಲಿಸಲು ಮುಂದಾಗುವ ಮಹಿಳೆಯರ ಗೌಪ್ಯತೆ ಕಾಪಾಡಲು, ಅವರಿಗೆ ಬೇಕಾದ ಮನೋವೈದ್ಯಕೀಯ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಪ್ರತ್ಯೇಕ ವಕೀಲರ ನೇಮಕ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರವನ್ನು ತುರ್ತಾಗಿ ನೀಡಬೇಕು.
• ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದನ್ನು ಖಾತ್ರಿ ಪಡಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಹೀಗಾಗಿ ಅದು ಆಮೂಲಾಗ್ರವಾಗಿ, ನಿರ್ಭೀತಿಯಿಂದ ತನಿಖೆ ನಡೆಸಲು ಬೇಕಾದ ಅಧಿಕಾರವನ್ನು ಮತ್ತು ಅನುಕೂಲಗಳನ್ನು ಎಸ್ಐಟಿ ಮುಖ್ಯಸ್ಥರಿಗೆ ನೀಡಬೇಕು.
• ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೆಟರಿ (ಎಫ್ಎಸ್ಎಲ್) ವರದಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.
• ಮಾಜಿ ಪ್ರಧಾನಿ ದೇವೇಗೌಡರಿಗಾಗಿ ವಿಶೇಷವಾಗಿ ನಿರ್ಮಿಸಿದ್ದ ವಸತಿಗೃಹ ದುರುಪಯೋಗ ಮಾಡಿಕೊಂಡು ಸಂಸದ ಪ್ರಜ್ವಲ್ ರೇವಣ್ಣ ಕಾನೂನುಬಾಹಿರ ಚಟುವಟಿಕೆ ನಡೆಸಿರುವುದಕ್ಕೆ ಪ್ರತ್ಯೇಕ ಮೊಕದ್ದಮೆ ಹೂಡಬೇಕು. ಹಾಗೂ ಕೆಲಸದ ಸ್ಥಳದಲ್ಲಿ ಲೈಂಗಿಕ ತಡೆ ಕಾಯ್ದೆಯನ್ವಯ ಪ್ರತ್ಯೇಕ ಕಲಂಗಳನ್ನು, ಸಾಧ್ಯವಿರುವ ಪ್ರಕರಣಗಳಲ್ಲಿ ಸೇರ್ಪಡೆಗೊಳಿಸಬೇಕು.
• ಶಾಸಕ ರೇವಣ್ಣ ಅವರ ಮೇಲೆ ಕೂಡ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಜೊತೆಗೆ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೊಳಗಾಗಿರುವ ಸಂತೃಸ್ತ ಮಹಿಳೆಯ ಅಪಹರಣದ ಪ್ರಮುಖ ಆರೋಪಿಯೆಂದು ಕೂಡ ಇವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಇರುವ ಎಲ್ಲ ಆರೋಪಿಗಳ ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳನ್ನು ತಕ್ಷಣವೇ ಬಂಧನಕ್ಕೊಳಪಡಿಸಬೇಕು.
• ಈ ಸೂಕ್ಷ್ಮ ಮತ್ತು ಸಂಕೀರ್ಣ ಪ್ರಕರಣವನ್ನು ಮಹಿಳೆಯರ ಘನತೆಗೆ ಧಕ್ಕೆ ಬಾರದಂತೆ ಸಮರ್ಪಕವಾಗಿ ಇತ್ಯರ್ಥಪಡಿಸಲು ತ್ವರಿತ ‘ವಿಶೇಷ ನ್ಯಾಯಾಲಯ’ ಸ್ಥಾಪಿಸಬೇಕು. ಹಾಗೂ ಕಾನೂನಿನ ಪ್ರಕಾರ ನಿಗದಿತ ಕಾಲಾವಧಿಯಲ್ಲಿ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಬೇಕು.
• ಎಸ್ಐಟಿ ತನಿಖೆಯ ಅಂತಿಮ ವರದಿಯನ್ನು ಹೈಕೋರ್ಟ್ ನ್ಯಾಯಾಧೀಶರೊಬ್ಬರ ಉಸ್ತುವಾರಿ ಮತ್ತು ಪರಿಶೀಲನೆಯಲ್ಲಿ ಅಂತಿಮಗೊಳಿಸಿದ ನಂತರ ವರದಿಯನ್ನು ಸರ್ಕಾರಕ್ಕೆ ನೀಡಬೇಕು. ಈ ಕುರಿತು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು.
• ಯಾವುದೇ ಸಂತ್ರಸ್ತರ ಘನತೆಗೆ ಧಕ್ಕೆ ಉಂಟುಮಾಡುವ, ಆತ್ಮವಿಶ್ವಾಸ ಕುಗ್ಗಿಸುವ, ದೂರು ದಾಖಲಿಸಲು ಅಡ್ಡಿಪಡಿಸುವಂತಹ ಮಾತುಗಳನ್ನು ಯಾರೇ ಆಡಿದರೂ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಸಂತ್ರಸ್ತರ ಪ್ರಾಣ ಮತ್ತು ಆಸ್ತಿಪಾಸ್ತಿಗೆ ಆರೋಪಿಗಳ ಕಡೆಯವರಿಂದ ಯಾವುದೇ ಧಕ್ಕೆಯಾಗದಂತೆ ಬಿಗಿ ಭದ್ರತೆ ಹಾಗೂ ರಕ್ಷಣೆ ಒದಗಿಸಬೇಕು.
• ಹಾಸನದ ಈ ವಿಕೃತ ಲೈಂಗಿಕ ಪ್ರಕರಣದ ವಿಡಿಯೋ, ಫೋಟೋಗಳು ಇನ್ನು ಮುಂದೆ ಯಾವುದೂ ಬಿಡುಗಡೆಗೊಳ್ಳದಂತೆ, ಇವುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಎಲ್ಲರಿಂದಲೂ ಅವನ್ನು ಪಡೆದು ನಾಶಗೊಳಿಸಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇದಕ್ಕಾಗಿಯೇ ಸೈಬರ್ ಪೊಲೀಸ್ ಇಲಾಖೆಯಲ್ಲಿ ವಿಶೇಷ ತಾಂತ್ರಿಕ ಅಧಿಕಾರಿಗಳನ್ನು ನೇಮಕ ಮಾಡಿ, ಅಂತರ್ಜಾಲದಲ್ಲಿ ಇರುವ ಈ ಸಂಬಂಧಿತ ಎಲ್ಲ ಫೋಟೋ, ವಿಡಿಯೋಗಳನ್ನು ತೆಗೆದುಹಾಕುವಂತೆ ಕ್ರಮವಹಿಸಬೇಕು.
• ಸಂತ್ರಸ್ತರ ಹಿತದೃಷ್ಟಿಯಿಂದ ನಿಷ್ಪಕ್ಷಪಾತ ತನಿಖೆ ಮತ್ತು ವಿಚಾರಣೆ ನಡೆಸಲು ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಹಾಗೂ ವಾತಾವರಣವನ್ನು ಕಲ್ಪಿಸಲು ಎಲ್ಲ ಪಕ್ಷಗಳ ನಾಯಕರೂ ಅನುವು ಮಾಡಿಕೊಡಬೇಕು. ಇದಕ್ಕೆ ಅಡ್ಡಿಪಡಿಸುವವರ ವಿರುದ್ಧವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಸಂತ್ರಸ್ತರ ಮೇಲೆ ಆರೋಪಿಗಳ ಕಡೆಯವರಿಂದ ಯಾವುದೇ ಆಮಿಷ ಹಾಗೂ ಪ್ರಭಾವಗಳು ಬೀಳದಂತೆ ಸರ್ಕಾರವು ಎಲ್ಲ ರೀತಿಯ ಎಚ್ಚರಿಕೆ ವಹಿಸಬೇಕು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗು ಗೃಹಮಂತ್ರಿ ಜಿ.ಪರಮೇಶ್ವರ್ ಅವರು ಹಾಸನಕ್ಕೆ ತುರ್ತಾಗಿ ಆಗಮಿಸಿ- ವಿಕೃತ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾರ್ವಜನಿಕವಾಗಿ ಸಾಂತ್ವನ ಹೇಳಿ, ಧೈರ್ಯ ತುಂಬಬೇಕು. ಗೌಪ್ಯತೆ ಕಾಪಾಡುವ ಭರವಸೆ ನೀಡಬೇಕು. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಕಾನೂನು ನೆರವು, ಭದ್ರತೆ, ಪರಿಹಾರ, ಪುನರ್ವಸತಿ ಮತ್ತು ರಕ್ಷಣೆಯನ್ನು ಖಾತ್ರಿಗೊಳಿಸಬೇಕು. ಜೊತೆಗೆ ಈ ಲೈಂಗಿಕ ದೌರ್ಜನ್ಯದ ವಿರುದ್ಧ ಹಾಗೂ ಸಂತ್ರಸ್ತ ಮಹಿಳೆಯರ ಪರವಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿ ವಾಸ್ತವಾಂಶವನ್ನು ವಿವರವಾಗಿ ಚರ್ಚಿಸಿ, ಅದನ್ನಾಧರಿಸಿ ತುರ್ತು ಕ್ರಮ ಕೈಗೊಳ್ಳಬೇಕು.