ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಾಯಿತು, ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೆಯೇ?: ಮುಂದೇನಾಗಲಿದೆ ?

Most read

ಬೆಂಗಳೂರು: ಮುಡಾ ಪ್ರಕರಣ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆದರೆ ಯಡಿಯೂರಪ್ಪ ಪ್ರಕರಣದಲ್ಲಿ ಆದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ತುಂಬಾ ಕಡಿಮೆ ಅಥವಾ ಇಲ್ಲವೇ ಇಲ್ಲ.

ರಾಜ್ಯಪಾಲರ ಬಳಿ ಎರಡು ದೂರುಗಳಿದ್ದವು. ಟಿ.ಜೆ.ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅವರ ಎರಡು ದೂರುಗಳಲ್ಲಿ ಯಾವ ದೂರಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಯಾವುದಾದರೂ ಒಂದು ಪ್ರಕರಣಕ್ಕೆ ಅಥವಾ ಎರಡೂ ಪ್ರಕರಣಗಳಿಗೆ ಅನುಮತಿ ನೀಡಿದ್ದರೂ ನ್ಯಾಯಾಂಗ ಪ್ರಕ್ರಿಯೆ ಈಗಷ್ಟೇ ಆರಂಭವಾಗಬೇಕಿದೆ.

ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸುವ ಸಂಬಂಧ ವಿಚಾರಣೆ ನಡೆಯಬೇಕಿದೆ. ಆಗಲೂ ಎಫ್ ಐ ಆರ್ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಬಹುದು, ನೀಡದೇ ಇರಬಹುದು. ಒಂದು ವೇಳೆ ಅನುಮತಿ ನೀಡಿದರೂ ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಅವಕಾಶ ಸಿದ್ಧರಾಮಯ್ಯ ಅವರಿಗಿರುತ್ತದೆ.

ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಯಾವ ವಿಚಾರಣಾ ಏಜೆನ್ಸಿಗೆ ವಹಿಸುತ್ತದೆ ಎಂಬುದೂ ಕುತೂಹಲಕಾರಿಯಾಗಿರುತ್ತದೆ. ಸದ್ಯಕ್ಕೆ ಈ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿರುವುದು ಲೋಕಾಯುಕ್ತಕ್ಕೆ ಮಾತ್ರ. ಲೋಕಾಯುಕ್ತರು ತನಿಖೆ ನಡೆಸಿ ಬಿ ವರದಿಯನ್ನು ಸಲ್ಲಿಸಬಹುದು ಅಥವಾ ಎಫ್ ಐ ಆರ್ ದಾಖಲಿಸಿ ಮುಂದುವರೆಸಬಹುದು.

ಒಂದು ವೇಳೆ ಲೋಕಾಯುಕ್ತರು ಸಿದ್ಧರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಬಂಧನದ ಅಗತ್ಯ ಕಂಡುಬಂದರೆ ಸಿದ್ಧರಾಮಯ್ಯ ಅವರ ಬಂಧನ ಆಗಬಹುದು. ಬಂಧನದ ನಂತರ ಸಿದ್ಧರಾಮಯ್ಯ ರಾಜೀನಾಮೆ ಕೊಡಬಹುದು, ಅಥವಾ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಂತೆ ರಾಜೀನಾಮೆ ಕೊಡದೆಯೂ ಮುಂದುವರೆಯಬಹುದು.

ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಮತ್ತು ಜೆಡಿಎಸ್ ನಡೆಸಿರುವ ತಂತ್ರಗಾರಿಕೆಗೆ ಕಾಂಗ್ರೆಸ್ ಪಕ್ಷ ಕೂಡ ಎದುರೇಟು ನಿಲ್ಲಲು ಸಜ್ಜಾಗಿದೆ.

ಮುಡಾ ಪ್ರಕರಣದ ಕುರಿತು ಗದ್ದಲ ಎದ್ದಾಗಲೇ ಕಾಂಗ್ರೆಸ್ ಹೈಕಮಾಂಡ್ ಪ್ರಕರಣದ ಎಲ್ಲ ದಾಖಲೆಗಳನ್ನು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯವಾದಿಗಳಿಂದ ಪರಿಶೀಲನೆಗೆ ಒಳಪಡಿಸಿ, ಸಿದ್ಧರಾಮಯ್ಯ‌ ಪಾತ್ರ ಇಲ್ಲ ಎಂಬುದನ್ನು ಕಂಡುಕೊಂಡಿದೆ.‌ ಹೀಗಾಗಿ ಇಡೀ ಪಕ್ಷವೇ ಸಿದ್ಧರಾಮಯ್ಯ ಬೆನ್ನಿಗೆ ನಿಲ್ಲುವ ತೀರ್ಮಾನ ಮಾಡಿದೆ. ಮೈಸೂರಿನಲ್ಲಿ ನಡೆದ ಸಮಾವೇಶದ ಹೊರಹೊಮ್ಮಿದ ಮಾತುಗಳು, ನಾಯಕರ ಸ್ಪಷ್ಟ ನುಡಿಗಳು ಇದಕ್ಕೆ ಸಾಕ್ಷಿ.

ಹೀಗಾಗಿ ಮುಡಾ ಪ್ರಕರಣದಲ್ಲಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿದರೂ ಬಿಜೆಪಿ ಜೆಡಿಎಸ್ ನಡೆಸುತ್ತಿರುವ ತಂತ್ರಗಳು ವಿಫಲವಾಗುವ ಸಾಧ್ಯತೆ ಹೆಚ್ಚುವ ಹೆಚ್ಚು.

More articles

Latest article