ದಣಿವರಿಯದ ಸಿನೆಮಾ ಪ್ರೇಮಿ ಶ್ಯಾಮ್ ಬೆನಗಲ್‌

Most read

ಭಾರತೀಯ ಚಲನಚಿತ್ರ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದ  ಖ್ಯಾತ ಚಲನಚಿತ್ರ  ನಿರ್ದೇಶಕ  ಶ್ಯಾಮ್ ಬೆನಗಲ್ ಡಿ.23 ರಂದು ವಿಧಿವಶರಾಗಿದ್ದಾರೆ.  ಸಿನೆಮಾ ಚಳುವಳಿಗೆ ನಾಂದಿ ಹಾಡಿದ ಚಿತ್ರರಂಗದ ದಿಗ್ಗಜ ಬೆನಗಲ್‌ ಅವರ ಕಲಾಕೃತಿಗಳತ್ತ ಕಿರುನೋಟ ಹರಿಸಿದ್ದಾರೆ ನುಡಿನಮನದಲ್ಲಿ ರೋಹಿತ್‌ ಅಗಸರಹಳ್ಳಿ .  

ಶ್ಯಾಮ್ ಬೆನಗಲ್ ಮೊದಲು ಕ್ಯಾಮೆರ ಹಿಡಿದದ್ದು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ! ಹೌದು, ಅವರ ತಂದೆ ಕ್ಯಾಮೆರಾಮೆನ್ ಆಗಿದ್ದರಿಂದ ಆ ಹೊತ್ತಿಗೇ ಮಗನಿಗೆ ಕ್ಯಾಮೆರ ಕೊಡಿಸಿದ್ದರಂತೆ. ಅವರು ಹುಟ್ಟಿ ಬೆಳೆದದ್ದೆಲ್ಲಾ ಹೈದಾಬಾದಿನಲ್ಲೇ ಆದರೂ ಕರ್ನಾಟಕದ ಉಡುಪಿ ಬಳಿಯ ಬೆನಗಲ್ ಅವರ ಹೆಸರಿನೊಂದಿಗೆ ಸೇರಿಹೋಗಿದೆ. ಅವರ ಪೂರ್ವಜರು ಇಲ್ಲಿಂದ ವಲಸೆ ಹೋದವರು. ಮನೆ ಭಾಷೆ ಕೊಂಕಣಿ. ಆಮೇಲಿನವು ತೆಲುಗು, ಉರ್ದು, ಹಿಂದಿ, ಇಂಗ್ಲಿಷ್ ಇತ್ಯಾದಿ. 

ಬೆನಗಲ್ ಅವರು ಹುಟ್ಟಿದ್ದು 1934 ರಲ್ಲಿ. ಇತ್ತೀಚೆಗಷ್ಟೇ ತೊಂಬತ್ತು ವರ್ಷ ಪೂರೈಸಿದ್ದರು. ಒಂದೆರಡು ತಿಂಗಳ ಹಿಂದೆ ಅವರು ಒಂದು ಸುದೀರ್ಘ ಸಂದರ್ಶನ ನೀಡಿದ್ದಾರೆ. ಅದರಲ್ಲಿ ತಮ್ಮ ಏಳನೇ ವಯಸ್ಸಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರು ಸಂದರ್ಶನ ನೀಡಿದ್ದು ಬೇರಲ್ಲೂ ಅಲ್ಲ, ತಾವು ಇನ್ನಿಬ್ಬರು ಗೆಳೆಯರೊಂದಿಗೆ ಸೇರಿ 1981 ರಲ್ಲಿ ಆರಂಭಿಸಿದ ತಮ್ಮ ಸಿನೆಮಾ ಸಂಬಂಧಿ ಕಚೇರಿಯಲ್ಲಿ. ಅಂದರೆ ಅವರ ಹೊಸ ಸಿನೆಮಾ ಆಲೋಚನೆಗಳು ಈಗಲೂ ಮುಂದುವರೆದಿದ್ದವು. 

ಶ್ಯಾಮ್‌ ಬೆನಗಲ್

ಬಯೋಪಿಕ್ ಅಂದ ಕೂಡಲೆ ನೆನಪಾಗುವುದು ಬೆನಗಲ್ ಅವರು ನಿರ್ಮಿಸಿದ ಹಲವು ಬಯೋಪಿಕ್ ಗಳು. ಸ್ವಾತಂತ್ರ್ಯ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಹುಟ್ಟಿ ಬೆಳೆದು ಬಂದ ಅವರಿಗೆ ಅವಾವೂ ದೂರದ ಸಂಗತಿಗಳಾಗಿರಲಿಲ್ಲ. ಹೈದರಾಬಾದಿನಲ್ಲಿ ಅವರು ಓದುತ್ತಿದ್ದಾಗ ಅವರ ಪ್ರಿನ್ಸಿಪಾಲರ ಗೆಳೆಯ ಕೃಷ್ಣ ಮೆನನ್ ಆಗಾಗ ಕಾಲೇಜಿಗೆ ಬಂದು ಉಪನ್ಯಾಸಗಳನ್ನು ನೀಡುತ್ತಿದ್ದರಂತೆ. ಅವರು ಮುಂದೆ ನೆಹರೂ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ನೆಹರೂ ಅವರ ಕುರಿತು ಹೇಳುತ್ತಾ, ನೆಹರೂ ಅತ್ಯಂತ ಸರಳ ವ್ಯಕ್ತಿ. ಅವರು ಪ್ರಧಾನಿಯಾಗಿದ್ದ ಮೊದಲ ಅವಧಿಯಲ್ಲಿ ನಾವೆಲ್ಲಾ ವಿದ್ಯಾರ್ಥಿಗಳು. ಯೂಥ್ ಫೆಸ್ಟಿವಲ್ ಗೆ ಬಂದ ಅವರು, ಅವರೆಲ್ಲಾ ಸೆಕ್ಯೂರಿಟಿ ಪ್ರೊಟೋಕಾಲ್ ದೂರ ಬಿಟ್ಟು ನಮ್ಮಂತ ಯುವಕರ ನಡುವೆ ಬಂದು ಕೂತು ಮಾತಿಗಿಳಿಯುತ್ತಿದ್ದರು ಎಂದು ಸ್ಮರಿಸುತ್ತಾರೆ.  ಮುಂದೆ 1984 ರಲ್ಲಿ ನೆಹರೂ ಅವರನ್ನು ಕುರಿತ ಒಂದು ಸುದೀರ್ಘ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ. 

ವಯಸ್ಸಾದ ಮೇಲೆ ತಮ್ಮ ಕಾಲ ಮುಗಿಯಿತೆಂದೋ ಹಣ ಹೂಡುವವರು ಸಿಕ್ಕಲಿಲ್ಲವೆಂದೋ, ಈಗಿನ ಮಾರುಕಟ್ಟೆಯಲ್ಲಿ ಈಸಲಾರೆನೆಂದೋ ಹಲವರು ನೇಪಥ್ಯಕ್ಕೆ ಸರಿದು ಬಿಡುವುದಿದೆ; ಆದರೆ ಬೆನಗಲ್ ಅವರ ಕಡೆಯ ಸಿನೆಮಾ ೨೦೨೩ ರಲ್ಲಿ ಬಿಡುಗಡೆಯಾಗಿದೆಯಂತೆ. ಅದು ಬಾಂಗ್ಲಾ ಸರ್ಕಾರ ನಿರ್ಮಿಸಿದ Mujeeb: the making of a nation. ಇದು ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಕುರಿತ ಬಯೋಪಿಕ್.

ಬೆನಗಲ್ ಅವರ ಚಿತ್ರಪಯಣ ಆರಂಭವಾದುದು 1973 ರಲ್ಲಿ. ಆ ವರ್ಷ ತಯಾರಾದ ಅವರ ಸಿನೆಮಾ ಅಂಕುರ್. ಕನ್ನಡದ ಅನಂತನಾಗ್ ಅವರ ನಟನೆಯ ಬದುಕು ಆರಂಭವಾದುದು ಅಲ್ಲಿಂದಲೇ. ಅನಂತ ನಾಗರಕಟ್ಟೆ ಎಂಬ ಹೆಸರು ಟೈಟಲ್ ಕಾರ್ಡಿಗೆ ಉದ್ದವಾಗುತ್ತದೆ‌ ಎಂದು ಅದನ್ನು ಮೊಟಕು‌ಮಾಡಿ ಅನಂತನಾಗ್ ಮಾಡಿದ್ದು ಇದೇ ಶ್ಯಾಮ್ ಬೆನಗಲ್ ಅವರು.

ನಾಯಕಿ ಪಾತ್ರದ ಶಬಾನಾ ಆಜ್ಮಿ ಅವರಿಗೆ ಕೂಡ ಇದು ಡೆಬ್ಯು ಫಿಲ್ಮ್. ತಮ್ಮ ಮೊದಲ ಚಿತ್ರದಲ್ಲಿಯೇ ಬೆನಗಲ್ ಭಾರತೀಯ ಸಮಾಜದ ಅತಿ‌‌ ಸಂಕೀರ್ಣ ಎನಿಸಬಹುದಾದ ಜಾತಿ, ವರ್ಗ, ಲಿಂಗ, ಫಲವಂತಿಕೆ ಗಳಿಗೆ ಸಂಬಂಧಿಸಿದ ಕಥಾವಸ್ತುವನ್ನು ಆಯ್ದುಕೊಂಡಿದ್ದಾರೆ. ಮತ್ತು ಅದನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.

 ಅದರ ಹಿಂದೆಯೇ ನಿಶಾಂತ್(1975) ಮಂಥನ್ (1976) ಭೂಮಿಕಾ (1977) ಚಿತ್ರಗಳು ಬಂದವು. ದೇಶದಲ್ಲಿ ಕ್ರೌಡ್ ಫಂಡಿಂಗ್ ಬಗ್ಗೆ ಆಗಾಗ ಕೇಳುತ್ತೇವೆ. ಸಿನೆಮಾ ಕ್ಷೇತ್ರದಲ್ಲಿ ಬಹುಶಃ ಮೊದಲ ಕ್ರೌಡ್  ಫಂಡಿಂಗ್ ಪ್ರಯೋಗ‌ ಮಾಡಿದವರು ಬೆನಗಲ್. ಮೊದಲ ಬಾರಿ ಗುಜರಾತಿನ ಡೈರಿಗೆ ಹಾಲು ಕೊಡುವ ರೈತರು ತಲಾ ಎರಡು ರೂಪಾಯಿಗಳ ಕೊಡುಗೆ ಪಡೆದು ಸಿನೆಮಾ ಮಾಡಿ ಅವರೆಲ್ಲರನ್ನೂ ನಿರ್ಮಾಪಕರನ್ನಾಗಿಸಿದರು.

ಮಂಥನ್‌ ಸಿನೆಮಾದಲ್ಲಿ ಸ್ಮಿತಾ ಪಾಟೀಲ್

ಶ್ಯಾಮ್ ಬೆನಗಲ್ ಅವರ ಚಿತ್ರಗಳನ್ನು ಪ್ಯಾರಲಲ್ ( ಸಮಾನಾಂತರ) ಸಿನೆಮಾ ಎಂದು ಗುರುತಿಸಲಾಗುತ್ತದೆ. ನ್ಯೂ ವೇವ್ ಅಂದರೆ ಹೊಸ ಅಲೆ ಎಂದು ಕೂಡ. ಭಾರತದಲ್ಲಿ ಹೊಸ ಅಲೆಯ ಚಿತ್ರ ನಿರ್ದೇಶಕರ ಪಟ್ಟಿ ಮಾಡುವಲ್ಲಿ ಬೆನಗಲ್ ಅವರ ಹೆಸರು ಅಗ್ರಪಂಕ್ತಿಯಲ್ಲಿರುತ್ತದೆ. 

ಅವರ ಚಿತ್ರಪಯಣದ ಎರಡನೇ ಹಂತದಲ್ಲಿ ಬಂದ ಸಿನೆಮಾಗಳು ಜುನೂನ್1978 ಕಲ್ಯುಗ್ (1981)

ಮಂಡಿ (1983) ತ್ರಿಕಾಲ್ (1985)

ತಮ್ಮ ಆರಂಭದ ಚಿತ್ರಗಳಲ್ಲಿ ಅವರು ಬೆಳೆದ ಆಂಧ್ರಪ್ರದೇಶದ( ಈಗಿನ ತೆಲಂಗಾಣ) ಜಮೀನ್ದಾರಿ ವ್ಯವಸ್ಥೆ ಅದರ ಕುರೂಪ ಇತ್ಯಾದಿಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರ ನಿಶಾಂತ್ ಇದಕ್ಕೆ ಅತ್ಯುತ್ತಮ ಉದಾಹರಣೆ. ಚಿತ್ರದಲ್ಲಿನ ವಿವರಣೆಯಂತೆ ಅದು 1945ರ ಕಾಲಘಟ್ಟದ ಕತೆ. ಜಮೀನ್ದಾರ ಸಹೋದರರ ಹಿಡಿತದಲ್ಲಿರುವ ಹಳ್ಳಿಯೊಂದಕ್ಕೆ ಸಂಸಾರ ಸಮೇತ ಬರುವ ಮೇಷ್ಟ್ರೊಬ್ಬರ ಆಗಮನದೊಂದಿಗೆ ಚಿತ್ರ ಆರಂಭಗೊಳ್ಳುತ್ತದೆ. ಅದೇ ಮೇಷ್ಟ್ರು ತನ್ನ ಪತ್ನಿಯನ್ನು ಜಮೀನ್ದಾರನಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಜನರೆಲ್ಲ ಬಂಡೆದ್ದು ಜಮೀನ್ದಾರನ ಕುಟುಂಬದ ವಿರುದ್ದ ಸೆಟೆದುನಿಲ್ಲುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಧಾವಂತವಿಲ್ಲದ, ಆದರೆ ನೋಡುಗರಿಗೆ ಅತಿ‌ ನಿಧಾನವೂ ಎನಿಸದ ಆದರೆ‌ ದೃಶ್ಯ, ಸಂಭಾಷಣೆಯಲ್ಲಿ ಕಾಯ್ದುಕೊಂಡ ಏಸ್ತೆಟಿಕ್ ಸೆನ್ಸ್ ಕಾರಣಕ್ಕೆ ಬೆನಗಲ್ ಅವರ ಬಹುತೇಕ ಚಿತ್ರಗಳು ಪ್ರೇಕ್ಷಕನಿಂದ ಸ್ವೀಕರಿಸಲ್ಪಟ್ಟಿವೆ.

ಭಾರತೀಯ ಸಾಹಿತ್ಯ ಲೋಕ ಮತ್ತು ಸಿನೆಮಾ ಎಂಬ ಕಲಾ ಲೋಕದಲ್ಲಿ ಮಹಿಳಾ ಸಂವೇದನೆಗೆ ಬರ ಇರುವುದು ನಿಜ. ಸಿನೆಮಾ ವಿಚಾರದಲ್ಲಿ ಇದು ಕೊಂಚ ಅಧಿಕವೆ. ಭಾರತೀಯ ಹೊಸ ಅಲೆಯ ಸಿನೆಮಾಗಳಲ್ಲಿ ಬಹುಶಃ ಅತಿ ಹೆಚ್ಚು ಮಹಿಳಾ ಕೇಂದ್ರಿತ ಸಿನೆಮಾಗಳನ್ನು ನಿರ್ಮಿಸಿದ ಕೀರ್ತಿ  ಶ್ಯಾಮ್ ಬೆನಗಲ್ ಅವರಿಗೆ ಸಲ್ಲುತ್ತದೆ. ಇದಕ್ಕೆ ಸಾಕ್ಷಿ ಅವರ ಅಂಕುರ್, ನಿಶಾಂತ್, ಭೂಮಿಕಾ ಮಂಡಿ ಇತ್ಯಾದಿಗಳನ್ನು ಮುಂದು ಮಾಡಬಹುದು. ಇವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡಿರದ ಭಾರತೀಯ ಮುಸ್ಲಿಂ ಮಹಿಳಾ ಕೇಂದ್ರಿತ ತ್ರಿವಳಿ ಚಿತ್ರಗಳನ್ನು ಬೆನಗಲ್ ಅವರು ತೆರೆಗೆ ತಂದಿದ್ದಾರೆ. ಅವೆಂದರೆ ಕ್ರಮವಾಗಿ ಮಮ್ಮೋ( 1994)

ಸರ್ದಾರಿ ಬೇಗಂ(1996 ಹಾಗೂ ಜುಬೇದ (2001).

ಜುಬೇದಾದ ನಾಯಕಿ ಆಗಿನ ಲೀಡಿಂಗ್ ಕಮರ್ಶಿಯಲ್ ಸಿನೆಮಾ ನಾಯಕಿ ಕರಿಷ್ಮಾ ಕಪೂರ್.‌

ಜುಬೇದಾ- ಕರಿಷ್ಮಾ ಕಪೂರ್‌ ಮತ್ತು ರೇಖಾ

ಚರಿತ್ರೆ ಆಧರಿಸಿ  ಅತಿ ಹೆಚ್ಚು ಫೀಚರ್ ಫಿಲ್ಮ್ ಹಾಗೂ ಸಾಕ್ಷ್ಯ ಚಿತ್ರ ಹಾಗೂ ಸರಣಿಗಳನ್ನು ರೂಪಿಸಿದ ನಿರ್ದೇಶಕ ಕೂಡ ಶ್ಯಾಮ್ ಬೆನಗಲ್ ಅವರೇ ಎಂದು ಹೇಳಲು ದಂಡಿಯಾದ ಕಾರಣಗಳೂ ಚಿತ್ರಗಳೂ ಇವೆ. 1986 ರಲ್ಲಿ ಭಾರತೀಯ ರೈಲ್ವೇ ಕುರಿತ ಸರಣಿ. 1988 ರಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಕೃತಿ ಆಧರಿಸಿದ ಭಾರತ್ ಏಕ್ ಖೋಜ್ ಸರಣಿ. ಹಾಗೇ 1984ರ ನೆಹರೂ ಅವರನ್ನು ಕುರಿತ ಸಾಕ್ಷ್ಯಚಿತ್ರ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಸದ್ದು ಮಾಡುತ್ತಿರುವ ಸಂವಿಧಾನ ಅದರ ರಚನೆ ಕುರಿತ ಚರ್ಚೆ ಈಗ ನಡೆಯುತ್ತಿದೆ. ಸಂವಿಧಾನ್ ಎಂಬ ಹತ್ತು ಕಂತುಗಳ ಸರಣಿಯನ್ನು ಅವರು ಸಂವಿಧಾನ ರಚನಾ ಸಭೆ ಮತ್ತದರ ನಡೆವಳಿಗಳನ್ನು ಆಧರಿಸಿ ರೂಪಿಸಿದ್ದಾರೆ. ಇವೆಲ್ಲಕ್ಕೂ ಕಿರೀಟ ಪ್ರಾಯವಾಗುವಂತೆ ಫಾತಿಮಾ ಮೀರ್ ಅವರ The apprenticeship of mahathma ಪುಸ್ತಕವನ್ನಾಧರಿಸಿ ಅವರು ರೂಪಿಸಿದ The making of mahathma ಎಂಬ ಹಿಂದಿ/ ಇಂಗ್ಲಿಷ್ ಚಿತ್ರ ಗಾಂಧಿ ಕುರಿತ ಭಾರತೀಯ ಬಯೋಪಿಕ್ ಗಳಲ್ಲಿ ಅತ್ಯಂತ ಮಹತ್ವದ್ದು. ಇದು ನಿರ್ಮಾಣಗೊಂಡ ವರ್ಷ 1996. 

ಶೀರ್ಷಿಕೆಯಲ್ಲಿ ದಣಿವರಿಯದ ಎಂದೇಕೆ ಬಳಸಿದೆ ಎಂದರೆ ಅವರು ಸಿನೆಮಾವನ್ನು ಕೇವಲ ವೃತ್ತಿಯಾಗಿ ಸ್ವೀಕರಿಸಿದ್ದವರಲ್ಲ; ಅದು ಅವರ ಪ್ಯಾಶನ್. ಹೊಸಬರ ಮತ್ತು ಹೊಸಕಾಲದಲ್ಲೂ ಅವರು ಸುಮ್ಮನಿರಲಿಲ್ಲ. 1999 ರಲ್ಲಿ ಸುಭಾಶ್ ಚಂದ್ರ ಬೋಸ್ ಅವರ ಜೀವನ ಆಧರಿಸಿದ Netaji subhash Chandra Bose – the forgotten hero ಬಿಡುಗಡೆಯಾಯ್ತು. 2008 ರಲ್ಲಿ  ವೆಲ್ಕಂ ಟು ಸಜ್ಜನ್ಪುರ್ ಹಾಗೂ 2010 ರ ವೆಲ್ಡನ್ ಅಬ್ಬಾ. ಇವೆರಡೂ ಹೊಸ ಕಾಲದ ನಟನಟಿಯರಿಂದ ಕೂಡಿದ ಪೊಲಿಟಿಕಲ್ ಸೆಟೈರ್ ಗಳು. ಬಾವಿಯೊಂದು ಕಳುವಾಗಿಬಿಡುವ ಆಧುನಿಕ ಭ್ರಷ್ಟಾಚಾರದ ಸಂಗತಿಯನ್ನು ಕಚಗುಳಿ ಇಡುವಂತೆ ಚಿತ್ರಿಸಿರುವ ಸಿನೆಮಾ  ವೆಲ್ಡನ್ ಅಬ್ಬ. ಅವರ ಕಡೆಯ ಸಿನೆಮಾ ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಕುರಿತದ್ದು. ಪೂರ್ವ ಪಾಕಿಸ್ತಾನ ಸ್ವತಂತ್ರ ಬಾಂಗ್ಲಾದೇಶವಾಗಿ ರೂಪುಗೊಂಡ ಕಾಲಘಟ್ಟದ ಪ್ರತ್ಯಕ್ಷ ಸಾಕ್ಷಿಯೂ ಆಗಿದ್ದ ಬೆನಗಲ್ ಆ ಚಿತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಎಂದು ಭಾವಿಸುವೆ. 

ಎರಡೆರಡು ದೇಶಗಳ ರಾಷ್ಟ್ರಪಿತರ ಬಯೋಪಿಕ್ ಚಿತ್ರಿಸಿದ ಕೀರ್ತಿ ಕೂಡ ಶ್ಯಾಮ್ ಬೆನಗಲ್ ಅವರದು.

ಬೆನಗಲ್ ಇನ್ನೂ ನಮ್ಮೊಂದಿಗಿರಬೇಕಿತ್ತು ಎನಿಸಿದರೆ, ಅತಿಯಾಸೆ ಎಂದುಕೊಳ್ಳಬೇಡಿ. ಅವರಿಗೆ ತೊಂಬತ್ತು ವರ್ಷ ದಾಟಿತ್ತು. ಅಷ್ಟೇ ಅಲ್ಲ ಈಗ ನೂರ್ ಇನಾಯತ್ ಖಾನ್ ಎಂಬ ದ್ವಿತೀಯ ಮಹಾಯುದ್ಧ ಕಾಲದಲ್ಲಿ ಮಿತ್ರರಾಷ್ಟ್ರಗಳ  ಪರವಾಗಿ ಗೂಢಚಾರಿಕೆ ಮಾಡಿದ ಭಾರತೀಯ ಮೂಲದ ಹೆಣ್ಣು ಮಗಳ‌ ಬಗ್ಗೆ ಸಿನೆಮಾ ಮಾಡಲು ಚಿತ್ರಕತೆ ಸಿದ್ಧಪಡಿಸುತ್ತಿದ್ದರಂತೆ. 

ಶ್ಯಾಮ್ ಬೆನಗಲ್ ಇನ್ನೂ ಒಂದೆರಡು ವರ್ಷ ನಮ್ಮೊಂದಿಗಿರುತ್ತಿದ್ದರೆ‌ ಅದೂ ಸಾಧ್ಯವಾಗುತ್ತಿತ್ತೋ ಏನೊ.

ಬೆನಗಲ್‌ ತಮ್ಮ ತೊಂಬತ್ತನೇ ಹುಟ್ಟುಹಬ್ಬದಂದು

ಭಾರತದ ಫಿಲ್ಮ್ ಸೊಸೈಟಿ ಮೂವ್ ಮೆಂಟಿನ ಭಾಗವೂ ಆಗಿದ್ದ ಬೆನಗಲ್ ಅವರು ಫೆಡರೇಶನ್ ಆಫ್ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾದ ಅಧ್ಯಕ್ಷರಾಗಿ‌ ಸಹ ಕಾರ್ಯನಿರ್ವಹಿಸಿದ್ದಾರೆ. ಎನ್ ಎಫ್ ಡಿ ಸಿ, ಎಫ್ ಟಿ ಐ ಐ ನಲ್ಲಿ‌ ಕೂಡ ಎರಡು ಅವಧಿಗೆ ಮುಖ್ಯಸ್ಥರಾಗಿದ್ದರು. ಬೆನಗಲ್ ಅವರು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಟನಟಿಯರ ದಂಡನ್ನೇ ಕೊಡುಗೆಯಾಗಿ‌ ಕೊಟ್ಟವರು. ಅವರಲ್ಲಿ ಮುಖ್ಯವಾಗಿ ಸ್ಮಿತಾ  ಪಾಟೀಲ್, ಶಬಾನಾ ಅಜ್ಮಿ, ನಸೀರುದ್ದೀನ್ ಶಾ, ಓಂ ಪುರಿ, ಅಮರೀಶ್ ಪುರಿ, ಕುಲಭೂಷಣ್ ಕರ್ಬಂದಾ, ಗಿರೀಶ್ ಕಾರ್ನಾಡ್,  ಅನಂತನಾಗ್ ಇನ್ನೂ ಹಲವರಿದ್ದಾರೆ. 

 ತಮ್ಮ ಚಿತ್ರಗಳಿಗೆ ಸುಮಾರು ಹದಿನೇಳು ಬಾರಿ ರಾಷ್ಟ್ರ ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿವೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಚಿತ್ರಲೋಕದ ಅತಿಗಣ್ಯ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಕೂಡ ಅವರ ಮುಡಿಗೇರಿವೆ. ಒಂದು ಅವಧಿಗೆ ರಾಜ್ಯಸಭೆಯ ನಾಮನಿರ್ದೇಶನಗೊಂಡ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಇಷ್ಟೆಲ್ಲಾ ಸಾಧನೆಗೈದ ಚಿತ್ರ ತಪಸ್ವಿ ಶ್ಯಾಮ್ ಬೆನಗಲ್ ನಮ್ಮನ್ನಗಲಿದ್ದಾರೆ. ಅವರು ಭೌತಿಕವಾಗಿ‌ ನಮ್ಮಿಂದ ಮರೆಯಾಗಿದ್ದರೂ ಅವರ ಕಲಾಕೃತಿಗಳು ಬಹಳ ಕಾಲ ನಿಲ್ಲುತ್ತವೆ.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

ಇದನ್ನೂ ಓದಿ-ತುಳಸೀ ವನದ ಮರೆಯದ ಹೆಮ್ಮರ

More articles

Latest article