’ಅರಿ”ಯ ಅರಿವಿನ ಗೊಂದಲದಲ್ಲಿ ಶೂದ್ರ ಸಮುದಾಯ

Most read

ದಲಿತ ಹಾಗು ಶೂದ್ರ ಸಮುದಾಯಕ್ಕೆ ತಮ್ಮ ನಿಜವಾದ ವೈರಿ ಯಾರೆಂಬ ಅರಿವಿನ ಕೊರತೆಯೇ ಎಲ್ಲ ರಾದ್ಧಾಂತಗಳಿಗೆ ಕಾರಣ.   ಸಮಾಜದಲ್ಲಿ ಸರ್ವ ಸಮಾನತೆಯ ಆಶಯಕ್ಕೆ ಧಕ್ಕೆಯನ್ನುಂಟು ಮಾಡುವವರೇ ಎಲ್ಲರ ನಿಜವಾದ ವೈರಿಗಳು. ಅಂತಹ ವೈರಿಗಳ ಹಾಗು ಅವರ ಕಾರ್ಯ ಚಟುವಟಿಕೆಗಳ ಅರಿವು  ಶೋಷಿತ ಸಮುದಾಯಕ್ಕೆ ಸದಾ ಇರಲೇಬೇಕುಶಂಕರ್ ಸೂರ್ನಳ್ಳಿ

ಮೊನ್ನೆ ಮೊನ್ನೆ ಬಿಜೆಪಿಯ ಮಾಜಿ ದಲಿತ ಶಾಸಕರೊಬ್ಬರು ತಮ್ಮ ಅಸ್ಪೃಶ್ಯತೆಯ ಅನುಭವದ ಕುರಿತಂತೆ ಬಾಂಬೊಂದನ್ನು ಹಾಕಿದ್ದರು.  ಅದೂ ಸ್ವಯಂ ಘೋಷಿತ ದೇಶ ಭಕ್ತ ಸಂಘಟನೆಯೊಂದನ್ನು ಗುರಿಯಾಗಿಸಿಕೊಂಡು ಈ ಬಾಂಬ್ ಎಸೆತ ನಡೆದಿತ್ತು. ವಸ್ತುಶಃ ನೋಡಿದರೆ ಈ ವಿಚಾರವೇನೂ ಚರ್ಚೆಗೆ ಯೋಗ್ಯವೆನಿಸಿದಂತಾ ವಿಚಾರವೇನೂ ಆಗಿದ್ದಿರಲಿಲ್ಲ. ಮದುಮಗ ಕುದುರೆ ಏರಿದನೆಂದು, ದಲಿತ ಯುವಕ ಮೀಸೆ ಬಿಟ್ಟನೆಂದು, ಮೈ ತಾಗಿಸಿದನೆಂದು ಕೊಲೆಗಳಾಗುವ, ದಲಿತ ಬಾಲಕ ದೇಗುಲ ಪ್ರವೇಶಿಸಿದ ಎಂದು 25,000 ರೂಪಾಯಿ ದಂಡ ಕಟ್ಟಿಸಿದಂತ, ರಾಷ್ಟ್ರಪತಿಯಂತ ರಾಷ್ಟ್ರಪತಿಗಳಿಗೇ ಅವಕಾಶ ನಿರಾಕರಿಸಲ್ಪಟ್ಟ  ಸುದ್ದಿ ಕೇಳಲ್ಪಡುವ ಇವತ್ತಿನ ಆಧುನಿಕ ಯುಗದ ದಿನಗಳಲ್ಲಿ ಮೇಲ್ವರ್ಗದ ವಿಚಾರಧಾರೆ ಹಾಗು ಸಂಘಟನೆಗೆ ಸಂಬಂಧಿಸಿದ ಒಂದು ಉಚ್ಛತಮ ಭವನದೊಳಗೆ ದಲಿತನೊಬ್ಬನ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎಂಬ ವಿಚಾರ ಹೇಳಿಕೊಳ್ಳುವಂಥದ್ದೇನೂ ಅಲ್ಲ.

ತಮಾಷೆಯೆಂದರೆ, ಕೆಲ ದಲಿತ, ಶೂದ್ರ ಸಮುದಾಯದ ಮಂದಿ ಮೇಲ್ವರ್ಗದ ಬಿಟ್ಟಿ ಚಾಕರಿಗಳಲ್ಲಿ ಜೀ ಹುಜೂರ್.. ಎನ್ನುತ್ತಾ ಆ ಸೇವಾ ಕೈಂಕರ್ಯದಲ್ಲೇ ಏನೋ ಪರಮ ಸುಖ ಹಾಗು ಸಾರ್ಥಕತೆಯ ಭಾವವನ್ನು ಕಾಣುತ್ತಾ ನಂತರ ಯಾವುದೋ ಒಂದು ದಿನ ನಿರ್ಲಕ್ಷ್ಯಕ್ಕೆ ಒಳಗಾದ ಬಳಿಕ ಜ್ಞಾನೋದಯ ಆದವರಂತೆ ತಿರುಗಿ ಬೀಳುವುದುಂಟು. ಹಾಗೆ ಏಕಾಏಕಿ ಸಾಮಾಜಿಕ ನ್ಯಾಯ ಅದೂ ಇದೂ ಎಂದು ಉದ್ದುದ್ದ ಭಾಷಣ ಬಿಗಿಯೋದುಂಟು. ಶತ ಶತಮಾನಗಳಿಂದ ಶೋಷಣೆಗೊಳಗಾದ ದಲಿತ, ಶೂದ್ರ ಸಮುದಾಯದ ಸಾಮಾಜಿಕ ಸುಧಾರಣೆಗೆಂದು ಅಂಬೇಡ್ಕರರು ಕಂಡುಕೊಂಡಂತಹ ಆಶಯಗಳು ಹಾಗು ಪ್ರತ್ಯೇಕ ಮತದಾನದ ಮೀಸಲು ಕ್ಷೇತ್ರದ ಕಲ್ಪನೆಗಳಂತಹ ಅವರ ಕನಸುಗಳಿಗೆ ವಿರೋಧವಾಗಿ ಇಂದು ಕೆಲಸಗಳು ನಡೆಯುತ್ತಿವೆ. ಯಾರದೋ ಮೇಲ್ವರ್ಗದವರ ಹಂಗಿಗೆ ಕಟ್ಟು ಬಿದ್ದು ಗೆದ್ದಂತಹ ಮೀಸಲು ಕ್ಷೇತ್ರದ ನಾಯಕನಿಂದ ಅಂಬೇಡ್ಕರ್ ಆಶಯಗಳಿಗೆ ಖಂಡಿತವಾಗಿ ನ್ಯಾಯ ದೊರಕಿಸಲಾಗದು.

ಗೂಗಲ್‌ ಚಿತ್ರ

ಅಂದಹಾಗೆ, ಮೇಲೆ ಹೇಳಿದ ಇದೇ ಶಾಸಕ ಮಹನೀಯರು ಕೆಲ ವರ್ಷಗಳ ಹಿಂದೆ ತಮ್ಮ ತಾಯಿಗೆ ಕ್ರಿಶ್ಚಿಯನ್ ಮಿಷನರಿಗಳಿಂದ ಅನ್ಯಾಯವಾಗಿದೆ. ಅವರ ಕಾರಣದಿಂದಾಗಿ ಮತಾಂತರವಾದ ನಮ್ಮ ತಾಯಿ ನೆಮ್ಮದಿಯ ಬದುಕನ್ನ ನಡೆಸುತ್ತಿಲ್ಲ ಎಂದು ಬಾಂಬ್ ಹಾಕಿ ಅಂದು ಸುದ್ದಿ ಮಾಡಿದ್ದರು. ತಾಯಿ ಮತಾಂತರವಾಗಿದ್ದು ಹೌದಾದರೂ ಇದು ಸ್ವತ: ತಾಯಿಯ ದೂರಾಗಿರದೇ ಯಾವುದೋ ಪೂರ್ವ ನಿರ್ದೇಶಿತ ಸ್ಕ್ರಿಪ್ಟೆಡ್ ದೂರೆಂದು ಅನೇಕರು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಕಾರಣವೆಂದರೆ, ಇವರ ಪಕ್ಷದ ಹಾಗು ಪಕ್ಷ ನಿರ್ದೇಶಿಸುವ ಸಂಘಟನೆಯ ಪ್ರಮುಖ ಅಜೆಂಡಾಗಳಾದ, ಗೋಹತ್ಯೆ, ಮತಾಂತರದಂತವುಗಳಲ್ಲಿ ಒಂದಾದ ಮತಾಂತರ ನಿಷೇಧ ಕಾನೂನನ್ನು ಇವರದೇ ಸರಕಾರ ಜಾರಿಗೆ ತರುವ ಹೊತ್ತಿನಲ್ಲೇ ಶಾಸಕರು ಈ ಬಾಂಬನ್ನ ಹಾಕಿದ್ದರು.  ಹೇಗೂ ಇವರ ಮುಖ್ಯಸ್ಥರುಗಳು  ಯಾರ ಹೆಗಲ ಮೇಲೆ ಬಂದೂಕು ಇಟ್ಟು ಯಾವರೀತಿ ಗುಂಡು ಹೊಡೆದರೆ ಹೇಗೆಲ್ಲ ಪರಿಣಾಮಕಾರಿ ಎಂಬುದನ್ನ ಚೆನ್ನಾಗಿ ಅರೆದು ಕುಡಿದಂತವರು. ಅವರಿಗೆ ಇಂತಹ ತಂತ್ರಗಳೆಲ್ಲ ಜನ್ಮಜಾತವಾಗಿ ಒಲಿದಂತವುಗಳು ತಾನೇ.

ಇವರ ಒಂದು ಯೂ ಟ್ಯೂಬ್ ಚಾನೆಲ್ ನಲ್ಲಿ ಇವರು ದ್ವೇಷಿಸುವಂತ ಮುಸ್ಲಿಮ್ ಸಮುದಾಯದ ಹುಡುಗಿಯನ್ನೇ ಕುಳ್ಳಿರಿಸಿ ಆಕೆಯಿಂದಲೇ ಮುಸಲ್ಮಾನರಿಗೇ ಬೈಯ್ಯುವಂತಹ ಚಾಲಾಕಿತನ ಇವರದ್ದು. ಮತಾಂತರದ ವಿರುದ್ಧ ಬ್ರಾಹ್ಮಣನೊಬ್ಬ ಕ್ರಿಶ್ಚಿಯನ್ನರನ್ನ  ಖಂಡಿಸುವುದಕ್ಕೂ ಒಬ್ಬ ಶೂದ್ರನನ್ನು ಮುಂದಕ್ಕೆ ದೂಡಿ ಆತನಿಂದ ಖಂಡಿಸುವುದರ ನಡುವಿನ ಪರಿಣಾಮಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಇದು ಅವರ ಚಾಣಾಕ್ಷತೆ.

ಹೇಳಿ ಕೇಳಿ ಶಾಸಕ ಮಹಾಶಯರು ಅಸ್ಪೃಶ್ಯತೆ ಆಚರಿಸಿದರೆಂದು ದೂರಲ್ಪಟ್ಟ ಸಂಘಟನೆ ಹುಟ್ಟಿಕೊಂಡಿದ್ದೇ ವೈದಿಕತೆ ಹಿನ್ನೆಲೆಯ ಹಿಂದೂ ರಾಷ್ಟ್ರ ಕಲ್ಪನೆಯೆಂಬ ನೆಲೆಗಟ್ಟಿನ ಮೇಲೆ. ಚಾತುರ್ವರ್ಣ ಸಿದ್ಧಾಂತದಿಂದ ಹೊರತಾದ ಹಿಂದೂ ಧರ್ಮಕ್ಕೆ ಅಸ್ತಿತ್ವ ಏನಾದರೂ ಇದೆಯೇ ಎಂಬ ಈ ಪ್ರಶ್ನೆಯನ್ನು ಹಾಕಿಕೊಂಡರೆ ಸಂತ್ರಸ್ತ (!?) ಶಾಸಕರ ಪ್ರಶ್ನೆಗೆ ಅರ್ಥವೇ ಇರದು. ಶೂದ್ರರು ಯಾವತ್ತಿದ್ದರೂ ಶೂದ್ರರೇ. ಕಳೆದ ಎರಡು ಶತಮಾನಗಳ ಹಿಂದಿನ ಸಾಮಾಜಿಕ ಹಾಗು ಶೈಕ್ಷಣಿಕ ಪಲ್ಲಟಗಳ ಕಾರಣಕ್ಕೆ ಕೆಲವಾರು ಬದಲಾವಣೆಗಳನ್ನು ಇವತ್ತಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವಷ್ಟೆ. ಕೆಲವರಿಗೆ ವರವಾದ ಹಾಗು ಕೆಲವರಿಗೆ ಶಾಪ (ಪರಂಪರಾಗತ ಉಚ್ಛತನದ ಅಸ್ತಿತ್ವಕ್ಕೆ ಕಂಟಕ ಪ್ರಾಯವಾದ) ವೆನಿಸಿದ ಈ ಪಲ್ಲಟಗಳಿಂದಾದ ಚ್ಯುತಿಗಳ ’ರಿಪೇರಿ ಕಾರ್ಯ” ಸಾಗಿ ಮರಳಿ ಕಟ್ಟುನಿಟ್ಟಿನ ವರ್ಣಾಶ್ರಮ ಪದ್ಧತಿಯನ್ನು ಜಾರಿಗೊಳಿಸುವ ಅವರ ಆಶಯಗಳು ಅವರ ದೃಷ್ಟಿಯಲ್ಲಿ ಸರಿಯೇ ಇದ್ದಿರಬಹುದು. ಆದರೆ ಸಾರ್ವತ್ರಿಕವಾಗಿ ಖಂಡಿತಾ ಅಲ್ಲ.

ಚಿತ್ರ ಕೃಪೆ: ಸಬ್‌ ರಂಗ್

ಇನ್ನು ಒಂದೇ ವರ್ಷದ ಅಂತರದಲ್ಲಿ ಇವರ ಸಂಘಟನೆಗೆ ನೂರರ ಸಂಭ್ರಮ. ನೂರು ತಲುಪಿಯೂ ಸನಾತನ ಸಿದ್ಧಾಂತ ಜಾರಿ ಆಗದಿದ್ದರೆ  ಹೇಗೆ? ಅದಕ್ಕಾಗಿಯೇ ಈ ಎಲ್ಲ ಪೂರ್ವ ತಯಾರಿಗಳು ಸದ್ದಿಲ್ಲದೆ ನಡೆದಿವೆ. ಅದು ರಾಜಕೀಯವಾಗಿ, ಶೈಕ್ಷಣಿಕವಾಗಿ ಅಥವಾ ಸಾಮಾಜಿಕವಾಗಿಯಾದರೂ ಆಗಿದ್ದಿರಬಹುದು. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಬರೆದ ಸಂವಿಧಾನ ಮಾಯವಾಗಿ ಮನುಧರ್ಮ ಶಾಸ್ತ್ರ ಹಂತ ಹಂತವಾಗಿ ಜಾರಿಗೆ ಬಂದಲ್ಲಿ ಅಚ್ಚರಿಯೇನಿಲ್ಲ! ಜನರೇ ಆರಿಸಿ ಕಳುಹಿಸಿದ ಜನ ಪ್ರತಿನಿಧಿಯೊಬ್ಬರು “ನಾವು ಬಂದದ್ದೇ ಸಂವಿಧಾನ ಬದಲಿಸಲು” ಎಂದು  ಬಹಿರಂಗ ಸಭೆಯಲ್ಲೇ ಘೋಷಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ಅವರು ಅಸ್ಪೃಶ್ಯತೆ ಆಚರಿಸಿದರು, ದೇವಸ್ಥಾನಕ್ಕೆ ಹೋಗುವುದನ್ನ ತಡೆದರು, ದೇವರ ಪೂಜೆಯಲ್ಲಿ ತಾರತಮ್ಯ ತೋರಿ ಅವಮಾನಿಸಿದರು ಎಂದೆಲ್ಲ ದೂರುವ ಬದಲು ನಾವೇ ನಮ್ಮ ಬದುಕಿಗೇನೂ ಅತ್ಯವಶ್ಯವಲ್ಲದ (ದೇವರು, ಹಾಗು ದೈವ ಪೂಜೆಗಳಿಗಾಗಿ ನಮ್ಮದೇ ಆದಂತಹ ಅವೈದಿಕ ಆಚರಣೆಗಳಿವೆಯಲ್ಲ) ಅಂತಹ ಸಂಗತಿಗಳಿಂದ ನಾವೇ ದೂರವಿದ್ದರೆ ಒಳಿತು ತಾನೇ..?

ದಲಿತ ಹಾಗು ಶೂದ್ರ ಸಮುದಾಯಕ್ಕೆ ತಮ್ಮ ನಿಜವಾದ ವೈರಿ ಯಾರೆಂಬ ಅರಿವಿನ ಕೊರತೆಯೇ ಇಂತಹ ರಾದ್ಧಾಂತಗಳಿಗೆಲ್ಲ ಕಾರಣ. ಜಗತ್ತಿನಲ್ಲಿ ಯಾರು ಯಾರಿಗೂ ವೈರಿಯಲ್ಲ. ಈ ವೈರತ್ವದ  ನಂಬಿಕೆ ನಿಜಕ್ಕೂ ಸತ್ಯವೇ ಆಗಿದ್ದರೆ ’ತಮ್ಮವನದ್ದೆಂಬ’ ರಕ್ತ ಯಾರಿಗೂ ಕೂಡ ದೊರಕದೇ ಸಹಸ್ರಾರು ಜನ ದೇಶದಲ್ಲಿ ವರ್ಷಂಪ್ರತಿ ಸಾಯಬೇಕಿತ್ತು.  ಸಮಾಜದಲ್ಲಿ ಸರ್ವ ಸಮಾನತೆಯ ಆಶಯಕ್ಕೆ ಧಕ್ಕೆಯನ್ನುಂಟು ಮಾಡುವವರೇ ಎಲ್ಲರ ನಿಜವಾದ ವೈರಿಗಳು. ಅಂತಹ ವೈರಿಗಳ ಹಾಗು ಅವರ ಕಾರ್ಯ ಚಟುವಟಿಕೆಗಳ ಅರಿವು  ಶೋಷಿತ ಸಮುದಾಯಕ್ಕೆ ಸದಾ ಇರಲೇಬೇಕು.

ಶಂಕರ್ ಸೂರ್ನಳ್ಳಿ

ಲೇಖಕರು

More articles

Latest article