Thursday, May 23, 2024

ಬುದ್ದ ಕಥಾ ಕಾರ್ಯಕ್ರಮವೂ ಉತ್ತರಪ್ರದೇಶದ ಬ್ರಾಹ್ಮಣರೂ…

Most read

ಕೋಮುವಾದ ಹೆಚ್ಚಿದಂತೆಲ್ಲ ಜಾತಿ ವಿರೋಧಿ ಹೋರಾಟಗಳಿಗೆ ಹಿನ್ನಡೆಯಾಗುತ್ತದೆ. ಮುಸ್ಲೀಮರ ಬಗೆಗಿನ ಕಪೋಲಕಲ್ಪಿತ ಭಯವನ್ನು ಸೃಷ್ಟಿಸಿ SC/ST/OBC ಗಳನ್ನು ತನ್ನ ಕಾಲ್ದಳವನ್ನಾಗಿ ಮಾಡಿಕೊಂಡಿರುವ ಮನುವಾದಿ ವಿಚಾರವು, ಅದೇ SC/ST/OBC ಗಳು ಬುದ್ಧ-ಬಸವ-ಅಂಬೇಡ್ಕರ್-ಕುವೆಂಪು ಎಂದರೆ ಕೆಂಡಾಮಂಡಲವಾಗಿ ಹತ್ತಿಕ್ಕಲು ಪ್ರಯತ್ನಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಅಮಾನವೀಯ ಘಟನೆ.

ಕಾನ್ಪುರದ ಪಹೇವ ಹಳ್ಳಿಯಲ್ಲಿ ದಲಿತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕಳೆದ ವರ್ಷದಿಂದ ಡಿಸೆಂಬರ್ ತಿಂಗಳಿನಲ್ಲಿ ‘ಬುದ್ಧ ಕಥಾ’ ಎಂಬ ಕಾರ್ಯಕ್ರಮವನ್ನು ಏಳು ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತಿದೆ. ಈ ಏಳು ದಿನಗಳು ಬುದ್ಧ, ಅಂಬೇಡ್ಕರ್, ಸಂತ ರವಿದಾಸ್ ಹಾಗೂ ಇತರೆ ಬಹುಜನ ನಾಯಕ/ನಾಯಕಿಯರ ಕುರಿತು ಹಾಡುಗಳನ್ನು, ಕಥೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಇಡೀ ಗ್ರಾಮದ ದಲಿತರು ಅಲ್ಲಿ‌ ಭಾಗವಹಿಸುತ್ತಾರೆ. ರಾತ್ರಿ ಸಮಯದಲ್ಲಿ ಒಂದಷ್ಟು ಜನ ಸಮಾರಂಭದ ವೇದಿಕೆ ಬಳಿಯೇ ಮಲಗುತ್ತಾರೆ.

ಈ ವರ್ಷವೂ ಸಹ ‘ಬುದ್ಧ ಕಥಾ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಘೋಷಿಸಿದ ತಕ್ಷಣ ಅದೇ ಹಳ್ಳಿಯ ಬ್ರಾಹ್ಮಣರು ‘ನೀವು ಈ ಕಾರ್ಯಕ್ರಮ ಮಾಡುವಂತಿಲ್ಲ. ಮಾಡಿದರೆ ಮಹಿಳಾ ಹಾಡುಗಾರರನ್ನು ಅಪಹರಿಸಲಾಗುವುದು. ಕಾರ್ಯಕ್ರಮದಲ್ಲಿ ಗುಂಡು ಹಾರಿಸಲಾಗುವುದು’ ಎಂದು ಬೆದರಿಕೆ ಹಾಕಿದರಂತೆ. ಆದರೆ ಈ ಬೆದರಿಕೆಗೆಲ್ಲ‌ ಜಗ್ಗದ ದಲಿತ ಸಮುದಾಯ ಬುದ್ಧ ಕಥಾ ಕಾರ್ಯಕ್ರಮವನ್ನು ಏಳು ದಿನಗಳ ಕಾಲ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಸಂತೋಷದ ವಿಚಾರವೆಂದರೆ ಈ ಬಾರಿ OBC ಗಳು ಸಹ ಭಾಗವಹಿಸಿದ್ದಾರೆ. ಕಾರ್ಯಕ್ರಮ ಅರ್ಥಪೂರ್ಣವಾಗಿ ಆರಂಭವಾಗಿದೆ. ಆದರೆ ಮೂರನೇ ದಿನ ರಾತ್ರಿ 2 ಗಂಟೆಯಷ್ಟೊತ್ತಿಗೆ ಸುಮಾರು 15 ಜನ ಜಾತಿವಾದಿ ಗೂಂಡಾಗಳು ಪೆಂಡಾಲ್ ಬಳಿ‌ ನುಗ್ಗಿ ಮಲಗಿದ್ದವರನ್ನು ಥಳಿಸಿ, ಗಾಳಿಯಲ್ಲಿ ಗುಂಡುಗಳ ಮಳೆ ಸುರಿಸಿ, ಬುದ್ಧ , ಅಂಬೇಡ್ಕರ್ ಭಾವಚಿತ್ರಗಳನ್ನು ಹರಿದು ಬಿಸಾಡಿ, ಸಂತ ರವಿದಾಸರ ಪ್ರತಿಮೆಯನ್ನು ಒಡೆದು ಹಾಕಿ ಓಡಿ ಹೋಗಿದ್ದಾರೆ. ಅವರಲ್ಲಿ ಚಂದ್ರಭಾನ್ ಮಿಶ್ರಾ, ಶಿವಮ್ ಮಿಶ್ರಾ, ಜೀತು ಮಿಶ್ರಾ, ಅರುಣ್ ಕುಮಾರ್‌, ಅಶು ಮತ್ತು ವಿಶಂಭರ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಬ್ರಾಹ್ಮಣರೇ ಆಗಿದ್ದಾರೆ.

ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯ ಬ್ರಾಹ್ಮಣರು ಇರುವುದು ಉತ್ತರ ಪ್ರದೇಶದಲ್ಲಿಯೇ. ಹಿಂದೂ ಧರ್ಮದ ರಕ್ಷಕರೆಂದು ಕರೆದುಕೊಳ್ಳುವ ಈ ಉತ್ತರಪ್ರದೇಶದ ಬ್ರಾಹ್ಮಣರು ದಲಿತರು‌ ಬುದ್ಧ, ಅಂಬೇಡ್ಕರ್ ಅವರನ್ನು ಅನುಸರಿಸಿದರೇಕೆ ಕೆಂಡಾಮಂಡಲವಾಗುತ್ತಾರೆ ಎಂಬುದನ್ನು ಇಂದು ಮನುವಾದಿ ಸಂಘಟನೆಗಳಲ್ಲಿ ಕಾಲ್ದಳಗಳಂತೆ ಕೆಲಸ ಮಾಡುತ್ತಿರುವ SC/ST/OBC ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಮುಸ್ಲೀಮರ ವಿರುದ್ಧ ನಿಲ್ಲಲು ಹಾಗೂ ಆ ಮೂಲಕ ಹಿಂದೂ‌ ಮೇಲ್ಜಾತಿಗಳ ಅಧಿಕಾರ ಕಾಪಿಟ್ಟುಕೊಳ್ಳಲು ಮಾತ್ರ SC/ST/OBC ಗಳು ಇವರಿಗೆ ಬೇಕಷ್ಟೆ. ಸಮಾಜದಲ್ಲಿ ಸಮಾನತೆ ಬೇಕು ಎಂದರೆ ಅಥವಾ ಸಮಾನತೆ ಕಡೆ ಹೆಜ್ಜೆ ಇಟ್ಟರೆ ಬಲಪಂಥೀಯರು ಹೇಗೆಲ್ಲ ಆಡುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಕೊನೆಯದಾಗಿ, ಉತ್ತರಪ್ರದೇಶದ ಬ್ರಾಹ್ಮಣರಿಗೆ ಕರ್ನಾಟಕದ ಕುದ್ಮುಲ್ ರಂಗರಾವ್, ಗೋಪಾಲಕೃಷ್ಣ ಅಯ್ಯಂಗಾರರಂತಹ ಮಾನವತಾವಾದಿಗಳ ಪರಿಚಯ ಮಾಡಿಸಬೇಕು.

ಅಂದ ಹಾಗೆ ಏಳು ದಿನಗಳ ಬುದ್ದ ಕಥಾ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದೆ. ಪಹೇವ ಹಳ್ಳಿಯ ದಲಿತರಿಗೆ ಹಾಗೂ ಹಿಂದುಳಿದ ಜಾತಿಯವರಿಗೆ ಅಭಿನಂದನೆಗಳನ್ನು ಹೇಳೋಣ.

ವಿಕಾಸ್‌ ಆರ್‌ ಮೌರ್ಯ

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ.

More articles

Latest article