ಹೆಣ್ಮಕ್ಳು ಒಳ ಉಡುಪುಗಳನ್ನು ಎಲ್ಲರಿಗೂ ಕಾಣುವಂತೆ ಒಣಗಿಸ್ಬೇಕಾ? ಒಣಗಿಸ್ಬಾರ್ದಾ?

Most read

ಗಂಡಸರ ಬಟ್ಟೆಗಿಲ್ಲದ ತಾರತಮ್ಯ ಮುಚ್ಚುಮರೆ ಈ ಹೆಣ್ಮಕ್ಳ ಬಟ್ಟೆಗೆ ಮಾತ್ರ ಯಾಕೆ ? ಎಂಬುದು ಚಿಂತಿಸಬೇಕಾದ ಸಂಗತಿ. ಹೆಣ್ಮಕ್ಳು ತೊಡೋ ಒಳ ಉಡುಪುಗಳು ಕಲೆಗಳಾಗಿರ್ತಾವೆ ಅಂತಾನ? ಇಲ್ಲ ಹೆಣ್ಣಿನ ಒಳ ಉಡುಪು ಗೌಪ್ಯವಾಗಿರಬೇಕೆಂದೇ? ಅಥವಾ ಪುರುಷರಲ್ಲಿ ಇದು ಕಾಮ ಪ್ರಚೋದನೆ  ಉಂಟು ಮಾಡುತ್ತೆ ಅಂತಾನ? – ಶೃಂಗಶ್ರೀ ಟಿ, ಉಪನ್ಯಾಸಕಿ.

ನನ್ನನ್ನ ಸದಾ ಕಾಲ ಕಾಡೋ ಅಂತ ಒಂದು ಪ್ರಶ್ನೆ ಈ ಬಟ್ಟೆ ತೊಳ್ದಾದ್ಮೇಲೆ ನಮ್ ಹೆಣ್ಮಕ್ಳು ಬಟ್ಟೆನ ಎಲ್ಲರಿಗೂ ಕಾಣುವಂತೆ ಒಣಗಿಸ್ಬೇಕ ? ಒಣಗಿಸ್ಬಾರ್ದಾ? ಅದರಲ್ಲೂ ಒಳ ಉಡುಪುಗಳನ್ನ !! ಇದನ್ನು ಒಣಗಿಸುವುದೇ ದೊಡ್ಡ ಸಮಸ್ಯೆ ಎಂಬುದು ನನ್ನ ಅಭಿಪ್ರಾಯ. ನಮ್ಮ ಬಟ್ಟೆಗಳು ಅದರಲ್ಲೂ ಒಳ ಉಡುಪುಗಳು ಎಲ್ಲರಿಗೂ ಕಾಣುವಂತೆ ಒಣಗಿಸಬೇಕಾ? ಎನ್ನುವ ಪ್ರಶ್ನೆ ಸದಾ ನನ್ನನ್ನು ಕಾಡುತ್ತಲೇ ಇದೆ.

ನಾನು ಚಿಕ್ಕಂದಿನಿಂದಲೂ ನಮ್ಮ ಮನೆಯ ಮತ್ತು ಸುತ್ತಮುತ್ತಲಿನಲ್ಲಿ ಈ ಗಂಡಸರ ಬಟ್ಟೆಗಳನ್ನ ಒಣಗಿಸುವಂತೆ  ರಾಜಾರೋಷವಾಗಿ ನಮ್ಮ ಹೆಣ್ಮಕ್ಕಳ ಬಟ್ಟೆಗಳನ್ನ ಒಣಗಿಸಿದ್ದನ್ನ ನೋಡಿಯೇ ಇಲ್ಲ..! ಒಂದು ವೇಳೆ ಹಾಕಿದರೆ ಆಕೆಯನ್ನು ಅಪರಾಧಿ ಎಂಬಂತೆ ಬಿಂಬಿಸಿ ಅಮ್ಮನೋ ಅಜ್ಜಿಯೋ ಮಾತಿನ ಕುಣಿಕೆ ಹಾಕಿ ಗಲ್ಲಿಗೇರಿಸಿ ಬಿಡುತ್ತಿದ್ದರು.

ಒಂದು ಜೀವ ಹುಟ್ಟುವ ಮೊದಲೇ ಗಂಡು ಮತ್ತು ಹೆಣ್ಣು ಎನ್ನುವ ಲಿಂಗದ ಅನುಸಾರ ಸೃಷ್ಟಿಸಿ  ಸಮಾಜವು ಇಲ್ಲಿಂದಲೇ ತಾರತಮ್ಯವೆಂಬ ಮಹಾಮಾರ್ಗ ನಿರ್ಮಿಸಿದೆ. ಅದು ಈಗ ಉಟ್ಟ ಬಟ್ಟೆಯನ್ನು ಸಹ ಬಿಡುತ್ತಿಲ್ಲ ಎಂಬುದು ಅಚ್ಚರಿ ಮತ್ತು ವಿಷಾದದ ಸಂಗತಿ. ಹಾಗೇ ನೋಡುವುದಾದರೆ ಕೇವಲ ಹೆಣ್ಣಿನ ಒಳ ಉಡುಪುಗಳನ್ನ ಮಾತ್ರವಲ್ಲ ಹೊರ ಉಡುಪಿಗೂ ಈ ಸಮಾಜದ ಆಕ್ಷೇಪ ಇದೆ. ಇರಲಿ..!!

ಆದರೂ ಈ ಸಮಾಜ ಗಂಡು ರಾಜಾರೋಷವಾಗಿ ಅರೆನಗ್ನನಾಗಿ ಸ್ವಿಮ್ಮಿಂಗ್, ಬಾಡಿ ಶೋ ಆಫ್, ಫೋಟೋ ಶೂಟ್ ಮಾಡಿದರೆ ಅದು ಗಂಡಸ್ತನ ಸಂಕೇತದಂತೆ ಒಪ್ಪಿ ಆಲಂಗಿಸುತ್ತದೆ. ಅಷ್ಟೇ ಯಾಕೆ ಮನೆಗಳಲ್ಲಿ  ಅವರ ಇನ್ನರ್ ವೇರ್ ನ ನೆಲ ಒರೆಸುವುದಕ್ಕೆ ಅವರ ಬನಿಯನ್ ಗಳನ್ನ ಅಡುಗೆ ಮನೆಯಲ್ಲಿ ಮಸಿಬಟ್ಟೆಯಂತೆ ಬಳಸಿಕೊಳ್ಳುತ್ತಾರೆ. ಆದರೆ ಅದೇ ಹೆಣ್ಣು ಅರೆನಗ್ನಳಾಗಿ ಇದ್ದರೆ ಸಮಾಜ ಅವಳ ಚಾರಿತ್ರ್ಯ ವಧೆಗೆ ಸಜ್ಜಾಗಿ ನಿಂತಿರುತ್ತದೆ. ಇನ್ನು ನಮ್ ಹೆಣ್ಮಕ್ಳು ಬಟ್ಟೆಗಳನ್ನ ಒಣಗಿ ಹಾಕುವ ಸ್ವಾಂತಂತ್ರ್ಯವನ್ನ ಕೇಳಬೇಕ!! ಅಡುಗೆ ಮನೆಗೆ ಅವರು ಬಳಸಿದ ಒಳ ಉಡುಪುಗಳು ಪ್ರವೇಶ ಪಡೆದಾವೇ?

ಅವಳನ್ನು ಮತ್ತು ಅವಳ ಬಟ್ಟೆಗಳನ್ನು ದೂಷಿಸುತ್ತಲೇ ಮನುವಿನ ಸ್ಥಿತಿದಾಯಕರು ಸುಖ ಪಡುತ್ತಿದ್ದಾರೆ. ಇದು ಆಕೆಯ ಬದುಕಿನ ಹಕ್ಕನ್ನು ಕಸಿದು ಕತ್ತಲೆಗೆ ನೂಕುತ್ತಿದೆ. ತನ್ನ ದೇಹದ ಬಟ್ಟೆಯನ್ನು ಒಣಗಿಸುವುದರಲ್ಲೂ ಕೂಡ ಸ್ವಾಂತಂತ್ರ್ಯವಿಲ್ಲ. ಇದರಿಂದ ಕೆಲವೊಮ್ಮೆ ಬಿಸಿಲಲ್ಲೂ ಒಣಗದೆ ಫಂಗಸ್ ಗಳಾಗಿ ಇನ್ಫೆಕ್ಷನ್ ಗಳಾಗಿ ನಮ್ ಹೆಣ್ಮಕ್ಳನ್ನ ತೊಂದರೆಗೀಡು ಮಾಡ್ತವೆ. ಇದ್ಯಾವುದನ್ನೂ ಅರಿಯದ ನಮ್ ಹೆಣ್ಮಕ್ಳು ಯಾರಿಗೂ ಹೇಳಲಾಗದೆ, ಆಸ್ಪತ್ರೆಗೂ ತೋರಿಸಲಾಗದೆ, ಹೇಳಿಕೊಳ್ಳಲೂ ಆಗದೆ ಒಳಗೊಳಗೇ ಒದ್ದಾಡುವ ನೋವು ಸಂಕಟಗಳು ಸಾರ್ವಕಾಲಿಕ ಆಗಿವೆ. ಇಲ್ಲಿಯ ಬದಲಾವಣೆಗೆ ನಮ್ಮಲ್ಲಿನ ಹೆಣ್ಣು ವಿರೋಧಿ ಸಂಪ್ರದಾಯ ಆಚರಣೆಗಳನ್ನೆಲ್ಲ ದಾಟಬೇಕಿದೆ. ಗಂಡಿನಂತೆ ಹೆಣ್ಣು ಕೂಡ ಸಮಾನಳು ಮತ್ತು ಅವಳ ಒಳ ಉಡುಪುಗಳೂ ಸಹ. ಗಂಡಿನಂತೆ ಹೆಣ್ಣಿಗೂ ಖಾಸಗಿ ತನದ ಬದುಕಿದೆ, ಅದು ತೊಡುವ ಬಟ್ಟೆಯಾಗಲಿ ಒಣಗುವ ಬಟ್ಟೆಯಾಗಲಿ ಯಾವ ಅಂಜಿಕೆಯಿಲ್ಲದೆ ಅಸಹ್ಯ ಪಡದೆ ತನ್ನಿಚ್ಛೆಯಂತೆ ಇರುವ ಸ್ವಾತಂತ್ರ್ಯ ನಮಗೂ ಸಿಗಬೇಕು.

ಕೇವಲ ಇಷ್ಟೆಯಲ್ಲದೆ  ಬಟ್ಟೆ ಅಂಗಡಿಗಳಿಗೆ ಹೋಗಿ ಒಳ ಉಡುಪುಗಳನ್ನ ಕೊಡಿ ಅಂತ ಕೇಳುವುದಕ್ಕೂ ಹಿಂಜರಿಕೆಯಾಗುವಂತ ಸ್ಥಿತಿಯೂ ಇದೆ. ಅದರಿಂದ ಎಷ್ಟೋ  ಹೆಣ್ಮಕ್ಕಳು ಒಳ ಉಡುಪುಗಳನ್ನ ಕೊಂಡು ವರ್ಷ ವರ್ಷಗಳೇ ಕಳೆದರೂ, ಅವು ಹರಿದು ಚಿಂದಿಯಾದ ಮೇಲೂ ಅವುಗಳನ್ನೇ ಬಳಸುವುದರ ಹಿಂದೆ ಪದೇ ಪದೇ ಅಂಗಡಿಗಳಿಗೆ ಹೋಗಿ ಕೇಳಿ ತರುವ ಅಂಜಿಕೆ ಸಂಕೋಚಗಳಿವೆ. ಇವೆಲ್ಲದರಿಂದ ಆಚೆ ಬಂದು ಸ್ವತಂತ್ರವಾಗಿ ನಿರ್ಭೀತಿಯಿಂದ ಬದುಕುವುದನ್ನ  ಹೆಣ್ಣು ಕಲಿಯಲೇ ಬೇಕಾಗಿದೆ.

ಶೃಂಗಶ್ರೀ.ಟಿ.

ಇವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ʼಶೃಂಗಾತರಂಗʼ ಅಂಕಣದಲ್ಲಿ ಬರೆಯಲಿದ್ದಾರೆ.

More articles

Latest article