ಅಧ್ಯಾತ್ಮದ ಅಸ್ತಿತ್ವಕ್ಕೆ ಹೆಣ್ಣೇ ಗುರಿಯಾಗಬೇಕೇ ?

Most read

ಧಾರ್ಮಿಕ ನಾಯಕರ ದೃಷ್ಟಿಯಲ್ಲಿ ಲೋಕಕ್ಕೆ ಕಣ್ಣು ತೆರೆಯುವ ಮಕ್ಕಳು, ಆಯಾ ಮತವನ್ನು, ಸಾಂಸ್ಥಿಕ ಧರ್ಮವನ್ನು ಮತ್ತು ಇದನ್ನು ಬೆಳೆಸುವ ಸಲುವಾಗಿಯೇ ಸ್ಥಾಪಿಸಲಾಗುವ ಸ್ಥಾವರಗಳನ್ನು ಉಳಿಸಿ ಬೆಳೆಸುವ ಸರಕುಗಳಾಗಿ ಕಾಣತೊಡಗುತ್ತವೆ. ಹೆಣ್ಣು ಈ ಸರಕು ಉತ್ಪಾದಿಸುವ ಕಾರ್ಖಾನೆಯಾಗಿ ಬಿಡುತ್ತಾಳೆ. ಹವ್ಯಕ ಮಠಾಧೀಶರ ಕರೆ ಇಂತಹ ಒಂದು ಪ್ರಕ್ರಿಯೆಯಾಗಿ ಕಾಣುತ್ತದೆ – ನಾ ದಿವಾಕರ, ಚಿಂತಕರು.

ಭಾರತೀಯ ಸಂಸ್ಕೃತಿಯಲ್ಲಿ ಅಧ್ಯಾತ್ಮ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ತನ್ನದೇ ಆದ ಚಾರಿತ್ರಿಕ ಮಹತ್ವ ಇದೆ. ಹಿಂದೂ ಮತ ಮತ್ತು ಅದರ ಸುತ್ತಲಿನ ಆಚರಣೆಗಳಿಗೆ ಸಮಾನಾಂತರವಾಗಿ ಅಧ್ಯಾತ್ಮ ಸಮಾಜದ ಎಲ್ಲ ಸ್ತರಗಳಲ್ಲೂ ಪ್ರಭಾವ ಬೀರುತ್ತಲೇ, ಜನಸಾಮಾನ್ಯರ ಬದುಕಿಗೆ ಅವಶ್ಯವಾದ ಮಾರ್ಗದರ್ಶನವನ್ನು ನೀಡುವ ಒಂದು ಸುದೀರ್ಘ ಪರಂಪರೆಯನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಮತಾಚರಣೆ ಅಥವಾ ಧಾರ್ಮಿಕ ಕಟ್ಟಳೆಗಳು ವಿಧಿಸುವ ನಿರ್ಬಂಧ ಮತ್ತು ನಿಬಂಧನೆಗಳಿಂದ ಶ್ರೀಸಾಮಾನ್ಯರು ವಿಚಲಿತರಾದಾಗ ಅಧ್ಯಾತ್ಮ ಅಂಥವರಿಗೆ ಸಾಂತ್ವನದ ನೆಲೆ ನೀಡುತ್ತದೆ. ಸಮಕಾಲೀನ ಸಮಾಜದಲ್ಲಿ ಇದು ಭಿನ್ನವಾಗಿ ಕಾಣುವುದಾದರೂ, ಇಂದಿಗೂ ಸಹ ತಳಸಮಾಜವನ್ನು ಜಾತಿ-ಮತ-ಅಂತಸ್ತಿನ ಭೇದಗಳಿಲ್ಲದೆ ತನ್ನೆಡೆಗೆ ಸೆಳೆಯುವಂತಹ ಅಧ್ಯಾತ್ಮ ಕೇಂದ್ರಗಳನ್ನು ಅಲ್ಲಲ್ಲಿ ಗುರುತಿಸಬಹುದು.

ಈ ಪರಿಸರದಲ್ಲೇ ಅಧ್ಯಾತ್ಮ ಎನ್ನುವುದು ತನ್ನ ಪಾರಂಪರಿಕ ಸಾತ್ವಿಕತೆಯನ್ನು ಕಳೆದುಕೊಂಡು, ಸಾಂಸ್ಥೀಕರಣಕ್ಕೊಳಗಾಗುವ ಮೂಲಕ ಸ್ಥಾವರ ರೂಪದಲ್ಲಿ ತನ್ನ ಇರುವಿಕೆಯನ್ನು ಪ್ರಚುರಪಡಿಸುವ ವಿದ್ಯಮಾನವನ್ನೂ ಕಾಣುತ್ತಿದ್ದೇವೆ. ಜಾತಿ-ಉಪಜಾತಿಗೊಂದು ಮಠ ಇರುವಂತೆಯೇ ಅಧ್ಯಾತ್ಮ ಕೇಂದ್ರಗಳೂ ಸಹ ಅಸ್ತಿತ್ವದಲ್ಲಿವೆ. ಈ ಬೆಳವಣಿಗೆಯ ಪರಿಣಾಮವಾಗಿಯೇ ಜಾತಿ ಗೋಡೆಗಳನ್ನು ಭೇದಿಸಬಹುದಾದ ಆಧ್ಯಾತ್ಮಿಕ ನೆಲೆಗಳು ಜಾತಿ ಅಸ್ಮಿತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕುಚಿತ ಕೇಂದ್ರಗಳಾಗಿವೆ.ಸಮುದಾಯದ ಹಿತವಲಯದಿಂದ, ಉಳ್ಳವರಿಂದ ಪೋಷಿಸಲ್ಪಡುವ ಈ ಕೇಂದ್ರಗಳು ಸಹಜವಾಗಿಯೇ ಸಂಪದ್ಭರಿತವಾಗುತ್ತಿದ್ದು ಸಮುದಾಯದ ಒಳಿತಿಗಾಗಿ ಶ್ರಮಿಸುವ ಶಕ್ತಿ ಕೇಂದ್ರಗಳಾಗಿ ಪರಿಣಮಿಸಿವೆ. ಆದರೆ ಸಾಮುದಾಯಿಕ ನೆಲೆಯಲ್ಲಿ ತಳಸ್ತರದ ಸಬಲೀಕರಣ-ಏಳಿಗೆ ಸಾಧ್ಯವಾಗಿದೆಯೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಈ ಅಧ್ಯಾತ್ಮ ಕೇಂದ್ರಗಳನ್ನು ನಿರ್ದೇಶಿಸುವ ಸಾಂಪ್ರದಾಯಿಕ ಚಿಂತನೆಯ ನೆಲೆಗಳು ಇನ್ನು ಶತಮಾನಗಳೇ ಕಳೆದರೂ ವೈಚಾರಿಕತೆ-ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳುವುದಿಲ್ಲ ಎನ್ನುವುದು ವಾಸ್ತವ. ಸಾಮಾನ್ಯವಾಗಿ ವಿಶಾಲ ನೆಲೆಯಲ್ಲಿ ಹಿಂದೂ ಮತದ ಅಸ್ಮಿತೆಯ ಒಂದು ಭಾಗವಾಗಿಯೇ ನಿರ್ವಹಿಸಲ್ಪಡುವ ಈ ಮಠಗಳಿಗೆ, ಅದರೊಳಗಿನ ಶ್ರೇಷ್ಠತೆಯ ವ್ಯಸನ ಮತ್ತು ಮೇಲು-ಕೀಳುಗಳ ಮನಸ್ಥಿತಿಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವುದೂ ಅಸ್ತಿತ್ವದ ದೃಷ್ಟಿಯಿಂದ ಅವಶ್ಯವಾಗಿಬಿಡುತ್ತದೆ. ಹಾಗಾಗಿಯೇ ಆಯಾ ಸಮಾಜದ ಸದಸ್ಯರಲ್ಲಿರಬಹುದಾದ ಅಲ್ಪ ವೈಚಾರಿಕ ಪ್ರಜ್ಞೆಯನ್ನೂ ಸಾಂಸ್ಥೀಕರಣಗೊಂಡ ಆಧ್ಯಾತ್ಮಿಕ ಚಿಂತನೆಗಳಲ್ಲಿ ಕಾಣಲಾಗುವುದಿಲ್ಲ. ಇತ್ತೀಚೆಗೆ ನಡೆದ ವಿಶ್ವ ಹವ್ಯಕ ಸಮ್ಮೇಳನ ಸೃಷ್ಟಿಸಿರುವ ವಿವಾದ ಈ ದ್ವಂದ್ವವನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

ಹವ್ಯಕ ಸಮಾಜದ ನೆಲೆಯಲ್ಲಿ

“ಹವ್ಯಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಮುದಾಯದ ಯುವಕ-ಯುವತಿಯರಿಗೆ 18-21 ವರ್ಷಕ್ಕೆ ವಿವಾಹ ಮಾಡಿಸಬೇಕು. ಹವ್ಯಕ ಸಂತತಿ ವೃದ್ಧಿಗೆ ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು. ಮೂರಕ್ಕಿಂತ ಹೆಚ್ಚು ಮಕ್ಕಳಿದ್ದರೆ ನಮ್ಮ ಮಠಕ್ಕೆ ನೀಡಬಹುದು” ಎಂಬ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಅವರ ಕರೆ ಹವ್ಯಕ ಸಮುದಾಯದಲ್ಲೇ ಸಂಚಲನ ಮೂಡಿಸಿದ್ದು ಪರ-ವಿರೋಧ ಅಭಿಪ್ರಾಯಗಳನ್ನು ಹುಟ್ಟುಹಾಕಿದೆ. “ಜನಸಂಖ್ಯೆ ಕುಸಿತ ಹಾಗೂ ಸಂಸ್ಕೃತಿಯ ತೀವ್ರ ಹಿನ್ನಡೆ, ನೈತಿಕತೆ ಪತನದಂತಹ ಸಮಸ್ಯೆಗಳನ್ನು ಹವ್ಯಕ ಸಮುದಾಯವೂ ಎದುರಿಸುತ್ತಿದೆ, ಯುವಕ ಯುವತಿಯರು ಧರ್ಮಸಮ್ಮತವಲ್ಲದ ವಿಧಾನದಿಂದ ಶರೀರ-ಮನಸ್ಸಿನ ಅಪೇಕ್ಷೆ ಪೂರೈಸಿಕೊಳ್ಳುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ 18-21 ವರ್ಷಕ್ಕೆ ವಿವಾಹ ಮಾಡಿಸುವುದೇ ಸೂಕ್ತ” ಎಂಬ ಹೇಳಿಕೆ ಅಚ್ಚರಿಯನ್ನೂ ಮೂಡಿಸಿದೆ.

ಸಾಂಪ್ರದಾಯಿಕವಾಗಿ ಶಿಕ್ಷಣ ಮತ್ತು ಸಂಪನ್ಮೂಲಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಹವ್ಯಕ ಸಮುದಾಯ ಆಧುನಿಕ ಪರಿಸರದಲ್ಲಿ ಉತ್ತಮ ಸಾಮಾಜಿಕ-ಆರ್ಥಿಕ ಪ್ರಗತಿ ಸಾಧಿಸಿದೆ. ಇಂದು ಬಹುಪಾಲು ಹವ್ಯಕ ಕುಟುಂಬಗಳು ಉತ್ತಮ ಸ್ಥಿತಿಯಲ್ಲಿವೆ, ಯುವ ತಲೆಮಾರು ಉದ್ಯಮಶೀಲತೆ ಮತ್ತು ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದೆ. ಈ ದೃಷ್ಟಿಯಿಂದ ನೋಡಿದಾಗ ಮಕ್ಕಳನ್ನು ಬೆಳೆಸಲು ಸಮುದಾಯದಲ್ಲಿ ಸಂಪನ್ಮೂಲ ಕೊರತೆ ಇದೆ ಎನ್ನಲಾಗುವುದಿಲ್ಲ. “ ಹವ್ಯಕ ಸಂತತಿ ವೃದ್ಧಿಗೆ ಹೆಚ್ಚಿನ ಮಕ್ಕಳನ್ನು ಪಡೆದು ಮೂರಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಮಠಕ್ಕೆ ಒಪ್ಪಿಸಬೇಕು ” ಎಂಬ ಹೇಳಿಕೆಯ ಹಿಂದೆ ಸಮುದಾಯಕ್ಕಿಂತಲೂ ಹೆಚ್ಚಾಗಿ ಅಧ್ಯಾತ್ಮ ಕೇಂದ್ರದ ಅಸ್ತಿತ್ವವೇ ಪ್ರಮುಖ ಕಾಳಜಿಯಾಗಿ ಕಾಣುತ್ತದೆ. ಕಾವಿಧಾರಿಗಳಿಂದ ವೈಚಾರಿಕತೆಯನ್ನು ನಿರೀಕ್ಷಿಸಲಾಗುವುದಿಲ್ಲವಾದರೂ, ಇಂತಹ ಕರೆಗಳು ಯುವ ತಲೆಮಾರಿನ ದಿಕ್ಕು ತಪ್ಪಿಸುವ ಅಪಾಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಮಾನವ ಸಮಾಜದಲ್ಲಿ ಮಕ್ಕಳನ್ನು ಹೆರುವುದು ಎಂದರೆ ಅದು ನೈಸರ್ಗಿಕವಾಗಿ ಮಹಿಳೆಯ ಹೆಗಲಿಗೇರಿದ ಒಂದು ಜವಾಬ್ದಾರಿ. ಹೆಣ್ಣು ಹೆತ್ತಾಗ ದೂಷಣೆಗೊಳಗಾಗುವ ತಾಯಂದಿರು ನಮ್ಮ ನಡುವೆ ಇಂದಿಗೂ ಸಹ ಪ್ರಸವ ವೇದನೆಗಿಂತಲೂ ಹೆಚ್ಚು ನೋವುಂಟು ಮಾಡುವ ಗಂಡಾಳ್ವಿಕೆಯ ದರ್ಪ ಮತ್ತು ದಬ್ಬಾಳಿಕೆಯನ್ನು ಎದುರಿಸುತ್ತಿದ್ದಾರೆ. ಅಧಿಕ ಮಕ್ಕಳನ್ನು ಮಠಕ್ಕೆ ಒಪ್ಪಿಸಿ ಎಂದರೇನು ಅರ್ಥ? ಅಲ್ಲಿ ಒಂದು ಇಡೀ ತಲೆಮಾರನ್ನು ಧರ್ಮ-ಅಧ್ಯಾತ್ಮ-ಸಂಪ್ರದಾಯಗಳ ಚೌಕಟ್ಟಿನೊಳಗೆ ಸಿಲುಕಿಸಿ, ಲೋಕಜ್ಞಾನವಿಲ್ಲದ, ಲೌಕಿಕ ಪರಿವೆ ಇಲ್ಲದ ಕೂಪಮಂಡೂಕ ಸಂತತಿಯನ್ನು ಪೋಷಿಸುವುದೇ ? ಈಗಾಗಲೇ ಎಲ್ಲ ಮತಗಳ ಧಾರ್ಮಿಕ ಸಂಸ್ಥೆಗಳು ಈ ರೀತಿ ಕೋಶೀಕರಣಕ್ಕೊಳಗಾದ (Celluralised) ಯುವ ಸಂಕುಲವೊಂದನ್ನು ತಯಾರಿಸಿಟ್ಟಿವೆ. ಈ ಮಕ್ಕಳು ಆಧುನಿಕ ಜಗತ್ತಿನಲ್ಲಿ ಪ್ರಾಚೀನತೆ ಮತ್ತು ಸಾಂಪ್ರದಾಯಿಕತೆಯನ್ನು ಬೆಳೆಸುವ ದೊಡ್ಡ ಸೈನ್ಯವಾಗಿ ರೂಪುಗೊಳ್ಳುತ್ತವೆ.

ಕುಟುಂಬ ಮತ್ತು ಸಮಾಜದ ಆದ್ಯತೆಗಳು

ಇಷ್ಟಕ್ಕೂ ಕೌಟುಂಬಿಕ ಚೌಕಟ್ಟಿನೊಳಗೆ ದಂಪತಿಗಳ ನಡುವೆ ನಿಷ್ಕರ್ಷೆಯಾಗಬೇಕಾದ ಮಕ್ಕಳ ಸಂಖ್ಯೆಯನ್ನು ಅಧ್ಯಾತ್ಮ ಮಠವೊಂದು ನಿರ್ಧರಿಸುವ ಔಚಿತ್ಯವಾದರೂ ಏನು ? ಹವ್ಯಕ ಗಂಡುಗಳಿಗೆ ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಸಮುದಾಯದ ಪ್ರಜ್ಞಾವಂತರಲ್ಲಿದೆ. ಇದಕ್ಕೆ ಹಲವು ಆಯಾಮಗಳ ಸಾಮಾಜಿಕ-ಆರ್ಥಿಕ ಕಾರಣಗಳಿರುತ್ತವೆ. ಹೆಣ್ಣು ಮಗು ಎಂದರೆ ಹೊರೆ ಎನ್ನುವ ಮನಸ್ಥಿತಿ ವಿದ್ಯಾವಂತ ಸಮಾಜದಲ್ಲೂ ಇರುವ ಆಧುನಿಕ ಭಾರತದಲ್ಲಿ ಇದನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಈ ದೃಷ್ಟಿಯಿಂದ ಏನಾದರೂ ಗಂಗಾಧರೇಂದ್ರ ಸರಸ್ವತಿ ಅವರು ಹೀಗೆ ಹೇಳಿದ್ದರೆ, ಈ ಹೆರುವ ಜವಾಬ್ದಾರಿ ಹೊರುವವರಾದರೂ ಯಾರು ? ಮತ್ತದೇ ಹೆಣ್ಣು ಅಲ್ಲವೇ ?

ಹವ್ಯಕ ಮಠಾಧೀಶರಿಗೆ ತಮ್ಮ ಸಮುದಾಯದ ಅಸ್ತಿತ್ವಕ್ಕಿಂತಲೂ, ಸಾಂಸ್ಥೀಕರಣಗೊಂಡ ಅಧ್ಯಾತ್ಮ ಸ್ಥಾವರದ ಅಸ್ತಿತ್ವವೇ ಪ್ರಧಾನವಾಗಿ ಕಾಣುವಂತಿದೆ. ಹಾಗಾಗಿ ಸಂಸ್ಥೆಯ ಉಳಿವಿಗಾಗಿ ಹೆಚ್ಚಿನ ಸದಸ್ಯರಷ್ಟೇ ಅಲ್ಲದೆ ಕಾರ್ಯಪಡೆಗಳ ಅವಶ್ಯಕತೆಯೂ ಇದ್ದೇ ಇರುತ್ತದೆ. ಆದರೆ ಈ ಸದಸ್ಯರನ್ನು ಪೂರೈಸುವ  ಹೊಣೆಯನ್ನು ಸಮಾಜದ ಮೇಲೆ ಹೊರಿಸಿಬಿಟ್ಟರೆ, ಆಧುನಿಕತೆಯತ್ತ ನಡೆಯುತ್ತಿರುವ, ವೈಚಾರಿಕ ಪ್ರಜ್ಞೆಯೊಂದಿಗೆ ನವ ನಾಗರಿಕತೆಯನ್ನು ರೂಢಿಸಿಕೊಳ್ಳುತ್ತಿರುವ, ಔದ್ಯಮಿಕ-ಔದ್ಯೋಗಿಕ-ಶೈಕ್ಷಣಿಕ ಪ್ರಪಂಚದಲ್ಲಿ ಮುಂದುವರೆಯಲು ಯೋಚಿಸುತ್ತಿರುವ ಸಮಾಜವೊಂದು ದಿಕ್ಕು ತಪ್ಪಿದಂತಾಗುತ್ತದೆ. ಬೌದ್ಧಿಕವಾಗಿ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಮಾಜವೊಂದು ಹೆಚ್ಚುವರಿ ಸದಸ್ಯರನ್ನು ʼ ಉತ್ಪಾದಿಸಿ ʼ ಅಧ್ಯಾತ್ಮ ಮತ್ತು ಧರ್ಮ ಕೇಂದ್ರಗಳಿಗೆ ಒಪ್ಪಿಸಬೇಕು ಎಂದು ಆಶಿಸುವುದು ಡಿಜಿಟಲ್‌ ಯುಗದಲ್ಲಿ ವಿವೇಕಯುತ ಚಿಂತನೆ ಎನಿಸಿಕೊಳ್ಳಲಾರದು.

ಇಷ್ಟಕ್ಕೂ ಮೂರಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೆತ್ತು ಅಧಿಕವಾದುದನ್ನು ಮಠಕ್ಕೆ ಒಪ್ಪಿಸಲು ಹವ್ಯಕ ಹೆಣ್ಣು ಮಕ್ಕಳೇನು ಮಕ್ಕಳನ್ನು ಹೆರುವ ಕಾರ್ಖಾನೆಗಳೇ ? ಇಲ್ಲಿ ಹೆಣ್ಣಿಗೆ ತನ್ನದೇ ಆದ ಆಯ್ಕೆ ಸ್ವಾತಂತ್ರ್ಯ ಬೇಡವೇ ? ಯಾವುದೇ ಸಮಾಜದಲ್ಲಾದರೂ  ಒಂದು ಕುಟುಂಬ ತನ್ನ ಗಾತ್ರವನ್ನು ನಿರ್ಧರಿಸುವುದು ಕೌಟುಂಬಿಕ ಆದಾಯ, ಸಾಮಾಜಿಕ ಅಂತಸ್ತು ಮತ್ತು ಔದ್ಯೋಗಿಕ ಅವಕಾಶಗಳನ್ನು ಅಧರಿಸಿ ಅಲ್ಲವೇ ? ಭಾರತದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಈ ನಿರ್ಧಾರಗಳೂ ಬಹುತೇಕ ಸಂದರ್ಭಗಳಲ್ಲಿ ಪುರುಷರ ಮರ್ಜಿಯೇ ಆಗಿರುತ್ತದೆ. ಹಾಗಾಗಿಯೇ ಹೊರೆ ಎಂದು ಕಾಣುವ ಹೆಣ್ಣನ್ನು ಭ್ರೂಣಾವಸ್ಥೆಯಲ್ಲೇ ಕಿವುಚಿ ಹಾಕುವ ಒಂದು ಕ್ರೌರ್ಯವನ್ನು ದೇಶ ಕಾಣುತ್ತಿದೆ. ಹವ್ಯಕ ಮಠಾಧೀಶರ ಈ ಆಜ್ಞಾಪನೆಯನ್ನು ಸಮುದಾಯದ ಸದಸ್ಯರು ಪಾಲಿಸಿದ್ದೇ ಆದಲ್ಲಿ, ಅಲ್ಲಿ ಪುನಃ ಇದೇ ಪುರುಷಾಧಿಪತ್ಯದ ವಿಕೃತಿಗಳು ಮೆರೆದಾಡಿಬಿಡುತ್ತವೆ.

21ನೇ ಶತಮಾನದ ಡಿಜಿಟಲ್‌ ಯುಗದಲ್ಲೂ ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಹೆರುವ ಆಯ್ಕೆ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಪಡೆದುಕೊಂಡಿಲ್ಲ ಎಂಬ ಸೂಕ್ಷ್ಮ ಅಂಶವನ್ನು ಗಮನಿಸಬೇಕಿದೆ. ಆದರೂ ಆಧುನಿಕ ಶಿಕ್ಷಣ ಪಡೆದ ಹೆಣ್ಣುಮಕ್ಕಳು ಸ್ವತಂತ್ರವಾಗಿ ಬದುಕಲು ಸ್ವಯಂನಿರ್ಧಾರಗಳನ್ನು ಕೈಗೊಂಡು, ಅನೇಕ ಸಂದರ್ಭಗಳಲ್ಲಿ ಜಾತಿ ಧರ್ಮಗಳ ಕಟ್ಟಳೆಗಳನ್ನೂ ಮೀರಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಹವ್ಯಕ ಸಮಾಜವೂ ಹೊರತಾದುದಲ್ಲ. ಹೀಗಿರುವಾಗ ಹೆಣ್ಣು ಮಕ್ಕಳ ಈ ಆಯ್ಕೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ರಕ್ಷಿಸುವುದು ಪ್ರಜ್ಞಾವಂತ ಸಮಾಜದ ಆದ್ಯತೆಯಾಗಬೇಕು. ತಾನು ಪ್ರತಿನಿಧಿಸುವ ಸಮಾಜವನ್ನು ಉನ್ನತಿಯ ಹಾದಿಯಲ್ಲಿ ಕರೆದೊಯ್ಯುವುದು ಯಾವುದೇ ಅಧ್ಯಾತ್ಮ ಕೇಂದ್ರಗಳ ಆದ್ಯತೆಯೂ, ನೈತಿಕ ಕರ್ತವ್ಯವೂ ಆಗಬೇಕು ಎನ್ನುವುದನ್ನು ಹವ್ಯಕ ಮಠಾಧೀಶರು ಗಮನಿಸಬೇಕಲ್ಲವೇ ? ಹವ್ಯಕ ಸಮಾಜದೊಳಗೇ ಮಠಾಧೀಶರ ಹೇಳಿಕೆಯ ಬಗ್ಗೆ ವಿರೋಧ ವ್ಯಕ್ತವಾಗಿರುವುದು ಈ ನಿಟ್ಟಿನಲ್ಲಿ ಸ್ವಾಗತಾರ್ಹ ಎನ್ನಬಹುದು.

ಪ್ರಾಚೀನ ಸಾಂಪ್ರದಾಯಿಕತೆ

ಆದರೆ ಇದು ಮೂಲ ಚಿಂತನಾಧಾರೆಯನ್ನು ಭಂಗಗೊಳಿಸಲು ಸಾಧ್ಯವೇ ? ಇದು ಎಲ್ಲ ಮತಗಳ, ಜಾತಿ ಉಪಜಾತಿಗಳ ಹಾಗೂ ಧಾರ್ಮಿಕ ಸಮಾಜದ ನಡುವೆ ಉದ್ಭವಿಸುವ ಜಟಿಲ ಪ್ರಶ್ನೆ. ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಹೆಚ್ಚು ಮಕ್ಕಳನ್ನು ಹೆರುವ ಸಲಹೆಗಳು ಇತ್ತೀಚೆಗೆ ಹಲವು ನಾಯಕರಿಂದ ಕೇಳಿಬರುತ್ತಿವೆ. ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಒಮ್ಮೆ ಇದೇ ರೀತಿಯ ಹೇಳಿಕೆ ನೀಡಿದ್ದರು. ಇಸ್ಲಾಂ ಮೂಲಭೂತವಾದಿಗಳು ಇಂತಹ ಕರೆ ನೀಡುತ್ತಲೇ ಇರುತ್ತಾರೆ. ಅಂದರೆ ಈ ಧಾರ್ಮಿಕ ನಾಯಕರ ದೃಷ್ಟಿಯಲ್ಲಿ ಲೋಕಕ್ಕೆ ಕಣ್ಣು ತೆರೆಯುವ ಮಕ್ಕಳು, ಆಯಾ ಮತವನ್ನು, ಸಾಂಸ್ಥಿಕ ಧರ್ಮವನ್ನು ಮತ್ತು ಇದನ್ನು ಬೆಳೆಸುವ ಸಲುವಾಗಿಯೇ ಸ್ಥಾಪಿಸಲಾಗುವ ಸ್ಥಾವರಗಳನ್ನು ಉಳಿಸಿ ಬೆಳೆಸುವ ಸರಕುಗಳಾಗಿ ಕಾಣತೊಡಗುತ್ತವೆ. ಹೆಣ್ಣು ಈ ಸರಕು ಉತ್ಪಾದಿಸುವ ಕಾರ್ಖಾನೆಯಾಗಿ ಬಿಡುತ್ತಾಳೆ. ಹವ್ಯಕ ಮಠಾಧೀಶರ ಕರೆ ಇಂತಹ ಒಂದು ಪ್ರಕ್ರಿಯೆಯಾಗಿ ಕಾಣುತ್ತದೆ.

ಧರ್ಮ ಮತ್ತು ಸಂಸ್ಕೃತಿ ರಕ್ಷಣೆಯ ನೊಗವನ್ನು ಈಗಾಗಲೇ ಹೆಣ್ಣಿನ ಮೇಲೆ ಹೊರಿಸಿರುವ ಸಂಪ್ರದಾಯವಾದಿಗಳು, ಅದರ ಸಾಂಸ್ಥಿಕ ನೆಲೆಗಳನ್ನು ಪೋಷಿಸಿ ಸಂರಕ್ಷಿಸುವ ಜವಾಬ್ದಾರಿಯನ್ನೂ ಮತ್ತೊಮ್ಮೆ ಹೆಣ್ಣು ಜೀವದ ಮೇಲೆ ಹೊರಿಸುವ ಚಿಂತನೆಯೇ ಪ್ರಾಚೀನ ಮನಸ್ಥಿತಿಯ ದ್ಯೋತಕ. ಇಲ್ಲಿ ಮತ್ತೊಮ್ಮೆ ಪುರುಷನ ದೃಷ್ಟಿಯಲ್ಲಿ ಭೋಗದ ವಸ್ತುವಾಗುವ ಹೆಣ್ಣು ಸಮುದಾಯದ ದೃಷ್ಟಿಯಲ್ಲಿ ಮರು-ಉತ್ಪಾದನೆಯ ಕೇಂದ್ರವಾಗಿ ಬಿಡುತ್ತಾಳೆ. ಇದು ಕೇವಲ ಅಂಕಿ ಸಂಖ್ಯೆಗಳ ಪ್ರಶ್ನೆಯಲ್ಲ. ಇಲ್ಲೊಂದು ಮನುಜ ಸೂಕ್ಷ್ಮತೆಯೂ ಇರುವುದನ್ನು ಅಧ್ಯಾತ್ಮ ಕೇಂದ್ರಗಳು ಗುರುತಿಸಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ ಹವ್ಯಕ ಸಮಾಜದ ಗಂಗಾಧರೇಂದ್ರ  ಸರಸ್ವತಿ ಅವರ ಹೇಳಿಕೆ ಅನಪೇಕ್ಷಣೀಯವಾದುದು.

ನಾ ದಿವಾಕರ

ಚಿಂತಕರು

ಇದನ್ನೂ ಓದಿ- ಕೋರೆಗಾಂವ್ ಕದನವೆಂಬ ನೊಂದವರು ನಡೆಸಿದ ಶ್ರೇಷ್ಠ ಯುದ್ಧ

More articles

Latest article