ಎಲ್ಲಾ ರಾಜಕೀಯ ಲಾಭಗಳನ್ನು ಬದಿಗಿಟ್ಟು ಪ್ರಜ್ವಲ್ ಪ್ರಕರಣದ ವಿಚಾರಣೆ ಸರಿಯಾದ ಮಾರ್ಗದಲ್ಲಿ ನಡೆದು, ಮುಂಬರುವ ದಿನಗಳಲ್ಲಿ ಪ್ರಪಂಚದ ಯಾವ ಮೂಲೆಯಲ್ಲಿಯೂ ಹೆಣ್ಣಿನ ಮೇಲೆ ಇಂತಹ ದೌರ್ಜನ್ಯ ನಡೆಯದಂತಾಗಬೇಕು. ಇಂತಹ ದಿಟ್ಟ ನಿರ್ಧಾರಗಳಿಗೆ ಕರ್ನಾಟಕ ಪ್ರಜ್ವಲಿಸಬೇಕು. ಆದರೆ ಈ ನಿಟ್ಟಿನಲ್ಲಿ ಸಾಗುವ ನೈತಿಕ ಧೈರ್ಯ ರಾಜ್ಯ ಮತ್ತು ಕೇಂದ್ರದಲ್ಲಿರುವ ಆಡಳಿತಾರೂಢ ಪಕ್ಷಗಳಿಗಿವೆಯೇ? – ಸೌಮ್ಯ ಡಿ, ಪ್ರಾಧ್ಯಾಪಕಿ
ಈ ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಅರ್ಹತೆಗಳೇನಾಗಿರಬೇಕು ಎಂಬುದನ್ನು ಶಾಲಾ ದಿನಗಳಲ್ಲಿ ಓದುವಾಗ, ಸಾಮಾನ್ಯವಾಗಿ ಇರುತ್ತಿದ್ದ ಒಂದು ಸಂಗತಿಯೆಂದರೆ, ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿರಬಾರದು ಎಂಬ ಒಂದು ಅಂಶ. ಆಗೆಲ್ಲಾ ನನಗನ್ನಿಸುತ್ತಿತ್ತು – ಹುಚ್ಚನಾದವನು ಹೇಗೆ ಸ್ಪರ್ಧಿಸಲು ಸಾಧ್ಯ? ಅಂತಹವರಿಗೆ ಟಿಕೆಟ್ ಯಾರು ಕೊಡುತ್ತಾರೆ? ಈಗ ಅನ್ನಿಸುತ್ತಿದೆ – ಮಾನಸಿಕ ಅಸ್ವಸ್ಥತೆಯನ್ನು ಅಳೆಯುವ ಮಾನದಂಡ ಯಾವುದು? ಹುಚ್ಚರು ಎಂದಿಗೂ ತಾನು ಹುಚ್ಚ ಎಂದು ಹೇಳಿಕೊಳ್ಳುವುದಿಲ್ಲ. ಅವರ ಅಸಹಜ ನಡೆನುಡಿ ಹಾವಭಾವಗಳನ್ನು ಅವರ ಸಂಪರ್ಕದಲ್ಲಿರುವವರು ಗುರುತಿಸಬೇಕಷ್ಟೇ.
ಯಾವುದೇ ಹೆಣ್ಣು ಅಥವಾ ಗಂಡನ್ನು ಆಕೆಯ/ಆತನ ಇಚ್ಛೆಯ ವಿರುದ್ಧವಾಗಿಯೂ ತನ್ನ ಕಾಮತೃಷೆಗೆ ಬಳಸಿಕೊಳ್ಳುವುದು ಕೇವಲ ವಿಕೃತ ಮನಃಸ್ಥಿತಿ ಮಾತ್ರವಲ್ಲ, ಅದು ಆತನ/ಆಕೆಯ ಗಂಭೀರ ಸ್ವರೂಪದ ಮಾನಸಿಕ ಅಸ್ವಸ್ಥತೆಯ ಸೂಚನೆ. ದುರಂತವೆಂದರೆ ಗಂಡಿನ ಮೇಲೆ ಹೆಣ್ಣು ಹೀಗೆ ಒತ್ತಡ ಹಾಕುವ ಸಂದರ್ಭಗಳು ತೀರಾ ಬೆರಳೆಣಿಕೆ ಇರಬಹುದೇನೋ. ಆದರೆ ಹೆಣ್ಣಿನ ಮೇಲೆ ಗಂಡಿನ ಇಂತಹ ದಬ್ಬಾಳಿಕೆಗಳು ತೀರಾ ಸಾಮಾನ್ಯವೆನ್ನುವಷ್ಟು ಇಲ್ಲಿ ಸಹಜವಾಗಿ ರೂಢಿಯಲ್ಲಿವೆ.
ಈಗ ನೇರ ವಿಷಯಕ್ಕೆ ಬರೋಣ. ಒಂದಲ್ಲ ಹತ್ತಲ್ಲ ನೂರಾರು ಸಾವಿರಾರು ಹೆಣ್ಣುಗಳನ್ನು ವಯಸ್ಸಿನ ಭೇದವೂ ಇಲ್ಲದೇ ತನ್ನ ಕಾಮಕಾಂಡಕ್ಕೆ ಬಲಿಕೊಟ್ಟ ಸಂಸದ ಪ್ರಜ್ವಲ್ ರೇವಣ್ಣ ಈ ಹಿನ್ನೆಲೆಯಲ್ಲಿ ಮಾನಸಿಕ ಅಸ್ವಸ್ಥನಲ್ಲದೆ ಮತ್ತೇನು? ಮನಃಶಾಸ್ತ್ರದ ಕೇಸ್ ಸ್ಟಡಿಗೆ ಈತ ಅತ್ಯುತ್ತಮ ವಸ್ತು ಎಂಬುದರಲ್ಲಿ ಸಂಶಯವೇ ಇಲ್ಲ.
ಇಂತಹ ಮಾನಸಿಕ ಅಸ್ವಸ್ಥ ಜನಪ್ರತಿನಿಧಿಯೊಬ್ಬನ ಕಾರಣಕ್ಕೆ ಕರ್ನಾಟಕ ಕಳೆದ ಹಲವು ದಿನಗಳಿಂದ ಪ್ರಜ್ವಲಿಸುತ್ತಿದೆ. ಕರ್ನಾಟಕ ಹೀಗೆ ಪ್ರಜ್ವಲಿಸಬಾರದಿತ್ತು. ಈ ನೆಲದ ಅಸ್ಮಿತೆಯ ಭಾಗವಾಗಬೇಕಿದ್ದ ಪ್ರಾದೇಶಿಕ ಪಕ್ಷವೊಂದರಿಂದ ಆರಿಸಿಹೋದ ಜನಪ್ರತಿನಿಧಿಯೊಬ್ಬನ ಕಾಮಕಾಂಡ ಇದೀಗ ಪ್ರಪಂಚದ ಮೂಲೆ ಮೂಲೆಯಲ್ಲಿ ಮಾತಾಗಿದೆ. ಬಹುಶಃ ಇಂತದ್ದೊಂದು ಘಟನೆ ಜಗತ್ತಿನಲ್ಲಿ ಇಲ್ಲಿಯವರೆಗೂ ಘಟಿಸಿರಲಿಕ್ಕಿಲ್ಲವೇನೋ.
ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಹಾಸನದ ಹುಡುಗಿಯ ಓ…..’ ಅನ್ನೋ ಸಂದೇಶಗಳು ಹರಿದಾಡುತ್ತಿವೆ. ಪ್ರಜ್ವಲನ ಈ ಪ್ರತಾಪಕ್ಕೆ ಇನ್ನೂ ಅದೆಷ್ಟು ಹೆಣ್ಣುಗಳ ಬದುಕು ಮೂರಾಬಟ್ಟೆಯಾಗಲಿದೆಯೋ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತ ಹೆಣ್ಣುಗಳಿಗೆ ಧೈರ್ಯ ನೀಡಿ ಸೂಕ್ತ ತನಿಖೆಯನ್ನು ನಡೆಸಬೇಕಾದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೋರುತ್ತಿರುವ ದಿವ್ಯ ಉಪೇಕ್ಷೆ ನಾಡಿನ ಹೆಣ್ಣುಮಕ್ಕಳಲ್ಲಿ ಇನ್ನಷ್ಟು ಆತಂಕವನ್ನು ಉಂಟುಮಾಡುತ್ತಿವೆ.
ಆ ಹೆಣ್ಣುಮಕ್ಕಳು ಅದ್ಯಾವ ಒತ್ತಡಕ್ಕೆ ಸಿಲುಕಿ ಈತನ ಕೈಗೊಂಬೆಯಾದರೋ ಗೊತ್ತಿಲ್ಲ. ಅವನೊಂದಿಗಿನ ಶೋಕಿಗೆ ಹೆಣ್ಣುಮಕ್ಕಳು ದಾರಿ ತಪ್ಪಿದರು ಎನ್ನುವುದು ಹಲವರ ಅಭಿಪ್ರಾಯ. ಇಷ್ಟು ಹಗುರವಾದ ಅಭಿಪ್ರಾಯಗಳು ಈ ಪ್ರಕರಣದಲ್ಲಿ ಸಲ್ಲದು. ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುವ ಮಾತುಗಳಿವು.
ತಾನು ಪುರುಷ ಎಂಬ ಕಾರಣಕ್ಕೆ ಸ್ವತಃ ದಕ್ಕಿಸಿಕೊಂಡಿರುವ ಅಧಿಕಾರದ ಮದಕ್ಕೆ ಸಿಕ್ಕಿ ನಲುಗುವ ಹೆಣ್ಣುಗಳ ಸಂಖ್ಯೆಗೆ ಮಿತಿಯಿಲ್ಲ. ಇದರ ಜೊತೆಗೆ ಅಪರಿಮಿತವಾದ ರಾಜಕೀಯ ಅಧಿಕಾರವೂ ಆತನ ಪಾಲಾದರೆ ಏನೆಲ್ಲಾ ಸಂಭವಿಸಬಹುದು ಎಂಬುದಕ್ಕೆ ಪ್ರಜ್ವಲ್ ಪ್ರಕರಣ ಹೊಸ ನಿದರ್ಶನ.
‘ದಿ ಪ್ರಿಂಟ್’ ಪತ್ರಿಕೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟವಾದ ವರದಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧಿಕಾರಿ ಒಬ್ಬರು ಹೇಳಿರುವ ಪ್ರಕಾರ – ನೂರಾರು ಕೋಟಿ ರೂಪಾಯಿ ವ್ಯವಹಾರ ಮಾಡುವ ಗುತ್ತಿಗೆದಾರರು ತಮ್ಮ ಹೆಂಡತಿಯನ್ನು ತಮ್ಮ ಲಾಭದ ಸರಕನ್ನಾಗಿಸುತ್ತಿದ್ದರು ಎಂದರೆ ಹೆಣ್ಣಿಗೆ ಸುರಕ್ಷಿತ ತಾಣವಾದರೂ ಎಲ್ಲಿದೆ? ಇದು ಕೇವಲ ಹೆಣ್ಣೊಬ್ಬಳ ಅಸಹಾಯಕತೆ ಮಾತ್ರವಾಗಿ ಕಾಣುತ್ತಿಲ್ಲ. ಅಧಿಕಾರದಾಹಿಗಳಿಗೆದುರು, ಅದರಲ್ಲೂ ಹಾಸನದಂತೆ ಭಾರತದ ಹಲವು ಭಾಗಗಳಲ್ಲಿ ಅಘೋಷಿತವಾಗಿ ಜಾರಿಯಲ್ಲಿರುವ ಸರ್ವಾಧಿಕಾರದ ಎದುರು ಸಾಮಾನ್ಯರು ಮಂಡಿಯೂರಿ ನಿಲ್ಲಬೇಕಾದ ಅಸಹಾಯಕತೆಗೆ ಇದೊಂದು ನಿದರ್ಶನವಾಗಿದೆ.
ಈಗ ಪ್ರಕರಣ ಬೆಳಕಿಗೆ ಬಂದುದರ ಹಿಂದಿರುವ ಉದ್ದೇಶವಾದರೂ ಮಹಿಳಾ ಪರವಾದ ಕಾಳಜಿ ಖಂಡಿತ ಅಲ್ಲ. ಮಹಿಳೆಯರ ಮಾನವೂ ಭವ್ಯ ಸಂಸ್ಕೃತಿಯ ಈ ನೆಲದಲ್ಲಿ ರಾಜಕೀಯ ಅಸ್ತ್ರವಾಗಿರುವುದು ಇದೇ ಮೊದಲಲ್ಲ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣನ ಕಾಮಕಾಂಡದ ವಿಡಿಯೋ ಹರಿಬಿಟ್ಟವರೂ ಅತ್ಯಾಚಾರಿಗಿಂತ ಹೊರತೇನಲ್ಲ. ಅಂತೆಯೇ ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ವಿಡಿಯೋ ಇದ್ದರೆ ಕಳಿಸಿ’ ಎಂದು ಗೋಗರೆದವರನ್ನು ನೆನೆಸಿಕೊಂಡರೆ ಅವರೂ ಪ್ರಜ್ವಲ್ ಗಿಂತ ಹೊರತೇನಲ್ಲ. ಕಂಡವರ ಮನೆ ಹೆಣ್ಣುಗಳನ್ನು ಪಾತಾಳಕ್ಕೆ ತಳ್ಳಿ ಆಳ ನೋಡುವ ಹುನ್ನಾರವೇ ರಾಮರಾಜ್ಯ ಸ್ಥಾಪನೆಗೆ ನಿಂತವರು, ಅವರಿಗೆ ಕೈಜೋಡಿಸಿದವರು ಎಲ್ಲರ ಉದ್ದೇಶ ಎಂಬುದು ಇದರಿಂದ ಇನ್ನಷ್ಟು ಸ್ಪಷ್ಟವಾಗುತ್ತಿದೆ.
ಇಂತಹ ಗಂಭೀರ ಪ್ರಕರಣ ಸಾಗುತ್ತಿರುವ ದಾರಿಯನ್ನು ಗಮನಿಸಿದರೆ ನಿಜಕ್ಕೂ ಆತಂಕವಾಗುತ್ತದೆ. ಪ್ರಪಂಚದ ಯಾವ ಮೂಲೆಯಲ್ಲಿ ಯಾವೊಬ್ಬ ಹೆಣ್ಣು ದೌರ್ಜನ್ಯಕ್ಕೆ ಗುರಿಯಾದರು ಅದು ಮಹಾಘೋರ. ಅದಕ್ಕೆ ಸಲ್ಲಬೇಕಾದ ಶಿಕ್ಷೆಯಾದರೂ ಘೋರ ಸ್ವರೂಪದಲ್ಲಿ ಇರಬೇಕಿತ್ತು. ಆದರೆ ವಾಸ್ತವ ಹಾಗಿದೆಯೇ? ನೂರಾರು ಸಾವಿರಾರು ಹೆಣ್ಣುಗಳ ಮಾನ ಗೌರವಗಳನ್ನು ತನ್ನ ವಿಕೃತಿಗೆ ಬಳಸಿಕೊಂಡು ಮುಲಾಜಿಲ್ಲದೆ ಹರಾಜು ಹಾಕಿದವ, ಹೊರದೇಶದಲ್ಲಿ ‘ ತಲೆಮರೆಸಿಕೊಂಡಿದ್ದಾನೆ’ ಎಂದರೆ ಇದು ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ ಅಲ್ಲವೇ? ಈ ನೆಲದ ಹೆಣ್ಣು, ಹೊನ್ನು, ಮಣ್ಣುಗಳನ್ನು ಕೊಳ್ಳೆಹೊಡೆದೂ ರಾಜಾರೋಷವಾಗಿ ಬದುಕಬಹುದು ಎಂಬುವವರ ಪಟ್ಟಿ ಬೆಳೆಯುತ್ತಲೇ ಇದೆ.
ಈ ಪ್ರಕರಣದ ನಂತರ ‘ವಿಡಿಯೋ’, ‘ಪೆನ್ ಡ್ರೈವ್’ ಪದಗಳೇ ಅಸಹ್ಯ ಹುಟ್ಟಿಸುತ್ತಿವೆ. ಎಲ್ಲಿ ಯಾವ ಕ್ಷಣದಲ್ಲಿ ಯಾರ ಕೈಗೆ ಅವು ಸಿಕ್ಕಿ ಯಾವ ಕುಟುಂಬದ ಶಾಂತಿ ನೆಮ್ಮದಿಗಳನ್ನು ನಾಶಪಡಿಸುತ್ತವೆಯೋ ಗೊತ್ತಿಲ್ಲ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಹೆಣ್ಣಿನ ಪಾವಿತ್ರ್ಯತೆ ಕುರಿತ ಪ್ರಶ್ನೆಗಳಿಗೆ ಮತ್ತೆ ಮತ್ತೆ ಎದುರಾಗ ಬೇಕಾಗುತ್ತದೆ. ಲೈಂಗಿಕತೆ ಒಂದೇ ಹೆಣ್ಣಿನ ಪಾವಿತ್ರ್ಯತೆಗೆ ಮಾನದಂಡವೇ ಎಂಬುದು ಮರುಚಿಂತನೆಗೆ ಒಳಗಾಗಬೇಕಾದ ಅಂಶ. ಈ ಪ್ರಕರಣದಲ್ಲಿ ಸಂತ್ರಸ್ತ ಹೆಣ್ಣುಗಳ ಕುಟುಂಬದ ಜವಾಬ್ದಾರಿ ಬಹು ದೊಡ್ಡದಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಸಮಾಜದಲ್ಲಿ ನಾವಿದ್ದೇವೆಯೇ?
ಹೆಣ್ಣಿಗೆ ಕುಟುಂಬದಲ್ಲಾಗಲೀ, ಕುಟುಂಬದ ಆಚೆಗಾಗಲಿ, ತನ್ನಿಚ್ಛೆಯ ವಿರುದ್ಧವಾಗಿ ತನ್ನ ದೇಹದ ಮೇಲೆ ಆಕ್ರಮಣ ನಡೆದಾಗ ವಿರೋಧಿಸುವ ಧೈರ್ಯ ಇದುವರೆಗೂ ಲಭಿಸಿಲ್ಲ. ದುರಂತವೆಂದರೆ ನಮ್ಮ ಚರಿತ್ರೆ, ಪುರಾಣ, ಸಾಹಿತ್ಯ, ಸಿನಿಮಾಗಳಂತಹ ಜನಪ್ರಿಯ ಮಾಧ್ಯಮಗಳು ಇಂತಹ ಸಂದರ್ಭಗಳಲ್ಲಿ ಹೆಣ್ಣಿಗೆ ಸಾವೊಂದೇ ಅಂತಿಮ ಮತ್ತು ಸೂಕ್ತ ನಿರ್ಧಾರ ಎಂದು ಬಿಂಬಿಸಿಕೊಂಡು ಬಂದಿವೆ. ಇಂತಹ ಪ್ರಬಲ ಮಾಧ್ಯಮಗಳ ಹಿಂದಿರುವ ಚಾಲಕ ಶಕ್ತಿಯಾದರೂ ಮತ್ತದೇ ಮನುವಾದಿ ಮನಃಸ್ಥಿತಿಯೇ.
ಎಲ್ಲಾ ರಾಜಕೀಯ ಲಾಭಗಳನ್ನು ಬದಿಗಿಟ್ಟು ಪ್ರಜ್ವಲ್ ಪ್ರಕರಣದ ವಿಚಾರಣೆ ಸರಿಯಾದ ಮಾರ್ಗದಲ್ಲಿ ನಡೆದು, ಮುಂಬರುವ ದಿನಗಳಲ್ಲಿ ಪ್ರಪಂಚದ ಯಾವ ಮೂಲೆಯಲ್ಲಿಯೂ ಹೆಣ್ಣಿನ ಮೇಲೆ ಇಂತಹ ದೌರ್ಜನ್ಯ ನಡೆಯದಂತಾಗಬೇಕು. ಇಂತಹ ದಿಟ್ಟ ನಿರ್ಧಾರಗಳಿಗೆ ಕರ್ನಾಟಕ ಪ್ರಜ್ವಲಿಸಬೇಕು. ಆದರೆ ಈ ನಿಟ್ಟಿನಲ್ಲಿ ಸಾಗುವ ನೈತಿಕ ಧೈರ್ಯ ರಾಜ್ಯ ಮತ್ತು ಕೇಂದ್ರದಲ್ಲಿರುವ ಆಡಳಿತಾರೂಢ ಪಕ್ಷಗಳಿಗಿದೆಯೇ?
ಮಾತೃಹೃದಯ ಪ್ರಜಾಪ್ರಭುತ್ವದ ತಾಯಿಬೇರು. ಚುನಾವಣಾ ಸಂದರ್ಭದಲ್ಲಿ ಮಹಿಳೆಯರನ್ನು ಸಬಲರನ್ನಾಗಿಸಲು ತಾವು ಕೈಗೊಂಡ ಕಾರ್ಯಕ್ರಮಗಳ ಕುರಿತು ಕರ್ನಾಟಕದ ಮಹಿಳೆಯರಿಗೆ ಪತ್ರ ಬರೆದ ಸಿಎಂ, ಮಹಿಳೆಯರ ಬದುಕನ್ನು ಬೆಳಗಲು ಹಲವು ಗ್ಯಾರಂಟಿಗಳನ್ನು ನೀಡಿದ ಸಿಎಂ, ಕರ್ನಾಟಕದ ಹೆಣ್ಣುಮಕ್ಕಳ ಮಾನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಯಾವ ಗ್ಯಾರಂಟಿ ನೀಡುತ್ತಾರೆಂಬುದು ಎದುರಿರುವ ಪ್ರಶ್ನೆ. ಅಂತೆಯೇ ಮಾತೆತ್ತಿದರೆ ಭಾರತದ ಸಂಸ್ಕೃತಿಯ ಕುರಿತು ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಮಾನ್ಯ ಪ್ರಧಾನಮಂತ್ರಿಗಳು ತಮ್ಮ ಪಕ್ಷದ ಮೂಲಕ ಸ್ಫರ್ಧಿಸಲು ಅವಕಾಶ ಮಾಡಿಕೊಟ್ಟ ವ್ಯಕ್ತಿಯ ಕುರಿತು ಎಂತಹ ನಿಲುವು ತಾಳುತ್ತಾರೆನ್ನುವುದನ್ನು ಕಾದುನೋಡಬೇಕಿದೆ. ಹೆಣ್ಣಿನ ಘನತೆಯ ಬಗ್ಗೆ ಕೊಂಚವಾದರೂ ಕಾಳಜಿ ಇದ್ದವರಾಗಿದ್ದರೆ, ಮೊದಲು ಹಾಸನ ಕ್ಷೇತ್ರದ ಚುನಾವಣೆಯನ್ನು ತಡೆಹಿಡಿದು ತಮ್ಮ ನೈತಿಕತೆಯನ್ನು ಪ್ರದರ್ಶಿಸಬಹುದಿತ್ತು.
“ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ನಮ್ಮಲ್ಲಿ 41 ಕಾಯ್ದೆಗಳಿವೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಇರುವುದು 24 ಕಾಯ್ದೆಗಳು” ಎಂದು ಹೈಕೋರ್ಟ್ ವಕೀಲರಾದ ಸಿ.ಎಚ್.ಹನುಮಂತರಾಯ ಅವರು ಹೇಳಿದ್ದನ್ನ ಓದಿದೆ. ಎಂತಹ ವೈರುಧ್ಯದ ವ್ಯವಸ್ಥೆಯಲ್ಲಿದ್ದೇವೆ. ಈ ಮಾತಿನಿಂದ ನನ್ನನ್ನು ಪ್ರಾಣಿವಿರೋಧಿ ಎಂದು ಭಾವಿಸಬಾರದು. ಮಹಿಳೆಯರ ಬದುಕಿಗೆ ಬೆಲೆಯೇ ಇಲ್ಲವೇ ಇಲ್ಲಿ?. ಕಟ್ಟುನಿಟ್ಟಾದ ಒಂದೇ ಒಂದು ಶಿಕ್ಷೆ ಇಲ್ಲಿ ಸರಿಯಾಗಿ ಜಾರಿಯಾಗಿದ್ದರೆ, ನಾಗರಿಕ ಸಮಾಜ ಸಾಗಿಬಂದ ದಾರಿಯಲ್ಲಿ ಎಷ್ಟು ಹೆಣ್ಣುಗಳ ಮಾನ ಪ್ರಾಣದ ರಕ್ಷಣೆಯಾಗುತ್ತಿತ್ತು? ಇಂದಿಗೂ ಹೆಣ್ಣನ್ನು ಮಹಾಸತಿಯಾಗಿಸುವಲ್ಲೇ ಈ ಸಮಾಜ ದೊಡ್ಡಸ್ತಿಕೆ ಮೆರೆಯುತ್ತಿದೆ.
ಇದನ್ನೂ ಓದಿ- ಪೆನ್ ಡ್ರೈವ್ ಪುರಾಣ ತೆರೆದು ತೋರುವ ಕೊಳಕು ವಾಸ್ತವ
ಈ ಮಧ್ಯೆ ರೇವಣ್ಣ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರನ್ನು ಸ್ವಾಗತಿಸಲು ಅವರ ಅಭಿಮಾನಿಗಳ ಬಳಗವೇ ಕಾಯುತ್ತಿತ್ತಂತೆ !. ಎಂತಹ ವಿಕೃತ ಸಮಾಜದಲ್ಲಿದ್ದೇವೆ ನಾವು. ಆತನನ್ನು ಜೈಲಿನಿಂದ ಸ್ವಾಗತಿಸಲು ಅಭಿಮಾನಿಗಳು ಸೇರಿದ್ದಾರೆ ಎಂದರೆ ಅದರರ್ಥ ಆತನ ನೀಚ ಕೆಲಸಗಳನ್ನೂ ಆತನ ಅಭಿಮಾನಿಗಳು ಸ್ವಾಗತಿಸಿದ್ದಾರೆ ಎಂದೇ ತಾನೇ? ಆ ಅಭಿಮಾನಿಗಳ ಗುಂಪಿನವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಾರೋ ಇಲ್ಲವೋ? ನಾಗರಿಕ ಸಮಾಜ ತಲೆಯೇ ಎತ್ತದಂತ ಹೀನ ಕೃತ್ಯಕ್ಕೆ ಇವರೆಲ್ಲಾ ಸಾಕ್ಷಿಯಾಗುತ್ತಿದ್ದಾರಲ್ಲ, ಸಮಾಜ ಎತ್ತ ಸಾಗುತ್ತಿದೆ?
ಸೌಮ್ಯ ಡಿ, ಪ್ರಾಧ್ಯಾಪಕಿ
ಇದನ್ನೂ ಓದಿ – ಸಂವೇದನಾರಹಿತ ಸಮಾಜದಲಿ ಗಂಡಾಳ್ವಿಕೆಯ ಗಂಡಾಂತರ