ಅನ್ಯಧರ್ಮೀಯರ ಮೇಲಿರುವ ಧಾರ್ಮಿಕ ನಿಷೇಧಗಳಿಗಿಂತ ಶೂದ್ರ ವರ್ಗದ ಮೇಲೇ ಹಿಂದೂ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಸಾವಿರಾರು ನಿಷೇಧ, ನಿರ್ಬಂಧಗಳ ನಿಯಮಾವಳಿಗಳೇ ಇರುವಾಗ ಎಚ್ಚರದಿಂದ ಇರಬೇಕಾದವರು ಅನ್ಯ ಧರ್ಮೀಯರಲ್ಲ ಅದು ಶೂದ್ರ ವರ್ಗ – ಶಂಕರ್ ಸೂರ್ನಳ್ಳಿ.
ಉತ್ತರಾಖಂಡ್ ನ ಕನ್ವರ್ ಯಾತ್ರೆಗೆ ಸಂಬಂಧಿಸಿದಂತೆ ಉತ್ತರಾಖಂಡ್ ಮತ್ತು ಉತ್ತರ ಪ್ರದೇಶ ಸರಕಾರ ಇತ್ತೀಚೆಗೆ ಹೊರಡಿಸಿರುವ ಅಂಗಡಿಗಳಲ್ಲಿ ಮಾಲೀಕರು ಮತ್ತು ನೌಕರರ ಹೆಸರು ಪ್ರದರ್ಶಿಸುವ ಆದೇಶ ತೀವ್ರ ವಿವಾದಕ್ಕೀಡಾಗಿತ್ತು. ವ್ಯವಸ್ಥಿತವಾಗಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡ ಈ ಆದೇಶಕ್ಕೆ ಸಂಬಂಧಿಸಿ ಬಂದ ದೂರಿನನ್ವಯ ಸುಪ್ರೀಂ ಕೋರ್ಟ್ ಈ ವಿವಾದಾತ್ಮಕ ಆದೇಶಕ್ಕೆ ಸದ್ಯ ತಡೆಯನ್ನು ನೀಡಿದೆ. ಈ ಆದೇಶ ಮೇಲ್ನೋಟಕ್ಕೆ ಹೊಸತೆನ್ನಿಸಿದರೂ ಅದರಲ್ಲಿನ ಭಾವ ಹೊಸತೇನಲ್ಲ. ಹಲವಾರು ಪ್ರಮುಖ ದೇಗುಲಗಳಿರುವ ನಮ್ಮ ಕರಾವಳಿಯಲ್ಲೇ ದೇಗುಲಗಳ ಜಾತ್ರೆಗಳಲ್ಲಿ ಬೇರೆ ಧರ್ಮೀಯರ ಅಂಗಡಿಗೆ ಅವಕಾಶವಿಲ್ಲ ಎಂದು ನಿಷೇಧ ಹೇರಿ ಬರೆಯಲಾಗುವಂತಹ ಬ್ಯಾನರುಗಳ ಪ್ರದರ್ಶನದಂತೆಯೇ ಇದು ಅದರ ಮತ್ತೊಂದು ರೂಪವೇ ಹೊರತು ವ್ಯತಾಸವೇನೂ ಇಲ್ಲ. ಯಾವುದೋ ಸಂಘಟನೆಗಳ ಮಂದಿ ತಮ್ಮ ಆಕ್ಷೇಪವನ್ನು ನೇರವಾಗಿ ನಮ್ಮಲ್ಲಿ ತೋರಿದರೆ ಆಡಳಿತ ವ್ಯವಸ್ಥೆಯೊಂದು ಅಧಿಕೃತವಾಗಿ ಒಂದು ಧರ್ಮವನ್ನು ಪರೋಕ್ಷವಾಗಿ ನಿಷೇಧಿಸುವ ತಂತ್ರಗಾರಿಕೆ ಈ ಆದೇಶದಲ್ಲಿದೆ.
ಹೇಳಿ ಕೇಳಿ ಭಾರತವೊಂದು ಯಾವುದೇ ನಿರ್ದಿಷ್ಟ ಜಾತಿ ಧರ್ಮಕ್ಕೆ ಸೇರಿರದಂತಹ ಒಂದು ಜಾತ್ಯತೀತ ದೇಶ. ಕೆಲವೇ ಕೆಲವು ವರ್ಷಗಳ ಹಿಂದೆ ಈ ದೇಶದ ಚುಕ್ಕಾಣಿಯನ್ನು ಹಿಡಿದಂತಹ ಮಹನೀಯರಿಬ್ಬರು ಇಲ್ಲಿನ ಬಹು ಸಂಖ್ಯಾತ ಧರ್ಮಕ್ಕೆ ಸೇರಿರದಂತಹ ಅಹಿಂದುವೇ ಆಗಿದ್ದರು. ಸಿಖ್ ಸಮುದಾಯಕ್ಕೆ ಸೇರಿದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ ಮುಸಲ್ಮಾನ ಸಮುದಾಯಕ್ಕೆ ಸೇರಿದ ಅಬ್ದುಲ್ ಕಲಾಮ್ ಅವರು ರಾಷ್ಟ್ರಪತಿಯಾಗಿ ಹಲವು ವರ್ಷಗಳ ಈ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಂದ್ರಶೇಖರ್ ಆಜಾದ್, ಭಗತ್ ಸಿಂಗರಂತೆ ಅಷ್ಪಾಕ್ ಉಲ್ಲಾ ಖಾನ್ ರಂತವರ ಬಲಿದಾನವೂ ನಡೆದಿದೆ.
ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿರುವ ಒಂದು ದೇಶವನ್ನು ಹಾಳುಗೆಡವ ಬೇಕಾದಲ್ಲಿ ಅಲ್ಲಿನ ಜನರ ನಡುವೆ ಒಡಕನ್ನು ಸೃಷ್ಟಿ ಮಾಡಿ ಹಬ್ಬಿಸಿದರೆ ಅಷ್ಟೇ ಸಾಕು. ಅರ್ಥಾತ್ ದೇಶದೊಳಗಿನ ಜನರ ನಡುವೆ ಸಾಮರಸ್ಯ ಇಲ್ಲದೆ ಇದ್ದಲ್ಲಿ ಆ ದೇಶದ ಅಭಿವೃದ್ಧಿಗೆ ಅದೇ ಒಂದು ದೊಡ್ಡ ತೊಡಕು ಎಂಬ ಮಾತು ಸತ್ಯ. ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎನ್ನುವ ಧ್ಯೇಯವನ್ನಿಟ್ಟುಕೊಂಡ ಪಕ್ಷವೊಂದು ಧರ್ಮದ ಹೆಸರಲ್ಲಿ ಮಾಡುತ್ತಿರುವ ಇಂತಹ ರಾಜಕೀಯದಾಟಗಳು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಯಾವ ಕಾರಣಕ್ಕೂ ಒಪ್ಪಿತವೆನಿಸಲಾರದು.
ಯಾವುದೇ ಒಂದು ವಿಚಾರ ಅಥವ ವಸ್ತು ಏನೇ ಆದರೂ ಮೇಲ್ನೋಟಕ್ಕೆ ನಮಗದು ಕಾಣುವಂತಹ ರೀತಿ ಒಂದಾದರೆ ಅದರ ಹಿನ್ನೆಲೆ ನಮ್ಮ ಅರಿವಿಗೂ ಮೀರಿದಂತೆ ತೀರಾ ಭಿನ್ನ ಬಗೆಯಲ್ಲಿರುತ್ತದೆ ಎನ್ನುವುದು ವಾಸ್ತವ. ಉದಾಹರಣೆಗೆ ದೇವರಿಗೆ ನೀವು ಅರ್ಪಿಸುವ ಮಲ್ಲಿಗೆ ಹೂವಿನ ಮಾಲೆ ಅಥವಾ ಬಾಳೆ ಹಣ್ಣು, ತೆಂಗಿನ ಕಾಯಿಯೋ ರಥ ಬೀದಿಯಲ್ಲಿರುವ ಯಾವುದೋ ಅಂಗಡಿಯಿಂದ ಕೊಂಡು ತಂದಿರುತ್ತೀರಿ ಎಂದ ಮಾತ್ರಕ್ಕೆ ಅದು ಆ ಅಂಗಡಿಯವನದೇ ಸೊತ್ತು ಎಂದೇನೂ ಆಗದು. ಮೇಲ್ನೋಟಕ್ಕೆ ಈ ರೀತಿಯ ಭಾವ ನಮ್ಮ ಅರಿವಿಗೆ ಬರುವಂತಹದಿದ್ದರೂ ವಾಸ್ತವದಲ್ಲಿ ಆ ಮಲ್ಲಿಗೆಯನ್ನು ಬೆಳೆದಾತ ಯಾರೋ ಕ್ರಿಶ್ಚಿಯನ್ ಆಗಿದ್ದರೆ, ತೆಂಗಿನಕಾಯಿಯನ್ನು ಅಂಗಡಿಗಳಿಗೆ ಹೋಲ್ ಸೇಲಾಗಿ ಕೊಂಡು ಸಪ್ಲೈ ಮಾಡಿದಾತ ಮುಸಲ್ಮಾನ ಆಗಿದ್ದಿರಲೂ ಬಹುದು. ಈ ಗಿಡಗಳಿಗೆ ಹಾಕುವ ರಸಗೊಬ್ಬರ, (NPK ಹೆಸರಿನಲ್ಲಿ ಸಾರಜನಕಯುಕ್ತ ಯೂರಿಯಾ ರಸಗೊಬ್ಬರ ತಯಾರಿಗೆ ಅಗತ್ಯವಿರುವ ನ್ಯಾಫ್ತಾ ಬರುವುದು ಮುಸಲ್ಮಾನರ ಅರಬ್ ದೇಶಗಳಿಂದ. ನೈಸರ್ಗಿಕವಾಗಿ ದೊರೆಯುವ ಶಿಲಾರಂಜಕ ಗೊಬ್ಬರ ತಯಾರಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಲ್ಲಿ ಅನ್ಯ ಧರ್ಮೀಯರೆಂದು ಯಾರನ್ನಾದರೂ ಅಲ್ಲಿ ಬೇರ್ಪಡಿಸಲು ಸಾಧ್ಯವೇ..? ಪೊಟ್ಯಾಷ್ ಗೊಬ್ಬರಕ್ಕಂತೂ ಅನ್ಯಧರ್ಮೀಯರ ವಿದೇಶವನ್ನೇ ನಾವು ಪೂರ್ತಿ ಅವಲಂಬಿತರು) ನಾವು ತಿನ್ನುವ ಅನ್ನದಿಂದ ಹಿಡಿದು, ದೇವತಾಕಾರ್ಯಕ್ಕೆ ಬಳಸುವ ಈ ಹೂವು ಹಣ್ಣುಗಳನ್ನೆಲ್ಲ ಇದೇ ಹಿನ್ನೆಲೆಯಲ್ಲಿ ಧಾರ್ಮಿಕವಾಗಿ ಅವನದ್ದು ಇವನದ್ದು ಎಂದು ವಿಂಗಡಿಸುತ್ತಾ ಯಾವತ್ತಾದರೂ ಮುಂದೆ ಹೋಗಲು ಸಾಧ್ಯವೇ?
ಶತಶತಮಾನಗಳಿಂದಲೂ ಹಿಂದೂ, ಮುಸ್ಲಿಮ್, ಕ್ರೈಸ್ತ, ಪಾರ್ಸಿ, ಸಿಖ್, ಬೌದ್ಧ, ಜೈನ ಎಂದು ಆಚರಣೆ ಸಂಪ್ರದಾಯಗಳಲ್ಲಿ ಭಿನ್ನತೆ ಇದ್ದರೂ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಬದುಕು ನಡೆಸುತ್ತಿದ್ದ ಸಮಾಜದಲ್ಲಿ ಯಾರದೋ ಓಲೈಕೆಗಾಗಿ ಈ ರೀತಿಯ ಪ್ರತ್ಯೇಕತೆಯ ನಂಜನ್ನು ಬಿತ್ತುತ್ತಾ ಹೋದಲ್ಲಿ ಅದರ ಕೆಟ್ಟ ಫಲವನ್ನು ಮುಂದಿನ ಪೀಳಿಗೆ ಉಣ್ಣ ಬೇಕಾದೀತಷ್ಟೆ.
ಬದರೀನಾಥ, ಹರಿದ್ವಾರ ಮೊದಲಾದ ಪುಣ್ಯ ಕ್ಷೇತ್ರಗಳಿಗೆ ಹೋಗುವ ಈ ಯಾತ್ರಾರ್ಥಿಗಳ ಮನದಲ್ಲಿರುವುದು ದೇವ ದರ್ಶನದ ಭಕ್ತಿ ಭಾವವೇ ಹೊರತು ದಾರಿಯಲ್ಲಿ ಸಿಗುವ ಅಂಗಡಿಯಾತ ಹಿಂದುವೋ ಮುಸಲ್ಮಾನನೋ ಎನ್ನುವ ಬೇಧದ ಭಾವವಲ್ಲ. ಜಾತ್ರೆ ಇರಲಿ ಪುಣ್ಯ ಕ್ಷೇತ್ರಗಳೇ ಇರಲಿ ಅಲ್ಲಿ ಬರುವಂತಹ ಜನರನ್ನೇ ನಂಬಿಕೊಂಡು ವ್ಯಾಪಾರ ವ್ಯವಹಾರ ನಡೆಸಿ ಬದುಕುವಂತಹ ಲೆಕ್ಕವಿಲ್ಲದಷ್ಟು ಕುಟುಂಬಗಳು ಈ ದೇಶದಲ್ಲಿವೆ. ಮುಸಲ್ಮಾನ ಒಡೆತನದ ಅಂಗಡಿಗಳಲ್ಲಿ ಹಿಂದೂ ಕೆಲಸಕ್ಕಿದ್ದರೆ ಎಷ್ಟೋ ಹಿಂದೂ ಒಡೆತನದ ಅಂಗಡಿಗಳಲ್ಲಿ ಮುಸಲ್ಮಾನನೂ ಕಾಣ ಸಿಗುತ್ತಾನೆ. ಇಂತಹ ಆದೇಶಗಳೆಲ್ಲ ಜನರು ನಂಬಿಕೊಂಡು ಬಂದ ಅವರ ಆದಾಯಕ್ಕೆ ಮೂಲವಾದ ಕಸುಬಿಗೆ ಹೊಡೆತ ಕೊಡುವುದರ ಜೊತೆಗೆ ಜನರ ನಡುವಿನ ಸಾಮಾನ್ಯ ಬೆಸುಗೆಯನ್ನು ಕೂಡ ದುರ್ಬಲಗೊಳಿಸುತ್ತವೆ.
ಹಿಂದೂಗಳ ಧಾರ್ಮಿಕ ಆಚರಣೆಯ ನೆಪದಲ್ಲಿ ಅನ್ಯ ಧರ್ಮೀಯರಿಗೆ ಪ್ರತ್ಯಕ್ಷ ಯಾ ಪರೋಕ್ಷವಾಗಿ ಇಂತಹ ನಿಷೇಧ ಹೇರುವ ಮೊದಲು ಹಿಂದೂ ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳಲ್ಲಿ ಮುಸಲ್ಮಾನರ ಸೌಹಾರ್ದಯುತ ಸಂಬಂಧಗಳಿರುವುದನ್ನು ಗಮನಿಸಬೇಕು. ಈಗ ಹಿಂದೂಗಳಿಗೆ ಅತ್ಯಂತ ಪವಿತ್ರ ಯಾತ್ರಾಸ್ಥಳವಾಗಿ ಪ್ರಸಿದ್ಧ ಪುಣ್ಯ ಕ್ಷೇತ್ರದ ಅಮರನಾಥ ಲಿಂಗವನ್ನು ಮೊದಲು ಗುರುತಿಸಿದವನು ಬುಟಾ ಮಲಿಕ್ ಎನ್ನುವ ಮುಸ್ಲಿಮ್ ಕುರಿಗಾಹಿ. ಮಂತ್ರಾಲಯಕ್ಕೆ ಜಮೀನು ನೀಡಿದ ನವಾಬ, ಶೃಂಗೇರಿ ಶ್ರೀಗಳಿಗೆ ಟಿಪ್ಪು ಸುಲ್ತಾನ ನೀಡುತ್ತಿದ್ದ ಗೌರವ, ಕಾಶಿ ವಿಶ್ವನಾಥನಿಗೆ ಬಿಸ್ಮಿಲ್ಲಾ ಖಾನರ ಷಹನಾಯಿ ಸೇವೆಗಳೇ ಮೊದಲಾದ ಅನೇಕ ಇಂತಹ ನಿದರ್ಶನಗಳಿವೆ.
ಇವತ್ತು ಒಂದು ಸರಕಾರವೇ ಈ ರೀತಿಯ ಆದೇಶಗಳನ್ನು ಅಧಿಕೃತವಾಗಿ ಅನ್ಯ ಧರ್ಮೀಯರ ವಿರುದ್ಧವಾಗಿ ನೀಡಿ ಗೆದ್ದು ಬೀಗಿದ್ದೇ ಆದರೆ ನಾಳೆ ಇಂತಹುದೇ ಧಾರ್ಮಿಕತೆಗೆ ಸಂಬಂಧಿಸಿದಂತಹ ಆದೇಶವನ್ನು ದಲಿತ ಹಾಗು ಹಿಂದುಳಿದ ಶೂದ್ರವರ್ಗಗಳ ಮೇಲೂ ನಿರ್ಭಿಡೆಯಿಂದ ಹೇರಲು ಮುಂದಾಗದೆನ್ನುವುದಕ್ಕೆ ಯಾವ ಖಾತರಿ? ಅನ್ಯಧರ್ಮೀಯರ ಮೇಲಿರುವ ಧಾರ್ಮಿಕ ನಿಷೇಧಗಳಿಗಿಂತ ಶೂದ್ರ ವರ್ಗದ ಮೇಲೇ ಹಿಂದೂ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಸಾವಿರಾರು ನಿಷೇಧ, ನಿರ್ಬಂಧಗಳ ನಿಯಮಾವಳಿಗಳೇ ಇರುವಾಗ ಎಚ್ಚರದಿಂದಿರಬೇಕಾದವರು ಅನ್ಯ ಧರ್ಮೀಯರಲ್ಲ ಅದು ಶೂದ್ರ ವರ್ಗ.
ಶಂಕರ್ ಸೂರ್ನಳ್ಳಿ
ಸಾಮಾಜಿಕ ಹೋರಾಟಗಾರರು
ಇದನ್ನೂ ಓದಿ- ಸಮಾಜ ಮತ್ತದೇ ಚಾತುರ್ವರ್ಣ ವ್ಯವಸ್ಥೆಗೆ…!