ನವದೆಹಲಿ: ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಅಪರಿಚಿತರ ನಡುವೆ ನಡೆದ ಗುಂಡಿನ ದಾಳಿಯ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ, ಭಾರತೀಯ ಮೂಲದ ವಿದ್ಯಾರ್ಥಿನಿ ಹರ್ ಸಿಮ್ರತ್ ರಾಂಧಾವಾ ಅಸು ನೀಗಿದ್ದಾರೆ. ಒಂಟೋರಿಯೋದ ಹ್ಯಾಮಿಲ್ಟನ್ ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದ ಹರ್ಸಿಮ್ರತ್ ರಾಂಧಾವಾ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಹ್ಯಾಮಿಲ್ಟನ್ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರಸ್ತೆ ಹತ್ತಿರ ಬುಧವಾರ ಸಂಜೆ 7.30 ರ ಸುಮಾರಿಗೆ ಎರಡು ವಾಹನಗಳ ಸವಾರರ ನಡುವೆ ಗುಂಡಿನ ದಾಳಿ ನಡೆದಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದೆವು. ಅಲ್ಲಿ ಭಾರತೀಯ ವಿದ್ಯಾರ್ಥಿನಿ ಗಾಯಗೊಂಡಿರುವುದು ಕಂಡುಬಂದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾರೆ. ವಾಹನ ಸವಾರರಲ್ಲಿ ಒಬ್ಬರು ಹಾರಿಸಿದ ಗುಂಡು ಆಕಸ್ಮಿಕವಾಗಿ ಹರ್ ಸಿಮ್ರತ್ ಅವರಿಗೆ ತಗುಲಿದೆ. ವಿದ್ಯಾರ್ಥಿನಿ ಸಾವು ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ವಿದ್ಯಾರ್ಥಿನಿಯ ಸಾವಿನಿಂದ ಅತೀವ ನೋವುಂಟಾಗಿದೆ ಎಂದು ಟೊರೆಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸಂದೇಶ ಪ್ರಕಟಿಸಿದೆ. ನಾವು ವಿಧ್ಯಾರ್ಥಿನಿಯ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಈ ಕಷ್ಟದ ಸಮಯದಲ್ಲಿ ಅವರ ಜೊತೆಗೆ ನಾವಿರುತ್ತೇವೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.