ನವದೆಹಲಿ: ದೇಶದ ಸನಾತನ ಧರ್ಮದ ಮೇಲಿನ ಅವಮಾನವನ್ನು ಸಹಿಸಲಾಗದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದಾಗಿ 71 ವರ್ಷದ ವಕೀಲ ರಾಕೇಶ್ ಕಿಶೋರ್ ಹೇಳಿದ್ದಾರೆ. ಈ ಘಟನೆ ಕುರಿತು ನನಗೆ ಯಾವುದೇ ವಿಷಾದವೂ ಇಲ್ಲ ಎಂದಿದ್ದಾರೆ.
ಈ ಘಟನೆಗೆ ನಾನು ಹೆದರುವ ಅಗತ್ಯವೂ ಇಲ್ಲ. ಘಟನೆ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳೀದ್ದಾರೆ.
ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ್ದ ಸಂದರ್ಭದಲ್ಲಿ ನಾನು ಮದ್ಯಪಾನ ಮಾಡಿರಲಿಲ್ಲ. ಸನಾತನ ಧರ್ಮ ಕುರಿತು ಸಿಜೆಐ ಅವರ ಅಭಿಪ್ರಾಯದಿಂದ ನನಗೆ ನೋವುಂಟಾಗಿತ್ತು. ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಪರಿಹಾರ ಒದಗಿಸಲಾಗದಿದ್ದರೂ ಕನಿಷ್ಠ ಅಪಹಾಸ್ಯ ಮಾಡಬಾರದು ಎಂದಿದ್ದಾರೆ.
ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಮಧ್ಯ ಪ್ರದೇಶದ ಖಜುರಾಹೋದ ಜಾವರಿ ದೇವಾಲಯದ ಆವರಣದಲ್ಲಿರುವ 7 ಆಡಿ ಎತ್ತರ ವಿಷ್ಣು ಮೂರ್ತಿ ಭಾಗಶಃ ನಾಶವಾಗಿತ್ತು. ಈ ಮೂರ್ತಿಯನ್ನು ಮರುನಿರ್ಮಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೆ. 16ರಂದು ಅರ್ಜಿ ವಿಚಾರಣೆ ನಡೆಸಿದ್ದ ಸಿಜೆಐ ಗವಾಯಿ ಅವರು, ಈ ಅರ್ಜಿ ಪ್ರಚಾರ ಪಡೆದುಕೊಳ್ಳು ಸಲ್ಲಿಸಿರುವ ಮೊಕದ್ದಮೆಯಾಗಿದೆ., ಇದು ಪುರಾತತ್ವ ಇಲಾಖೆಗೆ ಸೇರಿದ ಜಾಗ. ಇದಕ್ಕೆ ಆ ಇಲಾಖೆಯೇ ಅನುಮತಿ ನೀಡಬೇಕು. ನಿಮ್ಮ ದೇವರನ್ನೇ ಕೇಳಿಕೊಳ್ಳಿ ಎಂದು ಹೇಳಿದ್ದರು.
ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿ ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ ಎಂದಿದ್ದರು. ಸಿಜೆಐ ಅವರ ಕ್ರಮಕ್ಕೆ ನನ್ನ ಪ್ರತಿಕ್ರಿಯೆ ಇದಾಗಿತ್ತು ಎಂದೂ ವಕೀಲ ರಾಕೇಶ್ ಕಿಶೋರ್ ತಿಳಿಸಿದ್ದಾರೆ.