ಕೋಲಾರ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ. ಆರ್.ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿ ಪ್ರಗತಿಪರ, ಎಡಪಂಥೀಯ, ಮಹಿಳಾ, ಅಲ್ಪ ಸಂಖ್ಯಾತ ಹಾಗೂ ಸಮಾನ ಮನಸ್ಕರ ಸಂಘ ಸಂಸ್ಥೆಗಳು ಇಂದು ಕರೆ ನೀಡಿದ್ದ ಕೋಲಾರ ಬಂದ್ ಯಶಸ್ವಿಯಾಗಿದೆ.
ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆಯ ನಡುವೆಯೂ ಹತ್ತಾರು ಸಂಘ ಸಂಸ್ಥೆಗಳ ಮುಖಂಡರುಗಳು ಸ್ವಯಂಘೋಷಿತ ಬಂದ್ ಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇನ್ನೂ ಕೆಲವು ಸಂಘಟನೆಗಳ ಕಾರ್ಯಕರ್ತರು ಸಾರಿಗೆ ಸಂಸ್ಥೆಯ ಡಿಪೋ ಎದುರು ಜಮಾಯಿಸಿ ಸಾರಿಗೆ ಸಂಸ್ಥೆಯ ಬಸ್ಸುಗಳುನ್ನು ರಸ್ತೆಗಿಳಿಸಬಾರದು ಎಂದು ಮನವಿ ಕೋರಿಕೊಂಡರು. ಇವರ ಮನವಿಗೆ ಸ್ಪಂದಿಸಿದ ಸಾರಿಗೆ ನೌಕರರು ಬಸ್ ಗಳನ್ನು ಹೊರತೆಗೆಯಲಿಲ್ಲ. ಸಾರಿಗೆ ಘಟಕದ ಬಾಗಿಲು ಮುಚ್ಚಿ ಪ್ರತಿಭಟನೆಗೆ ಸಹಕರಿಸಲಾಗಿದೆ.
ನಗರದ ಡಿಪೋ ಮುಂಭಾಗ ಹಾಗೂ ಶ್ರೀನಿವಾಸಪುರ ಸರ್ಕಲ್ ನಲ್ಲಿ ಪ್ರತಿಭಟನಾಕಾರರು ಸನಾತನಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಇಡೀ ನಗರದಲ್ಲಿ ಕೆಎಸ್ ಆರ್ ಟಿಸಿ ಸೇರಿದಂತೆ ಬಸ್ ಆಟೋ ಮತ್ತಿತರ ವಾಹನಗಳ ಸಂಚಾರ ವಿರಳವಾಗಿತ್ತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಯಾಣಿಕರು ಬಸ್ ಗಳಿಲ್ಲದೇ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರತಿಭಟನಾಕಾರರು ನಗರದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆಯಲ್ಲಿಸಾಗುತ್ತಾ ಘೋಷಣೆ ಕೂಗುತ್ತಿದ್ದಾರೆ. ಸಿಪಿಎಂನ ಗಾಂಧಿನಗರ ನಾರಾಯಣ ಸ್ವಾಮಿˌ ಡಿಎಸ್ ಎಸ್ ನ ವಿಜಯ ಕುಮಾರ್ˌ ಪಂಡಿತ್ ಮುನಿವೆಂಕಟಪ್ಪ ಚಂದ್ರ ಮೌಳಿˌ ನಗರ ಸಭಾ ಸದಸ್ಯ ಅಂಬರೀಶ್ ಹಾಗೂ ರೈತ ಮುಖಂಡರಾದ ಅಬ್ಬಣಿ ಶಿವಪ್ಪ ಪ್ರತಿಭಟನೆಯ ನೇತೃತ್ವ ವಹಸಿದ್ದರು.