ಶೋಭಾ ಕರಂದ್ಲಾಜೆ ವಿರುದ್ಧ ರೊಚ್ಚಿಗೆದ್ದ ಕರವೇಯಿಂದ ಭೂತದಹನಕ್ಕೆ ಯತ್ನ

ಬೆಂಗಳೂರು: ಕರ್ನಾಟಕ ಸರ್ಕಾರ ಈ ವರ್ಷದಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್‌ ವ್ಯವಸ್ಥೆ ಜಾರಿಗೆ ತಂದಿರುವುದರ ವಿರುದ್ಧ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಿ, ಸಚಿವೆಯ ಭೂತದಹನ ನಡೆಸಲು ಯತ್ನಿಸಿತು.

ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿ ಸಮಾವೇಶಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಜಿಲ್ಲಾ ಘಟಕದ ಮಹಿಳಾ ಕಾರ್ಯಕರ್ತರು ಶೋಭಾ ಕರಂದ್ಲಾಜೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿ ಹೇರಿಕೆ ಪರವಾಗಿ ಮಾತನಾಡುತ್ತಿರುವ ಬಿಜೆಪಿಯ ಬಿ.ವೈ.ವಿಜಯೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ್‌, ಶ್ರೀರಾಮುಲು, ಸುರೇಶ್‌ ಕುಮಾರ್‌ ಇನ್ನಿತರರ ವಿರುದ್ಧವೂ ಘೋಷಣೆಗಳು ಮೊಳಗಿದವು.

ಇದೇ ಸಂದರ್ಭದಲ್ಲಿ ಮಾತನಾಡಿದ ಕರವೇ ಮಹಿಳಾ ಘಟಕದ ಬೆಂಗಳೂರು ನಗರ ಜಿಲ್ಲಾಧ್ಯಕ್ಷೆ ಶ್ವೇತಾ ಮೋಹನ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಿಂದಿ ಪರವಾಗಿ ಮಾತನಾಡುತ್ತಿದ್ದಾರೆ. ಅವರು ಮೊದಲು ಕನ್ನಡ ನುಡಿಯನ್ನು ಪ್ರೀತಿಸುವುದನ್ನು ಕಲಿಯಲಿ. ಅವರಿಗೆ ಮತ ಹಾಕಿ ಗೆಲ್ಲಿಸಿರುವುದು ಕನ್ನಡದ ಜನತೆ, ಹಿಂದಿವಾಲಾಗಳಲ್ಲ ಎಂದರು.

ಕಳೆದ ವರ್ಷ ಪರೀಕ್ಷೆಗಳಲ್ಲಿ ಹಿಂದಿಯ ಕಾರಣಕ್ಕೆ 1,40,000 ವಿದ್ಯಾರ್ಥಿಗಳು ಫೇಲಾಗಿ ಒಂದು ವರ್ಷ ಕಳೆದುಕೊಂಡರು. ಆಗ ಶೋಭಾ ಕರಂದ್ಲಾಜೆ ಎಲ್ಲಿಗೆ ಹೋಗಿದ್ದರು? ಕನ್ನಡದ ವಿದ್ಯಾರ್ಥಿಗಳು ಫೇಲಾಗಿ ಭವಿಷ್ಯ ಹಾಳು ಮಾಡಿಕೊಳ್ಳಲಿ ಎಂಬುದು ಅವರ ಉದ್ದೇಶವೇ? ಇಂಥ ವಿಕೃತ ಆಲೋಚನೆ ಅವರಿಗೆ ಹೇಗೆ ಬಂತು ಎಂದು ಅವರು ಪ್ರಶ್ನಿಸಿದರು.

ಭಾರತೀಯ ಜನತಾ ಪಕ್ಷದ ಅಧಿಕಾರವಿರುವ ರಾಜ್ಯಗಳಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ಅಲ್ಲಿನ ಮಕ್ಕಳು ಎರಡು ಭಾಷೆ ಕಲಿಯುತ್ತಿರುವಾಗ ಕರ್ನಾಟಕದ ಮಕ್ಕಳು ಯಾಕೆ ಮೂರನೇ ಭಾಷೆಯ ಹೊರೆಯನ್ನು ಹೊತ್ತುಕೊಳ್ಳಬೇಕು? ಬಿಜೆಪಿ ನಾಯಕರಿಗೆ ಈ ಸಾಮಾನ್ಯ ಜ್ಞಾನವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಶೋಭಾ ಕರಂದ್ಲಾಜೆಯವರು ರೈಲ್ವೆ ಉದ್ಯೋಗದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದಾಗ ಯಾವ ರಾಜ್ಯದ ಪ್ರವಾಸದಲ್ಲಿದ್ದರು ಎಂದು ಪ್ರಶ್ನಿಸಿದರು.

ಶೋಭಾ ಕರಂದ್ಲಾಜೆ ರಾಜ್ಯ ಬಿಟ್ಟು ತೊಲಗಿ, ಹಿಂದಿ ಗುಲಾಮರಿಗೆ ಧಿಕ್ಕಾರ, ಹಿಂದಿಹೇರಿಕೆಗೆ ಧಿಕ್ಕಾರ ಇತ್ಯಾದಿ ಘೋಷಣೆಗಳನ್ನು ಕೂಗಿ ಕಾರ್ಯಕರ್ತೆಯರು ತಮ್ಮ ಆಕ್ರೋಶ ಹೊರಹಾಕಿದರು. ಭಾರತೀಯ ಜನತಾ ಪಕ್ಷದವರು ಇದೇ ರೀತಿ ತಮ್ಮ ನಾಡವಿರೋಧಿ ನೀತಿ ಮುಂದುವರೆಸಿದರೆ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.

ಶೋಭಾ ಕರಂದ್ಲಾಜೆ ಭೂತದಹನಕ್ಕೆ ಯತ್ನ ನಡೆದಾಗ, ಪ್ರತಿಕೃತಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತೆಯರನ್ನು ಬಂಧಿಸಿ ಕರೆದೊಯ್ದರು.

More articles

Latest article

Most read