ಶಿವಮೊಗ್ಗ: ಸಾಗರ ತಾಲ್ಲೂಕಿನ ಅಂಬಾರ ಗೋಡ್ಲು-ಕಳಸವಳ್ಳಿ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ರೂ.473 ಕೋಟಿ ವೆಚ್ಚದ ತೂಗುಸೇತುವೆ ಇಂದು ಲೋಕಾರ್ಪಣೆಯಾಗಿದೆ. ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟನೆ ನೆರವೇರಿಸಿದ್ದಾರೆ.
ಆದರೆ ಸೇತುವೆಯ ಉದ್ಘಾಟನೆ ಕಾರ್ಯ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಥಳೀಯ ಮುಖಂಡರಿಗೆ ಆಹ್ವಾನ ನೀಡುವ ವಿಚಾರದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದೇ ವಿಷಯ್ಕಕೆ ಜಿಲ್ಲೆಯಲ್ಲಿ ರಾಜಕೀಯ ಜಟಾಪಟಿ ಆರಂಭವಾಗಿದೆ.
ಶಾಸಕ ಬೇಳೂರು ಗೋಪಾಲಕೃಷ್ಣ ಇದು ಬಿಜೆಪಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಕೊಟ್ಟಿರಬಹುದು. ಕಾಮಗಾರಿ ವೇಳೆ ರಾಜ್ಯ ಸರ್ಕಾರ ಸಹಕಾರ ಕೊಟ್ಟಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಅವರನ್ನು ಕರೆಯುವಾಗ ಶಿಷ್ಟಾಚಾರದಂತೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ. ಸಾಗರ ಕ್ಷೇತ್ರದ ಶಾಸಕನಾದ ನನಗೂ ಆಹ್ವಾನ ನೀಡಿಲ್ಲ. ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಎಸ್‌ರಾಮಪ್ಪ ಅವರನ್ನೂ ಕರೆದಿಲ್ಲ ಎಂದು ದೂರಿದ್ದಾರೆ.
ಮಂಗಳೂರಿನಲ್ಲಿ ಸೇತುವೆ ಉದ್ಘಾಟಿ ಸಲು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕರೆಯಬಹುದು. ಸೇತುವೆ ಉದ್ಘಾಟನೆಗೆ ಸಿಗಂದೂರು ಧರ್ಮದರ್ಶಿ ಹೆಸರು ಹಾಕಲು ಶಿಷ್ಟಾಚಾರದ ನೆಪ ಒಡ್ಡಿದ್ದಾರೆ ಎಂಬುದು ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಹಿಡೇಗೋಡು ಆಪಾದಿಸಿದ್ದಾರೆ.
ಸೇತುವೆ ಉದ್ಘಾಟನೆಯ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯ, ಆಹ್ವಾನಿತರ ಪಟ್ಟಿಯಲ್ಲಿ ನನ್ನ ಹೆಸರನ್ನು ಮುದ್ರಿಸಲಾಗಿದೆ. ಆದರೆ ಈ ಬಗ್ಗೆ ನಿಮ್ಮ ಸಚಿವಾಲಯದಿಂದ ನನಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದರು. ಸಾಧ್ಯವಾದರೆ ಕಾರ್ಯಕ್ರಮವನ್ನು ಮುಂದೂಡುವಂತೆಯೂ ಕೇಳಿಕೊಂಡಿದ್ದರು.
ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದ ಜತೆಗೆ ವ್ಯವಹರಿಸಿ ಎಂದು ನಿಮ್ಮ ಸಚಿವಾಲಯಕ್ಕೆ ನಿರ್ದೇಶನ ನೀಡಿ ಎಂದು ವಿನಂತಿಸಿಕೊಂಡಿದ್ದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರತಿಕ್ರಿಯೆ ನೀಡಿ ಕೇಂದ್ರ ಸರ್ಕಾರ ಯಾವುದೇ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ. ಕರ್ನಾಟಕ ಸರ್ಕಾರದ ಸಹಕಾರವನ್ನು ಕೇಂದ್ರವು ನಿರಂತರವಾಗಿ ಶ್ಲಾಘಿಸುತ್ತದೆ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಎಲ್ಲಾ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಕೇಂದ್ರವು ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.