ಶಾಲಿನಿ ರಜನೀಶ್ ಪ್ರಕರಣ |ಇದೇನಾ ಪಾರ್ಟಿ ವಿತ್‌ ಡಿಫರೆನ್ಸ್ ?

Most read

ಒಂದೂವರೆ ದಶಕದ ಕರ್ನಾಟಕ ರಾಜಕೀಯ ಇತಿಹಾಸವನ್ನು ಕಣ್ಣಾಡಿಸಿದರೆ ಸಚಿವರಾಗಿದ್ದವರು, ಶಾಸಕರಾಗಿದ್ದವರು ಎಸಗಿದ ಮಹಿಳಾ ದೌರ್ಜನ್ಯಗಳು ಪಕ್ಷಾತೀತವಾಗಿ  ಸಾಲು ಸಾಲು ಕಣ್ಣ ಮುಂದೆ ಬರುತ್ತವೆ. ಇವುಗಳಲ್ಲಿ ಬಿಜೆಪಿಗರದ್ದೇ ಹೆಚ್ಚಿನ ಪಾಲು,  ರಘುಪತಿಭಟ್,  ಎಂ.ಪಿ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಜೀವರಾಜ, ರಮೇಶ್ ಜಾರಕಿಹೊಳಿ ಅವರುಗಳದ್ದು ಒಂದು ಭಾಗವಾದರೆ ಅವರದ್ದೇ ಪಕ್ಷದ  ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ, ಬಿ.ಎಸ್ ಯಡಿಯೂರಪ್ಪ, ಅವರುಗಳು ಕೂಡ ಸ್ತ್ರೀಪೀಡಕ ಆರೋಪಗಳಿಂದ ಹೊರತಾಗಿಲ್ಲ -ಎನ್‌ ರವಿಕುಮಾರ್‌, ಪತ್ರಕರ್ತರು.

ಕಲಬುರ್ಗಿ ಜಿಲ್ಲಾಧಿಕಾರಿ ಫೊಜಿಯ ತರನಮ್ ಅವರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ನಾಲಿಗೆ ಹರಿಬಿಟ್ಟು ನ್ಯಾಯಾಲಯದ ತಪರಾಕಿಗೆ ಒಳಗಾಗಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಈಗ ಈ ರಾಜ್ಯದ ಮುಖ್ಯಕಾರ್ಯದರ್ಶಿ ಶಾಲಿನಿ‌ ರಜನೀಶ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರು, ಅದರಲ್ಲೂ ಚಿಂತಕರ ಚಾವಡಿ ಎಂದೇ ಕರೆಯಲ್ಪಡುವ ವಿಧಾನಪರಿಷತ್‍ನ ಸದಸ್ಯರಾಗಿರುವಂತವರು ಸಂವೇದನಾ ರಹಿತವಾಗಿ ಪದೇ ಪದೇ ಇಂತಹ ಧೋರಣೆಗಳನ್ನು ತಳೆಯುವುದು ಅವರೊಳಗಿನ ವಿಕೃತಿಯ ಮನೋಸ್ಥಿತಿಯನ್ನು ಕಾಣಿಸುತ್ತದೆ.

ಈ ದೇಶವನ್ನು , ಗೋವನ್ನು ತಾಯಿ ಎಂದೇ ರಾಜಕಾರಣವನ್ನು ಮಾಡಿಕೊಂಡು ಬರುತ್ತಿರುವ ಬಿಜೆಪಿ ಪಕ್ಷದ ನಾಯಕರುಗಳೇ ಹೆಣ್ಣಿನ ಕುರಿತು ಹೊಂದಿರಬಹುದಾದ ಮನೋವಿಕಲ್ಪ ಧೋರಣೆ ಹೆಜ್ಜೆ ಹೆಜ್ಜೆಗೂ ಕಾಣ ಸಿಗುತ್ತಿರುವುದು ದೊಡ್ಡ ವೈರುಧ್ಯ. ಬೆಳಗಾವಿಯಲ್ಲಿ ನಡೆದ ಕಳೆದ ವಿಧಾನಮಂಡಳ ಅಧಿವೇಶನದಲ್ಲಿ  ವಿಧಾನಪರಿಷತ್ ಸದಸ್ಯ ಬಿಜೆಪಿ ಯ ಸಿ.ಟಿ ರವಿ  ಸಚಿವೆ  ಶ್ರೀಮತಿ ಲಕ್ಷ್ಮಿಹೆಬ್ಬಾಳ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಸ್ತ್ರೀಕುಲಕ್ಕೆ ಘೋರ ಅವಮಾನ ಮಾಡಿದ್ದು ಇನ್ನೂ ಹಸಿಯಾಗಿರುವಾಗಲೆ ಅವರದ್ದೇ ಪಕ್ಷದ ಇನ್ನೋರ್ವ ಪರಿಷತ್ ಸದಸ್ಯ ಎನ್. ರವಿಕುಮಾರ್ ರಾಜ್ಯದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ಆಡಿರುವ ಅವಹೇಳನಕಾರಿ ಮಾತುಗಳು ಬಿಜೆಪಿಯ ಸಂಸ್ಕೃತಿಯನ್ನು ಮತ್ತೆ ಮತ್ತೆ ಪ್ರಶ್ನಿಸುವಂತೆ ಮಾಡಿವೆ.

ಹೆಣ್ಣಿನ ಮೇಲಿನ ದೌರ್ಜನ್ಯ, ಅವಮಾನ, ಅತ್ಯಾಚಾರಗಳನ್ನು ಪಕ್ಷ ರಾಜಕಾರಣದ ನೆಲೆಯಲ್ಲಿ ನೋಡುವ ಅಗತ್ಯವಿದೆಯೇ ಎಂದು ಯಾರಾದರು ಕೇಳಬಹುದು. ಆದರೆ ಒಂದು ರಾಜಕೀಯ ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವವರೇ ಸ್ತ್ರೀಪೀಡಕರಾಗಿರುವುದು, ಅಂತಹ ಪ್ರಕರಣಗಳು ನಡೆದಾಗ  ಆ ಪಕ್ಷವೇ ಆರೋಪಿಗಳು, ಅಪರಾಧಿಗಳನ್ನು ಬೆಂಬಲಿಸುವುದಾದರೆ, ಸಮರ್ಥಿಸಿಕೊಳ್ಳುವುದಾದರೆ  ಆ ಪಕ್ಷ ಹೊಂದಿರಬಹುದಾದ ರಾಜಕೀಯ ಸಂಸ್ಕೃತಿ ಇದೆಯಾ ಎಂದು ಕೇಳುವುದರಲ್ಲಿ ತಪ್ಪೇನಿದೆ.? ಸಿ.ಟಿ ರವಿ ಪ್ರಕರಣದಲ್ಲಿ ಬಿಜೆಪಿ ಅವರ ಬೆನ್ನಿಗೆ ನಿಂತಂತೆ ಇದೀಗ ಶಾಲಿನಿ ರಜನೀಶ್ ಅವರನ್ನು ಅವಹೇಳನ ಮಾಡಿದ ಎನ್.ರವಿಕುಮಾರ್ ಬೆನ್ನಿಗೆ ಅವರ ಪಕ್ಷ, ಮುಖಂಡರು ಸಮರ್ಥನೀಯವಾಗಿ ನಿಂತಿರುವುದು ಯಾವ ಸಂಸ್ಕೃತಿ? ಅನ್ನೋದನ್ನು ಆ ಪಕ್ಷ ಮುಖಂಡರುಗಳೇ ಹೇಳಬೇಕು.

ಎನ್‌ ರವಿಕುಮಾರ್‌ , ಶಾಲಿನಿ ರಜನೀಶ್

ರಾಜ್ಯದಲ್ಲಿ ಬಿಜೆಪಿ ತನ್ನೊಳಗೆ ಗುಂಪುಗಾರಿಕೆಯಿಂದ ಬಳಲುತ್ತಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ವಿರುದ್ಧ ಒಂದು ರಚನಾತ್ಮಕವಾಗಿ ( constrictive)  ಪ್ರತಿಪಕ್ಷವಾಗಿ ಹೋರಾಡುವಲ್ಲಿ ನೆಲಕಚ್ಚಿರುವ ಬಿಜೆಪಿ ನಾಯಕರು  ಹತಾಶೆ ಗೊಂಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದ ಧೋರಣೆ ವಿರುದ್ಧ ಹೋರಾಡುವುದು ಪ್ರತಿಪಕ್ಷವಾಗಿ ಬಿಜೆಪಿಯ ಹಕ್ಕು, ಆದರೆ ಅವರ ಗುರಿ ಮತ್ತು ಉದ್ದೇಶ ದಿಕ್ಕು ತಪ್ಪಿದೆ.

ಸರ್ಕಾರವನ್ನು ದಂಡಿಸುವ ವಿಪಕ್ಷದ ಹೊಣೆಗಾರಿಕೆಯಿಂದ ವಿಮುಖವಾಗಿರುವ ಬಿಜೆಪಿ ನಾಯಕರು ಅಧಿಕಾರಿಗಳನ್ನು ನಿಂದಿಸುವಲ್ಲಿ ನಿರತರಾಗುವ ಮೂಲಕ ತಮಗಿರಬಹುದಾದ ರಾಜಕೀಯ ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ. 

ಕಾರ್ಯಾಂಗದ ಮುಖ್ಯಸ್ಥರು, ಸರ್ಕಾರದ ಮುಖ್ಯಕಾರ್ಯದರ್ಶಿಗಳಾಗಿರುವ ಮಹಿಳಾ ಅಧಿಕಾರಿಯನ್ನು ಗುರಿಯಾಗಿಸಿಕೊಂಡು ಸ್ತ್ರೀ ಘನತೆಗೆ ಧಕ್ಕೆಯಾಗುವಂತೆ ಲೇವಡಿ ಮಾಡಿದ ಎನ್. ರವಿಕುಮಾರ್ ಮತ್ತು ಅವರ ಅವಹೇಳನಕಾರಿ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಮುಖಂಡರುಗಳು ಬೌದ್ಧಿಕವಾಗಿ ದಿವಾಳಿಯಾಗಿರುವುದನ್ನು ರಾಜ್ಯ ಮತ್ತೆ ಮತ್ತೆ ನೋಡುವಂತಾಗಿದೆ.

ಬೆಳಗಾವಿಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಪೊಲೀಸ್ ಅಧೀನ ಅಧಿಕಾರಿಯೊಬ್ಬರಿಗೆ ಹೊಡೆಯಲು ಕೈ ಎತ್ತಿದ್ದು ಮಹಾಪರಾಧವೆಂಬಂತೆ ಚೀರಿಕೊಳ್ಳುತ್ತಿರುವ ಬಿಜೆಪಿಗರು,  ಕಾರ್ಯಾಂಗದ ಮುಖ್ಯಸ್ಥರಾಗಿರುವ ಈ ರಾಜ್ಯದ ಮುಖ್ಯಕಾರ್ಯದರ್ಶಿಯಾಗಿರುವ ಮಹಿಳೆಯ ಬಗೆಗೆ ಅವರದ್ದೇ ಪಕ್ಷದ ಪರಿಷತ್ ಸದಸ್ಯ ಆಡಿದ ಅಸಭ್ಯ ಮಾತುಗಳು ವೇದಮಂತ್ರಗಳಂತೆ ಭಾವಿಸಿ ಬೆಂಬಲಿಸುತ್ತಿರುವುದು ಲಜ್ಜೆಗೇಡಿತನದ ಪರಮಾವಧಿ.

ಕರ್ನಾಟಕದಲ್ಲಿ ರಾಜಕೀಯ ಸಂಸ್ಕೃತಿ ಉತ್ತರ ಭಾರತದ ರಾಜ್ಯಗಳಷ್ಟು ಹದಗೆಟ್ಟಿಲ್ಲ ಎಂಬ ನಂಬಿಕೆಗೆ ಬಲವಾದ ಪೆಟ್ಟು ಬೀಳುವಂತ ನಡವಳಿಕೆಗಳು ಬಿಜೆಪಿ ನಾಯಕರುಗಳಿಂದಲೆ ನಡೆದಿರುವುದು ಆಘಾತಕಾರಿ ಬೆಳವಣಿಗೆ.

ಬಹಳ ಹಿಂದಕ್ಕೆ ಹೋಗಿ ನೋಡಬೇಕಾಗಿಲ್ಲ. ಒಂದೂವರೆ ದಶಕದ ಕರ್ನಾಟಕ ರಾಜಕೀಯ ಇತಿಹಾಸವನ್ನು ಕಣ್ಣಾಡಿಸಿದರೆ ಸಚಿವರಾಗಿದ್ದವರು, ಶಾಸಕರಾಗಿದ್ದವರು ಎಸಗಿದ ಮಹಿಳಾ ದೌರ್ಜನ್ಯಗಳು ಪಕ್ಷಾತೀತವಾಗಿ  ಸಾಲು ಸಾಲು ಕಣ್ಣ ಮುಂದೆ ಬರುತ್ತವೆ. ಇವುಗಳಲ್ಲಿ ಬಿಜೆಪಿಗರದ್ದೇ ಹೆಚ್ಚಿನ ಪಾಲು,  ರಘುಪತಿಭಟ್,  ಎಂ.ಪಿ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಜೀವರಾಜ, ರಮೇಶ್ ಜಾರಕಿಹೊಳಿ ಅವರುಗಳದ್ದು ಒಂದು ಭಾಗವಾದರೆ ಅವರದ್ದೇ ಪಕ್ಷದ  ಮಾಜಿಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ, ಬಿ.ಎಸ್ ಯಡಿಯೂರಪ್ಪ, ಅವರುಗಳು ಕೂಡ ಸ್ತ್ರೀಪೀಡಕ ಆರೋಪಗಳಿಂದ ಹೊರತಾಗಿಲ್ಲ. ಆಪರೇಶನ್ ಕಮಲಕ್ಕೊಳಗಾಗಿ ಬಿಜೆಪಿ ಸೇರಿದ ಅನೇಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿಟ್ಟುಕೊಂಡಿರುವ ಮರ್ಮವಾದರೂ ಏನು? ಇದು ಕರ್ನಾಟಕದ ರಾಜಕೀಯ ಸಂಸ್ಕೃತಿಗೆ ಕಳಂಕ ಎಂದು ಅನಿಸುವುದಿಲ್ಲವೆ?!

 ‘ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ’ ಎಂಬ ಮಂತ್ರವನ್ನು ಉದ್ಧರಿಸುವ  ಬಿಜೆಪಿ ಅದೇ ಕಾಲಕ್ಕೆ  ಸ್ತ್ರೀ ದ್ವೇಷಿ ಧೋರಣೆಯನ್ನು ಹೊಂದಿದೆ ಎಂಬುದಕ್ಕೆ ವಿಧಾನಪರಿಷತ್‍ನ ಬಿಜೆಪಿ ಪಕ್ಷದ ಸಚೇತಕರೂ ಆಗಿರುವ ಎನ್. ರವಿಕುಮಾರ್ ಅವರು ಮಹಿಳಾ ಅಧಿಕಾರಿಯ ಬಗ್ಗೆ ಅಡಿರುವ ಮಾತುಗಳಿಗಿಂತ ಸಾಕ್ಷಿ ಬೇಕೆ? ಬಿಜೆಪಿಯ ಮುಖವಾಡವನ್ನು ಬಿಜೆಪಿಗರೆ ಕಳಚುತ್ತಿರುವುದು ವಿಪರ್ಯಾಸ.

ಬಿಜೆಪಿಗರು ಹೆಣ್ಣನ್ನು ಅವಮಾನಿಸುವುದು ಹೊಸತೇನಲ್ಲ. ಅದು ಅಳವಡಿಸಿಕೊಂಡಿರುವ ‘ಸಿದ್ಧಾಂತ’ದ ಮೂಲವೇ ಹೆಣ್ಣನ್ನು ಪಶುಸಮಾನವಾಗಿ ಕಾಣುವಂತದ್ದು, ಹೆಣ್ಣಿಗೆ ಸ್ವಾತಂತ್ರ್ಯ, ಶಿಕ್ಷಣ, ಅಧಿಕಾರ,  ಸಮಾನತೆ, ಹಕ್ಕುಗಳನ್ನು ಕೊಡುವಲ್ಲಿ ಮನುಪ್ರಣೀತ ಸಿದ್ಧಾಂತ ಎಂದಿಗೂ ಒಪ್ಪಿಲ್ಲ. ಈ ಸಿದ್ಧಾಂತದ ಆರ್ ಎಸ್ ಎಸ್ ನ ರಾಜಕೀಯ ಸಂಘಟನೆಯಾಗಿರುವ ಬಿಜೆಪಿ ಮಹಿಳೆಯ ಆತ್ಮ ಸಮ್ಮಾನವನ್ನು ಎಂದಿಗೂ ಗೌರವಿಸುವುದಿಲ್ಲ ಎನ್ನುವುದಕ್ಕೆ ಆರ್. ಎಸ್ ಎಸ್ ಮೂಲದಿಂದಲೆ ಬಂದ ಸಿ.ಟಿ ರವಿ,  ಎನ್ .ರವಿಕುಮಾರ್ ಅವರ ವರ್ತನೆ ಸಾಕ್ಷಿಯಾಗಿದೆ. 

ಕರಾವಳಿಯಲ್ಲಿ ಹೆಣ ಬಿದ್ದರೆ ಬಾಯಿ ಬಡಿದುಕೊಳ್ಳುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಮ್ಮ ಪಕ್ಷದ ವಿಧಾನ ಪರಿಷತ್ ಸದಸ್ಯರೊಬ್ಬರು ಈ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿರುವ ಮಹಿಳೆಯ ಕುರಿತಾಗಿ ಆಡಿರುವ ಮಾತು ಖಂಡನೀಯ ಎಂಬ ಕನಿಷ್ಠ ಸ್ತ್ರೀಸಂವೇದನೆಯೂ ಮಿಸುಕಾಡುವುದಿಲ್ಲ.

ಶೋಭಾ ಕರಂದ್ಲಾಜೆ ಮತ್ತಿ ಬಿ.ವೈ ವಿಜಯೇಂದ್ರ

ಬಿಜೆಪಿ ರಾಜ್ಯ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗೆ ಹೊಡೆಯಲು ಕೈ  ಎತ್ತಿದ್ದು ಪರಮ ಅಪರಾಧ ಎಂದು ಕಂಡಂತೆ ತಮ್ಮದೇ ಪಕ್ಷದ ಮುಖಂಡ ಮಹಿಳಾ ಆಧಿಕಾರಿಯ ಬಗ್ಗೆ ದ್ವಂದ್ವಾರ್ಥದ ಮಾತುಗಳನ್ನಾಡಿರುವುದು ಅಕ್ಷಮ್ಯ ಎನಿಸುವುದಿಲ್ಲ.

ಇನ್ನೂ ರಾಷ್ಟ್ರ ಮಟ್ಟಕ್ಕೆ ಬಂದರೆ ಬಿಜೆಪಿ ಆಡಳಿತ ರೂಢ ರಾಜ್ಯಗಳು ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯ ಬಂದಾಗ ದೇಶದಲ್ಲಿ ಬಿಜೆಪಿ ಆಡಳಿತ ರೂಢ ರಾಜ್ಯಗಳದ್ದೇ ಮೇಲುಗೈ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನಡೆಸಿದ ಚುನಾವಣಾ ಅಫಿಡೆವಿಟ್‍ಗಳ  ಆಧರಿಸಿದ  ವರದಿಯಂತೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವವರಲ್ಲಿ ಬಿಜೆಪಿ ಸಂಸದರು, ಶಾಸಕರದ್ದೇ ಸಿಂಹಪಾಲು. 151 ಸಂಸದರು, 135 ಶಾಸಕರುಗಳು ಮಹಿಳೆಯರ ಮೇಲಿನ ದೌರ್ಜನ್ಯ ನಡೆಸಿದ ಪ್ರಕರಣಗಳು ದಾಖಲಾಗಿವೆ. ಇವುಗಳ ಸಾಲಿನಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ.

ಕಳೆದ 10 ವರ್ಷಗಳಲ್ಲಿ ಉತ್ತರ ಪ್ರದೇಶದ ಉನ್ನಾವ್‍ನಲ್ಲಿ ನಡೆದ  ದಲಿತ ಯುವತಿಯ ಮೇಲಿನ ರೇಪ್ ಕೇಸ್‍ನಲ್ಲಿ ಬಿಜೆಪಿಯ ಮಾಜಿ ಎಂ ಎಲ್ ಎ ನೇರವಾಗಿ ಭಾಗಿದಾರನಾಗಿದ್ದ. ಹತ್ರಾಸ್‍ನಲ್ಲಿ ನಡೆದ  ಅತ್ಯಂತ ಬರ್ಬರ ರೇಪ್ ಪ್ರಕರಣಗಳಲ್ಲಿ ಅಧಿಕಾರ ರೂಢ ಬಿಜೆಪಿ ನಾಯಕರುಗಳೇ ಭಾಗಿಯಾಗಿದ್ದು, ಸಂತ್ರಸ್ತರನ್ನು ಗುಂಡಿಟ್ಟು ಕೊಲ್ಲಲಾಯಿತು.  ಹತ್ರಾಸ್ ರೇಪ್ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಶವವನ್ನು ಪೋಷಕರಿಗೆ ಕೊಡದೆ ಸುಟ್ಟು ಹಾಕಲಾಯಿತು. ಬಿಜೆಪಿ ಆಡಳಿತ ರಾಜ್ಯಗಳಾದ ಗುಜರಾತ್, ಒಡಿಸ್ಸಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯಗಳೇ ನಿರ್ಭಯವಾಗಿ ನಡೆಯುತ್ತಿವೆ. ಇದರಲ್ಲಿ ಬಿಜೆಪಿ ನಾಯಕರುಗಳೇ ಭಾಗಿದಾರರಾಗಿದ್ದಾರೆ. ಅಪರಾಧಿಗಳನ್ನು ರಕ್ಷಿಸುವುದು, ಮಹಿಳಾ ದೌರ್ಜನ್ಯ ಎಸಗುವವರಿಗೆ ಕುಮ್ಮಕ್ಕು ನೀಡುವುದು, ಸಂತ್ರಸ್ತರಿಗೆ ನ್ಯಾಯ ಸಿಗದಂತೆ ಮಾಡುವುದು ಇದುವೆ ಬಿಜೆಪಿಯ ಮಂತ್ರವಾಗಿದೆ. 

‘ಪಾರ್ಟಿ ವಿಥ್ ಡಿಫೆರೆನ್ಸ್’ , ಸಂಸ್ಕೃತಿ, ಸಂಸ್ಕಾರ ಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ,  ತಮ್ಮನ್ನು ತಾವು ಕೊಂಡಾಡಿಕೊಳ್ಳುವ ಬಿಜೆಪಿಯ ನಾಯಕರುಗಳೆ ಮಹಿಳೆಯರ ಕುರಿತಾಗಿ ಅಸಹ್ಯ, ಅವಹೇಳನಕಾರಿಯಾಗಿ ಮಾತಾಡುವುದು, ಅಪರಾಧಗಳ ಎಸಗುವುದನ್ನೆ  ರಾಜಕೀಯ ಸಂಸ್ಕೃತಿಯನ್ನಾಗಿಸಿಕೊಳ್ಳುವತ್ತ ಕರ್ನಾಟಕ ರಾಜಕಾರಣವನ್ನು ಕಲುಷಿತಗೊಳಿಸುತ್ತಿರುವುದು ಆಘಾತಕಾರಿ ಬೆಳವಣಿಗೆ.

ಎನ್‌ ರವಿಕುಮಾರ್

ಪತ್ರಕರ್ತರು

ಇದನ್ನೂ ಓದಿ- ನೋಡಬಾರದೇ ಚೀಲದೊಳಗನು..

More articles

Latest article