ಯುವತಿ ಮೇಲೆ ಲೈಂಗಿಕ ದೌರ್ಜನ್ಯ : ಬಿಜೆಪಿ ಮುಖಂಡ ಹರತಾಳು ಹಾಲಪ್ಪ ನಿಕಟವರ್ತಿ ಅರುಣ್ ಕುಗ್ವೆ ಬಂಧನ

Most read

ಶಿವಮೊಗ್ಗ: ಯುವತಿಯೊಬ್ಬಳಿಗೆ ಮದುವೆ ಆಗುವ ಆಸೆ ತೋರಿಸಿ ನಾಲ್ಕು ವರ್ಷಗಳಿಂದ‌ ಸಂಬಂಧ‌ ಬೆಳೆಸಿ, ಲೈಂಗಿಕ ದೌರ್ಜನ್ಯ ನಡೆಸುವ ಜೊತೆಗೆ ಕುಟುಂಬಕ್ಕೆ ಜೀವ‌ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ಮಾಜಿ ಸಚಿವ,‌ ಬಿಜೆಪಿ ಮುಖಂಡ ಹರತಾಳು ಹಾಲಪ್ಪ ಅವರ ಬಲಗೈ ಬಂಟ ಅರುಣ್ ಕುಗ್ವೆ ಎಂಬಾತನನ್ನು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.

ಯುವತಿ ಶಿವಮೊಗ್ಗ ನಗರದ ಮಹಿಳಾ ಠಾಣೆಯಲ್ಲಿ ದಾಖಲಿಸಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಅರುಣ್ ಕುಗ್ವೆಯನ್ನು ಅವನ ಮನೆಯಿಂದ ಬಂಧಿಸಿ ಪೊಲೀಸರು ಕರೆದೊಯ್ದಿದ್ದು FIR ದಾಖಲಾಗಿದೆ. ಲೈಂಗಿಕ ದೌರ್ಜನ್ಯ, ಜೀವಬೆದರಿಕೆ ಪ್ರಕರಣಗಳಲ್ಲಿ ಬಂಧಿಸಲಾಗಿದೆ.

FIR ನಲ್ಲಿ ಏನಿದೆ?

ಶಿವಮೊಗ್ಗ ನಿವಾಸಿ ಯುವತಿಯೊಂದಿಗೆ ಉದ್ಯಮಿ ಮತ್ತು ರಾಜಕಾರಣಿ ಎಂದು ಹೇಳಿಕೊಂಡಿದ್ದ ಅರುಣ್ ಕುಮಾರ್ ತನ್ನೊಂದಿಗೆ ಸಂಪರ್ಕ ಬೆಳೆಸಿದ ನಂತರದ ವಿವಿಧ ಆಮಿಷ ತೋರಿಸಿ ಮದುವೆಯಾಗುತ್ತೇನೆ ಎಂದು ಹೇಳುತ್ತಾ, ಬಲಾತ್ಕಾರ ಮಾಡಿರುತ್ತಾನೆ. ಜೋಗ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ತನ್ನೊಂದಿಗೆ ಆಮಿಷ ತೋರಿಸಿ ದೈಹಿಕ ಸಂಬಂಧ ಬೆಳೆಸಿರುತ್ತಾನೆ. ಬಲಾತ್ಕಾರವಾಗಿ ವಿಡಿಯೋ ಚಿತ್ರೀಕರಣ, ಫೋಟೋ ತೆಗೆದುಕೊಂಡಿದ್ದಾನೆ.‌ ರೌಡಿ ಎಲಿಮೆಂಟ್ ಆಗಿರವ ಅರುಣ್ ತನ್ನ ಬೇಡಿಕೆಗೆ ಒಪ್ಪದಿದ್ದರೆ ಮರ್ಡರ್ ಮಾಡಿ ಜೈಲಿಗೆ ಹೋಗುವ ಬೆದರಿಕೆ ಒಡ್ಡಿರುತ್ತಾನೆ. ಇತ್ತೀಚೆಗೆ ಬೇರೆ ಹುಡುಗಿಯರೊಂದಿಗೆ ಇದೇ ರೀತಿ ವರ್ತಿಸಿದ್ದು ಕಂಡು ಬಂದಾಗ ಆ ಬಗ್ಗೆ ಕೇಳಿದ್ದಕ್ಕೆ ಜೀವ ಬೆದರಿಕೆ ಒಡ್ಡಿರುತ್ತಾನೆ. ಈ ನಡುವೆ ಬೇರೊಬ್ಬ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿರುತ್ತಾನೆ. ಅದನ್ನ ಪ್ರಶ್ನಿಸಿದ್ದಕ್ಕೆ ಅವನ ಸೋದರ ಗಣೇಶ್ ಎಂಬುವವನು ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಯುವತಿ ದೂರು ನೀಡಿರುತ್ತಾಳೆ.‌

ಈ ಹಿನ್ನೆಲೆಯಲ್ಲಿ ಅರುಣ್ ಕುಗ್ವೆ ಮತ್ತು ಗಣೇಶ್ ಇಬ್ಬರ ಮೇಲೆ IPC ಸೆಕ್ಷನ್ 354, 376 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅರುಣ್ ಕುಗ್ವೆ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿದ್ದು, ಗಡಿಪಾರು ಸೂಚನೆಯನ್ನೂ ಹಿಂದೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಗಂಭೀರತೆಯನ್ನು ಆಧರಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅರುಣ್ ಕುಗ್ವೆ ಜೊತೆಯಲ್ಲಿ ಎರಡನೇ ಆರೋಪಿಯಾಗಿ ಆತನ ಸೋದರ ಗಣೇಶ್ ಮೇಲೂ ಪ್ರಕರಣ ದಾಖಲಿಸಲಾಗಿದೆ.

More articles

Latest article