ಆಯ್ಕೆಯ ನಿರ್ಧಾರವನ್ನು ಸರಿಯಾದ ರೀತಿಯಲ್ಲಿ ಮಾಡೋಣ, ಬೇಡದ್ದನ್ನು ನಿರಾಕರಿಸೋಣ, ವ್ಯಕ್ತಿಯಾಗಿ ಬೆಳವಣಿಗೆಗೆ ಹಂಬಲಿಸೋಣ, ನಕಾರಾತ್ಮಕತೆಯನ್ನು ದೂರವಿಡೋಣ, ಪ್ರತಿಯೊಂದನ್ನೂ ಸರಿಯಾದ ಸಿದ್ಧತೆ ಮತ್ತು ಯೋಜನೆಯೊಡನೆ ಎದುರು ನೋಡೋಣ. ನಮ್ಮ ನಿಯಂತ್ರಣಕ್ಕೆ ಮೀರಿದ್ದನ್ನು ಒಪ್ಪಿಕೊಂಡು ಮನಸಿನ ಶಾಂತಿಯನ್ನು ಕಾಪಾಡಿಕೊಳ್ಳೋಣ – ಡಾ ರೂಪಾ ರಾವ್, ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ.
ನಮ್ಮ ಬಳಿ ಇರುವ ಅತ್ಯಂತ ಶಕ್ತಿಶಾಲಿ ಸಾಧನ ಯಾವುದು?
ಕೆಲವರು ತಂತ್ರಜ್ಞಾನ, ಹಣ ಅಥವಾ ಅಧಿಕಾರ ಎಂದು ಹೇಳುತ್ತಾರೆ.
ಆದರೆ ಪ್ರಾಚೀನ ಸ್ಟೊಯಿಕ್ ತತ್ವಜ್ಞಾನಿ ಎಪಿಕ್ಟೆಟಸ್ ಹೇಳುವುದೇನೆಂದರೆ “ ಆ ಶಕ್ತಿ ಶಾಲಿ ಸಾಧನ ಎಂದರೆ ಅದು ಮಾನವನ ಮನಸು ಹಾಗೂ ಆ ಮನಸನ್ನು ಹೇಗೆ ಬಳಸುತ್ತೇವೆ ಎಂಬುದು.”
ಅವರ ಪ್ರಕಾರ ಮನಸ್ಸಿನ ಕೆಲವು ಸರಿಯಾದ ಕಾರ್ಯಗಳೆಂದರೆ-
1. ಆಯ್ಕೆಗಳನ್ನು ಮಾಡುವುದು,
2. ಪ್ರಲೋಭನೆಯನ್ನು ವಿರೋಧಿಸುವುದು,
3. ಸ್ವಯಂ ಸುಧಾರಣೆಗಾಗಿ ಹಾತೊರೆಯುವುದು,
4. ನಕಾರಾತ್ಮಕತೆಯನ್ನು ತಿರಸ್ಕರಿಸುವುದು,
5. ಸವಾಲುಗಳಿಗೆ ಸಿದ್ಧವಾಗುವುದು,
6. ನಮ್ಮ ಉದ್ದೇಶಕ್ಕೆ ಅಂಟಿಕೊಳ್ಳುವುದು
7. ನಮ್ಮ ನಿಯಂತ್ರಣಕ್ಕೆ ಮೀರಿದ್ದನ್ನು ಒಪ್ಪಿಕೊಳ್ಳುವುದು.
ಇದು ಸಿಂಪಲ್ ಅನಿಸುತ್ತದೆ ? ಆದರೆ ಸಂಪೂರ್ಣವಾಗಿ ಅಲ್ಲ. ಹೇಗೆ ನೋಡೋಣ.
1. ಆಯ್ಕೆಃ ಸರಿಯಾದ ಆಯ್ಕೆ ಮಾಡುವುದು ಮತ್ತು ಯೋಚಿಸುವುದು
ಪ್ರತಿದಿನ, ನಾವು ಲೆಕ್ಕವಿಲ್ಲದಷ್ಟು ಆಯ್ಕೆಗಳನ್ನು ಮಾಡಬೇಕಾಗುತ್ತದೆ-ಬೆಳಗಿನ ತಿಂಡಿಗೆ ಏನು ತಿನ್ನಬೇಕು, ಸಹೋದ್ಯೋಗಿಯ ವ್ಯಂಗ್ಯದ ಹೇಳಿಕೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಕೂಡ.
ಹಲವಾರು ಆಯ್ಕೆಗಳನ್ನು ಹೊಂದಿರುವುದು ಜಾಸ್ತಿ ಅನಿಸಬಹುದು ಮತ್ತು ಒಂದೇ ಸಮನೆ ನಿರ್ಧಾರ ತೆಗೆದುಕೊಳ್ಳುವುದು ಮನಸಿನ ಆಯಾಸಕ್ಕೆ ಕಾರಣವಾಗಬಹುದು. ಹಾಗಾಗಿ ಮನಸು ಕೆಲವೊಮ್ಮೆ ವಿವೇಚಿಸದೇ ನೇರ ಆಯ್ಕೆಗೆ ಇಳಿದು ಬಿಡುತ್ತದೆ. ಸರಿಯಾದ ಆಯ್ಕೆ ಮಾಡಲು ನಿಧಾನದ ಮನಸು ಬೇಕು. ಆದರೆ ಈಗಿನ ಇನ್ಸ್ಟಾಂಟ್ ಯುಗದಲ್ಲಿ ಎಲ್ಲವೂ ದಿಢೀರ್ ಎಂದು ಬಂದಾಗ ವಿವೇಚನೆಗೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ಮನಸಿಗೆ ನಿಧಾನಿಸಲು ಕಲಿಸಬೇಕು. ನಮ್ಮ ಬದುಕಿನ ಹಲವಾರು ಅವಘಡಗಳಿಗೆ ನಾವು ಮುಂದಾಲೋಚನೆ ಮಾಡದೇ ಮಾಡಿದ ಆಯ್ಕೆಯೇ ಕಾರಣ ಅನ್ನುವುದು ಎಷ್ಟು ನಿಜ ನೋಡಿ.
ಉದಾಹರಣೆಗೆ – ಬೆಳಗ್ಗೆ ಅಲಾರಾಂ ಬಾರಿಸಿತು. ಅದೇ ದಿನ ಆಫೀಸಿನಲ್ಲಿ ದೊಡ್ಡ ಪ್ರೆಸೆಂಟೇಷನ್ ಕೊಡಬೇಕಿದೆ. ನಿಮ್ಮ ಮನಸ್ಸು “ಸ್ನೂಜ್ ಪ್ರೆಸ್ ಮಾಡು ಇನ್ನೊಂದು ಸ್ವಲ್ಪ ಹೊತ್ತು ಮಲಗು !” ಎಂದು ಟೆಂಪ್ಟ್ ಮಾಡುತ್ತದೆ. ಆದರೂ ಬೇಗ ಎದ್ದು ಒಳ್ಳೆಯ ತಿಂಡಿ ತಿಂದು ಆಫೀಸಿಗೆ ಸರಿಯಾದ ಸಮಯಕ್ಕೆ ಹೋಗಲು ನಿರ್ಧಾರ ಮಾಡಿ ಏಳುತ್ತೀರಿ.. ಈ ಒಂದು ಸಣ್ಣ ನಿರ್ಧಾರ ಆ ದಿನದ ಎಲ್ಲಾ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಲು ಸಹಾಯ ಮಾಡುತ್ತದೆ.
2. ನಿರಾಕರಣೆ: ಪ್ರಲೋಭನೆಯನ್ನು ನಿರಾಕರಿಸುವುದು
ಪ್ರಲೋಭನೆಯನ್ನು( ಆಸೆ) ನಿರಾಕರಿಸುವುದು ನಿತ್ಯದ ಯುದ್ಧವೇ ಸರಿ. ಅದು ಹೆಚ್ಚು ತಿನ್ನುವ ಆಸೆಯಿಂದ ಹಿಡಿದು ಸೋಮಾರಿತನ ಮಾಡಿ ಮಲಗುವವರೆಗೂ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುವವರೆಗೂ. ವಿಲ್ ಪವರ್ ಅನ್ನುವುದು ಮಸಲ್ ತರಹವೇ. ರಾಯ್ ಬೌಮಿಸ್ಟರ್ನ ಸಂಶೋಧನೆಯು ವಿಲ್ ಪವರ್ ಅನ್ನು ನಾವು ಅದನ್ನು ಎಷ್ಟು ಪ್ರಯೋಗಿಸುತ್ತೇವೋ ಅದು ಅಷ್ಟೂ ಬಲಗೊಳ್ಳುತ್ತದೆ ಎಂದು ಹೇಳುತ್ತದೆ.
ಉದಾಹರಣೆ : ಇಡೀ ದಿನ ಸತತವಾಗಿ ಸಿನಿಮಾ ನೋಡುತ್ತಾ ಕೊನೆಗೆ ಇನ್ನೇನು ಏಳುವಾಗ ಮತ್ತೆ ಕಣ್ಣು ಹೊಸ ಸಿನಿಮಾ ಅಥವಾ ವೆಬ್ ಸಿರೀಸ್ ಮೇಲೆ ಬೀಳುತ್ತದೆ. ಹೌದು ಎಂದು ರಿಮೋಟ್ ಹಿಡಿದು ಕೂತರೆ ಅದರ ಪ್ರಲೋಭನೆಗೆ ಸಿಕ್ಕಿಹಾಕಿಕೊಂಡೆವು ಎಂದು ಅರ್ಥ.
ಆದರ ಬದಲಿಗೆ, ಇಲ್ಲ ಸಾಕು ಎಂದು ಎದ್ದು ಬೇರೆಯೇ ಕೆಲಸದಲ್ಲಿ ತೊಡಗಿಕೊಳ್ಳುವುದು ಅಥವಾ ಓದಿನಲ್ಲಿಯೋ ತೊಡಗಿಕೊಂಡರೆ ಮನಸು ಗಟ್ಟಿಯಾಗುತ್ತದೆ. ಈ ಚಿಕ್ಕ ʼಇಲ್ಲʼ ಎಂಬ ನಿರಾಕರಣೆ ನಮ್ಮ ಮಾನಸಿಕ ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ.
3. ಹಂಬಲಃ ನಾವು ಇನ್ನೂ ಉತ್ತಮವಾಗಿ ಬದುಕಬೇಕೆಂಬ ಹಂಬಲ
ಹಂಬಲ ಎಂದರೆ ಕೇವಲ ಹೆಚ್ಚು ಹಣ ಅಥವಾ ಯಶಸ್ಸನ್ನು ಬಯಸುವುದಲ್ಲ. ಇದು ನಮ್ಮದೇ ಆದ ಬೆಸ್ಟ್ ವರ್ಷನ್ ಆಗುವ ಮಹತ್ವಾಕಾಂಕ್ಷೆಯ ಬಗ್ಗೆ. ಬೆಳವಣಿಗೆಯ ಮನಃಸ್ಥಿತಿಯ ಬಗೆಗಿನ ತಮ್ಮ ಪುಸ್ತಕದಲ್ಲಿ ಕರೋಲ್ ಡ್ವೆಕ್ ಅವರು ವ್ಯಕ್ತಿ ಬೆಳವಣಿಗೆ ಪ್ರಮುಖವಾದದ್ದು. ನಾವು ಯಾವಾಗಲೂ ಬೆಳೆಯುತ್ತಾ ಹೋಗಬಹುದು ಎಂದು ನಂಬುವುದು ಯಾವಾಗಲೂ ಒಳ್ಳೆಯದು ಎಂದು ಹೇಳಿದ್ದಾರೆ. ಪ್ರತಿ ದಿನ ಪ್ರತಿ ಕ್ಷಣ ನಾವು ನಿನ್ನೆಗಿಂತ ಇನ್ನೂ ಹೆಚ್ಚು ಬೆಳೆಯಬೇಕು ಎಂಬ ಹಂಬಲವಿರಬೇಕು. ಇನ್ನೊಬ್ಬರೊಡನೆ ಕಂಟೇನರ್ ಮಾಡಿಕೊಂಡಲ್ಲ.
4. ವಿಕರ್ಷಣೆ: ನಕಾರಾತ್ಮಕತೆಯಿಂದ ದೂರ ಇರುವುದು
ನಕಾರಾತ್ಮಕತೆಯ ಸುಳಿಯಲ್ಲಿ ಬೀಳುವುದು ಎಷ್ಟು ಸುಲಭ ಎಂಬುದನ್ನು ಯಾವತ್ತಾದರೂ ಗಮನಿಸಿದ್ದೀರಾ? ವಿಕರ್ಷಣೆ ಅಂದರೆ ವಾಸ್ತವದಿಂದ ದೂರ ಓಡುವುದಲ್ಲ ; ಇದು ಟಾಕ್ಸಿಕ್ ಆಲೋಚನೆಗಳು, ಟಾಕ್ಸಿಕ್ ಜನರು ಮತ್ತು ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ವಿಷಯಗಳಿಂದ ದೂರ ಇರುವುದು. ಎಮೋಷನಲ್ ಇಂಟೆಲಿಜೆನ್ಸ್ ( ಭಾವನಾತ್ಮಕ ಬುದ್ಧಿಮತ್ತೆ ನಮ್ಮ ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದನ್ನು ಗಮನಿಸಬೇಕು.
ಉದಾಹರಣೆಗೆ ನೀವು ನೆಗೆಟೀವಿಟಿ ಹರಡುವ ಸುಳ್ಳು ಗಾಸಿಪ್‌ಗಳ ಗ್ರೂಪಿನಲ್ಲಿದ್ದೀರಿ ಅಂದುಕೊಳ್ಳಿ. ನೀವದನ್ನು ಮ್ಯೂಟ್ ಮಾಡಿಯೋ ಅಥವಾ ಅಲ್ಲಿಂದ ಹೊರ ಬರಬೇಕೆಂದು ನಿರ್ಧರಿಸಿದ ದಿನದಿಂದ ನಿಮ್ಮಲ್ಲಿ ಮೈಕ್ರೋ ಬದಲಾವಣೆಗಳನ್ನು ಕಾಣಬಹುದು.
5. ಸಿದ್ಧತೆಃ ಭವಿಷ್ಯಕ್ಕೆ ಸಿದ್ಧರಾಗಿರಬೇಕು.
ಜೀವನದಲ್ಲಿ ಬರುವ ಸನ್ನಿವೇಶಗಳು ಅನಿರೀಕ್ಷಿತ ನಿಜ. ಆದರೆ ನಮ್ಮ ದಾರಿಯಲ್ಲಿ ಬರುವ ಯಾವುದೇ ಸನ್ನಿವೇಶಗಳಿಗೆ ನಾವು ಮಾನಸಿಕವಾಗಿ ಸಿದ್ಧರಾಗಿರಬೇಕು. ಸ್ಟೀಫನ್ ಕೋವೆ ಅವರ 7 ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್ ಪುಸ್ತಕದಲ್ಲಿ ಹೇಳಿರುವಂತೆ “ಬಿಗಿನ್ ವಿತ್ ದಿ ಎಂಡ್ ಇನ್ ಮೈಂಡ್ “ ಅಂದರೆ ನಾವು ಮಾಡುವ ಯಾವುದೇ ಕಾರ್ಯವನ್ನು ಕೊನೆಯ ಹಂತದವರೆಗೆ ಗಮನದಲ್ಲಿಟ್ಟುಕೊಂಡು ಶುರು ಮಾಡಿದರೆ ಬಹುತೇಕ ಕೆಲಸಗಳು ಯಶಸ್ವಿಯಾಗುವ ಸಾಧ್ಯತೆ ಇದೆ.
ಉದಾಹರಣೆಗೆ ಮೇಲಧಿಕಾರಿಯೊಂದಿಗೆ ಸ್ವಲ್ಪ ಕಠಿಣ ಹಾಗೂ ಕಾಂಪ್ಲೆಕ್ಸ್ ಚರ್ಚೆ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಅದಕ್ಕಾಗಿ ಹೆದರುವ ಬದಲು, ನಿಮ್ಮ ಅಂಕಿ ಅಂಶಗಳು, ಮಾತನಾಡಬೇಕಾದ ಪಾಯಿಂಟ್‌ಗಳು ಎಲ್ಲವನ್ನೂ ಯೋಚಿಸಿ, ಶಾಂತ ಮತ್ತು ಸಕಾರಾತ್ಮಕ ಫಲಿತಾಂಶವನ್ನು ಮನಸಿನ ಕಣ್ಣಿನಲ್ಲಿ ವಿಶ್ಯುಲೈಸ್ ಮಾಡಿದರೆ ಮುಂದಾಗುವುದನ್ನು ಮನಸಿನಲ್ಲಿ ಇಡೀ ರಿಹರ್ಸಲ್ ಮಾಡಿದಂತಾಗಿ ಆತಂಕಕ್ಕೊಳಗಾಗುವ ಬದಲು ಧೈರ್ಯದಿಂದ ಸಿದ್ಧರಾಗಿರಬಹುದು.ಅತ್ಯಂತ ಒಳ್ಳೆಯ ಸ್ಥಿತಿಯನ್ನು ಎದುರು ನೋಡಿ ಆದರೆ ಅತ್ಯಂತ ಕೆಟ್ಟ ಸ್ಥಿತಿಗಾಗಿ ಸಿದ್ಧರಾಗಿರಿ.
6. ಉದ್ದೇಶಃ ನಮ್ಮ ಪ್ರತಿಯೊಂದೂ ಕೆಲಸದ ಸ್ಪಷ್ಟ ಉದ್ದೇಶ.
ಜೀವನದಲ್ಲಿ ಪರ್ಪಸ್ ಅಥವಾ ಮೀನಿಂಗ್ ಇದ್ದಾಗ ಅಂದರೆ ಈ ಕಾರ್ಯದ ಗಮ್ಯ ಎಲ್ಲಿಗೆ ಅಥವಾ ನಮ್ಮ ಬದುಕಿನ ಗಮ್ಯ ಯಾವುದು ಎಂದು ತಿಳಿದಿದ್ದಾಗ ಬದುಕು ಎಷ್ಟೇ ಕಷ್ಟವಾದರೂ ಮೇಲೆ ಹೇಳಿದ ಉದ್ದೇಶ ನಮ್ಮನ್ನು ಕೈ ಹಿಡಿದು ನಡೆಸುತ್ತದೆ. ನಮಗಾಗಿ ಏನೋ ಒಂದು ಕಾದಿದೆ, ಅದನ್ನೆ ಪ್ರಕೃತಿ ಹಾಗು ಭೂಮಿ ಕೂಡ ನಂಬಿದೆ.
ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ ಎನ್ನುವ ಪುಸ್ತಕದಲ್ಲಿ, ಉದ್ದೇಶದ ಅರಿವನ್ನು ಹೊಂದಿರುವುದು ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಸಹ ಜಯಿಸಲು ನಮಗೆ ಸಹಾಯ ಮಾಡುತ್ತದೆ ಎಂದು ವಿಕ್ಟರ್ ಫ್ರಾಂಕ್ಲ್ ಹೇಳುತ್ತಾರೆ.
7 ಸ್ವೀಕಾರ : ನಮ್ಮ ನಿಯಂತ್ರಣದಲ್ಲಿ ಇರದಿರುವುದನ್ನು ಒಪ್ಪುವುದು
ಇದು ಬಹುಶಃ ಅತ್ಯಂತ ಕಠಿಣವಾದ ವಿಷಯ. ಹೇಳಿದಷ್ಟು ಸುಲಭವಲ್ಲ-ನಾವು ನಿಯಂತ್ರಿಸಲು ಸಾಧ್ಯವಾಗದ್ದನ್ನು ಒಪ್ಪಿ ಮುಂದೆ ಹೋಗುವುದು..
ಉದಾಹರಣೆಗೆ- ಯಾರದ್ದೋ ಮನಸು ನಿಮಗಾಗಿ ಒಲಿಯದೇ ಇರುವುದು, ಇನ್ಯಾವುದೋ ಕೆಲಸ ಯಾವುದೋ ಕಾರಣಕ್ಕೆ ಕೈ ತಪ್ಪಿ ಹೋಗುವುದು. ಯಾರೋ ನಮ್ಮನ್ನು ಇಷ್ಟ ಪಡದೇ ಇರುವುದು ಇಂತಹವುಗಳು ನಮ್ಮ ನಿಯಂತ್ರಣದಲ್ಲಿ ಇಲ್ಲದಾಗ ಅದನ್ನು ಒಪ್ಪಿಕೊಂಡು ಮುನ್ನಡೆಯುವುದು. ಇದರಿಂದ ನಮ್ಮ ಮನಸ್ಸಿನ ಶಾಂತಿ ಹಾಗು ನೆಮ್ಮದಿಯಾದರೂ ಕದಡದೇ ಇರುತ್ತದೆ.
ಕೊನೆಯದಾಗಿ, ಮನಸ್ಸು ನಮ್ಮ ಬದುಕಿನ ಅತಿದೊಡ್ಡ ಉಪಯುಕ್ತ ಸಾಧನ ನಿಜ, ಆದರೆ ನಾವು ಅದನ್ನು ಸರಿಯಾಗಿ ಬಳಸದಿದ್ದರೆ ಅದು ನಮ್ಮ ಅತಿದೊಡ್ಡ ಶತ್ರುವಾಗಬಹುದು.
ಈ ಮನಸನ್ನು ಕಲುಷಿತಗೊಳಿಸಲು ಯಾರಿಗೂ ಸಾಧ್ಯವಿಲ್ಲ ಹಾಗೊಮ್ಮೆ ಸಾಧ್ಯ ಆಗುವುದಾದರೆ ನಮ್ಮ ಸ್ವಂತ ಕೆಟ್ಟ ನಿರ್ಧಾರಗಳಿಂದ ಮಾತ್ರ ಸಾಧ್ಯ .
ಅದೃಷ್ಟವಶಾತ್ ನಮ್ಮ ನಿರ್ಧಾರವನ್ನು ಸರಿಯಾದ ರೀತಿಯಲ್ಲಿ ಮಾಡುವ ಸ್ವಾತಂತ್ರ್ಯ ಹಾಗು ವಿವೇಚನೆ ಎರಡೂ ನಮಗಿವೆ. ನಮ್ಮ ನಿರ್ಧಾರ ಅಥವಾ ಆಯ್ಕೆ ಏನೇ ಆಗಿದ್ದರೂ ಅದರ ಕಾನ್ಸೀಕ್ವೆನ್ಸ್ ಅನುಭವಿಸುವವರು ಕೂಡ ನಾವೇ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನ ಪ್ರತಿಯೊಂದನ್ನು ಆಯ್ಕೆ ಮಾಡಬೇಕು..
ಆದ್ದರಿಂದ,
ಡಾ ರೂಪಾ ರಾವ್
ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ
ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 97408 66990
ಇದನ್ನೂ ಓದಿ- ಮೊಬೈಲ್ ಪರದೆ ಮತ್ತು ಈಗಿನ ಪೀಳಿಗೆ