ಬೆಂಗಳೂರು: ನಗರದಲ್ಲಿ ಗಂಭೀರ ಪ್ರಕರಣಗಳು ಹಾಗೂ ಅಪಘಾತಗಳು ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ. ಆಡುಗೋಡಿಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆಯ ಕವಾಯಿತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಕವಾಯಿತಿನಲ್ಲಿ ಅವರು ವಂದನೆ ಸ್ವೀಕರಿಸಿ ಮಾತನಾಡಿದರು. ಪ್ರಮುಖವಾಗಿ ಪೊಲೀಸರಿಗೆ ಮಾದಕ ವಸ್ತು ಸಾಗಾಣೆ ಮತ್ತು ಮಾರಾಟ ಪ್ರಕರಣಗಳು ಸವಾಲಾಗಿತ್ತು. ಈಗ ಸಾಕಷ್ಟು ನಿಯಂತ್ರಣ ಮಾಡಿದ್ದೇವೆ. ಹಾಗೆಯೇ ಸೈಬರ್ ಪ್ರಕರಣಗಳ ವಂಚನೆಯನ್ನೂ ತಹಬದಿಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಕಳೆದ ವರ್ಷ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ವರ್ಷಗಟ್ಟಲೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು. ನಗರ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಶಿಸಿದ್ದಾರೆ. ಇದೇ ರೀತಿ ಮುಂದೆಯೂ ಕರ್ತವ್ಯ ನಿರ್ವಹಿಸುವಂತೆ ಆಯುಕ್ತರು ಕರೆ ನೀಡಿದರು.
ಪೊಲೀಸರ ಕಾರ್ಯವೈಖರಿಗೆ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಕೆಲಸ ಕಾರ್ಯಗಳು ಪಾರದರ್ಶಕ ಹಾಗೂ ಜನಸ್ನೇಹಿಯಾಗಬೇಕು ಎಂದರು. ನಗರದಲ್ಲಿ ಸಂಚಾರ ನಿರ್ವಹಣೆ ದೊಡ್ಡ ಸವಾಲಾಗಿದ್ದು, ಸಂಚಾರಿ ಪೊಲೀಸರು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅಪಾಯಕಾರಿ ವೀಲಿಂಗ್ ಪ್ರಕರಣಗಳನ್ನು ಪತ್ತೆಹಚ್ಚಿ ಸಾಕಷ್ಟು ನಿಯಂತ್ರಣಕ್ಕೆ ತರಲಾಗುತ್ತಿದೆ. ಅಪರಾಧ ಪ್ರಕರಣಗಳನ್ನು ಸಿಸಿ ಕ್ಯಾಮರಾ ನೆರವಿನಿಂದ ಪತ್ತೆಹಚ್ಚಲಾಗಿದೆ. ನಗರದೆಲ್ಲೆಡೆ ಇದುವರೆಗೂ ಒಟ್ಟು 3.50 ಲಕ್ಷ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಒಂದೂವರೆ ಲಕ್ಷ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ಗಮನ ಹರಿಸಬೇಕು. ಎಲ್ಲರೂ ಕೂಡ ಉತ್ತಮ ವಾತಾವರಣದಲ್ಲಿ ಕೆಲಸ ಮಾಡಬೇಕು. ಕೆಲಸದ ಹೊರತಾಗಿ ತಮ್ಮ ಕುಟುಂಬಕ್ಕೂ ಸಮಯ ಕೊಡಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಿಬ್ಬಂದಿಗಳಿ ಆಯುಕ್ತರು ಕಿವಿ ಮಾತು ಹೇಳಿದರು.