ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಶಾಸಕ ದೇಶಪಾಂಡೆ ಸ್ಪಷ್ಟನೆ

Most read

ಬೆಂಗಳೂರು: ಮಹಿಳಾ ಪತ್ರಕರ್ತೆಯನ್ನು ಕುರಿತ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌ ವಿ ದೇಶಪಾಂಡೆ ಸ್ಪಷ್ಟನೆ  ನೀಡಿದ್ದಾರೆ.

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನಗೆ ಹಲವು ವರ್ಷಗಳಿಂದ ಆ ಮಹಿಳಾ ಪತ್ರಕರ್ತೆಯ ಪರಿಚಯ ಇದೆ. ಪರಿಚಯ ಇದ್ದ ಕಾರಣಕ್ಕೆ ಸಾಮಾನ್ಯವಾಗಿ ಪ್ರತಿಕ್ರಿಯೆ ನೀಡಿದ್ದೆ. ನಾನು ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ನಾನು ಅವರ ಜೊತೆ ಗೌರವದಿಂದ ನಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಕುರಿತು ಪತ್ರಕರ್ತೆಯೊಬ್ಬರು ದೇಶಪಾಂಡೆ ಅವರನ್ನು ಪ್ರಶ್ನಿಸಿದ್ದರು. ಆಗ ಉತ್ತರಿಸಿದ ದೇಶಪಾಂಡೆ ಅವರು, ನಿನಗೆ ಹೆರಿಗೆಗೆ ಸಮಸ್ಯೆಯಾದರೆ ಹಳಿಯಾಳದಲ್ಲಿ ಹೆರಿಗೆ ಮಾಡಿಸಿಕೊಡುವೆ ಎಂದು ಲಘುವಾಗಿ ಉತ್ತರಿಸಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ದೇಶಪಾಂಡೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಶಾಸಕರ ಹೇಳಿಕೆಯನ್ನು ಕರ್ನಾಟಕ ಮಹಿಳಾ ಪತ್ರಕರ್ತರ ಸಂಘ ಖಂಡಿಸಿದ್ದು, ಮಹಿಳಾ ಪತ್ರಕರ್ತೆಯರು ಮತ್ತು ಮಾಧ್ಯಮ ಸಮುದಾಯದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು.

ಇದೇ ವೇಳೆ ಸಾರ್ವಜನಿಕ ಜೀವನದಲ್ಲಿರುವವರು ಘನತೆ, ಗೌರವ ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಶಾಸಕರು ಮತ್ತು ನಾಯಕರಿಗೆ ನಿರ್ದೇಶನ ನೀಡಬೇಕು ಎಂದೂ ಮಹಿಳಾ ಪತ್ರಕರ್ತೆಯರ ಸಂಘ  ಮುಖ್ಯಮಂತ್ರಿಗಳನ್ನು ಆಗ್ರಹಪಡಿಸಿತ್ತು.

ಪತ್ರಕರ್ತರು ಕೇಳುವ ಪ್ರತಿಯೊಂದು ಪ್ರಶ್ನೆಯೂ ಮೇಲೆ ರಾಜ್ಯದ ಜನರ ಸಂಕಷ್ಟಗಳನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಚುನಾಯಿತ ಪ್ರತಿನಿಧಿಗಳು ಸದಾ ನೆನಪಿನಲ್ಲಿಡಬೇಕು. ಪತ್ರಕರ್ತಕನ್ನು ಕೀಳಾಗಿ ನೋಡುವುದು, ನಿರ್ಲಕ್ಷಿಸುವುದು, ಅವಮಾನಿಸುವುದು ಶಾಸಕರನ್ನು ಅಧಿಕಾರಕ್ಕೆ ತಂದ ಜನರನ್ನುಕಡೆಗಣಿಸಿದಂತೆ ಎಂದು ಅಭಿಪ್ರಾಯಪಟ್ಟಿತ್ತು.

More articles

Latest article