ಬೆಂಗಳೂರು: ಬೆಳಗಾವಿಯಲ್ಲಿ ಸೋಮವಾರ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಪ್ರತಿಕ್ರಿಯಿಸುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎ ಎಸ್ ಪಿ ಮೇಲೆ ಮುಖ್ಯಮಂತ್ರಿ ಕೈ ಮಾಡಲು ಹೋಗಿರುವ ಪ್ರಕರಣ ಕುರಿತು ನನಗೆ ಖಚಿತ ಮಾಹಿತಿ ಇಲ್ಲ. ನಡೆದಿರುವ ಘಟನೆ ಏನು? ಕೋಪಗೊಂಡದ್ದು ಏಕೆ ಎಂಬುದರ ಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಕೆಲವು ಕಾರ್ಯಕರ್ತರು ಕಾಂಗ್ರೆಸ್ ಶಾಲುಗಳನ್ನು ಹಾಕಿಕೊಂಡು ಸಭಾಂಗಣಕ್ಕೆ ಪ್ರವೇಶಿಸಿದ್ದರು. ಎಲ್ಲ ಮುಖಂಡರು ಮಾತಾಡುವಾಗ ಸುಮ್ಮನಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತಾಡುವಾಗ ಮಾತ್ರ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರಿಂದ ಲೋಪ ಆಗಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿಯವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಘಟನೆ ಭದ್ರತಾ ವೈಫಲ್ಯ ಎನ್ನುವುದಾದರೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಶಾಲು ಯಾಕೆ ಹಾಕಿಕೊಂಡು ಅಲ್ಲಿಗೆ ಬಂದಿದ್ದು ಏಕೆ? ಬಿಜೆಪಿ ಶಾಲು ಹಾಕಿಕೊಂಡು ಬರಬಹುದಿತ್ತಲ್ಲವೇ? ಬಿಜೆಪಿ ಶಾಲು ಹಾಕಿಕೊಂಡು ಬಂದಿದ್ದರೆ ಭದ್ರತಾ ವೈಫಲ್ಯವೇ ಅಥವಾ ಏನು ಎನ್ನುವುದು ಖಚಿತವಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡು ಬರುವುದಕ್ಕೆ ಇವರಿಗೆ ಯಾವ ನೈತಿಕತೆ ಇತ್ತು ಎಂದು ಪರಮೇಶ್ವರ್ ಪ್ರಶ್ನಿಸಿದರು.
ಯುದ್ಧ ಬೇಡ ಏಕೆ ಬೇಡ ಎಂದು ಹೇಳಿದ್ದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಅಗತ್ಯ ಬಿದ್ದರೆ ಯುದ್ಧ ಮಾಡಲು ಹಿಂದೆ ನೋಡಬಾರದು ಎಂದೂ ಹೇಳಿದ್ದಾರೆ ಎಂದರು.
ಪಹಲ್ಗಾಮ್ ಘಟನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮೃದು ಧೋರಣೆ ತೋರುತ್ತಿಲ್ಲ. ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವ ತ್ಯಾಗವನ್ನು ಇನ್ಯಾವ ಪಕ್ಷವೂ ಮಾಡಿಲ್ಲ. ಆ ಮಟ್ಟದಲ್ಲಿ ತ್ಯಾಗ, ಬಲಿದಾನ ದೇಶದ ಭದ್ರತೆಗೆ ಕಾಂಗ್ರೆಸ್ ಪಕ್ಷ ಮಾಡಿದೆ. ಮೃದುಧೋರಣೆ ತೋರಿಸುತ್ತಾರೆ ಎಂದರೆ, ದೇಶದಲ್ಲಿ ಅಭದ್ರತೆ ಇರಲಿ ಎಂದು ಬಿಟ್ಟುಬಿಡುತ್ತೇವೆಯೇ? ಎಂದು ಮರು ಪ್ರಶ್ನೆ ಹಾಕಿದರು.
ದೇಶದ ಭದ್ರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಧಿಕಾರದಲ್ಲಿ ಇರುವವರಿಗೆ ಹೆಚ್ಚಿನ ಜವಬ್ದಾರಿ ಇರುತ್ತದೆ. ಅವರಿಗೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. ನಮಗೂ ಜವಾಬ್ದಾರಿ ಇರುತ್ತದೆ. ದೆಹಲಿಯಲ್ಲಿ ನಡೆದ ಸರ್ವ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಅಧ್ಯಕ್ಷರು, ನಮ್ಮ ಪಕ್ಷದ ಪ್ರತಿನಿಧಿಗಳು ಕೂಡ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದರು.
ಪಹಲ್ಗಾಂ ದುರಂತ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರ. ಪಕ್ಷಾತೀತವಾಗಿ ಈ ಘಟನೆಯನ್ನು ನೋಡಬೇಕು ಮತ್ತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹಿಂದೆಯೇ ಹೇಳಿದ್ದೇನೆ. ದೇಶದ ಭದ್ರತೆಗೆ ಕೇಂದ್ರ ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರೂ ನಮ್ಮ ಸಹಕಾರ ಇರುತ್ತದೆ. ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಜತೆ ಇರಲಿದೆ ಎಂಬುದನ್ನು ಎಐಸಿಸಿ ಅಧಿಕೃತವಾಗಿ ಹೇಳಿದೆ ಎಂದು ಪರಮೇಶ್ವರ್ ತಿಳಿಸಿದರು.