ಬೆಂಗಳೂರು: ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಒಬ್ಬ ಮನೆ ಮಾಲೀಕರು ಊರಿಗೆ ಹೋಗಿದ್ದಾಗ ಮನೆಯಲ್ಲಿದ್ದ ನಗದು ಸೇರಿದಂತೆ 15 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ದಂಪತಿ ಹಾಗೂ ಮೂವರು ಸಹಚರರು ಈ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಜ್ಯುವೆಲರಿ ಅಂಗಡಿ ಮಾಲೀಕರೊಬ್ಬರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಈ ಕೃತ್ಯ ಎಸಗಿದ್ದು ನಗದು ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ನೇಪಾಳಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಯ ಬಂಧನಕ್ಕಾಗಿ ಪೊಲೀಸರ ಒಂದು ತಂಡ ಸದ್ಯದಲ್ಲೇ ಅಲ್ಲಿಗೆ ತೆರಳಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಜಯನಗರದ ಹೊಸಹಳ್ಳಿ ನಿವಾಸಿ ಸುರೇಂದ್ರ ಕುಮಾರ್ ಜೈನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ದಂಪತಿ ಹಾಗೂ ಮೂವರು ಸಹಚರರಿಗಾಗಿ ವಿಜಯನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸುರೇಂದ್ರ ಕುಮಾರ್ ಅವರು ಧಾರ್ಮಿಕ ಕಾರ್ಯ ನಿಮಿತ್ತ ಕುಟುಂಬ ಸಮೇತ ಗುಜರಾತ್‌ಗೆ ಹೋಗಿದ್ದರು. ಆಗ ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್ ನಮಾಜ್ ಭಾತಾ, ಇವರ ಪತ್ನಿ ಹಾಗೂ ಮೂವರು ಸಹಚರರೊಂದಿಗೆ ಸೇರಿಕೊಂಡು ಮನೆಯ ಬೀರು ಒಡೆದು 40 ಲಕ್ಷ ನಗದು, 14.75 ಕೋಟಿ ಮೌಲ್ಯದ 18 ಕೆಜಿ 470 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗುಜರಾತಿನಿಂದ ಮನೆಗೆ ಮರಳಿ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸೆಕ್ಯೂರಿಟಿಗಾರ್ಡ್ ಮೊಬೈಲ್ ಸ್ವಿಚ್ ಆಫ್ ಆಗಿರುವುದಲ್ಲದೆ ಮನೆ ಖಾಲಿ ಮಾಡಿಕೊಂಡು ಹೋಗಿರುವುದು ತಿಳಿದು ಬಂದಿದೆ. ತಕ್ಷಣ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ.
ಈ ತಂಡಗಳು ಈಗಾಗಲೇ ದೆಹಲಿ, ಬಾಂಬೆ, ಕೋಲ್ಕತ್ತಾದಲ್ಲಿ ಶೋಧ ನಡೆಸಿದಾಗ ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ದೆಹಲಿಯಿಂದ ನೇಪಾಳಕ್ಕೆ ಹೋಗಿರುವ ಬಗ್ಗೆ ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸದ್ಯದಲ್ಲೇ ಒಂದು ತಂಡ ನೇಪಾಳಕ್ಕೆ ತೆರಳಲಿದೆ ಎಂದು ತಿಳಿದು ಬಂದಿದೆ.