ಬೆಳಗಾವಿ: ದೆಹಲಿಯಲ್ಲಿ ಈಗಾಗಲೇ ಜಾರಿಯಲ್ಲಿರುವ ವಾಹನಗಳ ಗುಜರಿ ನೀತಿಯನ್ನು ರಾಜ್ಯದಲ್ಲೂ ಗಂಭೀರವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ವಿಧಾನ ಪರಿಷತ್ತಿನಲ್ಲಿ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ರಾಜ್ಯದ ಎಲ್ಲಾ ಸರಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ ಮತ್ತು ಇತರ ಅಧೀನ ಸಂಸ್ಥೆಗಳಿಗೆ ಸೇರಿದ ನೋಂದಣಿಯಾಗಿ 15 ವರ್ಷ ತುಂಬಿರುವ ವಾಹನಗಳನ್ನು ಕಡ್ಡಾಯವಾಗಿ ರಿಜಿಸ್ಟರ್ಡ ವೆಹಿಕಲ್ ಸ್ಕ್ರ್ಯಾಪಿಂಗ್ ಫೆಸಿಲಿಟಿ (Registered Vehicle Scrapping Facility) ಅಡಿಯಲ್ಲಿ ನಾಶ ಮಾಡಲು ಕಳೆದ ಸೆಪ್ಡೆಂಬರ್ 12ರಂದು ಅನುಮೋದನೆ ನೀಡಲಾಗಿದೆ ಎಂದರು.
ಸಾರಿಗೆ ಸಂಸ್ಥೆಗಳ ಬಸ್ಸುಗಳನ್ನು ಹೊರತುಪಡಿಸಿ. ರಾಜ್ಯದಲ್ಲಿ 4-12-2025ರ ಅಂತ್ಯಕ್ಕೆ ಹದಿನೈದ ವರ್ಷ ಮೀರಿದ ಒಟ್ಟು 18,552 ವಾಹನಗಳಿವೆ. ಈ ವಾಹನಗಳ ಪೈಕಿ ಆರ್ ವಿಎಸ್ ಎಫ್ (Registered Vehicle Scrapping Facility) ನಲ್ಲಿ ಒಟ್ಟು 1,493 ವಾಹನಗಳನ್ನು ಈಗಾಗಲೇ ಸ್ಕ್ರ್ಯಾಪ್ ಮಾಡಲಾಗಿದ್ದು, 17,059 ವಾಹನಗಳ ಸ್ಕ್ರ್ಯಾಪ್ ಬಾಕಿ ಇದೆ. 2023ರಿಂದ ಇದುವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮ ಸಂಸ್ಥೆಗಳಲ್ಲಿ 3212 ವಾಹನಗಳು ನಿಷ್ಕ್ರಿಯಗೊಳಿಸಲಾಗಿದ್ದು ಇನ್ನೂ 579 ವಾಹನಗಳನ್ನು ನಿಷ್ಕ್ರಿಯಗೊಳಿಸುವುದು ಬಾಕಿ ಇದೆ ಎಂದು ಸಚಿವರು ಮಾಹಿತಿ ನೀಡಿದರು.
ಬೌದ್ಧ ಭಿಕ್ಕುಗಳಿಗೆ ಮಾಸಿಕ ವೇತನ:
ಇದೇ ವೇಳೆ ರಾಜ್ಯದ ಬೌದ್ಧ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೌದ್ಧ ಭಿಕ್ಕುಗಳಿಗೆ ತಕ್ಷಣದಿಂದಲೇ ಅನ್ವಯವಾಗುವಂತೆ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಮಾಸಿಕ ವೇತನವನ್ನು ನೀಡಲಾಗುವುದು ಎಂದೂ ತಿಳಿಸಿದರು.
ಪ್ರಶ್ನೋತ್ತರ ವೇಳೆ ಶಿವಕುಮಾರ್.ಕೆ ಅವರ ಪ್ರಶ್ನೆಗೆ ವಕ್ಫ್ ಮತ್ತು ಅಲಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರ ಪರವಾಗಿ ಉತ್ತರಿಸಿದ ರಾಮಲಿಂಗಾರೆಡ್ಡಿ ಅವರು, ರಾಜ್ಯದ ನಾನಾ ಕಡೆ ಬೌದ್ಧ ಕೇಂದ್ರಗಳಲ್ಲಿ ಬೌದ್ಧ ಭಿಕ್ಕುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಭಾಗಗಳಲ್ಲಿ ದೈನಂದಿನ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎನ್ನುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಇಲಾಖೆ ವತಿಯಿಂದಲೇ ಅವರಿಗೆ ಮಾಸಿಕ ವೇತನ ನೀಡುವುದಾಗಿ ತಿಳಿಸಿದರು.
ಸರ್ಕಾರ ಅವರ ಹಿತ ಕಾಪಾಡಲು ಬದ್ಧವಾಗಿದ್ದು, ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ತತ್ ಕ್ಷಣದಿಂದಲೇ ಜಾರಿಯಾಗುವಂತೆ ವೇತನ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ನೊಂದಾಯಿತ ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಅರ್ಚಕರಿಗೆ ರೂ. 6000, ಸಹಾಯಕ ಅರ್ಚಕರಿಗೆ ರೂ. 5000 ರೂ. ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್, ಇಮಾಮ್ ಮತ್ತು ಮುಯಿಜೀನ್ ಅವರುಗಳಿಗೆ ಕ್ರಮವಾಗಿ ಕ್ರಮವಾಗಿ 6 ಸಾವಿರ ಹಾಗೂ ರೂ. 5000 ಮಾಸಿಕ ವೇತನ ನೀಡುತ್ತಾ ಬರಲಾಗಿದೆ ಎಂದೂ ತಿಳಿಸಿದರು.

