ಉಡುಪಿ: ಅನುಮತಿಯಿಲ್ಲದೆ ಜಾಥಾ ನಡೆಸಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನಾಯಕರ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೆಜಮಾಡಿ ಟೋಲ್ ಗೇಟ್ ಬಳಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2 ರ‍್ಯಾಲಿ ನಡೆಸಿದ್ದಾರೆ. ಈ ಟೋಲ್ ಗೇಟ್ ಬಳಿ ಪೊಲೀಸರು ಜಾಥಾ ನಡೆಸದಂತೆ ಎಚ್ಚರಿಕೆ ನೀಡಿದ್ದರೂ ಎಸ್ ಪಿಡಿಐ ಮುಖಂಡರು ಜಾಥಾ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಕಾನೂನುಬಾಹಿರ ಸಭೆ ಮತ್ತು ಸಂಚಾರಕ್ಕೆ ಅಡ್ಡಿಪಡಿಸುವ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.
ಎಸ್‌ಡಿಪಿಐ ಮುಖಂಡರಾದ ಬಿ.ಆರ್. ಭಾಸ್ಕರ್ ಪ್ರಸಾದ್, ಶಾಹಿದ್ ಅಲಿ, ಅಪ್ಸರ್ ಕೊಡ್ಲಿಪೇಟೆ, ರಿಯಾಜ್ ಕಡುಂಬು ಸೂಕ್ತ ಅನುಮತಿ ಪಡೆಯದೆ ರ್ಯಾ ಲಿ ನಡೆಸುತ್ತಿದ್ದಾರೆ ಎಂದು ಉಡುಪಿ ನಗರ ಠಾಣೆಯ ಪಿಎಸ್ಐ ಭರತೇಶ್ ದೂರು ನೀಡಿದ್ದರು. 75ರಿಂದ 100 ಎಸ್ ಡಿಪಿಐ ಕಾರ್ಯಕರ್ತರು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಜಾಥಾ ನಡೆಸಿದ್ದಾರೆ. ಉಡುಪಿಯಿಂದ ಬೆಳಗಾವಿಗೆ ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2 ರ್ಯಾ ಲಿ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಈ ಜಾಥಾ ನಡೆಸಿದ್ದೇವೆ ಎಂದು ಸಂಘಟಕರು ಹೇಳಿದ್ದಾರೆ.