ಚಾಮರಾಜನಗರ: ಜಾತಿ ವ್ಯವಸ್ಥೆಯ ಪರಿಣಾಮವಾಗಿ ಅನೇಕರಲ್ಲಿ ಈಗಲೂ ಗುಲಾಮಗಿರಿಯ ಮನಸ್ಥಿತಿ ಇದೆ. ಇದನ್ನು ಕಿತ್ತೊಗೆಯಲು ಗುಣಮಟ್ಟದ, ವೈಜ್ಞಾನಿಕ, ವೈಚಾರಿಕತೆಯ ಶಿಕ್ಷಣ ದೊರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಕೊಳ್ಳೇಗಾಲ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆ.ಎಸ್.ಎಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಡಾ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ 109 ನೇ ಜಯಂತ್ಯೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಮಾಜದಲ್ಲಿ ಬದಲಾವಣೆ ತರಲು, ಮುಖ್ಯವಾಹಿನಿಗೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಇಲ್ಲದೇ ಹೋದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವಾಗುವುದಿಲ್ಲ. ಗುಲಾಮಗಿರಿ ಮನಸ್ಥಿತಿಯನ್ನು ಕಿತ್ತೊಗೆಯಬೇಕು. ಇದು ವೈಜ್ಞಾನಿಕ ಶಿಕ್ಷಣದಿಂದ ಸಾಧ್ಯ ಎಂದರು. ಮಾನವ ಸಮಾಜದಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಧ್ವೇಷಿಸುವುದನ್ನು ಸಂಪೂರ್ಣವಾಗಿ ಬಿಡಬೇಕು. ಎಲ್ಲರೂ ಕೂಡ ಮಾನವ ಸಮಾಜವನ್ನು ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದು ಸಂತರು, ಸಾಧುಗಳು, ಸೂಫಿಗಳು, ಸಮಾಜ ಸುಧಾರಕರು ಈ ದೇಶದಲ್ಲಿ ಹೇಳಿದ್ದಾರೆ. ಸುತ್ತೂರು ಗ್ರಾಮದಿಂದ ಬಂದ ಸ್ವಾಮಿಗಳು ಹಳ್ಳಿ ಜನರ ಬದುಕನ್ನು ಅರ್ಥ ಮಾಡಿಕೊಂಡಿದ್ದರು. ಸಮಾಜದಲ್ಲಿ ಅನೇಕ ನೂನ್ಯತೆ, ಅಸಮಾನತೆಗಳನ್ನು ಕಾಣುತ್ತೇವೆ. ಅಸಮಾನತೆ ನಿರ್ಮಾಣವಾಗಿದ್ದರೆ ಜಾತಿ ವ್ಯವಸ್ಥೆಯ ಕಾರಣದಿಂದ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಬಹುಸಂಖ್ಯಾತ ಜನ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದರು ಎಂದರು.
ಸಂವಿಧಾನದಿಂದ ಎಲ್ಲರಿಗೂ ಸಮಾನ ಅವಕಾಶಗಳು: ವ್ಯಕ್ತಿಯ ಯೋಗ್ಯತೆಯನ್ನು ಅವನ ಜಾತಿಯ ಆಧಾರದ ಮೇಲೆ ಅಳೆಯಲಾಗುತ್ತದೆ. ನೈಜ ಪ್ರತಿಭೆಯನ್ನು ಸಾಧನೆಯಿಂದ ಅಳೆಯಲಾಗುತ್ತದೆ. ಇದನ್ನು ರಾಜೇಂದ್ರ ಸ್ವಾಮಿಗಳು ಕಣ್ಣಾರೆ ಕಂಡಿದ್ದ ರಾಜೇಂದ್ರ ಸ್ವಾಮಿಗಳು ಶಿಕ್ಷಣ ಬಹಳ ಮುಖ್ಯ ಎಂದು ಅರ್ಥ ಮಾಡಿಕೊಂಡಿದ್ದರು. ಸುತ್ತೂರಿನಿಂದ ಮೈಸೂರಿಗೆ ಬಂದ ನಂತರ ವಸತಿ ನಿಲಯಗಳನ್ನು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡಿದರು. ವಸತಿ ನಿಲಯಗಳಿಲ್ಲದೇ ಹೋದರೇ ಬಹಳ ಜನರಿಗೆ ಓದುವ ಅವಕಾಶ ತಪ್ಪುತ್ತಿತ್ತು. ಸಂವಿಧಾನ ಬಂದ ನಂತರ ಎಲ್ಲರಿಗೂ ಸಮಾನ ಅವಕಾಶಗಳನ್ನು ಪಡೆಯುವಂತಾಗಿದೆ. ಯಾರೂ ಯಾರಿಂದಲೂ ಶೋಷಣೆಗೆ ಒಳಗಾಗಬಾರದು, ಎಲ್ಲರಿಗೂ ಸಮಾನ ಶಿಕ್ಷಣ, ಬದುಕುವ ಅವಕಾಶಗಳನ್ನು, ಸಂವಿಧಾನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ದೊರಕಿಸಿ ಕೊಟ್ಟಿದ್ದಾರೆ. ಅದಕ್ಕಾಗಿಯೇ ನಮ್ಮ ಸರ್ಕಾರ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಓದಿಸಲಾಗುತ್ತಿದೆ. ಸಂವಿಧಾನದ ಆಶಯಗಳು ಹಾಗೂ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು. ಸಂವಿಧಾನ ಗೊತ್ತಿಲ್ಲದೇ ಹೋದರೆ ನಮಗಿರುವ ಹಕ್ಕುಗಳು ಯಾವುವು, ನಮ್ಮ ಕರ್ತವ್ಯಗಳೇನು ಎಂದು ತಿಳಿಯುವುದಿಲ್ಲ. ನಮಗೆ ಹಕ್ಕುಗಳು ತಿಳಿದರೆ ಅವುಗಳನ್ನು ಪಡೆಯುವ ಪ್ರಯತ್ನ ಮಾಡಬಹುದು. ಎಲ್ಲರಿಗೂ ಒಂದೇ ರೀತಿಯ ಹಕ್ಕುಗಳಿವೆ. ದಲಿತರು, ಹಿಂದುಳಿದವರು, ಮುಂದುವರೆದವರು ಬಹುಸಂಖ್ಯಾತರಿಗೆ ಒಂದೇ ರೀತಿಯ ಹಕ್ಕುಗಳಿವೆ ಎಂದರು.
ಧರ್ಮವನ್ನು ನಾವು ಸರಿಯಾಗಿ ಅರ್ಥ ಮಡಿಕೊಳ್ಳಬೇಕು. ‘ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ’ ಎಂದು ಬಸವಣ್ಣ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ದಯೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದಕ್ಕಾಗಿಯೇ 12 ನೇ ಶತಮಾನದಲ್ಲಿಯೇ ಸಮಸಮಾಜಕ್ಕಾಗಿ ಕ್ರಾಂತಿ ಮಾಡಿದರು. ಕಂದಾಚಾರ, ಮೌಢ್ಯಗಳ ವಿರುದ್ಧ ಹೋರಾಟ ಮಾಡಿದವರು, ಜೊತೆಗೆ ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಇದನ್ನು ಅರ್ಥ ಮಡಿಕೊಳ್ಳಬೇಕು. ಈಗಲೂ ಅನೇಕರು ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಡುತ್ತಾರೆ. ಸ್ವರ್ಗ ನರಕದ ಕಲ್ಪನೆಯನ್ನು ನಿರಾಕರಿಸಿದ್ದ ಬಸವಣ್ಣ ‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂದು ಹೇಳಿದ್ದರು. ಇದನ್ನು ನಾವು ಪಾಲನೆ ಮಾಡಬೇಕು. ನಾವೆಲ್ಲರೂ ಮನುಷ್ಯರಾಗಿ, ಮಾನವರಾಗಿ ಬದುಕುವ ಪ್ರಯತ್ನ ಮಾಡಬೇಕು. ಧರ್ಮ ಹಾಗೂ ಶಿಕ್ಷಣದ ಕೆಲಸವನ್ನು ಸುತ್ತೂರು ಸಂಸ್ಥೆಗಳು ಮಾಡುತ್ತಿವೆ. ಅದಕ್ಕೆ ಅಡಿಪಾಯವನ್ನು ಹಾಕಿದವರು ರಾಜೇಂದ್ರ ಮಹಾಸ್ವಾಮಿಗಳು. ಅವರು ಬಯಸಿದಂತಹ ಸಮಾಜ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ ಎಂದರು.
ಡಾ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಸಾಲೂರು ಬೃಹನ್ಮಠದ ಶ್ರೀ ಮಲೆಮಹದೇಶ್ವರ ಬೆಟ್ಟದ ಡಾ: ಶ್ರೀ ಶಾಂತಿ ಮಲ್ಲಿಕಾರ್ಜುನ ಸ್ವಾಮಿಗಳು, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ , ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷರಾದ ಎ.ಪಿ.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.