ವಿಜ್ಞಾನ ವಿಭಾಗ: ಪ್ರಥಮ ರ್‍ಯಾಂಕ್ ಪಡೆದಿರುವ ಆರ್. ದೀಕ್ಷಾಗೆ ಇಂಜಿನಿಯರ್‌ ಆಗುವ ಆಸೆ

Most read

ಶಿವಮೊಗ್ಗ: ಎಂಜಿನಿಯರಿಂಗ್ ಓದಿ ಸಾಧನೆ ಮಾಡುವ ಗುರಿ ಹೊಂದಿರುವುದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದಿರುವ ತೀರ್ಥಹಳ್ಳಿಯ ಮೇಲಿನಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರ್. ದೀಕ್ಷಾ ಅವರ ಕನಸು. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ದೀಕ್ಷಾ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಆರ್. ದೀಕ್ಷಾ ಅವರನ್ನು ಪೋಷಕರು, ಆತ್ಮೀಯರು ಸಂಬಂಧಿಗಳು ಮತ್ತು ಕಾಲೇಜಿನ ವಾಗ್ದೇವಿ ಕಾಲೇಜಿನ ಶಿಕ್ಷಕರು ಅಭಿನಂದಿಸಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.

ರಾಜ್ಯಕ್ಕೆ ಮೊದಲ ರ್‍ಯಾಂಕ್ ಬರುವ ನಿರೀಕ್ಷೆ ಇರಲಿಲ್ಲ. ಎಲ್ಲ ವಿದ್ಯಾರ್ಥಿಗಳಂತೆ ನಾನು ಪ್ರತಿದಿನ ಓದುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಉತ್ತಮವಾಗಿ ಕಲಿಸುತ್ತಿದ್ದರು. ಸಮಸ್ಯೆಗಳಿದ್ದರೆ ಪರಿಹರಿಸುತ್ತಿದ್ದರು. ಯುಟ್ಯೂಬ್ ನಲ್ಲೂ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿ ಕಲಿಯುತ್ತಿದ್ದೆ. ಇದು ಪರೀಕ್ಷೆಯಲ್ಲಿ ನೆರವಿಗೆ ಬಂದಿತು ಎಂದು ದೀಕ್ಷಾ ಹೇಳಿದ್ದಾರೆ.

ದೀಕ್ಷಾ ಅವರ ಪೋಷಕರಿಬ್ಬರೂ ಶಿಕ್ಷಕರಾಗಿರುವುದು ಮತ್ತೊಂದು ಪಲ್ಸ್‌ ಪಾಯಿಂಟ್.‌ ಅವರು ನನ್ನ ಓದಿಗೆ ಕೊರತೆ ಆಗದಂತೆ ನೋಡಿಕೊಂಡರು. ನನ್ನ ಓದಿನ ವಿಚಾರದಲ್ಲಿ ಯಾವುದೇ ಗೊಂದಲ ಉಂಟಾದರೂ ಬಗೆಹರಿಸುತ್ತಿದ್ದರು. ಕಾಲೇಜಿನಲ್ಲಿ ಶಿಕ್ಷಕರು ಪ್ರೋತ್ಸಾಹ ಕೊಟ್ಟರು. ಎಲ್ಲರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

More articles

Latest article