ಮೋದಿ ಸರಕಾರದ ಸ್ಕೀಂ ಮತ್ತು ಸ್ಕ್ಯಾಂಗಳು

Most read

ಯಾರು ಅಸಾಂವಿಧಾನಿಕ ನಿಯಮವನ್ನು ತಂದಿದ್ದಾರೋ, ಯಾರು ಜನರಿಗೆ ಯಾವುದೇ ಮಾಹಿತಿ ಸಿಗದ ಹಾಗೆ ನೋಡಿಕೊಂಡಿದ್ದಾರೋ, ಯಾರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೋ, ಯಾರು ಸರಕಾರಿ ಯೋಜನೆಗಳ ಬದಲಾಗಿ ಬಾಂಡ್ ರೂಪದಲ್ಲಿ ಹಣ ಪಡೆದಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು. ಈ ಎಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಾರಣವಾದ ಮೋದಿ ಸರಕಾರವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತ್ವ ಭಾರತವನ್ನು ಹಿಂದುತ್ವ ರಾಷ್ಟ್ರವನ್ನಾಗಿ ಮಾರ್ಪಡಿಸುವುದು ಕಷ್ಟಸಾಧ್ಯ. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಮಾತ್ರ ಇಂತಹುದು ಸಾಧ್ಯವೆಂಬುದನ್ನು ಮನದಟ್ಟು ಮಾಡಿಕೊಂಡಿರುವ ಆರೆಸ್ಸೆಸ್ ಹಾಗೂ ಮೋದಿ ಸರಕಾರವು ಜನತಂತ್ರ ವ್ಯವಸ್ಥೆಯನ್ನು ಬಳಸಿಕೊಂಡೇ ಸರ್ವಾಧಿಕಾರಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭೂತಪೂರ್ವ ಬಹುಮತವನ್ನು ಚುನಾವಣೆಯಲ್ಲಿ ಪಡೆಯುವ ಮೂಲಕ ಸಂವಿಧಾನವನ್ನೇ ಬದಲಾಯಿಸುವ ದಾರಿ ಸುಗಮಗೊಳಿಸಿಕೊಳ್ಳಲು ಮುಂದಾಗಿದೆ. ಬಿಜೆಪಿ ಸಂಸದರಾದ ಅನಂತಕುಮಾರ್ ಹೆಗಡೆಯವರು  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 400 ಕ್ಕೂ ಅಧಿಕ ಸೀಟುಗಳನ್ನು ಗೆದ್ದರೆ ಸಂವಿಧಾನ ಬದಲಾಯಿಸುವುದು ಸುಲಭವಾಗುತ್ತದೆ” ಎಂದು ಈಗಾಗಲೇ ಜನರಿಗೆ ಕರೆಕೊಟ್ಟಿದ್ದಾರೆ. ಸಂಘದ ಅಜೆಂಡಾ ಕೂಡಾ ಇದೇ ಆಗಿದೆ. 

2017 ರಿಂದಲೇ ತಯಾರಿ- ಚುನಾವಣಾ ಬಾಂಡ್‌ ಸ್ಕೀಂ

ಆ ತಯಾರಿಯ ಭಾಗವೇ ಚುನಾವಣಾ ದೇಣಿಗೆ ನಿಯಮವನ್ನು ಬದಲಾಯಿಸುವುದು. 2017 ಕ್ಕೂ ಮೊದಲು ಯಾವುದೇ ಪಕ್ಷಕ್ಕೆ ಯಾವುದೇ ಕಂಪನಿ ಹಣವನ್ನು ದೇಣಿಗೆಯಾಗಿ ಕೊಡಬೇಕೆಂದರೆ ಆ ಕಂಪನಿಯ ಮೂರು ವರ್ಷದ ಲಾಭಾಂಶ 7.5% ಮೀರಬಾರದು ಎನ್ನುವ ನಿಯಮವಿತ್ತು. ಆದರೆ ಈ ಮಿತಿಯನ್ನೇ ರದ್ದು ಪಡಿಸಿದ ಮೋದಿ ಸರಕಾರವು ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಯಾರು ಎಷ್ಟು ಬೇಕಾದರು ಹಣವನ್ನು ಚುನಾವಣಾ ಬಾಂಡ್ ಖರೀದಿಯ ಮೂಲಕ ಪಕ್ಷಗಳಿಗೆ ಕೊಡಬಹುದು ಹಾಗೂ ಕೊಂಡವರ ಮತ್ತು ತೆಗೆದುಕೊಂಡವರ ಹೆಸರನ್ನು ಬಹಿರಂಗಪಡಿಸಲಾಗದು ಎಂದು ತಿದ್ದುಪಡಿ ತರಲಾಯಿತು. ಮೊದಲ ಬಾರಿಗೆ ಆಗ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಯವರು 22 ಮಾರ್ಚ್ 2017 ರಲ್ಲಿ ಇಂತಹ ನಿಯಮವನ್ನು ಘೋಷಣೆ ಮಾಡಿದರು. ಹೀಗೆ ತಿದ್ದುಪಡಿ ತಂದು ತಕ್ಷಣವೇ ಕಂಪನಿಗಳು ಸ್ವಯಂಪ್ರೇರಿತವಾಗಿ ಬಾಂಡ್ ಖರೀದಿಸಲು ಸಾಧ್ಯವೇ? ಅದಕ್ಕೆ ದಂಡಂ ದಶಗುಣಂ ಹಾಗೂ ಹಮಾರಾ ಸಾಥ್ ತುಮಾರಾ ವಿಕಾಸ್ ಎನ್ನುವ ನೀತಿಯನ್ನು ಮೋದಿ ಸರಕಾರ ಅಳವಡಿಸಿಕೊಂಡಿತು. ರಾಜಕೀಯ ಪಕ್ಷಗಳಿಗೆ ಹಣ ಸಂಗ್ರಹಣೆ ಮಾಡುವ ಚುನಾವಣಾ ಬಾಂಡ್ ಸ್ಕೀಂ ಅನ್ನು ಜಾರಿಗೊಳಿಸಲಾಯಿತು. 

ಈ ಹೊಸ ಸ್ಕೀಂ ನಲ್ಲಿ ಯಾವುದೂ ಮುಕ್ತವಾಗಿರದೇ ಎಲ್ಲವೂ ಗುಪ್ತವಾಗಿರುವಂತೆ ನಿಯಮ ರೂಪಿಸಲಾಯ್ತು. ಯಾರು ಯಾರಿಗೆ ಎಷ್ಟು ಹಣ ಸಂದಾಯ ಮಾಡಿದ್ದಾರೆಂಬುದು ಬಹಿರಂಗ ಆಗಲು ಸಾಧ್ಯವೇ ಇಲ್ಲವೆಂದು ದಾನಿಗಳಿಗೆ ಆಶ್ವಾಸನೆ ಕೊಡಲಾಯಿತು. ಕಂಪನಿಗಳು ತೆರಿಗೆ ವಂಚಿಸಿ ಸಂಗ್ರಹಿಸಿದ್ದ ಕಪ್ಪುಹಣದ ಒಂದಿಷ್ಟು ಪಾಲು ಚುನಾವಣಾ ಬಾಂಡ್ ಆಗಿ ಪರಿವರ್ತನೆ ಹೊಂದಿ ರಾಜಕೀಯ ಪಕ್ಷಗಳ ಬೊಕ್ಕಸಕ್ಕೆ ಹರಿದು ಬರಲು ರಹದಾರಿಯಾಯಿತು. ಭ್ರಷ್ಟಾಚಾರವನ್ನು ಕಾನೂನಾತ್ಮಕವಾಗಿಸಿದ ಕೀರ್ತಿ ಮೋದಿಯವರಿಗೆ ಸಲ್ಲಬೇಕು.‌

‘ಚುನಾವಣಾ ಬಾಂಡ್ ಸ್ಕೀಂ’ ಅಸಾಂವಿಧಾನಿಕ-ಸುಪ್ರೀಂ ಕೋರ್ಟ್

ಸಿಪಿಐ ಪಕ್ಷ ಹಾಗೂ ಎನ್ ಜಿ ಓ ಸಂಘಟನೆ ಸಲ್ಲಿಸಿದ ಚುನಾವಣಾ ಬಾಂಡ್ ಕುರಿತ ಮೊಕದ್ದಮೆಗಳ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಏಳು ವರ್ಷಗಳ ನಂತರ 15 ಫೆಬ್ರವರಿ 2024 ರಂದು ‘ಚುನಾವಣಾ ಬಾಂಡ್ ಸ್ಕೀಂ’ ಎನ್ನುವುದೇ ಅಸಾಂವಿಧಾನಿಕ ಎಂದು ಘೋಷಿಸಿತು. ಹಾಗೂ ಆ ಕುರಿತ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗದ ಮೂಲಕ ಬಹಿರಂಗಗೊಳಿಸಬೇಕು ಎಂದು ಆದೇಶಿಸಿತು. ಮೊದಲು ಸಾಧ್ಯವೇ ಇಲ್ಲ ಎಂದ ಎಸ್‌ ಬಿ ಐ ಬ್ಯಾಂಕು ನಂತರ ಮೂರು ತಿಂಗಳ ಸಮಯ ಬೇಕೆಂದು ಕೇಳಿತು. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ಒಂದೇ ದಿನದಲ್ಲಿ ಅರ್ಧ ಮಾಹಿತಿಗಳನ್ನು ಸಲ್ಲಿಸಿತು. ಕೋರ್ಟ್ ಜೋರು ಮಾಡಿದ ನಂತರ ಕೊನೆಗೂ ಪೂರ್ತಿ ವಿವರಗಳನ್ನು ಸಲ್ಲಿಸಿತು. 

ಬಿಜೆಪಿಯೊಂದಕ್ಕೇ 6,060 ಕೋಟಿ ಹಣ!

ಗೃಹಮಂತ್ರಿ ಅಮಿತ್ ಷಾ ರವರು, ಇತ್ತೀಚೆಗೆ ಇಂಡಿಯಾ ಟುಡೇ ಸಂದರ್ಶನವೊಂದರಲ್ಲಿ ಯಾಕೆ ಈ ಬಾಂಡ್ ಸ್ಕೀಂ?. ಎಂದು ಪ್ರಶ್ನಿಸಿದಾಗ, “ಈ ಸ್ಕೀಂ ಎಲ್ಲಾ ಪಕ್ಷಗಳಿಗೂ ಉಪಯೋಗಕಾರಿಯಾಗಿದೆ. ಒಟ್ಟು 20 ಸಾವಿರ ಕೋಟಿ ಹಣ ಚುನಾವಣಾ ಬಾಂಡ್ ಮೂಲಕ ಎಲ್ಲಾ ಪಕ್ಷಗಳಿಗೂ ಸಂದಾಯವಾಗಿದೆ. ಅದರಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ ಆರು ಸಾವಿರ ಕೋಟಿ ಮಾತ್ರ ಬಂದಿದೆ” ಎಂದು ಅತೀ ದೊಡ್ಡ ಸುಳ್ಳನ್ನು ಹೇಳಿ ದಿಕ್ಕುತಪ್ಪಿಸುವ ಕೆಲಸ ಮಾಡಿದರು. ಇದೇ ಸುಳ್ಳನ್ನು ಎಲ್ಲಾ ಗೋದಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡಿ ಜನರನ್ನು ನಂಬಿಸಲು ಪ್ರಯತ್ನಿಸಿದವು. ಆದರೆ ಅದು 20 ಸಾವಿರ ಕೋಟಿಯಲ್ಲಾ 12,769 ಕೋಟಿ ಎಂದು SBI ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್‌ ನಲ್ಲಿ ಹೇಳಲಾಗಿದೆ. ಅದರಲ್ಲಿ 47.5%  ನಷ್ಟು ಅಂದರೆ 6060 ಕೋಟಿ ಹಣ ಬಿಜೆಪಿ ಪಕ್ಷಕ್ಕೆ ಸಂದಾಯವಾಗಿದೆ. ಟಿಎಂಸಿ ಪಕ್ಷಕ್ಕೆ 12.6% ಅಂದರೆ 1,609 ಕೋಟಿ, ಕಾಂಗ್ರೆಸ್ ಸಂಗ್ರಹಿಸಿದ್ದು 11.1% ಅಂದರೆ 1,421 ಕೋಟಿ. BRS 1,214 ಕೋಟಿ, ಬಿಜೆಡಿ 775 ಕೋಟಿ, ಡಿಎಂಕೆ 600 ಕೋಟಿ ಹೀಗೆ ಇತರೇ ಪಕ್ಷಗಳು ಇದಕ್ಕಿಂತ ಕಡಿಮೆ ಹಣವನ್ನು ಬಾಂಡ್ ಮೂಲಕ ಪಡೆದಿವೆ. 

ಇಡಿ, ಐಟಿ, ಸಿಬಿಐ ಗಳ ಬಳಕೆ..

ಅದು ಹೇಗೆ ಬಿಜೆಪಿ ಪಕ್ಷವೊಂದೇ ಒಟ್ಟಾರೆ ಚುನಾವಣೆ ಬಾಂಡ್ ನಲ್ಲಿ ಅರ್ಧದಷ್ಟು ಹಣವನ್ನು ಬಾಚಿಕೊಂಡಿತು?. ಅದಕ್ಕೆ ಬಿಜೆಪಿ ಅನುಸರಿಸಿದ್ದು ಎರಡು ಅಡ್ಡದಾರಿಗಳು. ಒಂದು ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಗಳನ್ನು ಬಳಸಿ ಬಂಡವಾಳಶಾಹಿ ಕಂಪನಿಗಳ ಮೇಲೆ ದಾಳಿ ಮಾಡಿಸಿ ಹೆದರಿಸಿ ಚುನಾವಣಾ ಬಾಂಡ್ ಖರೀದಿಸಿ ಕೊಡಲು ಒತ್ತಾಯಿಸುವುದು. ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ದೇಣಿಗೆ ಕೊಟ್ಟ ಮೊದಲ ಮೂರು ಟಾಪ್ ಕಂಪನಿಗಳಾದ ಪ್ಯೂಚರ್ ಗೇಮಿಂಗ್, ಮೇಘಾ ಇಂಜನಿಯರಿಂಗ್ ಮತ್ತು ಮೈನಿಂಗ್ ಜೇಂಟ್ ವೇದಾಂತ್  ಗಳ ಮೇಲೆ ಇಡಿ ಹಾಗೂ ಐಟಿ ರೇಡ್ ಆಗಿತ್ತು. ಈ ಕಂಪನಿಗಳ ಮೇಲೆ ತನಿಖಾ ಸಂಸ್ಥೆಗಳ ದಾಳಿಯಾದ ನಂತರ ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹಣ ಹರಿದು ಬಂದಿತ್ತು. ಬಿಜೆಪಿಗೆ ದೇಣಿಗೆ ಕೊಟ್ಟ ಟಾಪ್ 30 ಕಂಪನಿಗಳಲ್ಲಿ 14 ಕಂಪನಿಗಳ ಮೇಲೆ ತನಿಖಾ ಸಂಸ್ಥೆಗಳ ದಾಳಿ ಮಾಡಲಾಗಿದ್ದು ಹಫ್ತಾ ರೂಪದಲ್ಲಿ ದೇಣಿಗೆ ಸಂದಾಯವಾದ ಮೇಲೆ ತನಿಖೆಯನ್ನು ನಿಲ್ಲಿಸಲಾಗಿದೆ. ತನಿಖಾ ಸಂಸ್ಥೆಗಳಿಂದ ದಾಳಿಗೆ ಒಳಗಾದ 41 ಕಂಪನಿಗಳಿಂದ ಬಿಜೆಪಿಗೆ ಒಟ್ಟು 2,471 ಕೋಟಿ ಹಣ ಚುನಾವಣಾ ಬಾಂಡ್ ಮೂಲಕ ಸಂದಾಯವಾಗಿದೆ.  ಇದು ಸರಕಾರಿ ಭ್ರಷ್ಟಾಚಾರ ಅಲ್ಲದೆ ಇನ್ನೇನು?. ಇದಕ್ಕಾಗಿಯೇ ಮೋದಿಯವರನ್ನು ವಸೂಲಿ ಬಾಯಿ ಎಂದು ರಾಹುಲ್ ಗಾಂಧಿ ಟೀಕಿಸಿದ್ದರಲ್ಲಿ ತಪ್ಪೇನೂ ಇಲ್ಲ.


ದಾನ ಕೊಡಿ ಯೋಜನೆ ಪಡಿ..

ಇನ್ನೊಂದು ಮಾರ್ಗವೆಂದರೆ. “ದಾನ ಕೊಡಿ ಯೋಜನೆ ಪಡಿ” ಎನ್ನುವ ಬೇನಾಮಿ ಯೋಜನೆ. ಸರಕಾರದ ಯೋಜನೆಗಳ ಗುತ್ತಿಗೆಗಳನ್ನು ಕೊಟ್ಟು ಕಿಕ್ ಬ್ಯಾಕ್ ಆಗಿ ಹಣವನ್ನು ಚುನಾವಣಾ ಬಾಂಡ್ ಮೂಲಕ ಪಕ್ಷಕ್ಕೆ ಪಡೆಯುವುದು. ಮೇಘಾ ಇಂಜಿನೀಯರಿಂಗ್ ಕಂಪನಿಗೆ 14,400 ಕೋಟಿಯ ಸರಕಾರಿ ಯೋಜನೆಯನ್ನು ಮುಂಬೈನಲ್ಲಿ ಕೊಟ್ಟು ಅದರ ಬದಲಾಗಿ 140 ಕೋಟಿ ಚುನಾವಣಾ ಬಾಂಡ್ ತೆಗೆದುಕೊಳ್ಳಲಾಗಿತ್ತು. ಇದೇ ರೀತಿ ದೊಡ್ಡ ಹೈವೇ ರಸ್ತೆ, ಟನಲ್ ಗಳನ್ನು ನಿರ್ಮಿಸುವ ಗುತ್ತಿಗೆಯನ್ನು ಕೊಟ್ಟು ಚುನಾವಣಾ ಬಾಂಡ್ ಮೂಲಕ ಕಮಿಶನ್ ಪಡೆಯಲಾಯ್ತು. 1,751 ಕೋಟಿಯಷ್ಟು ಹಣವನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ಕೊಟ್ಟ 33 ಕಂಪನಿಗಳಿಗೆ ಒಟ್ಟು 3.7 ಲಕ್ಷ ಕೋಟಿಯಷ್ಟು ಮೊತ್ತದ ಗುತ್ತಿಗೆ ನೀಡಲಾಗಿದೆ. ಇದೊಂದು ರೀತಿ ಲೀಗಲ್ ಆಗಿರುವ ಇಲ್ಲೀಗಲ್ ಬಿಸಿನೆಸ್ ಆಗಿತ್ತು. ಸರಕಾರಿ ಯೋಜನೆಗಳ ಗುತ್ತಿಗೆ ಪಡೆಯಲು ಕಂಪನಿಗಳು ರಹಸ್ಯವಾಗಿ ಹಾಗೂ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸಲ್ಲಿಸುವ ಲಂಚದ ಇನ್ನೊಂದು ಹೆಸರೇ ಚುನಾವಣಾ ಬಾಂಡ್. 

ಸ್ಕೀಂ ಮತ್ತು ಸ್ಕ್ಯಾಂಗಳು..

ಅತೀ ಹೆಚ್ಚು ದೇಣಿಗೆ ಪಡೆದವರಲ್ಲಿ ಟಿಎಂಸಿ ಎರಡನೆಯದು!

ಅಚ್ಚರಿಯ ಸಂಗತಿ ಅಂದರೆ ಬಿಜೆಪಿ ಪಕ್ಷದ ನಂತರ ಚುನಾವಣಾ ಬಾಂಡ್ ಮೂಲಕ ಹೆಚ್ಚು ಹಣ ಪಡೆದದ್ದು ಟಿಎಂಸಿ ಎನ್ನುವ ಪಶ್ಚಿಮ ಬಂಗಾಳದ ಪ್ರಾದೇಶಿಕ ಪಕ್ಷ. ಈ ಸಣ್ಣ ಪಕ್ಷ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗಿಂತಲೂ ಹೆಚ್ಚು ಅಂದರೆ 1,609 ಕೋಟಿಯಷ್ಟು ಹಣವನ್ನು ಸಂಗ್ರಹಿಸಲು ಹೇಗೆ ಸಾಧ್ಯವಾಯಿತು? ಯಾಕೆಂದರೆ ಪಶ್ಚಿಮ ಬಂಗಾಳದಲ್ಲಿ ಕಾರ್ಪೋರೇಟ್ ಶಕ್ತಿಗಳ ವಿರೋಧಿಯಾದ ಕಮ್ಯೂನಿಸ್ಟ್ ಪಕ್ಷದ ಸರಕಾರ ಮತ್ತೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಭವಿಷ್ಯವಿಲ್ಲವೆಂದು ಗೊತ್ತಾಗಿ ಬಂಡವಾಳಶಾಹಿಗಳು ಹೆಚ್ಚು ಹಣವನ್ನು ಟಿಎಂಸಿ ಪಕ್ಷಕ್ಕೆ ದೇಣಿಗೆಯಾಗಿ ಕೊಟ್ಟಿದ್ದಾರೆ. ಆದರೆ ಚುನಾವಣಾ ಬಾಂಡ್ ಸ್ಕೀಂ ನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದ ಎಡಪಕ್ಷಗಳಾದ ಸಿಪಿಐ, ಸಿಪಿಎಂ, ಸಿಪಿಐ-ಎಂಎಲ್ ಹಾಗೂ ಫಾರ್ವರ್ಡ್ ಬ್ಲಾಕ್ ಪಕ್ಷಗಳು ಮಾತ್ರ ಯಾರಿಂದಲೂ ಯಾವುದೇ ದೇಣಿಗೆಯನ್ನು ಪಡೆಯದೇ ತಮ್ಮ ಸೈದ್ದಾಂತಿಕ ಬದ್ಧತೆಯನ್ನು ಉಳಿಸಿಕೊಂಡಿವೆ.  

ಸುಪ್ರೀಂ ಕೋರ್ಟ್ ಈ ಚುನಾವಣಾ ಬಾಂಡ್ ಸ್ಕೀಂ ನ್ನು ಅಸಾಂವಿಧಾನಿಕ ಎಂದು ಘೋಷಿಸಿಯಾಗಿದೆ. ಯಾರು ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಕೊಟ್ಟಿದ್ದಾರೆಂದು ತಿಳಿಯುವ ಹಕ್ಕು ಈ ದೇಶವಾಸಿಗಳಿಗೆ ಇದೆ ಎಂದು ಹೇಳಿಯಾಗಿದೆ. ಯಾರು ಅಸಾಂವಿಧಾನಿಕ ನಿಯಮವನ್ನು ತಂದಿದ್ದಾರೋ, ಯಾರು ಜನರಿಗೆ ಯಾವುದೇ ಮಾಹಿತಿ ಸಿಗದ ಹಾಗೆ ನೋಡಿಕೊಂಡಿದ್ದಾರೋ, ಯಾರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೋ, ಯಾರು ಸರಕಾರಿ ಯೋಜನೆಗಳ ಬದಲಾಗಿ ಬಾಂಡ್ ರೂಪದಲ್ಲಿ ಹಣ ಪಡೆದಿದ್ದಾರೋ ಅವರಿಗೆ ಶಿಕ್ಷೆಯಾಗಬೇಕಿದೆ. ಲಂಚದ ರೂಪದಲ್ಲಿ ಬಾಂಡ್ ಖರೀದಿಸಿದ ಕಂಪನಿಗಳನ್ನು ಬ್ಲಾಕ್ ಲಿಸ್ಟಲ್ಲಿ ಸೇರಿಸಬೇಕಿದೆ. ಈ ಎಲ್ಲದಕ್ಕೂ ಕಾರಣವಾದ ಬಿಜೆಪಿ ಪಕ್ಷದ ಮಾನ್ಯತೆಯನ್ನೇ ಮೊದಲು ರದ್ದು ಮಾಡಬೇಕಿದೆ. ಮೋದಿ ಸರಕಾರದ ಕೈವಾಡದ ಕುರಿತು ತನಿಖೆಗೆ ಆದೇಶಿಸಬೇಕಿದೆ. ಆದರೆ ಇದೆಲ್ಲವನ್ನೂ ಮಾಡುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ |ಭಾಗ 1

More articles

Latest article