ನವದೆಹಲಿ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಸಮಯದ ಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಂದು ಅನಿರ್ಧಿಷ್ಟಾವಧಿಯವರೆಗೆ ಅವರು ಮಸೂದೆಗಳನ್ನು ತಡೆ ಹಿಡಿಯುವಂತಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ತೀರ್ಪು ನೀಡಿದೆ.
ರಾಷ್ಟ್ರಪತಿ ಮತ್ತು ರಾಜ್ಯಪಾಲರು ಕಾಲಮಿತಿಯನ್ನು ಉಲ್ಲಂಘಿಸಿದರೆ, ನ್ಯಾಯಾಲಯಗಳು ಮಸೂದೆಗಳಿಗೆ ‘ಪರಿಗಣಿತ ಒಪ್ಪಿಗೆ’ (ತಾನಾಗಿಯೇ ಒಪ್ಪಿಗೆ) ಎಂದು ಘೋಷಿಸುವ ಪರಿಕಲ್ಪನೆಯು ಸಂವಿಧಾನದ ಆಶಯಗಳಿಗೆ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಇದು ವಾಸ್ತವದಲ್ಲಿ ರಾಜ್ಯಪಾಲರಿಗೆ ಮೀಸಲಾಗಿರುವ ಕಾರ್ಯಗಳನ್ನು ಆಕ್ರಮಿಸಿಕೊಳ್ಳುವಂತಾಗುತ್ತದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಧಾನಸಭೆಯಲ್ಲಿ ಅಂಗೀಕೃತಗೊಂಡ ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವನ್ನು ವಿಧಿಸುವುದು, ಆ ಗಡುವು ಮುಗಿದ ನಂತರ ಮಸೂದೆಗಳಿಗೆ ತಾನಾಗಿಯೇ ಅನುಮೋದನೆ ಸಿಕ್ಕಿತು ಎಂದು ಪರಿಗಣಿಸುವಂತೆ ಆದೇಶ ಹೊರಡಿಸುವುದು ಸಾಂವಿಧಾನಿಕವಾಗಿ ತಪ್ಪಾಗುತ್ತದೆ ಮತ್ತು ಸಾಧ್ಯವೂ ಆಗುವುದಿಲ್ಲ. ಏಕೆಂದರೆ ಇಂತಹ ಆದೇಶದಿಂದ ನ್ಯಾಯಾಂಗವು ಕಾರ್ಯಾಂಗದ ಮೂಲಭೂತ ಕರ್ತವ್ಯವನ್ನೇ ಆಕ್ರಮಿಸಿಕೊಂಡಂತಾಗುತ್ತದೆ. ಜತೆಗೆ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಸ್ಥಾನವನ್ನು ಪಲ್ಲಟಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಸಂವಿಧಾನದ 200 ಮತ್ತು 201ನೇ ವಿಧಿಗಳು ಈ ಅಧಿಕಾರವನ್ನು ಕೇವಲ ಕಾರ್ಯಾಂಗಕ್ಕೆ ಮಾತ್ರ ನೀಡಿದೆ. ನ್ಯಾಯಾಂಗಕ್ಕೆ ಅಲ್ಲ. ಆದ್ದರಿಂದ ಇಂತಹ ತಾನಾಗಿಯೇ ಅನುಮೋದನೆ ಎಂಬ ಪರಿಕಲ್ಪನೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಅನುಚಿತ ಮತ್ತು ಅನುಮತಿಸಲಾಗದ ಕ್ರಮ ಎಂದು ಸುಪ್ರೀಂಕೋರ್ಟ್ ತೀರ್ಮಾನಿಸಿದೆ. ಆದರೂ ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿದರೆ, ಮಸೂದೆಯನ್ನು ಶಾಸಕಾಂಗಕ್ಕೆ ಹಿಂತಿರುಗಿಸಬೇಕು ಎಂದು ಹೇಳಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ, ಮಸೂದೆ ಕುರಿತು ಸದನದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ರಾಜ್ಯಪಾಲರು ಸಂವಾದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕೇ ಹೊರತು ಅದಕ್ಕೆ ಅಡ್ಡಿಪಡಿಸಬಾರದು. ರಾಜ್ಯಪಾಲರು ಸಮಂಜಸ ಅವಧಿಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶಿಸುವುದನ್ನು ಹೊರತುಪಡಿಸಿ ನ್ಯಾಯಾಲಯಕ್ಕೆ ಯಾವುದೇ ಸಮಯ ಮಿತಿಯನ್ನು ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗಳಿಗೆ ಅಂಗೀಕಾರ ನೀಡುವಾಗ ರಾಜ್ಯಪಾಲರಿಗೆ ಕಾಲಮಿತಿ ಹೇರಬಹುದೇ ಎಂದು ಸುಪ್ರೀಂ ಕೋರ್ಟ್ ಅನ್ನು ಕೇಳಿದ್ದರು. ಇದೀಗ ಕೋರ್ಟ್ ಈ ಸ್ಪಷ್ಟನೆ ನೀಡಿದೆ.
ಏಪ್ರಿಲ್ 2025 ರಲ್ಲಿ, ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠವು, ವಿಧಾನಮಂಡಲ ಕಳುಹಿಸಿದ ಮಸೂದಗಳಿಗೆ ರಾಜ್ಯಪಾಲರು ಮೂರು ತಿಂಗಳಲ್ಲಿ ಅಂಗೀಕಾರ ನೀಡಬೇಕು ಎಂದು ತೀರ್ಪು ನೀಡಿತ್ತು.

