ವಿಜಯನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಐದು ಭಾಗ್ಯಗಳ ಪ್ರಯೋಜನ ಪಡೆದುಕೊಂಡವರ ಸಂಖ್ಯೆ ಅಪಾರ. ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ಯೋಜನೆಯ ಫಲವಾಗಿ ಅನೇಕ ಕುಟುಂಬಗಳು ನೆಮ್ಮದಿ ಕಂಡುಕೊಂಡಿವೆ. ಶಾಲಾ ಆಸ್ಪತ್ರೆ ಖರ್ಚು, ಮನೆ ನಿರ್ವಹಣೆ ಹೀಗೆಹೇಳುತ್ತಾ ಹೋಗಬಹುದು.
ಇದೀಗ ವಿಜಯನಗರ ಜಿಲ್ಲೆಯ ಕುಟುಂಬವೊಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟುಕೊಂಡು ಮನೆಗೆ ಬಾಗಿಲು ಮಾಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಗೌರವ ಸೂಚಿಸುವ ಸಲುವಾಗಿ ಬಾಗಿಲಿಗೆ ಸಿದ್ದರಾಮಯ್ಯ ಅವರ ಭಾವಚಿತ್ರವನ್ನೇ ಕೆತ್ತಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ನಿವಾಸಿ ಕೆ ಎಂ ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ಅವರೇ ಈ ಫಲಾನುಭವಿಗಳು. ತಿಪ್ಪೇಸ್ವಾಮಿ ದಂಪತಿಗಳು 2 ವರ್ಷದ ಹಿಂದೆ ಮನೆ ಕಟ್ಟಿಸಿದ್ದರು. ಆದರೆ, ಹಣಕಾಸಿನ ಮುಗ್ಗಟ್ಟಿನಿಂದ ಬಾಗಿಲನ್ನು ಮಾಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ತಮ್ಮ ಪತ್ನಿ ಪಾರ್ವತಮ್ಮ ಅವರಿಗೆ ಕಳೆದ 15 ತಿಂಗಳಿಂದ ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣದಿಂದ ಮನೆಗೆ ಬಾಗಿಲನ್ನು ಮಾಡಿಸಿ ಕೊಂಡಿದ್ದಾರೆ.
ಬಾಗಿಲ ಮೇಲೆ ಸಿದ್ದರಾಮಯ್ಯ ಅವರ ಭಾವಚಿತ್ರನ್ನು ಕೆತ್ತಿಸಿದ್ದಾರೆ ಮತ್ತು ಬಾಗಿಲಿನ ಮೇಲೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಎಂದು ಕೆತ್ತಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಿಪ್ಪೇಸ್ವಾಮಿ ದಂಪತಿ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ, ಗೃಹ ಲಕ್ಷ್ಮೀ ಮೊದಲಾದ ಯೋಜನೆಗಳಿಂದ ನಾವು ಉತ್ತಮ ಬದುಕು ಕಟ್ಟಿಕೊಂಡಿದ್ದೇವೆ ಎಂದಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣದಿಂದ ಸಾಕಷ್ಟು ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡಿರುವ ಹತ್ತಾರು ನಿದರ್ಶನಗಳನ್ನು ಕಾಣಬಹುದು. ಈ ಮುಖ್ಯ ಬಾಗಿಲು ಅಕ್ಕಪಕ್ಕದ ಗ್ರಾಮಸ್ಥರನ್ನೂ ಸೆಳೆಯುತ್ತಿದೆ.