Payment for Ecological Services ಗೆ ಬೇಕಾದ ಸಂಪನ್ಮೂಲಗಳನ್ನು ಉದ್ಯಮಿಗಳು, ಕಂಪೆನಿಗಳು, ಪಶ್ಚಿಮ ಘಟ್ಟದ ಮೇಲೆ ಅವಲಂಬಿತವಾಗಿರುವ ಅದರಾಚೆಯ ನಾಗರೀಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಮೊದಲಾದವರುಗಳ ಮೇಲೆ ‘ಪರಿಸರ ಸೇವೆಗಳ ಶುಲ್ಕ’ ಎಂದು ವಿಧಿಸಿ ತೆರಿಗೆ ರೂಪದಲ್ಲಿ ಸಂಗ್ರಹಿಸಲು ಸರ್ಕಾರಕ್ಕೆ ಅವಕಾಶವಿದೆ – ನಾಗರಾಜ ಕೂವೆ, ಪರಿಸರ ಬರಹಗಾರರು.
ಬೇರೆ ಯಾವುದೇ ಬೆಳೆಗಳು ಸರಿಯಾಗಿ ಫಸಲು ಬರದಿರುವ ಕಾರಣದಿಂದ ಕಾಫಿ, ಅಡಿಕೆ, ಕಾಳುಮೆಣಸುಗಳನ್ನು ಮಲೆನಾಡಿನಲ್ಲಿ ಬೆಳೆಯಲಾಗುತ್ತಿದೆ. ಅತೀ ಹೆಚ್ಚು ಮಳೆ ಬಂದರೆ ಈ ಬೆಳೆಗಳು ಕೊಳೆಯುತ್ತವೆ, ಮಳೆ ಕಡಿಮೆಯಾದರೆ ಬಾಡುತ್ತವೆ. ಇವತ್ತು ಹವಾಗುಣ ಬದಲಾವಣೆಯಿಂದಾಗಿ ಇಲ್ಲಿನ ಅಡಿಕೆಗೆ ಎಲೆ ಚುಕ್ಕಿ ರೋಗ, ಕಾಫಿ ಮತ್ತು ಕಾಳು ಮೆಣಸಿಗೆ ಕೊಳೆರೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
‘ಭೂ ತಾಪಮಾನದ ನಿರಂತರ ಏರಿಕೆಯಿಂದಾಗಿ ಹವಾಗುಣ ಬದಲಾವಣೆಯನ್ನು ದಾಟಿ ಹವಾಗುಣ ಬಿಕ್ಕಟ್ಟನ್ನು(Climate Crisis) ನಾವಿಂದು ಎದುರಿಸುತ್ತಿದ್ದೇವೆ’ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದರ ಅತೀ ಹೆಚ್ಚು ಮತ್ತು ತಕ್ಷಣದ ಪರಿಣಾಮಗಳನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟ ಪ್ರಮುಖವಾದುದು. ಅದರ ಮೊದಲ ದುಷ್ಪರಿಣಾಮಗಳನ್ನು ಎದುರಿಸುವುದು ಅಲ್ಲಿನ ಜೀವವೈವಿಧ್ಯ. ಜೊತೆಗೆ ಇಲ್ಲಿರುವ ಬಡವರು, ಕೂಲಿ ಕಾರ್ಮಿಕರು ಮತ್ತು ಸಣ್ಣ ಹಿಡುವಳಿದಾರರು.
ಭವಿಷ್ಯದಲ್ಲಿ ಕಾಲಕಾಲಕ್ಕೆ ಬಿಸಿಲು, ಮಳೆ, ಚಳಿಗಳು ಬೀಳದಿರುವುದರಿಂದ ಇಲ್ಲಿನ ಕಾಫಿ, ಅಡಿಕೆ ಮತ್ತು ಕಾಳುಮೆಣಸಿನ ಫಸಲಿಗೆ ವಿಪರೀತ ತೊಂದರೆಯಾಗುತ್ತದೆ. ಹೆಚ್ಚುವ ಸೈಕ್ಲೋನ್ ಗಳ ಮಧ್ಯೆ, ಶಿಲೀಂಧ್ರಗಳಿಂದ ಈ ಬೆಳೆಗಳಿಗೆಲ್ಲಾ ಉಂಟಾಗುತ್ತಿರುವ ರೋಗಗಳಿಗೆಲ್ಲಾ ಶಾಶ್ವತವಾದ ಪರಿಹಾರ ಸಾಧ್ಯವಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ ಕಾಫಿ, ಅಡಿಕೆಗಳು ಸ್ಥಳೀಯವಲ್ಲದ ಸಸ್ಯಗಳಾಗಿರುವುದರಿಂದ, ಅವುಗಳು ಈ ಬದಲಾಗುತ್ತಿರುವ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲಾರವು, ಫಸಲು ಕೊಡಲಾರವು. ಇದರಿಂದ ಭವಿಷ್ಯದಲ್ಲಿ ಇಲ್ಲಿ ಕೃಷಿ ಮಾಡುವುದೇ ಕಷ್ಟವಾಗುತ್ತಾ ಹೋಗುತ್ತದೆ. ಆಗ ಪ್ಲಾಂಟರ್‌ಗಳು ಕಾರ್ಮಿಕರನ್ನು ಕೆಲಸಕ್ಕೆ ಕರೆಯುವುದನ್ನು ಕಡಿಮೆ ಮಾಡುತ್ತಾ ಹೋಗುತ್ತಾರೆ. ಉದ್ಯೋಗವಿಲ್ಲದೇ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗುತ್ತಾ ಹೋಗುತ್ತದೆ. ಅವರೆಲ್ಲಾ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಸಣ್ಣ ಹಿಡುವಳಿದಾರರು ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ತಲುಪುತ್ತಾರೆ. ಯಾರಲ್ಲೂ ಹಣವಿಲ್ಲ ಎಂದಾಗುತ್ತದೆ. ಇದಕ್ಕೆ ಇರುವ ಪರಿಹಾರವೆಂದರೆ ನಾವು ಪ್ರಕೃತಿ ನೀಡುತ್ತಿರುವ ಸೂಚನೆಗಳನ್ನು ಗಮನಿಸುತ್ತಾ ಕೃಷಿ ಪದ್ಧತಿ ಮತ್ತು ಕೃಷಿ ಬೆಳೆಗಳನ್ನು ಬದಲಾಯಿಸುವುದು ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು.
ಹಲವು ವರ್ಷಗಳಿಂದ ಪರ್ಯಾಯ ಬೆಳೆಗಳ ಹೆಸರಿನಲ್ಲಿ ಮಲೆನಾಡಿಗೆ ಬರುತ್ತಿರುವ ಯಾವ ಬೆಳೆಗಳೂ ಯಶಸ್ಸು ಕಾಣುತ್ತಿಲ್ಲ. ಇದಕ್ಕೆ ಇಲ್ಲಿನ ಹವಾಮಾನವೇ ಕಾರಣ. ಮುಂದೆಯೂ ಪರ್ಯಾಯ ಬೆಳೆಗಳ ಹೆಸರಿನಲ್ಲಿ ವಿದೇಶಿ ತಳಿಗಳ ಪ್ರಯೋಗ ಮಲೆನಾಡಿಗೆ ಎಂದಿಗೂ ಸೂಕ್ತವಲ್ಲ. ಇದಕ್ಕೆ ಬದಲಾಗಿ ಸ್ಥಳೀಯ ಕಾಡುತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡಬೇಕಾದುದು ಅಗತ್ಯ. ಏಕೆಂದರೆ ಸ್ಥಳೀಯ ಪ್ರಭೇಧಗಳಿಗೆ ಎಲ್ಲಾ ವೈಪರೀತ್ಯದ ವಿರುದ್ಧ ಹೋರಾಡುವ ಸಾಮರ್ಥ್ಯ ಹೊರಗಿನಿಂದ ಬಂದ ಬೆಳೆಗಳಿಗಿಂತ ಹೆಚ್ಚು ಇರುತ್ತದೆ. ಈ ನಿಟ್ಟಿನಲ್ಲಿ ಸಂಶೋಧನಾ ಚಟುವಟಿಕೆಗಳು ತುಂಬಾ ಅಗತ್ಯ.
ಕೋಸ್ಟಾರಿಕ ದೇಶದ ರೈತರಿಗೆ ಕಾಡು ಉಳಿಸಿದ್ದಕ್ಕೆ, ಬೆಳೆಸಿದ್ದಕ್ಕೆ ಹಣ ಕೊಡಲಾಗುತ್ತದೆ. ಇದನ್ನು Payment for Ecological services ಎನ್ನುತ್ತಾರೆ. ಇದು ಮಲೆನಾಡಿನಲ್ಲೂ ಜಾರಿಯಾಗಬೇಕಿದೆ. ಕಾಡು ಉಳಿಸಿ, ಬೆಳೆಸಿದ್ದಕ್ಕೆ ಹಣ ಕೊಡೋದೆಲ್ಲಾ ಆಗಿ ಹೋಗುವ ಮಾತಲ್ಲ ಎನ್ನಬೇಡಿ. ಏಕೆಂದರೆ, ನಾವಿರುವ ಪಶ್ಚಿಮ ಘಟ್ಟ ಇಡೀ ದಕ್ಷಿಣ ಭಾರತದ ಹವಾಮಾನವನ್ನು ನಿರ್ಧರಿಸುತ್ತದೆ. ಬಹುಪಾಲು ನದಿಗಳ ಮೂಲಗಳು ಇಲ್ಲಿವೆ. ನೀರು, ಮಣ್ಣು, ಗಾಳಿ ಮೊದಲಾದವುಗಳ ಮೂಲಕ ಇದು ಒದಗಿಸುವ ಪರಿಸರ ಸೇವೆ ಬೆಲೆ ಕಟ್ಟಲಾಗದ್ದು. ಈ ಸಹ್ಯಾದ್ರಿ ನಾಶವಾದರೆ ಜನಜೀವನ ಕೂಡಾ ನಾಶವಾಗಲಿದೆ. ಅಲ್ಲದೆ ಜಗತ್ತಿನ ಹಲವು ಪ್ರದೇಶಗಳ ಹವಾಮಾನ ನಿರ್ಧರಿಸುವಲ್ಲೂ ಘಟ್ಟಗಳ ಪಾತ್ರ ಮಹತ್ವವಾದುದು. ಹೀಗಾಗಿ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಜಾಗತಿಕ ಮಹತ್ವವಿದೆ. Payment for Ecological Services ಗೆ ಬೇಕಾದ ಸಂಪನ್ಮೂಲಗಳನ್ನು ಉದ್ಯಮಿಗಳು, ಕಂಪೆನಿಗಳು, ಪಶ್ಚಿಮ ಘಟ್ಟದ ಮೇಲೆ ಅವಲಂಬಿತವಾಗಿರುವ ಅದರಾಚೆಯ ನಾಗರೀಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಮೊದಲಾದವರುಗಳ ಮೇಲೆ ‘ಪರಿಸರ ಸೇವೆಗಳ ಶುಲ್ಕ’ ಎಂದು ವಿಧಿಸಿ ತೆರಿಗೆ ರೂಪದಲ್ಲಿ ಸಂಗ್ರಹಿಸಲು ಸರ್ಕಾರಕ್ಕೆ ಅವಕಾಶವಿದೆ.
ಮುಂದೆ ಮಲೆನಾಡಿನಲ್ಲಿ ಜನರು ಕಾಡು ಬೆಳೆಸಿದ್ದಕ್ಕೆ ಹಣ ಕೊಡಬೇಕು ಎಂದರೆ, ಮೊದಲಿಗೆ ಅವರಿಗೆ ಜಮೀನಿರಬೇಕಲ್ಲವೇ? ಅದಕ್ಕೆ ಹಕ್ಕುಪತ್ರ ಬೇಕಲ್ಲವೇ? ಹಾಗಾಗಿ ಇಲ್ಲಿನ ದೊಡ್ಡ ದೊಡ್ಡ ಒತ್ತುವರಿಗಳನ್ನು ತೆರವುಗೊಳಿಸಿ ಭೂರಹಿತರಿಗೆ ಹಂಚಿ ಅವರನ್ನು ಕಾರ್ಮಿಕರಿಂದ ರೈತರಾಗಿ ಬದಲಾಯಿಸಬೇಕು ಹಾಗೂ ಈಗಾಗಲೇ ಆಗಿರುವ ಐದು ಎಕರೆಯೊಳಗಿನ ಜೀವನೋಪಾಯದ ಒತ್ತುವರಿಗೆ ಹಕ್ಕುಪತ್ರ ಸಿಗಬೇಕು.
ಹವಾಗುಣ ಬಿಕ್ಕಟ್ಟಿನ ಮುಂದಿನ ದಿನಗಳಲ್ಲಿ, ‘ನಮಗೆ ಭೂಮಿಯಿದೆ, ಅದಕ್ಕೆ ಹಕ್ಕುಪತ್ರವಿದೆ, ಅಲ್ಲಿ ಕಾಡು ಬೆಳೆಸಿದ್ದಕ್ಕೆ ಹಣ ಕೊಡುತ್ತಾರೆ’ ಎಂದರೆ ಮಾತ್ರ ಇಲ್ಲಿ ಬದುಕಬಹುದು. ಪರಿಸರ ಸಂರಕ್ಷಣೆಯೊಂದೇ ನಮ್ಮನ್ನು ಮತ್ತು ಜೀವವೈವಿಧ್ಯವನ್ನು ಉಳಿಸಬಹುದಾದ ದಾರಿ.
ಪಶ್ಚಿಮ ಘಟ್ಟದ ಕಾಡುಗಳು ಮತ್ತು ಅಲ್ಲಿನ ಜೀವವೈವಿಧ್ಯ ಉಳಿದರೆ ಮಾತ್ರ ಅಲ್ಲಿನ ಜನ ಬದುಕುಳಿಯಲು ಸಾಧ್ಯ. ಮುಂದೆಯೂ ಕೂಡಾ ಗಣಿಗಾರಿಕೆ ಮಾಡುತ್ತಿದ್ದರೆ, ಕಾಡು ಕಡಿದು ರೈಲ್ವೇ ಲೈನ್ ಹಾಕುತ್ತಿದ್ದರೆ, ರಾಸಾಯನಿಕ ಗೊಬ್ಬರಗಳನ್ನು ಸುರಿದು ಕೃಷಿ ಮಾಡುತ್ತಿದ್ದರೆ, ಕಳೆನಾಶಕ ಹೊಡೆದು ವೈವಿಧ್ಯಮಯ ಹಸಿರು ಹೊದಿಕೆಯನ್ನು ನಾಶ ಮಾಡುತ್ತಿದ್ದರೆ, ಕೀಟನಾಶಕ ಹೊಡೆದು ಹುಳುಗಳನ್ನು ಸಾಯಿಸುತ್ತಿದ್ದರೆ, ಹೆದ್ದಾರಿಯ ನೆಪದಲ್ಲಿ ಜೆಸಿಬಿಗಳಿಂದ ಮಣ್ಣು ತೆಗೆಯುತ್ತಿದ್ದರೆ ಮಲೆನಾಡಿಗರ ಬದುಕು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಜನಜೀವನ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಇವತ್ತು ಪಶ್ಚಿಮ ಘಟ್ಟಗಳಲ್ಲಿ ಹೆದ್ದಾರಿ, ರೈಲುಮಾರ್ಗ, ಟೌನ್ ಶಿಪ್, ರೋಪ್ ವೇ, ಕೇಬಲ್ ಕಾರು, ಸುರಂಗ ಮಾರ್ಗ ಇತ್ಯಾದಿಗಳನ್ನು ಅಭಿವೃದ್ಧಿ ಎನ್ನಲಾಗುತ್ತಿದೆ. ಇವುಗಳಿಂದ ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಗುತ್ತಿಗೆದಾರರು ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ. ‘ಹೆದ್ದಾರಿಯಾದರೆ ನಿಮ್ಮ ಬದುಕೇ ಬದಲಾಗುತ್ತದೆ. ಶಿಕ್ಷಣ, ವೈದ್ಯಕೀಯ, ವ್ಯಾಪಾರ ವಹಿವಾಟು ಹೆಚ್ಚಲಿದೆ’ ಎಂಬ ಭ್ರಮೆಯನ್ನು ಜನರಿಗೆ ತುಂಬಲಾಗಿದೆ. ವಾಸ್ತವದಲ್ಲಿ ಇಲ್ಲಿಯವರೆಗೆ ಹೆದ್ದಾರಿಗಳಾದ ಮಲೆನಾಡಿನಲ್ಲಿ ಪಟ್ಟಣಗಳಲ್ಲಿ ಅಂತಹದು ಏನು ಆಗಿಯೇ ಇಲ್ಲ! ವಾಸ್ತವದಲ್ಲಿ ಇಲ್ಲಿ ಯಾವ ಹೆದ್ದಾರಿಗಳೂ ಸ್ಥಳೀಯರ ಅನುಕೂಲಕ್ಕಾಗಿ ಆಗುತ್ತಿಲ್ಲ. ಇವತ್ತು ನಮ್ಮ ಮನೆಯ ಮುಂದೆ ಆಗುವ ಹೆದ್ದಾರಿಯ ಹಿಂದೆ ಜಾಗತಿಕ ಶಕ್ತಿಗಳಿದ್ದಾವೆ.
ಇವತ್ತು ದೊಡ್ಡ ದೊಡ್ಡ ಯೋಜನೆಗಳಿಂದಾಗಿ ಒಂದೆಡೆ ಅಮೂಲ್ಯವಾದ ಜೀವವೈವಿಧ್ಯ ನಾಶವಾಗುತ್ತಿದ್ದರೆ, ಇನ್ನೊಂದೆಡೆ ಅಭಿವೃದ್ಧಿಯ ಹೂಳು ಸಣ್ಣ ರೈತರ ಜೀವನೋಪಾಯವನ್ನೇ ಕಸಿಯುತ್ತಿದೆ. ಕಾಡಂಚಿನ ಹಳ್ಳಿಗಳಿಗೆ ರಸ್ತೆ ಮಾಡುವ ಬಗೆಗಾಗಲಿ, ಇರುವ ರಸ್ತೆ ದುರಸ್ತಿ ಮಾಡಿ ಟಾರ್ ಹಾಕಿಸುವ ಬಗೆಗಾಗಲಿ ಜನಪ್ರತಿನಿಧಿಗಳಿಗೆ ಆಸಕ್ತಿಯೇ ಇಲ್ಲ. ಎಲ್ಲರಿಗೂ ಹೆಚ್ಚು ಹಣವಿರುವ ದೊಡ್ಡ ದೊಡ್ಡ ಯೋಜನೆಗಳ ಮೇಲೆಯೇ ಪ್ರೀತಿ.
ಮುಂದೆ ಮಲೆನಾಡಿನ ಎಲ್ಲೆಡೆ ಹೆದ್ದಾರಿಯಾಯಿತು ಎಂದಿಟ್ಟುಕೊಳ್ಳೋಣ. ನಾವು ಆ ಹೆದ್ದಾರಿಯಲ್ಲಿ ಓಡಾಡಲು ಕಾರು ತೆಗೆದುಕೊಳ್ಳಬೇಕೆಂದರೆ ನಮ್ಮಲ್ಲಿ ದುಡ್ಡಿರಬೇಕು. ದುಡ್ಡಿರಬೇಕೆಂದರೆ ಕೃಷಿ ಆದಾಯ ಚೆನ್ನಾಗಿರಬೇಕು. ಆದರೆ ಇವತ್ತು ತೋಟಗಳೆಲ್ಲಾ ರೋಗಗಳಿಂದ ತತ್ತರಿಸುತ್ತಿದೆ. ಜನರ ಜೀವನೋಪಾಯವೇ ಕಳೆದು ಹೋಗುತ್ತಿದೆ. ಈ ಸಂದರ್ಭದಲ್ಲಿ ಜನರ ಜೀವನ ಮಟ್ಟವನ್ನು ಉತ್ತಮಗೊಳ್ಳುವಂತೆ ಮಾಡಬೇಕಾದುದು ಅಭಿವೃದ್ಧಿಯೇ ಅಥವಾ ಹೆದ್ದಾರಿ ಅಭಿವೃದ್ಧಿಯೇ? ನಮ್ಮ ಆದ್ಯತೆ ಏನಾಗಿರಬೇಕೆಂಬ ಪ್ರಜ್ಞೆ ಅತೀ ಅಗತ್ಯ.
ಇವತ್ತು ಮಲೆನಾಡಿನ ಯಾವುದೇ ಕಾಡು ನಡುವಿನ ಮುಖ್ಯ ರಸ್ತೆ ನೋಡಿದರೂ ವಾರಾಂತ್ಯದಲ್ಲಿ ವಿಪರೀತ ವಾಹನಗಳ ಸಾಲು, ಕರ್ಕಶ ಹಾರ್ನ್, ಡಿಜೆ, ಗದ್ದಲ, ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ತೊಟ್ಟೆಗಳು, ಗಾಜಿನ ಚೂರು, ತೀರ್ಥದ ಬಾಟಲಿ, ಪ್ರವಾಸಿಗರ ಮಲ-ಮೂತ್ರ, ವಾಂತಿ ಇತ್ಯಾದಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ಮಾಲಿನ್ಯ ಮಿತಿಮೀರಿದೆ. ಪ್ರವಾಸಿಗರಿಂದಾಗಿ ಇಲ್ಲಿನ ಕಾಡು, ನದಿ, ಬೆಟ್ಟಗಳಲ್ಲಾ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಅದರ ದುಷ್ಪರಿಣಾಮಗಳು ಜನಜೀವನ ಮತ್ತು ವನ್ಯಜೀವಿಗಳ ಮೇಲಾಗುತ್ತಿದೆ. ಹಾಗಾಗಿ ಇವತ್ತು ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಬೇಕಿದೆ. ಆ ಮೂಲಕ ಬೇಕಾಬಿಟ್ಟಿ ಪ್ರವಾಸಗಳನ್ನು ನಿಯಂತ್ರಿಸಬೇಕಿದೆ.
ನಮ್ಮ ದೇಶದ ಈಶಾನ್ಯ ರಾಜ್ಯಗಳಿಗೆ ಯಾರೇ ಪ್ರವಾಸ ಹೋಗಬೇಕಾದರೂ, ಅವರು ಭಾರತೀಯರೇ ಆಗಿರಲಿ, ಸರ್ಕಾರದ ಅನುಮತಿ ಪತ್ರ ತೆಗೆದುಕೊಂಡೇ ಹೋಗಬೇಕು. ಜೊತೆಗೆ ಸೀಮಿತ ಕಾಲಮಿತಿಯೊಳಗೆ ಅಲ್ಲಿಂದ ವಾಪಸ್ಸು ಬರಬೇಕು. ಇದನ್ನು Inner Line Permit ಎನ್ನುತ್ತಾರೆ. ಇದನ್ನು ಪಶ್ಚಿಮ ಘಟ್ಟಗಳಿಗೂ ಅನ್ವಯಿಸಿ ಇಲ್ಲಿನ ಪರಿಸರವನ್ನು ಕಾಪಾಡಬೇಕಿದೆ.
ಹವಾಗುಣ ಬಿಕ್ಕಟ್ಟಿನ ಭೀಕರ ದಿನಗಳು ಮುಂದೆ ನಮ್ಮನ್ನು ಕಾಡಲಿವೆ. ಒಂದು ಕಡೆ ಅನಿಶ್ಚಿತ ಹವಾಮಾನ, ಇನ್ನೊಂದು ಕಡೆ ಕೃಷಿಯ ನಷ್ಟ. ಭವಿಷ್ಯದ ದೃಷ್ಟಿಯಿಂದ ಗುತ್ತಿಗೆದಾರರ, ಗಣಿ ಉದ್ಯಮಿಗಳ, ಕಾರ್ಪೋರೇಟ್ ಗಳ, ರೆಸಾರ್ಟ್ ಗಳ, ಪ್ಲಾಂಟೇಶನ್ ಗಳ, ರಾಸಾಯನಿಕ ಕಂಪೆನಿಗಳ, ಧಾರ್ಮಿಕ ಉದ್ಯಮದ ಲಾಬಿಗಳನ್ನು ನಾವು ಇವತ್ತು ತುರ್ತಾಗಿ ಅರ್ಥಮಾಡಿ ಕೊಳ್ಳಬೇಕಿದೆ. ನಮ್ಮ ಕಾಡು, ಗುಡ್ಡ, ನದಿಗಳನ್ನು ಉಳಿಸಿಕೊಳ್ಳಬೇಕಿದೆ. ಇದು ಭವಿಷ್ಯದ ಜನಾಂಗಕ್ಕೆ ಎನ್ನುವುದು ದೊಡ್ಡ ಮಾತು, ಕನಿಷ್ಠ ನಾವು ಉಳಿಯ ಬೇಕೆಂದರೆ ಇದೆಲ್ಲಾ ಬೇಕು.
ಇವತ್ತು ಹೊರಗಿನ ಪ್ರಭಾವಿ ವ್ಯಕ್ತಿಗಳು ಇಲ್ಲಿ ನೂರಾರು ಎಕರೆಯ ಎಸ್ಟೇಟ್ ಗಳನ್ನು ಖರೀದಿಸುತ್ತಿದ್ದಾರೆ. ಹೀಗಿರುವಾಗ ಈಶಾನ್ಯ ರಾಜ್ಯಗಳಲ್ಲಿರುವಂತೆ ಪಶ್ಚಿಮ ಘಟ್ಟಕ್ಕೊಂದು ವಲಸೆ ನೀತಿ ಮತ್ತು ಭೂ ನೀತಿ ಅತೀ ಅಗತ್ಯವಿದೆ. ಅಂದರೆ ಸ್ಥಳೀಯರನ್ನು ಹೊರತು ಪಡಿಸಿ ಹೊರಗಿನವರು ಬಂದು ಇಲ್ಲಿ ಜಮೀನು ತೆಗೆದುಕೊಳ್ಳಲು, ನೆಲೆಸಲು ನಿಷೇಧ ಹೇರಬೇಕು.
ಮಲೆನಾಡಿನ ಜೀವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶ್ರೀಮಂತರ ಒತ್ತುವರಿ ಭೂಮಿ ತೆರವು, ವಸತಿ ರಹಿತರು ಮತ್ತು ಭೂರಹಿತರಿಗೆ ಭೂಹಂಚಿಕೆ, Payment for ecological services, Inner Line Permit, ವಲಸೆ ನೀತಿ, ಕಾಡುತ್ಪನ್ನಗಳ ಮೌಲ್ಯವರ್ಧನೆ, ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ಮೊದಲಾದವುಗಳನ್ನು ಜಾರಿಗೆ ತನ್ನಿ ಎಂದು ಸರ್ಕಾರಗಳನ್ನು ಇವತ್ತು ಮಲೆನಾಡಿಗರು ಒತ್ತಾಯಿಸಬೇಕಿದೆ.
ಇವೆಲ್ಲ ಜಾರಿಗೆ ಬಂದರೆ ಮಾತ್ರ ಹವಾಗುಣ ಬಿಕ್ಕಟ್ಟಿನ ಮುಂದಿನ ದಿನಗಳಲ್ಲಿ ಮಲೆನಾಡಿನ ಬಡವರು, ತಳ ಸಮುದಾಯಗಳ ಜನರು ಘನತೆಯಿಂದ ಬದುಕಬಹುದು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಜೀವಸಂಕುಲಗಳನ್ನೂ ಉಳಿಸಿಕೊಳ್ಳಬಹುದು.
ಇವತ್ತು ಬಡವರನ್ನು ಒತ್ತುವರಿ ತೆರವಿನ ವಿರುದ್ಧ ಶ್ರೀಮಂತರು ಎತ್ತಿಕಟ್ಟುತ್ತಾ ತಮ್ಮ ಬೃಹತ್ ಒತ್ತುವರಿಗಳನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ತುರ್ತಾಗಿ ಅರ್ಥಮಾಡಿಕೊಳ್ಳಬೇಕು. ಸರ್ಕಾರ ಮೂರು ಎಕರೆಯೊಳಗಿನ ಸಾಗುವಳಿಯನ್ನು ತೆರವುಗೊಳಿಸುವುದಿಲ್ಲ ಎಂದು ಪದೇಪದೇ ಹೇಳುತ್ತಿದ್ದರೂ ಕೆಲವರು ಬಂದ್ ಮಾಡುತ್ತಿರುವುದರ ಹಿಂದೆ ಅನ್ಯ ಉದ್ದೇಶಗಳೇ ಹೆಚ್ಚಿದೆ. ಪಶ್ಚಿಮ ಘಟ್ಟಗಳಲ್ಲಿ ಮೇಘ ಸ್ಪೋಟ, ಭೂಕುಸಿತ, ಬೆಳೆ ನಷ್ಟ, ಜೀವವೈವಿಧ್ಯ ನಾಶ, ಬದುಕಿನ ಅಭದ್ರತೆ ಮೊದಲಾದುವುಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಅವೈಜ್ಞಾನಿಕ ಅಭಿವೃದ್ಧಿ, ದುರಾಸೆಯ ಅರಣ್ಯ ಒತ್ತುವರಿಗೆ ಕಡಿವಾಣ ಹಾಕಬೇಕಾದುದು ಅತೀ ಅಗತ್ಯ.
ನಾಗರಾಜ ಕೂವೆ
ಶೃಂಗೇರಿಯ BEAS Centre ನ ಸಂಸ್ಥಾಪಕರಾದ ಇವರು ಈ ಸಂಸ್ಥೆಯ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ
ಇದನ್ನೂ ಓದಿ- ನನಗೇ ಯಾಕೆ ಹೀಗಾಗುತ್ತದೆ…?