ಸಾವರ್ಕರ್ ಮಾಂಸಾಹಾರಿ ಮಾತ್ರವಲ್ಲ, ಆಹಾರದಲ್ಲಿ ಅಹಿಂಸೆಯ ಕಡುವಿರೋಧಿ!

Most read

ಹಿಂದುತ್ವದ ಹೀರೋ ವಿನಾಯಕ ದಾಮೋದರ ಸಾವರ್ಕರ್ ಮಾಂಸಾಹಾರಿಯಾಗಿದ್ದರು. ಗೋಮಾಂಸವೂ ಸೇರಿದಂತೆ ಯಾವುದೇ ಮಾಂಸಾಹಾರವನ್ನು ‘ಅಹಿಂಸೆ’ಯ ನೆಪದಲ್ಲಿ ತಡೆಯುವುದು ‘ಅಸಹಿಷ್ಣುತೆ’ ಎಂದು ಸಾವರ್ಕರ್ ಭಾವಿಸಿದ್ದರು. ಹಾಗಾಗಿ ‘ಬ್ರಾಹ್ಮಣ ಸಾವರ್ಕರ್ ಮಾಂಸಾಹಾರ ಸೇವಿದ್ದರು’ ಎಂಬ ವಿಷಯದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದರಲ್ಲಿ ವಿವಾದವೇನು ಇಲ್ಲ – ನವೀನ್‌ ಸೂರಿಂಜೆ, ಪತ್ರಕರ್ತರು.

ಹಿಂದುತ್ವದ ಹೀರೋ ವಿನಾಯಕ ದಾಮೋದರ ಸಾವರ್ಕರ್ ಮಾಂಸಾಹಾರಿಯಾಗಿದ್ದರು. ಗೋಮಾಂಸವೂ ಸೇರಿದಂತೆ ಯಾವುದೇ ಮಾಂಸಾಹಾರವನ್ನು ‘ಅಹಿಂಸೆ’ಯ ನೆಪದಲ್ಲಿ ತಡೆಯುವುದು ‘ಅಸಹಿಷ್ಣುತೆ’ ಎಂದು ಸಾವರ್ಕರ್ ಭಾವಿಸಿದ್ದರು. ಹಾಗಾಗಿ ‘ಬ್ರಾಹ್ಮಣ ಸಾವರ್ಕರ್ ಮಾಂಸಾಹಾರ ಸೇವಿದ್ದರು’ ಎಂಬ ವಿಷಯದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದರಲ್ಲಿ ವಿವಾದವೇನು ಇಲ್ಲ.

ಸಚಿವ ದಿನೇಶ್ ಗುಂಡೂರಾವ್ ಅವರು ಸಾವರ್ಕರ್ ಮಾಂಸಾಹಾರಿ ಎಂದಿದ್ದನ್ನು ಟೀಕಿಸಲಾಗುತ್ತಿದೆ. ವಿನಾಯಕ ದಾಮೋದರ್ ಸಾವರ್ಕರ್ ಅವರ “Six Glorious Epochs of Indian History” (1963) ಎಂಬ ಪುಸ್ತಕದಲ್ಲಿ ಸಾವರ್ಕರ್ ಅವರು ಗೋಮಾಂಸ ಸೇವನೆಯನ್ನು ಸಮರ್ಥಿಸುತ್ತಾರೆ. ಈ ಪುಸ್ತಕದಲ್ಲಿ ಸಾವರ್ಕರ್ ಅವರು ಪ್ರಾಚೀನ ಭಾರತೀಯರೆಲ್ಲಾ ಗೋಮಾಂಸ ಸೇವನೆ ಮಾಡುತ್ತಿದ್ದರು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. “ಹಿಂದೂ ಧರ್ಮದಲ್ಲಿ ಗೋಮಾಂಸದ ಸೇವನೆ ತಾತ್ಕಾಲಿಕವಾಗಿ ಸ್ವೀಕಾರಾರ್ಹವಾಗಿತ್ತು” ಎಂಬ ನಿಲುವು ವ್ಯಕ್ತವಾಗುತ್ತದೆ.

ಸಾವರ್ಕರ್

“But what after those three years! Starvation could not be completely ruled out in the case of these unfortunate millions. For flesh and meat was their chief food which could be had almost for nothing. But because this intolerant ‘Ahimsa’ made flesh-eating punishable by death, this common mass of people was antagonized to the Buddhist. faith. These millions of people shook off its tyrannical yoke, and sought refuge in the Vedic religion, which had now taken an all-embracing noble form, accepting a relatively considerate Ahimsa which allowed concessions for particular time and place and persons, concentrating mainly on human welfare? !” ಎಂದು Six Glorious Epochs of Indian History” ಯ ಪುಟ ಸಂಖ್ಯೆ 139 ರಲ್ಲಿ ಉಲ್ಲೇಖವಾಗಿದೆ. ಅಹಿಂಸೆ ಎಂಬ ಅಸಹಿಷ್ಣುತೆಯಿಂದಲೇ ಮಾಂಸಾಹಾರಿಗಳು ಬೌದ್ದಧರ್ಮ ತೊರೆದ ವೈದಿಕ ಧರ್ಮ ಸೇರಿಕೊಂಡರು ಎಂದು ಸಾವರ್ಕರ್ ಬರೆಯುತ್ತಾರೆ.

ಅದೇ ಪುಸ್ತಕದಲ್ಲಿ ಸಾವರ್ಕರ್ ಬೌದ್ದಧರ್ಮದ ‘ಅಹಿಂಸೆ’ ಪರಿಕಲ್ಪನೆಯನ್ನೇ ವಿರೋಧಿಸುತ್ತಾರೆ. ಆಹಾರದಲ್ಲಿ ಅಹಿಂಸೆ ಎಂದರೆ ಜನರ ಸಾವು ಎಂದರ್ಥ. ಕಡಿಮೆ ಬೆಲೆ ಮತ್ತು ಸುಲಭದಲ್ಲಿ ಸಿಗುವ ಆಹಾರವಾದ ಮಾಂಸಾಹಾರ ಇಲ್ಲದೆ ಜನರು ಹಸಿವಿನಿಂದ ಸಾಯುವುದು ಅಹಿಂಸೆ ಹೇಗಾಗುತ್ತದೆ ? ಜನ ಮಾಂಸ ತಿನ್ನಬಾರದು ಎಂದರೆ ಮೀನುಗಾರರು, ಕುರಿ, ಹಸು ಸಾಕುವವರು, ಬೇಟೆಗಾರರು ಉಪವಾಸ ಬಿದ್ದು ಸಾಯಬೇಕಾಗುತ್ತದೆ ಎಂದು ಸಾವರ್ಕರ್ ಹೇಳುತ್ತಾರೆ.

‘ಆಹಾರದಲ್ಲಿ ಅಹಿಂಸೆ ಎನ್ನುವುದು ಹಿಂಸೆಗಿಂತಲೂ ಕ್ರೂರ’ ಇದು ಸಾವರ್ಕರ್ ಅವರ ಸ್ಪಷ್ಟ ನಿಲುವು ! 

1906ರಲ್ಲಿ ಗಾಂಧೀಜಿ ಲಂಡನ್ನಿನ ‘ಇಂಡಿಯಾ ಹೌಸ್’ನಲ್ಲಿ ಸಾವರ್ಕರ್ ಅವರನ್ನು ಭೇಟಿಯಾಗಿದ್ದರು. ಸಾವರ್ಕರ್ ಅಡುಗೆ ಕೆಲಸದಲ್ಲಿ ತೊಡಗಿದ್ದಾಗ ಅವರನ್ನು ಗಾಂಧಿ ಮಾತಿಗೆಳೆಯಲು ಪ್ರಯತ್ನಿಸಿದ್ದರು. ಚಿತ್ಪಾವನ ಬ್ರಾಹ್ಮಣನೊಬ್ಬ ಮಾಂಸಾಹಾರ ತಯಾರಿಸುತ್ತಿದ್ದದ್ದು ಕಂಡು ಗಾಂಧೀಜಿ ಆಶ್ಚರ್ಯಪಟ್ಟಿದ್ದರು. ತಮ್ಮ ಆಹಾರದ ಮಿತಿಯಿಂದಾಗಿ ಊಟ ನಿರಾಕರಿಸಿದಾಗ ಅವರನ್ನು ಅಣಕಿಸುವಂತೆ ಸಾವರ್ಕರ್ ‘ನಮ್ಮೊಂದಿಗೆ ಊಟಕ್ಕೇ ನೀವು ಸಿದ್ಧರಿಲ್ಲ, ಒಟ್ಟಾಗಿ ಕೆಲಸ ಮಾಡುವುದು ಹೇಗೆ?’ ಎಂದಿದ್ದರು. (ಸುಧೀಂದ್ರ ಬುದ್ಯ ಅವರ ಲೇಖನ)

ಸಾವರ್ಕರ್ ಅವರ Six Glorious Epochs of Indian History” ಓದಿದರೆ ಅವರಿಗೆ ಮುಸ್ಲಿಂ ದ್ವೇಷ ಎಷ್ಟಿತ್ತು ಎಂಬುದು ಗೊತ್ತಾಗುವುದರ ಜೊತೆಗೆ ಬೌದ್ಧರ ಮೇಲಿನ ಕೋಪ ಎಷ್ಟಿದೆ ಎಂಬುದೂ ಗೊತ್ತಾಗುತ್ತದೆ. ಇವೆಲ್ಲದರ ಜೊತೆಗೆ ಸಾವರ್ಕರ್ ಗೆ ಮಾಂಸಾಹಾರದ ಮೇಲಿನ ಮಮತೆಯೂ ವ್ಯಕ್ತವಾಗುತ್ತದೆ.

ಹಾಗಾಗಿ ಸಾವರ್ಕರ್ ಮಾಂಸಾಹಾರಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮಾಂಸಾಹಾರಿ ಮಾತ್ರವಲ್ಲ, ಅಹಿಂಸೆಯ ಹೆಸರಿನ ಸಸ್ಯಾಹಾರ ಸಮರ್ಥಕರ ಕಡು ವಿರೋಧಿಯೂ ಆಗಿದ್ದರು ಎಂಬುದು ಮುಖ್ಯವಾಗುತ್ತದೆ.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ-ಗಾಂಧಿ ಸ್ಮೃತಿ V/s ಆಹಾರ ಸಂಸ್ಕೃತಿ

More articles

Latest article