ಕೋಮುವಾದಕ್ಕೆ ಉತ್ತರ ನೀಡುವ ‘ಸತ್ಯೊಲು’ಎಂಬ ಜನಪದ ಸತ್ಯ

Most read

ಪತ್ರಕರ್ತ ನವೀನ್ ಸೂರಿಂಜೆ ಅವರ ‘ಸತ್ಯೊಲು’ಎನ್ನುವ ಈ ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಒಂದು ಹೊಸ ಆಯಾಮದೊಂದಿಗೆ ನವೀನ ಶೋಧನೆಯ ಪರಿಭಾಷೆಯಲ್ಲಿದೆ. ಸಂಸ್ಕೃತಿ ಚಿಂತನೆ ಎನ್ನುವುದು ವಾಸ್ತವವನ್ನು ಮರೆತು ವೈಭವೀಕರಿಸುವುದು ಅಲ್ಲ. ಬದಲಾಗಿ ಸತ್ಯದ ಅನ್ವೇಷಣೆ ಆಗಿದೆ. ‘ಸತ್ಯ’ಎನ್ನುವುದು ಸಾಪೇಕ್ಷವಾದುದು. ಒಂದು ಕಾಲದ ಸತ್ಯ ಇನ್ನೊಂದು ಕಾಲಕ್ಕೆ ಮಿಥ್ಯವಲ್ಲ, ಬದಲಾಗಿ ಅದನ್ನು ರುಜುವಾತು ಪಡಿಸುವ ಕ್ರಮ ಯಾವುದು ಎಂದು ತಿಳಿಯುವುದು ಅಷ್ಟೇ ಮುಖ್ಯವಾದದ್ದು. ದೈವಾರಾಧನೆಯ ಪರಿಕಲ್ಪನೆಯ ಮೂಲಕ ನಾವು ತಿಳಿಯುವುದೇನು? ದೈವಗಳ ಚರಿತ್ರೆ, ಆರಾಧನೆ, ಆಚರಣೆಯ ಸೂಕ್ಷ್ಮಗಳ ದಾಖಲಾತಿಯೊಂದಿಗೆ ವರ್ತಮಾನದಲ್ಲಿ ಏನನ್ನು ಮರೆತೆವು ಎಂಬ ಪ್ರಶ್ನೆಯನ್ನು ಈ ಕೃತಿ ಎತ್ತುತ್ತದೆ.

ಆರಾಧನಾ ಪರಂಪರೆಯನ್ನು ವೈಭವವೀಕರಿಸದೆ ವಸ್ತು ಸ್ಥಿತಿಯೊಂದಿಗೆ ಸತ್ಯವನ್ನು ನುಡಿಯುವ ಧೈರ್ಯ ಕತ್ತಿಯ ಅಲಗಿನ ಮೇಲೆ ನಡೆಯುವ ನಡಿಗೆಯೇ ಆಗಿದೆ. ಅಂತಹ ನಡಿಗೆಯ ಮೂಲಕ ಹಲವು ಒಳನೋಟಗಳನ್ನು ಲೇಖಕರು ನೀಡಿದ್ದಾರೆ. ಈ ಹಿಂದೆ ಬಂದಿರುವ ಅಧ್ಯಯನಗಳ ಪರಾಮರ್ಶೆ, ಕ್ಷೇತ್ರ ಕಾರ್ಯದ ಅನುಭವ, ಮಂಡಿಸಿರುವ ವಿಚಾರಗಳನ್ನು ಹೆಚ್ಚು ಸ್ಪಷ್ಟಪಡಿಸಿವೆ. ಒಟ್ಟು ಇಪ್ಪತ್ತಮೂರು ಅಧ್ಯಾಯಗಳಲ್ಲಿ ಕ್ಷೇತ್ರ ಕಾರ್ಯದ, ಅನುಭವಗಳೊಂದಿಗೆ ಇಪ್ಪತ್ತಮೂರು ದೈವಗಳ ಕುರಿತಾದ ಹಲವು ಸತ್ಯಗಳನ್ನು ಗುರುತಿಸಿ ವಿಶ್ಲೇಷಿಸಿದ ಕ್ರಮ ಪ್ರಮುಖವಾದದು. ಈ ಅಧ್ಯಯನ ಪದವಿಗಾಗಿ ನಡೆಸಿದ ಸಂಶೋಧನೆಯಲ್ಲ. ಒಬ್ಬ ಪತ್ರಕರ್ತನಾಗಿ, ಬರಹಗಾರನಾಗಿ ಸಂಶೋಧನೆಯ ಹಾದಿಯಲ್ಲಿ ಸಾಗಿದಾಗ ಸಿಗುವ ಒಳನೋಟ ಒಳಗೊಳ್ಳುವ ಕ್ರಮಗಳು ಇವೆ. ಸಮಾಜ ಮತ್ತು ಸಂಸ್ಕೃತಿಯನ್ನು ಯಾವುದೇ ಪೂರ್ವಗ್ರಹಗಳನ್ನು ಇರಿಸದೆ ತೆರೆದ ಮನಸ್ಸಿನಿಂದ ಪರಿಶೀಲಿಸಿದ ಸತ್ಯಗಳ ಸಾಕ್ಷಾತ್ಕಾರವೂ ಹೌದು.

ಸಂಶೋಧನೆ ಎನ್ನುವುದು ಪ್ರಶ್ನೆಗಳೊಂದಿಗೆ ಅಧ್ಯಯನಗಳ ಮುಂದುವರಿಕೆ ಮಾತ್ರವಲ್ಲ, ತನ್ನ ಹಿಂದಿನ ಪರಂಪರೆಯನ್ನು ಅಧ್ಯಯನವನ್ನು ಗಮನದಲ್ಲಿರಿಸಿ ವಿಚಾರ ಮುಂದಿಡುವ ಕ್ರಮವಿದು. ಈ ಹಿಂದಿನ ಅಧ್ಯಯನಕಾರರ ಮಿತಿಗಳನ್ನು ಅರ್ಥೈಸಿಕೊಂಡು ಅದನ್ನು ದಾಟಿ ಒಗ್ಗೂಡಿ ಬಾಳಿದ ಅಂಶಗಳನ್ನು ದಾಖಲು ಮಾಡುವುದು ಮತ್ತು ಸಮಾಜವನ್ನು ಬೆಸೆಯುವ ಉದಾತ್ತ ಚಿಂತನೆಗಳ ಅನ್ವೇಷಣೆಯನ್ನು ಈ ಕೃತಿ ಪ್ರತಿಪಾದಿಸುತ್ತದೆ. ಜಾನಪದ ಮತ್ತು ಚಾರಿತ್ರಿಕ ಸಂಗತಿಗಳ ಮೂಲಕ ದಾಖಲೆ, ಉಲ್ಲೇಖಗಳನ್ನು ನೀಡುತ್ತದೆ. ವರ್ತಮಾನದಲ್ಲಿ ಪರಿಶೀಲಿಸಬೇಕಾದ ಸಂಗತಿಗಳು ಯಾವುವು? ಉತ್ತರ ಸಿಗುವ ಪ್ರಶ್ನೆಗಳು ಮತ್ತು ಸಿಗದ ಪ್ರಶ್ನೆಗಳೊಂದಿಗೆ ವಾಸ್ತವಗಳು ಮುಖಾಮುಖಿಯಾಗುವಾಗ ದೈವವು ನಮ್ಮನ್ನು ಹರಸುತ್ತದೆ ಎಂಬ ಗಾಢವಾದ ನಂಬಿಕೆಯನ್ನು ವಿಶ್ಲೇಷಿಸಿದ ಕ್ರಮ ಇಲ್ಲಿದೆ. ದೈವಾರಾಧನೆ ಎನ್ನುವುದು ದ್ವೇಷ ಸಾಧನೆಗೋ, ಹಿಂಸೆಯನ್ನು ಪ್ರಚೋದಿಸಲೋ ಅಲ್ಲ, ಎಲ್ಲರನ್ನೂ ಪೊರೆಯುವುದು ದೈವಾರಾಧನೆಯ ಆಶಯವೂ ಉದ್ದೇಶವೂ ಆಗಿದೆ.

ತುಳುನಾಡಿನ ‘ಸತ್ಯೊಲು’ ಆದ ದೈವಾರಾಧನೆಯು ಬೌದ್ಧರಾಧನೆಯ ಮೂಲವೇ ? ಎಂಬ ಚಿಂತನೆ ಧಾರೆಗೆ ಸಿಗುವ ಉಲ್ಲೇಖಗಳನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ. ಇದು ಅಧ್ಯಯನಕ್ಕೆ ಹೊಸ ಹಾದಿಯನ್ನು ತೆರೆದಿದೆ. ಇಂದು ಬದಲಾಗುತ್ತಾ ಬಂದಿರುವ ವಸ್ತು ಸ್ಥಿತಿ ಮತ್ತು ಸಾಮಾಜಿಕ ಮುಂಚಲನೆಗಿಂತ ನಾವು ಮೂಲ ಆಶಯವನ್ನೇ ಅರ್ಥೈಸಿಕೊಳ್ಳದೆ ಕೋಮುವಾದಿಗಳಾಗಿ ಸಾಗುತ್ತಿದ್ದೇವೆಯೇ ಎಂಬ ಪ್ರಶ್ನೆ ಕೃತಿ ಓದುತ್ತಾ ಸಾಗುತ್ತಿತ್ತಂತೆ ಅರಿವಿಗೆ ಬರುತ್ತದೆ. ನಾಸ್ತಿಕನಾದ ಬಲಾಂಡಿಯಂತಹ ದೈವವೂ ಪ್ರಶ್ನಿಸುವ ಮತ್ತು ಪ್ರತಿರೋಧವನ್ನು ತೋರುವ ಗುಣ ಹಲವು ಚಿಂತನೆಗಳ ಸಂಗಮ ತುಳುನಾಡು ಆಗಿತ್ತು ಎನ್ನುವುದನ್ನು ಸಾರುತ್ತದೆ.

ಚರಿತ್ರೆಯನ್ನು ತಿಳಿಯದವರು ವರ್ತಮಾನವನ್ನು ಅರ್ಥೈಸಲಾರರು. ಜಾನಪದ ಅಧ್ಯಯನಕ್ಕೆ ಚರಿತ್ರೆಯು ಜೊತೆ ಸೇರಿದೆ. ಜನನುಡಿಗಳ ಆಲೋಚನೆಯ ಕ್ರಮದಲ್ಲಿ ಮೇಳೈಸಿದ್ದು ತುಳುನಾಡಿನ ‘ಸತ್ವ’ ಎನ್ನುವುದನ್ನು ಸತ್ಯದ ಪರಿಕಲ್ಪನೆಯಲ್ಲಿ ಮಿಥ್ಯವಾಗಿಸದೆ ವಿಶ್ಲೇಷಿಸಿದ ಕ್ರಮ ಮುಖ್ಯವಾದದ್ದು. ಆರಂಭದ ಪಾರಿಯಲ್ಲಿ ಹೇಳುವ ಸಂಶೋಧನೆಯ ಪ್ರಮೇಯ ಕೃತಿ ಓದಿ ಮುಗಿಸುವಾಗ ಸತ್ಯಗಳನ್ನು ಹುಡುಕಾಡಿ ಸಂಕಲಿಸಿದ ಕ್ರಮವೆಂದು ಅಚ್ಚುಕಟ್ಟಾಗಿ ಗೋಚರಿಸುತ್ತದೆ

ಕರ್ನಾಟಕದ ಕರಾವಳಿಯಲ್ಲಿ ಆರಾಧಿಸಲ್ಪಡುವ ದೈವಗಳನ್ನು ‘ಸತ್ಯೊಲು’ ಎಂದು ಕರೆಯುತ್ತಾರೆ. ತುಳುನಾಡಿನ ಪಾಡ್ದನ, ಬೀರ, ಐತಿಹ್ಯ, ಇತಿಹಾಸವನ್ನು ಅಧ್ಯಯನ ಮಾಡಿದರೆ ‘ಸತ್ಯೊಲು ಎನ್ನುವುದು  ದೈವ-ದೇವರೂ ಅಲ್ಲ. ಅವರೆಲ್ಲರೂ ಶೋಷಣೆ, ಅಸಮಾನತೆಯ ವಿರುದ್ದ ಹೋರಾಡಿದ ನಮ್ಮ ಶ್ರಮಿಕ ಪೂರ್ವಿಕರು’ ಎಂದು ಅರಿವಾಗುತ್ತದೆ. ಹಾಗಾಗಿಯೇ, ಹಲವು ವರ್ಷಗಳ ಕ್ಷೇತ್ರಕಾರ್ಯ, ಪಾಡ್ದನ, ಬೀರ, ಸಂಶೋಧನಾ ಕೃತಿಗಳ ಅಧ್ಯಯನದ ಮೂಲಕ ಸತ್ಯೊಲು – ಶ್ರಮಿಕರ ಜನಪದ ಐತಿಹ್ಯ ಪುಸ್ತಕವನ್ನು ಸಿದ್ದಗೊಳಿಸಲಾಗಿದೆ. ಈ ಪುಸ್ತಕವನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸುತ್ತಿದೆ.

ಸಂಸ್ಕೃತಿ ಚಿಂತನೆ ಎನ್ನುವುದು ಕೇವಲ ವಿವರಣೆಗಳ ದಾಖಲಾತಿ ಅಲ್ಲ. ಅದು ಅಲ್ಲಿಯೇ ನಿಲ್ಲದೆ ವಿಶ್ಲೇಷಣೆ, ಪ್ರಶ್ನೆ ಮತ್ತು ಹಲವು ತರ್ಕಗಳನ್ನು ನಮ್ಮ ಮುಂದೆ ಇಡುತ್ತದೆ. ಎಲ್ಲರೂ ಮನುಷ್ಯರು ಮತ್ತು ಮಾನವೀಯತೆಯ ಆಯಾಮವು ಸಮುದಾಯಗಳ ಅರ್ಥೈಸುವಿಕೆಗೆ ಮುಖ್ಯವೆನಿಸುತ್ತದೆ. ಕೊರಗರು, ಹಿಂದುಳಿದ ಸಮುದಾಯಗಳು, ಮಲೆಕುಡಿಯರು, ಮುಸ್ಲಿಮರು, ಕ್ರೈಸ್ತರೊಂದಿಗೆ ತುಳಿತಕ್ಕೆ ಒಳಗಾದ ಸಮುದಾಯಗಳ ಆಚರಣೆಯಲ್ಲಿರುವ ಕೆಲವು ಕಟ್ಟುಪಾಡುಗಳನ್ನು ಪ್ರಶ್ನಿಸಿ, ಸಮಾನತೆಯ ಆಶಯವನ್ನು ಅಧ್ಯಯನದಲ್ಲಿ ಪ್ರತಿಪಾದಿಸುತ್ತಾರೆ. ಮಾನವೀಯ ಮೌಲ್ಯಗಳನ್ನು ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿ ವಿವರಿಸುವ ಕ್ರಮವು ಮುಖ್ಯವೆನಿಸುತ್ತದೆ. ಯಾರೂ ಗಮನಿಸದ ಹಾದಿಯೊಂದನ್ನು ಅಧ್ಯಯನದಿಂದ ಅನ್ವೇಷಿಸಿ ಅವುಗಳನ್ನು ಒಳಗೊಂಡ ಕ್ರಮಗಳು, ‘ಆಚರಣೆಗಳು ಮನುಷ್ಯತ್ವವನ್ನು ಅದು ಒಡೆಯುವಂತದ್ದದಲ್ಲ ಕಟ್ಟಿ ಜೋಡಿಸುವಂತದ್ದು’ ಎಂಬುದನ್ನು ಪ್ರತಿಪಾದಿಸಿದೆ. ‘ಸತ್ಯಕ್ಕೆ ಸಾವಿಲ್ಲ’ ಎಂಬ ರೂಢಿಯ ಮಾತು ರುಜುವಾತುಪಡಿಸುತ್ತಾ ಸಮುದಾಯಗಳ ಮಧ್ಯದ ಸೌಹಾರ್ದತೆಯ ಆಶಯವನ್ನು ಪ್ರತಿಪಾದಿಸುವ ಮೂಲಕ ಇಂದಿನ ಕೋಮುವಾದಕ್ಕೆ ಉತ್ತರವನ್ನು ಒದಗಿಸಿದೆ ಈ ಕೃತಿ. ನೆಲಮೂಲದ ಸತ್ಯವನ್ನು ಪ್ರತಿಪಾದಿಸುವ ಆಶಯದ ‘ಎನ್ನ ಕರಿಗಂಧ ತಿಕ್ಕಂದೆ ಏರ್ಲ ಪೋತಿಜೆರತ್ತಾ’ ಎಂಬ ಆಶಯದ ಆರಾಧನಾ ಪರಂಪರೆ ಎಲ್ಲರನ್ನೂ ಒಳಗೊಳ್ಳುವಂತಹುದು. ಇದು ಸತ್ಯದ ಆಶಯವೂ ಸಾಕ್ಷಾತ್ಕಾರವೂ ಆಗಿದೆ.

ಡಾ. ಜ್ಯೋತಿ ಚೇಳೈರು

ಉಪನ್ಯಾಸಕರು

ಇದನ್ನೂ ಓದಿ- ಸೂಲಿಬೆಲೆ-ವಿಹಿಂಪ ವಿರುದ್ದ ಕೊರಗಜ್ಜನ ತೀರ್ಪು !

More articles

Latest article